
ಬಾವಲಿಗಳು ಕಗ್ಗತ್ತಲಲ್ಲಿ ಅರಣ್ಯದೊಳಗೆ ಸಂಚಾರ ಮಾಡುವ ಜಾಣ್ಮೆಯುಳ್ಳ ಪ್ರಾಣಿಗಳು. ನಮ್ಮ ಹಾಗೆ ಅವು ಜಿಪಿಎಸ್ ತಂತ್ರಜ್ಞಾನವನ್ನು ನಂಬಿಕೊಂಡು ತಮ್ಮ ಪ್ರಯಾಣ ಬೆಳೆಸುವುದಿಲ್ಲವೆನ್ನಿ. ಬಾವಲಿಗಳು ಮನುಷ್ಯರ ಕಿವಿಗೆ ಕೇಳಿಸಿಕೊಳ್ಳಲಾಗದ (20-200KHZ), ಅತ್ಯಂತ ಹೆಚ್ಚಿನ ಆವರ್ತನವುಳ್ಳ ಶಬ್ದವನ್ನು ಹೊರಡಿಸುತ್ತವೆ. ಆ ಶಬ್ದವು ಸುತ್ತಲಿನ ವಸ್ತುಗಳು ಅಥವಾ ಪ್ರಾಣಿಗಳನ್ನು ಮುಟ್ಟಿ ಪ್ರತಿಧ್ವನಿಸುತ್ತವೆ. ಬಾವಲಿಗಳು ಅದನ್ನು ಗ್ರಹಿಸಿ ತಮ್ಮ ಬೇಟೆ ಅಥವಾ ಅಪಾಯದ ದೂರ, ಅವುಗಳ ಗಾತ್ರ ಹಾಗೂ ಆಕಾರ ಹಾಗೂ ಅವುಗಳ ಚಲನೆ ಮುಂತಾದವನ್ನು ಲೆಕ್ಕ ಹಾಕಬಲ್ಲವು! ತಮಗೆ ಬರಬಹುದಾದ ಅಪಾಯದಿಂದಲೂ ರಕ್ಷಿಸಿಕೊಳ್ಳಬಲ್ಲವು! ಇದನ್ನೇ ಎಕೋಲೊಕೇಶನ್ ಎನ್ನುತ್ತೇವೆ. ಈ ವಿಶೇಷ ಬುದ್ದಿಶಕ್ತಿಯೇ ಬಾವಲಿಗಳ ಸೂಪರ್ ಪವರ್! ಹಾಗೆಯೇ ದಟ್ಟ ಅರಣ್ಯಗಳು, ಗುಹೆ ಅಥವಾ ಪ್ರಾಣಿಸಮೂಹಗಳಿರುವೆಡೆ ಇವು ತಮ್ಮ ಎಕೋಲೊಕೇಶನ್ ಅನ್ನು ಬೇಕಾದಂತೆ ಹೊಂದಿಸಿಕೊಳ್ಳುತ್ತವೆ. ಉದಾಹರಣೆಗೆ, ದಟ್ಟ ಪ್ರದೇಶಗಳಲ್ಲಿ ವೇಗವಾಗಿ ಕೂಗುವುದು ಮತ್ತು ಶಬ್ದದ ತೀವ್ರತೆ ಕಡಿಮೆ ಮಾಡುವುದು ಮತ್ತು ನಿರ್ಧಿಷ್ಟ ವಸ್ತುವಿನ ಮೇಲೆ ಮಾತ್ರ ಗಮನ ಹರಿಸಲು ನಿರ್ಧಿಷ್ಟ ದಿಕ್ಕಿನಲ್ಲಿ ಮಾತ್ರವೇ ಶಬ್ದ ಹೊರಡಿಸುವುದು. ಆಗ ಅವುಗಳ ವಿಶ್ಲೇಷಣೆಗೆ ಬರುವ ಅಡ್ಡಿಗಳನ್ನು ನಿವಾರಿಸಿಕೊಂಡು, ತಮ್ಮ ಪ್ರಯಾಣವನ್ನು ಸುರಕ್ಷಿತವಾಗಿ ಬೆಳೆಸಿಕೊಳ್ಳಬಹುದು. ಇವು ಬಹಳ ದೂರದವರೆಗೂ ದೃಷ್ಟಿ ಹಾಯಿಸಬಲ್ಲವು. ಮಂದ ಬೆಳಕಿನಲ್ಲಿಯೂ ತಮ್ಮ ಎಕೋಲೊಕೇಶನ್ ಹಾಗೂ ದೂರದೃಷ್ಟಿ ಶಕ್ತಿಯನ್ನು ಬಳಸಿಕೊಂಡು ಅತ್ಯಂತ ನಿಖರವಾಗಿ ತಮ್ಮ ಪ್ರಯಾಣವನ್ನು ಯೋಜಿಸಬಲ್ಲವು! ನಾವೋ, ಗೂಗಲ್ ಮ್ಯಾಪ್ ಕೆಲಸ ಮಾಡದಿದ್ದರೆ ಕಳೆದು ಹೋಗುವುದೇ ಸರಿ.
