ADVERTISEMENT

ಜಗಕ್ಕೆ ಬೆಳಕಿನ ಬಣ್ಣಗಳ ತೋರಿದ ಭಾರತೀಯ ವಿಜ್ಞಾನಿ ಸಿ.ವಿ.ರಾಮನ್‌

ಇಂದು ಜನ್ಮದಿನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 14:22 IST
Last Updated 7 ನವೆಂಬರ್ 2019, 14:22 IST
ವಿಜ್ಞಾನಿ ಸಿ.ವಿ.ರಾಮನ್‌ - ಸಂಗ್ರಹ ಚಿತ್ರ
ವಿಜ್ಞಾನಿ ಸಿ.ವಿ.ರಾಮನ್‌ - ಸಂಗ್ರಹ ಚಿತ್ರ   

ಬೆಂಗಳೂರು:ಏಷ್ಯಾದಲ್ಲೇ ಮೊದಲ ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಭಾರತದ ಚಂದ್ರಶೇಖರ ವೆಂಕಟರಾಮನ್‌(ಸಿ.ವಿ.ರಾಮನ್‌). ಪ್ರೊ.ಸಿ.ವಿ.ರಾಮನ್‌ ನಿರಂತರವಾಗಿ ವಿಜ್ಞಾನ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಅವರು ಮತ್ತು ಅವರ ಸಹೋದ್ಯೋಗಿಗಳು 600ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದರು. ಧ್ವನಿ, ಸಂಗೀತೋಪಕರಣಗಳು, ಬೆಳಕಿನ ವಿಶ್ಲೇಷಣೆ, ಕಾಂತತೆ,..ಹೀಗೆ ಅವರನ್ನು ಸಂಶೋಧನೆಗೆ ಸೆಳೆದುಕೊಂಡಿದ್ದ ಕ್ಷೇತ್ರಗಳು ಹಲವು.

1888ರ ನವೆಂಬರ್‌ 7ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ರಾಮನ್‌ ಜನನ. ತಂದೆ ಚಂದ್ರಶೇಖರ್‌ ಅಯ್ಯರ್‌ ಅವರು ಶಾಲೆ ಹಾಗೂ ಕಾಲೇಜಿನಲ್ಲಿ ಗಣಿತ, ಭೌತವಿಜ್ಞಾನ ಕಲಿಸುತ್ತಿದ್ದರು. ರಾಮನ್‌ ಅವರಿಗೆ ತಂದೆಯೇ ಮೊದಲ ಗುರು. ತಂದೆ ಬೋಧಿಸುತ್ತಿದ್ದ ಕಾಲೇಜಿನಲ್ಲಿಯೇ ಶಿಕ್ಷಣ ನಡೆಸಿ, 14ನೇ ವಯಸ್ಸಿನಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪದವಿ ಆರಂಭಿಸಿದರು. ಭೌತವಿಜ್ಞಾನದ ಎಂ.ಎ. ಪದವಿ ಸಹ ಅಲ್ಲಿಯೇ ಮುಂದುವರಿಸಿದರು.

ಎಲ್ಲ ಪರೀಕ್ಷೆಗಳಲ್ಲೂ ಅಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡ ರಾಮನ್‌ ಅವರ ಆಸಕ್ತಿ ಸಂಗೀತ, ಇತಿಹಾಸ, ವಿಜ್ಞಾನ, ಇಂಗ್ಲಿಷ್‌, ವೇದಾಂತ,..ಹೀಗೆ ವಿಸ್ತರಿಸಿಕೊಳ್ಳುತ್ತಲೇ ಇತ್ತು. ಅಖಿಲ ಭಾರತ ಸ್ಪರ್ಧಾ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಗಳಿಸಿಕೊಂಡ ಅವರು 1907ರಲ್ಲಿ ಕೋಲ್ಕತ್ತ(ಆಗಿನ ಕಲ್ಕತ್ತ)ದಲ್ಲಿ ಅಸಿಸ್ಟೆಂಟ್‌ ಅಕೌಂಟ್‌ ಜನರಲ್‌ ಆಗಿ ನೇಮಕಗೊಂಡರು.

