ADVERTISEMENT

ಮಾತನಾಡುವಾಗ, ಉಸಿರಾಡುವಾಗಲೂ ಕೊರೊನಾ ಸೋಂಕು ಹರಡಬಹುದು: ವಿಜ್ಞಾನಿಗಳ ಮಾಹಿತಿ

ಏಜೆನ್ಸೀಸ್
Published 4 ಏಪ್ರಿಲ್ 2020, 7:57 IST
Last Updated 4 ಏಪ್ರಿಲ್ 2020, 7:57 IST
ಕೊರೊನಾ ವೈರಸ್‌ ಗಾಳಿಯಲ್ಲಿಯೂ ಪಸರಿಸಬಹುದು ಎಂದು ಸಂಶೋಧನೆಗಳ ಮಾಹಿತಿ
ಕೊರೊನಾ ವೈರಸ್‌ ಗಾಳಿಯಲ್ಲಿಯೂ ಪಸರಿಸಬಹುದು ಎಂದು ಸಂಶೋಧನೆಗಳ ಮಾಹಿತಿ   

ವಾಷಿಂಗ್ಟನ್‌: ಸಹಜವಾಗಿ ಉಸಿರಾಡುವಾಗ ಹಾಗೂ ಮಾತನಾಡುವಾಗಲೂ ಕೊರೊನಾ ವೈರಸ್‌ ಸೋಂಕು ಹರಡಬಹುದು ಎಂದು ಅಮೆರಿಕದ ಅತ್ಯುನ್ನತ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ಸರ್ಕಾರಗಳು ಎಲ್ಲರೂ ಮುಖ ಗವಸು (ಫೇಸ್‌ ಮಾಸ್ಕ್‌) ಧರಿಸುವಂತ ಸೂಚನೆ ನೀಡುತ್ತಿವೆ.

ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸೋಂಕು ರೋಗಗಳ ವಿಭಾಗದ ಮುಖ್ಯಸ್ಥರಾಗಿ ವಿಜ್ಞಾನಿ ಡಾ. ಆಂಥೊನಿ ಪೌಸಿ ಕೊರೊನಾ ಸೋಂಕು ಹರಡುವಿಕೆಯ ಕುರಿತು ಎಚ್ಚರಿಕೆ ನೀಡಿದ್ದಾರೆ. 'ಸೋಂಕಿತರು ಕೆಮ್ಮುವಾಗ ಮತ್ತು ಸೀನುವಾಗ ಮಾತ್ರವಲ್ಲದೇ ಕೇವಲ ಮಾತುಕತೆಯಲ್ಲಿಯೂ ವೈರಾಣು ಹರಡಬಹುದು ಎಂಬುದು ಇತ್ತೀಚಿನ ಸಂಶೋಧನಾ ಮಾಹಿತಿಗಳಿಂದ ತಿಳಿದು ಬಂದಿದೆ' ಎಂದಿದ್ದಾರೆ.

ಸೋಂಕು ತಗುಲಿರುವವರು ಅಥವಾ ಕೆಮ್ಮು, ಶೀತ ಮತ್ತು ಜ್ವರಕ್ಕೆ ಒಳಗಾಗಿರುವವರು ಮುಖ ಗವಸು ಧರಿಸಬೇಕು. ಹಾಗೇ ಸೋಂಕಿತರ ಬೇಕು–ಬೇಡಗಳನ್ನು ಗಮನಿಸುತ್ತಿರುವವರು ಹಾಗೂ ಆರೋಗ್ಯ ಸಿಬ್ಬಂದಿ ಮಾಸ್ಕ್‌ ಧರಿಸುವಂತೆ ಈ ವರೆಗೂ ಅಧಿಕೃತ ಸೂಚನೆಗಳನ್ನು ನೀಡಲಾಗಿದೆ. ಆದರೆ, ವೈರಸ್‌ ಗಾಳಿಯಲ್ಲಿ ಹರಡಬಹುದು ಎಂಬ ಅಂಶದಿಂದಾಗಿ ಎಲ್ಲರೂ ಮಾಸ್ಕ್‌ ಧರಿಸುವ ಅನಿವಾರ್ಯತೆ ಎದುರಾದಂತಾಗಿದೆ.

ADVERTISEMENT

ಸೋಂಕಿತ ವ್ಯಕ್ತಿಗಳು ಸೀನಿದಾಗ ಅಥವಾ ಕೆಮ್ಮಿದಾಗ ಹೊಮ್ಮುವ ತೇವಾಂಶದ ಕಣಗಳಿಂದ ವೈರಸ್‌ ಸೋಂಕು ಹರಡುತ್ತದೆ. ಒಂದು ಮಿಲಿಮೀಟರ್‌ನಷ್ಟು ಸಣ್ಣ ಹನಿಯು ವೈರಾಣು ಹರಡುವಿಕೆ ಸಾಕಾಗುತ್ತದೆ ಎಂದು ಅಮೆರಿಕದ ಆರೋಗ್ಯ ಸಂಸ್ಥೆಗಳು ಹೇಳಿದ್ದವು. ಆದರೆ, ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ (ಎನ್‌ಎಎಸ್‌) ಇತ್ತೀಚೆಗೆ ಶ್ವೇತ ಭವನಕ್ಕೆ ಪತ್ರವೊಂದು ರವಾನಿಸಿದ್ದು, ಅದರಲ್ಲಿ ಸಂಶೋಧನೆಯ ಕುರಿತು ತಿಳಿಸಿದೆ. ಅದರ ಆಧಾರದ ಮೇಲೆ ಫೌಸಿ ಅವರು ಸಹಜ ಮಾತಿನಿಂದಲೂ ಸೋಂಕು ಹರಡಬಹುದು ಎಂದಿದ್ದಾರೆ.

'ಸಂಶೋಧನೆ ಇನ್ನೂ ಅಂತಿಮಗೊಳ್ಳದಿದ್ದರೂ, ಈವರೆಗಿನ ಅಧ್ಯಯನಗಳ ಪ್ರಕಾರ ಕೊರೊನಾ ವೈರಸ್ ಗಾಳಿಯಲ್ಲಿ ಸಂಚರಿಸಿ ಉಸಿರಾಟದ ಮೂಲಕ ಸೊಂಕು ವ್ಯಾಪಿಸಬಹುದಾಗಿದೆ' ಎಂದು ವರದಿಯಲ್ಲಿ ತಿಳಿಸಲಾಗಿದೆ. ಸೋಂಕಿತರು ಸೀನಿದಾಗ ಸುಮಾರು ಒಂದು ಮೀಟರ್ ವರೆಗೂ ಹನಿಗಳು (ವೈರಸ್‌ ಒಳಗೊಂಡ ತೇವಾಂಶ) ಚದುರಿ ಕೆಳಗೆ ಇಳಿಯುತ್ತವೆ.

ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕರಟಗೊಂಡಿದ್ದ ಅಧ್ಯಯನ ವರದಿ ಪ್ರಕಾರ, ಸಾರ್ಸ್–ಕೋರೊನಾ ವೈರಸ್‌–2 ಗಾಳಿಯಲ್ಲಿ ಸುಮಾರು 3 ಗಂಟೆಗಳ ವರೆಗೂ ಜೀವಿಸಬಹುದಾಗಿದೆ. ಇದೂ ಮಾಸ್ಕ್‌ ಧರಿಸುವ ಚರ್ಚೆಗೆ ಪುಷ್ಠಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.