ಇಂಗ್ಲೆಂಡಿನ ಬ್ರಿಸ್ಟೊಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ಬಾವಲಿಗಳು ದಟ್ಟಾರಣ್ಯಗಳಲ್ಲಿ ಕತ್ತಲೆಯಲ್ಲಿ ಹೇಗೆ ಸಂಚರಿಸಬಲ್ಲವು ಎನ್ನುವ ದೀರ್ಘಕಾಲದ ರಹಸ್ಯವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಬಾವಲಿಗಳು ರಾತ್ರಿವೇಳೆ ಬೇಟೆಗಾಗಿ ಬಯೋಸೆನ್ಸಾರು ಅಥವಾ ಎಕೋಲೊಕೇಷನ್ ತಂತ್ರವನ್ನು ಬಳಸುತ್ತವೆ ಎನ್ನುವದು ನಮಗೆ ತಿಳಿದಿದ್ದರೂ, ಸಂಚಾರ ವೇಳೆಯಲ್ಲಿ ಒಮ್ಮೆಲೆ ಕೇಳಿಸುವ ಸಾವಿರಾರು ಧ್ವನಿ-ಪ್ರತಿಧ್ವನಿಗಳ ನಡುವೆ ತಮಗೆ ಬೇಕಾದ ಮಾಹಿತಿಯನ್ನು ಹೇಗೆ ಹೆಕ್ಕುತ್ತವೆ, ಆ ಮಾಹಿತಿಯನ್ನು ಹೇಗೆ ವಿಶ್ಲೇಷಿಸುತ್ತವೆ ಎನ್ನುವದು ಮಾತ್ರ ಕಗ್ಗಂಟೇ ಎನ್ನಬಹುದು.
ಹಾಗಾಗಿ, ಬಾವಲಿಗಳ ಈ ಅಸಾಧಾರಣ ಶಕ್ತಿಯ ಹಿಂದಿರುವ ವಿಜ್ಞಾನವನ್ನು ತಿಳಿಯಲು, ಬ್ರಿಸ್ಟೊಲ್ ವಿಶ್ವವಿದ್ಯಾನಿಲಯದ ಅಂತರಿಕ್ಷ ವಿಜ್ಞಾನಿಗಳು ಹಾಗೂ ಜೀವವಿಜ್ಞಾನಿಗಳು ಒಗ್ಗೂಡಿ ಹೊಸದೊಂದು ಸಾಧನವನ್ನು ರೂಪಿಸಿದ್ದಾರೆ. ಅದುವೇ ಬ್ಯಾಟ್ ಆಕ್ಸಲೆರೇಟರ್ ಮಷೀನ್. ಈ ಸುದ್ದಿಯು ಮೊನ್ನೆ ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ ಪತ್ರಿಕೆಯಲ್ಲಿ ವರದಿಯಾಗಿತ್ತು.
ಬಾವಲಿಗಳು “ಅಕಾಸ್ಟಿಕ್ ಫ್ಲೋ ವೆಲಾಸಿಟಿ” ಯನ್ನು ಅನುಸರಿಸಿಕೊಂಡು ಸಂಕೀರ್ಣ ಪರಿಸರಗಳಲ್ಲಿ ತಮ್ಮ ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಚಲಿಸುತ್ತಿರುವಾಗ ಅವುಗಳು ಗ್ರಹಿಸುವ ಶಬ್ದಗಳ ಮಾಹಿತಿಯು ಬದಲಾಗುವ ದರವೇ ಅಕಾಸ್ಟಿಕ್ ಫ್ಲೋ ವೆಲಾಸಿಟಿ. ಈ ಸಿದ್ದಾಂತವನ್ನು ವಿಜ್ಞಾನಿಗಳು ವಿನ್ಯಾಸ ಮಾಡಿರುವ ಯಂತ್ರದ ಮೇಲೆ ಪ್ರಯೋಗಿಸಿ ಪರೀಕ್ಷಿಸಿದ್ದಾರೆ.