ADVERTISEMENT

ಸರ್ಕಾರಿ ಸವಲತ್ತು ಬಿಟ್ಟು ಬೋಧನೆಗೆ

ಸರ್ಕಾರದ ಉನ್ನತ ಅಧಿಕಾರಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ವಿಜ್ಞಾನದ ಕಡೆಗಿನ ಒಲವು ಕುಂದಿರಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಪ್ರಯೋಗಾಲಯದಲ್ಲಿ ಸಂಶೋಧನೆಗಳಲ್ಲಿ ನಿರತರಾಗುತ್ತಿದ್ದರು. ದಿನೇದಿನೇ ವಿಜ್ಞಾನದ ತುಡಿತ ಹೆಚ್ಚುತ್ತಲೇ ಇತ್ತು. ಇದೇ ಸಂದರ್ಭ, 1917ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಿಂದ ಪ್ರಾಧ್ಯಾಪಕರಾಗಲು ಆಹ್ವಾನ ಬಂದಿತು. ರಾಮನ್‌ ಸರ್ಕಾರ ನೀಡಿದ್ದ ಅಧಿಕಾರ ಮತ್ತು ಸವಲತ್ತುಗಳನ್ನು ಬದಿಗಿಟ್ಟು ವಿಜ್ಞಾನದ ಕಡೆಗೆ ಮುಖಮಾಡಿದರು.

1933ರಲ್ಲಿ ಕಲ್ಕತ್ತೆ ಬಿಟ್ಟು ಬೆಂಗಳೂರಿನ 'ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌(ಐಐಎಸ್‌ಸಿ)' ಸೇರಿದರು. 1948ರ ವರೆಗೂ ಐಐಎಸ್‌ಸಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದರು. ಆನಂತರವೇ ಸ್ವಂತ ಪ್ರಯೋಗಾಲಯ ರಾಮನ್‌ ಇನ್‌ಸ್ಟಿಟ್ಯೂಟ್‌ನ್ನು ಕಟ್ಟಿ ಬೆಳೆಸಿದರು. 1970ರ ನವೆಂಬರ್‌ 20ರವರೆಗೂ ಅಲ್ಲಿಯೇ ಸಂಶೋಧನೆಗಳಲ್ಲಿ ನಿರತರಾಗಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ

ರಾಮನ್‌ ತಮ್ಮ 18ನೇ ವಯಸ್ಸಿನಲ್ಲಿ ಮೊದಲ ವಿಜ್ಞಾನ ಪ್ರಬಂಧ ಪ್ರಕಟಿಸಿದರು, ಆಗ ಎಂ.ಎ. ತರಗತಿ ವಿದ್ಯಾರ್ಥಿಯಾಗಿದ್ದರು. ಧ್ವನಿ, ಸಂಗೀತ ವಾದ್ಯಗಳಿಂದ ಹೊಮ್ಮುವ ಸ್ಪಂದನಗಳ ಕುರಿತ ಸಂಶೋಧನೆಗಳಲ್ಲೇ ಮುಳುಗಿದ್ದ ಅವರು 10–12 ವರ್ಷಗಳ ಬಳಿಕ ಬೆಳಕಿನ ಕಡೆಗೆ ಆಸಕ್ತಿ ಬೆಳೆಸಿಕೊಂಡರು.

