ADVERTISEMENT

Cyber ​​Attack | ‘ಪಿಡಿಎಫ್‌’ ಎಂಬ ಕ್ಷಿಪಣಿಯ ದಾಳಿ!

ಕೃಷ್ಣ ಭಟ್ಟ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
   

‘ಪಿಡಿಎಫ್‌’ ಅನ್ನು 1992ರಲ್ಲಿ ಹೊತ್ತಿಗೆ ಅಡೋಬ್ ಸಂಸ್ಥೆ ಪರಿಚಯಿಸಿದಾಗ ಅದೊಂದು ಅತ್ಯಂತ ಸುರಕ್ಷಿತ ಫೈಲ್ ಫಾರ್ಮ್ಯಾಟ್ ಎಂದು ಹೆಸರಾಗಿತ್ತು. ಕೆಲವು ಫೈಲ್ ಫಾರ್ಮ್ಯಾಟ್‌ಗಳು ಕಾಲ ಸರಿದಂತೆ ಮರೆಯಾದವು. ಆದರೆ, ಪಿಡಿಎಫ್‌ (PDF) ಜನಪ್ರಿಯತೆ ಹಾಗೆಯೇ ಮುಂದುವರಿದಿದೆ. ಅಷ್ಟೇ ಅಲ್ಲ, ಕಾಲ ಕಾಲಕ್ಕೆ ಅದಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ಜನರ ಕೈಗೆ ಸ್ಮಾರ್ಟ್‌ಫೋನ್ ಬಂದಾಗಿಂದಲೂ ಪಿಡಿಎಫ್ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ, ಅದೊಂದು ವಿಶ್ವಾಸಾರ್ಹ ಫೈಲ್‌ ಫಾರ್ಮ್ಯಾಟ್ ಎಂಬ ನಂಬಿಕೆಯೂ ಬಂದಿದೆ.

ಆದರೆ, ಈಗ ಹಾಗಿಲ್ಲ!

ಯಾರಾದರೂ ಪಿಡಿಎಫ್ ಕಳುಹಿಸಿದರೆ ಅದರ ಮೇಲೆ ನಾವೊಂದು ಅನುಮಾನದ ಹದ್ದಿನ ಕಣ್ಣನ್ನೂ ಇಡಬೇಕಾಗುತ್ತದೆ! ಕಳೆದ ಒಂದು ವರ್ಷದಲ್ಲಿ ಇಡೀ ವಿಶ್ವದಲ್ಲಿ 40 ಕೋಟಿ ಪಿಡಿಎಫ್‌ಗಳನ್ನು ಜನರು ಒಬ್ಬರಿಗೊಬ್ಬರು ಕಳುಹಿಸಿಕೊಂಡಿದ್ದಾರೆ. ಆದರೆ, ಅಚ್ಚರಿಯ ಮತ್ತು ಆಘಾತಕರ ಸಂಗತಿಯೆಂದರೆ, ಇಡೀ ವಿಶ್ವದಲ್ಲಿ ನಡೆದ ಶೇ 68ರಷ್ಟು ಸೈಬರ್ ದಾಳಿಗಳು ಪಿಡಿಎಫ್ ಮೂಲಕವೇ ನಡೆದಿವೆಯಂತೆ!

ADVERTISEMENT

ಪಿಡಿಎಫ್‌ಗಳನ್ನು ಅಸಲಿ ಕಾಗದಪತ್ರಗಳು ಎಂಬ ರೀತಿಯಲ್ಲೇ ಕಳುಹಿಸಲಾಗುತ್ತದೆ. ಇದರಲ್ಲಿ ಯುಆರ್‌ಎಲ್ ಲಿಂಕ್‌ಗಳು, ಕೋಡ್ ಅಥವಾ ಅಪಾಯಕಾರಿ ಕಂಟೆಂಟ್ ಅನ್ನು ಅಡಗಿಸಿಡಲಾಗಿರುತ್ತದೆ. ಹೀಗೆ ಬಂದ ಪಿಡಿಎಫ್‌ ತೆರೆದರೆ, ಅಲ್ಲಿಗೆ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿರುವ ಎಲ್ಲ ಮಾಹಿತಿಯನ್ನೂ ಪಡೆದುಕೊಳ್ಳಬಹುದಾದಷ್ಟು ಅತ್ಯಾಧುನಿಕ ಹ್ಯಾಕಿಂಗ್ ತಂತ್ರವನ್ನು ಈಗ ಬಳಸಲಾಗುತ್ತಿದೆ.