ಬಾವಲಿಗಳಿಗೆ ಅಸಾಮಾನ್ಯ ಸಂವೇದನಾ ಸಾಮರ್ಥ್ಯವಿದೆ. ಅದರಿಂದ ಅವು ಹೊರಡಿಸುವ ಶಬ್ದವು ಹತ್ತಿರದ ವಸ್ತುಗಳನ್ನು ಮುಟ್ಟಿ ಮರಳಿ ಬರುವ ತಮ್ಮದೇ ಪ್ರತಿಧ್ವನಿ ಹಾಗೂ ಇತರೆ ಪ್ರಾಣಿಗಳದ್ದನ್ನು ಸುಲಭವಾಗಿ ತಿಳಿದುಕೊಳ್ಳಬಲ್ಲವು. ಆದರೆ, ದಂಡಾರಣ್ಯಗಳಂತಹ ಆವಾಸಸ್ಥಾನಗಳಲ್ಲಿ ಅಡಚಣೆಗಳೂ ಹೆಚ್ಚು. ಇಲ್ಲಿ ಅವು ಹೇಗೆ ತಮ್ಮದೇ ಬೇಟೆಯನ್ನು ನಿಖರವಾಗಿ ಗುರುತಿಸಬಲ್ಲವು ಎನ್ನುವದನ್ನು ನಾವಿನ್ನೂ ಅರ್ಥ ಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ಅಂತರಿಕ್ಷ ವಿಜ್ಞಾನಿ ಡಾ. ಅಥಿಯಾ ಹರೊನ್.
ಬ್ರಿಸ್ಟೊಲ್ ವಿಶ್ವವಿದ್ಯಾನಿಲಯದ ಜೀವವಿಜ್ಞಾನಿ ಮಾರ್ಕ್ ಹೋಲ್ಡೆರೀಡ್ ಅವರ ಪ್ರಕಾರ, “ಬಾವಲಿಗಳು ಗ್ರಹಿಸುವ ಶಬ್ದವು ಅವು ಚಲಿಸುತ್ತಿರುವ ವೇಗ ಹಾಗೂ ಪ್ರತಿಧ್ವನಿಸುತ್ತಿರುವ ವಸ್ತುವಿನ ದೂರವನ್ನಾಧರಿಸಿರುತ್ತದೆ. ಶಬ್ದದ ಮಾಹಿತಿ ಕೂಡ ಅವು ಚಲನೆಯಲ್ಲಿರುವುದರಿಂದ ನಿರಂತರವಾಗಿ ಬದಲಿಸುತ್ತಿರುತ್ತದೆ. ಬೈಕ್ ಚಲಾಯಿಸುವಾಗ ವೇಗವನ್ನು ಹೆಚ್ಚಿಸಿದಂತೆಯೇ ನಮ್ಮ ಸುತ್ತಲಿನ ವಸ್ತುಗಳು ನಮ್ಮ ಕಣ್ಣಳತೆಯಿಂದ ಹೇಗೆ ವೇಗವಾಗಿ ಮರೆಯಾಗುತ್ತಿರುತ್ತವೆಯೋ ಅಂತೆಯೇ. ಈ ಶಬ್ದದ ಹೊನಲಿನಲ್ಲಾಗುವ ಬದಲಾವಣೆಯನ್ನು ಗ್ರಹಿಸಿಕೊಂಡು ಬಾವಲಿಗಳು ತಮ್ಮ ವೇಗ ಮತ್ತು ಸಂಚಾರವನ್ನು ನಿಖರವಾಗಿಸಿಕೊಳ್ಳುತ್ತವೆ ಹಾಗೂ ತಮ್ಮ ಪರಿಸರವನ್ನು ಅಂದಾಜಿಸಿಕೊಳ್ಳುತ್ತವೆ” ಎನ್ನುತ್ತಾರೆ ಮಾರ್ಕ್.