ಲಂಡನ್‌ನ ರಾಯಲ್‌ ಸೊಸೈಟಿ ಫೆಲೋ ಗೌರವವನ್ನೂ ರಾಮನ್‌ ಪಡೆದರು. 'ಸಮುದ್ರದ ಬಣ್ಣ ನೀಲಿ ಏಕೆ?' ಎಂಬ ವಿಷಯದ ಬಗ್ಗೆ ಲಂಡನ್ನಿನ ರಾಯಲ್‌ ಸೊಸೈಟಿಯಲ್ಲಿ ಅತ್ಯುತ್ತಮವಾದ ಉಪನ್ಯಾಸ ನೀಡಿದರು. ರಾಯಲ್‌ ಸೊಸೈಟಿಗೆ ಭಾರತದಿಂದಲೇ ಹಲವು ಪ್ರಬಂಧಗಳನ್ನು ಕಳುಹಿಸಿದರು. 1925ರಲ್ಲಿ ರಷ್ಯನ್‌ ಅಕಾಡೆಮಿ ಆಫ್‌ ಸೈನ್ಸಸ್‌ ಸಹ ರಾಮನ್‌ರನ್ನ ಗೌರವಿಸಿತು. ಮುಂದೆ ಭಾರತದಲ್ಲಿ ವಿಜ್ಞಾನ ಪರಂಪರೆಗೆ ರಾಮನ್‌ ತಳಹದಿ ರೂಪಿಸಿದರು. 1926ರಲ್ಲಿ 'ಇಂಡಿಯನ್‌ ಜರ್ನಲ್‌ ಆಫ್‌ ಫಿಸಿಕ್ಸ್‌' ಪತ್ರಿಕೆ ಆರಂಭಿಸಿ ಮುನ್ನಡೆಸಿದರು. ಪತ್ರಿಕೆಗಳ ಮೂಲಕ ಯುವವಿಜ್ಞಾನಿಗಳಿಗೆ ಮಾರ್ಗದರ್ಶನ ನೀಡಿದರು.

1921ರಲ್ಲಿ ಪ್ರಯಾಣದಲ್ಲಿದ್ದಾಗ ರಾಮನ್‌ ಕಂಡುಕೊಂಡ ವಿವರಣೆಗಳು ಹಾಗೂ ಆನಂತರದ ಸಂಶೋಧನೆಗಳು ಏಳು ವರ್ಷಗಳ ನಂತರ ‘ರಾಮನ್ ಪರಿಣಾಮ‘(Raman effect) ಎಂದೇ ಹೆಸರಾಯಿತು. ಸೂರ್ಯ ಕಿರಣಗಳ ಬಣ್ಣ ಬಿಳಿ ಅಲ್ಲ, ಅದರಲ್ಲಿ ಏಳು ಬಣ್ಣಗಳು ಸೇರಿವೆ ಎಂಬುದನ್ನು ಗುರುತಿಸಿದರು. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗಿದೆ ಎಂಬುದು ಪ್ರಚುರಗೊಂಡಿತು. 1930ರಲ್ಲಿ ನೊಬೆಲ್‌ ಪುರಸ್ಕಾರ ಸಂದಿತು. ರಾಮನ್‌ ಪರಿಣಾಮ ಭೌತಶಾಸ್ತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿತು. ಆಕಾಶದ ಬಣ್ಣ, ಸೂರ್ಯ, ನಕ್ಷತ್ರ ಕಿರಣಗಳ ವಿಭಜನೆಗಳ ಕುರಿತ ಸಂಶೋಧನೆಗಳಿಗೆ ಹೊಸದೃಷ್ಟಿ ನೀಡಿತು.

1954ರಲ್ಲಿ ಭಾರತ ಸರ್ಕಾರ ಅವರಿಗೆ 'ಭಾರತರತ್ನ' ಬಿರುದು ನೀಡಿ ಗೌರವಿಸಿತು.

* 'ಭೌದ್ಧಿಕ ಸೌಂದರ್ಯವು ನಿಜಕ್ಕೂ ಎಲ್ಲ ಬಗೆಯ ಸೌಂದರ್ಯಗಳಿಗೂ ಮಿಗಿಲಾದುದು'

– ಸಿ.ವಿ.ರಾಮನ್‌

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.