ನಮ್ಮ ಸಿಸ್ಟಮ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿರುವ ಆ್ಯಂಟಿವೈರಸ್‌ಗಳು ಕೂಡ ಸ್ಕ್ಯಾನ್ ಮಾಡಲು ಸಾಧ್ಯವಾಗದ ಲಿಂಕ್‌ಗಳನ್ನು ಈ ಪಿಡಿಎಫ್‌ನಲ್ಲಿ ಅಡಗಿಸಿಡಲಾಗುತ್ತದೆ. ಹೀಗಾಗಿ, ಇಂತಹ ಪಿಡಿಎಫ್ ಇರುವ ಇಮೇಲ್ ಅಥವಾ ಮೆಸೇಜ್ ಬಂದಾಗ ಅದನ್ನು ನಮ್ಮ ಆ್ಯಂಟಿವೈರಸ್‌ಗಳು ನಮ್ಮನ್ನು ಎಚ್ಚರಿಸುವುದೂ ಇಲ್ಲ ಸ್ವಯಂಚಾಲಿತವಾಗಿ ಅವುಗಳನ್ನು ಅಳಿಸುವುದೂ ಇಲ್ಲ. ಅದನ್ನು ತೆರೆದಾಗಲೇ ನಮಗೆ ನಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗುತ್ತದೆ. ಅಷ್ಟೇ ಯಾಕೆ, ನಾವು ಮೋಸ ಹೋಗಿದ್ದೇವೆ ಎಂದು ಕೂಡ ಕೆಲವು ಬಾರಿ ಗೊತ್ತಾಗುವುದಿಲ್ಲ. ನಮ್ಮ ಎಲ್ಲ ಮಾಹಿತಿಯನ್ನು ಅವರು ತೆಗೆದುಕೊಂಡು, ನಮ್ಮ ಖಾತೆಯಲ್ಲಿರುವ ಹಣವನ್ನು ಗುಳುಂ ಮಾಡಿದಾಗಲೇ ನಮಗೆ ನಾವು ಮೋಸ ಹೋಗಿರುವುದು ಅರಿವಿಗೆ ಬರುತ್ತದೆ.

ಈಗ ಸಾಮಾನ್ಯವಾಗಿ ಆ್ಯಂಟಿವೈರಸ್‌ಗಳಲ್ಲಿ ಎಐ ಕೂಡ ಅಳವಡಿಸಲಾಗಿರುತ್ತದೆ. ಆದರೆ, ಅದರ ಗಮನಕ್ಕೂ ಬರದಂತೆ ಹ್ಯಾಕರ್‌ಗಳು ಚಾಣಾಕ್ಷತೆ ಬಳಸಿ ಮಶಿನ್ ಲರ್ನಿಂಗ್‌ಗೂ ಪರ್ಯಾಯವನ್ನು ಕಂಡುಕೊಂಡಿದ್ದಾರೆ. ಇದರಿಂದ ಯಾವುದೇ ಹಂತದಲ್ಲೂ ಮಶಿನ್‌ಗಳಿಗೆ ಈ ಮಾನವರ ಕುಕೃತ್ಯ ಅರಿವಿಗೆ ಬರುವುದಿಲ್ಲ.

ಸಾಮಾನ್ಯವಾಗಿ ತೆರಿಗೆ ಪಾವತಿಯ ಸಮಯದಲ್ಲಿ ಹಾಗೂ ಇತರ ಕಾಗದಪತ್ರಗಳ ಶೇರ್ ಮಾಡಿಕೊಳ್ಳುವ ಸಮಯದಲ್ಲಿ ಈ ಪಿಡಿಎಫ್ ಹ್ಯಾಕರ್‌ಗಳು ಸಕ್ರಿಯವಾಗಿರುತ್ತಾರೆ. ಆ ಸಮಯದಲ್ಲಿ ಜನರು ಹೆಚ್ಚು ಹೆಚ್ಚು ಕಾಗದಪತ್ರಗಳನ್ನು ಒಬ್ಬರಿಗೊಬ್ಬರು ಕಳುಹಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ, ಇಂತಹ ಪಿಡಿಎಫ್‌ಗಳನ್ನು ಸುಲಭವಾಗಿ ಜನರು ನಂಬುವ ಸಾಧ್ಯತೆ ಹೆಚ್ಚಿರುತ್ತದೆ.