ಇದನ್ನು ಪರೀಕ್ಷಿಸಲು ಅವರು ರೂಪಿಸಿರುವ ಬ್ಯಾಟ್ ಆಕ್ಸಲೆರೇಟರ್ ಮಷೀನ್ ನಲ್ಲಿ ಎಂಟು ಮೀಟರು ಉದ್ದದ ತಿರುಗುತ್ತಿರುವ ರೆಕ್ಕೆಗಳಂತಹ ರಚನೆಯಿದ್ದು ಅದರೊಳಗೆ ಸುಮಾರು ೮೦೦೦ ತಿರುಗುವ ಶಬ್ದ ಪ್ರತಿಫಲಕಗಳನ್ನು ಇರಿಸಿಲಾಗಿತ್ತಂತೆ. ಇವು ಒಂದು ರೀತಿಯ ಕೃತಕ ಎಲೆಗಳೆಂದುಕೊಳ್ಳಿ. ನೈಸರ್ಗಿಕವಾಗಿ ಬರುವ ಪ್ರತಿಧ್ವನಿ ಅಥವಾ ಶಬ್ದಗಳನ್ನು ಗ್ರಹಿಸಿ ಅನುಕರಿಸಲೆಂದು ಈ ಪ್ರತಿಫಲಕಗಳು. ಅರ್ಥಾತ್, ಬಾವಲಿಗಳು ಶಬ್ದ ಹೊರಡಿಸಿದಾಗ ಈ ಯಂತ್ರವು ಅದನ್ನು ಯಾಂತ್ರಿಕವಾಗಿ ಪ್ರತಿಧ್ವನಿಸುತ್ತಿತ್ತು. ಮೂರು ರಾತ್ರಿಗಳಲ್ಲಿ ಈ ಯಂತ್ರವು ಸುಮಾರು ೧೮೧ ಬಾವಲಿಗಳ ಸಂಚಾರವನ್ನು ದಾಖಲಿಸಿತ್ತಂತೆ. ಅದರಲ್ಲಿ ಸುಮಾರು ೧೦೪ ಬಾವಲಿಗಳು ಈ ಯಂತ್ರದಲ್ಲಿನ ಪರೀಕ್ಷೆಯ ಮುಖ್ಯ ಭಾಗವಾದ ಎಂಟು ಮೀಟರು ಉದ್ದದ ರೆಕ್ಕೆಗಳಂತಹ ರಚನೆಯನ್ನು ಹಾಯ್ದು ಹೋಗಿವೆ. ಬಾವಲಿಗಳು ತಮ್ಮ ಪ್ರಯಾಣದ ವೇಳೆ ಅನುಸರಿಸುವ "ಅಕಾಸ್ಟಿಕ್ ಫ್ಲೋ ವೆಲಾಸಿಟಿ” ಯನ್ನು ಈ ಪ್ರತಿಫಲಕಗಳು ಬದಲಾಯಿಸಿಬಿಡುವಂತೆ ಇವನ್ನು ಉಪಾಯದಿಂದ ನಿಭಾಯಿಸಲಾಗಿತ್ತಂತೆ. ಬಾವಲಿಗಳು ಈ ಬದಲಾಯಿಸಿದ ಶಬ್ದಗಳನ್ನು ಗ್ರಹಿಸಿ ತಮ್ಮ ಸಂಚಾರವನ್ನು ಹೇಗೆ ಹೊಂದಿಸಿಕೊಂಡವು ಎಂದು ವಿಜ್ಞಾನಿಗಳು ಅಳೆದಿದ್ದಾರೆ.
ಯಂತ್ರದ ತಿರುಗುವ ಶಬ್ದ ಪ್ರತಿಫಲಕವು ಪ್ರತಿಧ್ವನಿಸುವ ಶಬ್ದದ ವೇಗವನ್ನು ಬಾವಲಿಗಳು ಚಲಿಸುತ್ತಿರುವ ವಿರುದ್ದ ದಿಕ್ಕಿನಲ್ಲಿ ಹೆಚ್ಚಿಸಿದಾಗ, ಅವು ಸುಮಾರು ಪ್ರತಿಶತ ೨೮ ರಷ್ಟು ನಿಧಾನವಾಗಿ ಚಲಿಸಲಾರಂಭಿಸಿದುವಂತೆ. ಆದರೆ ಶಬ್ದ ಪ್ರತಿಫಲಕವು ಬಾವಲಿಗಳ ಸಂಚಾರ ದಿಕ್ಕಿನಲ್ಲಿಯೇ ತಿರುಗಿದಾಗ, ಬಾವಲಿಗಳ ವೇಗ ಹೆಚ್ಚಾಯಿತಂತೆ. ಅರ್ಥಾತ್, ಇವು ಶಬ್ದಗಳಲ್ಲಿನ ಬದಲಾವಣೆಯನ್ನು ಗ್ರಹಿಸಿ ತಮ್ಮ ವೇಗವನ್ನು ನಿಯಂತ್ರಿಸಿಕೊಳ್ಳುವವು. ಶಬ್ದ ಗ್ರಹಿಕೆಯಲ್ಲಿ ಸಂವೇದನಾಶೀಲತೆಯುಳ್ಳವು. ಅಂದ ಹಾಗೆ, ನಿಮ್ಮ ಶಾಲಾ ಪಠ್ಯದಲ್ಲಿ ನೀವು ಡಾಪ್ಲರ್ ಶಿಫ್ಟ್ ಬಗ್ಗೆ ಕೇಳಿರಬೇಕಲ್ಲಾ? ಶಬ್ದದ ಆಕರ ಮತ್ತು ಗ್ರಾಹಕ ಇವುಗಳೆರೆಡೂ ಚಲನೆಯಲ್ಲಿದ್ದಾಗ ಶಬ್ದದ ಆವರ್ತನಾ ತೀವ್ರತೆ ಬದಲಾಗುತ್ತಿರುತ್ತದೆ. ಎರಡೂ ಒಂದೇ ದಿಕ್ಕಿನಲ್ಲಿದ್ದಾಗ ಶಬ್ದದ ತೀವ್ರತೆ ಹೆಚ್ಚಾಗುತ್ತದೆ, ವಿರುದ್ದ ದಿಕ್ಕಿನಲ್ಲಿದ್ದಾಗ ಕಡಿಮೆಯಾಗುತ್ತದೆ. ಇದುವೇ ಡಾಪ್ಲರ್ ಪರಿಣಾಮ. ಬಾವಲಿಗಳೂ ಸಂಚಾರ ತಂತ್ರದಲ್ಲಿ ಡಾಪ್ಲರ್ ಸಿದ್ದಾಂತವನ್ನೇ ಅನುಸರಿಸುವುದಂತೆ.
ಬಾವಲಿಗಳು ವೇಗವಾಗಿ ಚಲಿಸಬಲ್ಲವು ಮತ್ತು ಅದಕ್ಕಾಗಿ ಎಕೋಲೊಕೇಷನ್ ತಂತ್ರವನ್ನು ಬಳಸುತ್ತವೆ ಎಂದು ನಮಗೆ ಈಗಾಗಲೇ ತಿಳಿದಿತ್ತು. ಅದಕ್ಕಾಗಿ ಬಾವಲಿಗಳು ಈ ಸಂಕೀರ್ಣ ಮಾಹಿತಿಗಳನ್ನು ವಿಶ್ಲೇಷಿಸುವ ಬಗ್ಗೆ ಇನ್ನೂ ಸಂಶೋಧನೆ ಕೈಗೊಳ್ಳಬೇಕಿದೆ ಎನ್ನುತ್ತಾರೆ ವಿಜ್ಞಾನಿಗಳು. ಆ ರಹಸ್ಯವನ್ನು ಪತ್ತೆ ಹಚ್ಚಿದಲ್ಲಿ ಇವರು ರೂಪಿಸಿರುವ ಈ ಹೊಸ ಬ್ಯಾಟ್ ಆಕ್ಸಲೆರೇಟರ್ ಯಂತ್ರವು ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತದೆ. ಈ ತಂತ್ರಜ್ಞಾನದಿಂದ ಸಂಕೀರ್ಣ ಹಾಗೂ ದಟ್ಟವಾದ ಧ್ವನಿ-ಪ್ರತಿಧ್ವನಿಗಳಿರುವೆಡೆ ಡ್ರೋನ್, ಆಪ್ಟಿಕ್ ಫ್ಲೋ ಆಧಾರಿತ ಕ್ಯಾಮೆರಾ, ಸೋನಾರ್ ಹಾಗೂ ರೇಡಾರ್ ಆಧಾರಿತ ಸಂಚಾರ ತಂತ್ರಗಳನ್ನು ಇನ್ನಷ್ಟು ಸುಧಾರಿಸಬಹುದು ಎನ್ನುವುದು ವಿಜ್ಞಾನಿಗಳ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.