ಈ ಹಿಂದೆಯೂ ಪಿಡಿಎಫ್‌ಗಳನ್ನು ಹ್ಯಾಕರ್‌ಗಳು ಬಳಸಿಕೊಂಡಿದ್ದರು. ಆದರೆ, ಆಗೆಲ್ಲ ಪಿಡಿಎಫ್‌ ರೀಡರ್‌ಗಳಲ್ಲಿರುವ ಲೋಪದೋಷಗಳನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದರು. ಆಮೇಲೆ ಅಡೋಬ್‌ ಅದನ್ನು ಅಪ್‌ಡೇಟ್ ಮಾಡಿ, ಸುಧಾರಿಸಿದ ಮೇಲೆ ಈ ಸಮಸ್ಯೆ ತಪ್ಪಿತ್ತು. ಹೀಗಾಗಿ, ಈಗ ಹ್ಯಾಕರ್‌ಗಳು ಸೋಷಿಯಲ್ ಇಂಜಿನಿಯರಿಂಗ್‌ ಮತ್ತು ಲಿಂಕ್‌ಗಳನ್ನು ಅಡಗಿಸಿಡುವ ತಂತ್ರವನ್ನು ಕಲಿತುಕೊಂಡಿದ್ದಾರೆ. ಹೀಗಾಗಿ, ಇದನ್ನು ಪತ್ತೆ ಮಾಡುವುದು ಭಾರಿ ಕಷ್ಟದ್ದಾಗಿದೆ.

ಸಾಮಾನ್ಯವಾಗಿ ನಮಗೆ ಹ್ಯಾಕರ್‌ಗಳು ಕಳುಹಿಸುವ ಪಿಡಿಎಫ್‌ಗಳಲ್ಲಿ ಲಿಂಕ್‌ಗಳು ಇರುತ್ತವೆ. ಇವು ಅಮೆಜಾನ್, ಡೊಕುಸೈನ್‌ ಹಾಗೂ ಅಕ್ರೊಬಾಟ್ ರೀಡರ್‌ನಂತಹ ವಿಶ್ವಾಸಾರ್ಹ ಬ್ರ್ಯಾಂಡ್‌ಗಳ ಹೆಸರು ಮತ್ತು ಲೋಗೋ ಜೊತೆಗೆ ಹ್ಯಾಕರ್‌ಗಳು ಕಳುಹಿಸುತ್ತಾರೆ. ಇಂತಹ ಪಿಡಿಎಫ್‌ಗಳು ಬಂದ ತಕ್ಷಣ ನಾವು ಇದನ್ನು ಕ್ಲಿಕ್ ಮಾಡುತ್ತೇವೆ. ಕ್ಲಿಕ್ ಮಾಡಿದ ಕೂಡಲೇ ಅದು ನಮ್ಮನ್ನು ಫಿಶಿಂಗ್ ಸೈಟ್‌ಗಳಿಗೆ ಕರೆದೊಯ್ಯುತ್ತವೆ ಅಥವಾ ಮಾಲ್‌ವೇರ್ ಇರುವ ಫೈಲ್ ಡೌನ್‌ಲೋಡ್ ಆಗುತ್ತದೆ. ಸಾಮಾನ್ಯವಾಗಿ ಯುಆರ್‌ಎಲ್ ಅನ್ನು ಕಳುಹಿಸಿದರೆ ಅದನ್ನು ಸಿಸ್ಟಮ್‌ಗಳು ಪರಿಶೀಲೆನ ಮಾಡುತ್ತವೆ. ಆದರೆ, ಅದನ್ನೂ ಮರೆ ಮಾಡುವ ತಂತ್ರಗಳನ್ನು ಹ್ಯಾಕರ್‌ಗಳು ಕಲಿತುಕೊಂಡಿದ್ದಾರೆ. ಸಿಸ್ಟಮ್‌ಗೆ ಅದೊಂದು ಯುಆರ್‌ಎಲ್‌ ಎಂದೇ ಗೊತ್ತಾಗದ ಹಾಗೆ ಅದನ್ನು ಅಡಗಿಸಿಡುತ್ತಾರೆ. ಹೀಗಾಗಿ, ಯಾರಾದರೂ ಪಿಡಿಎಫ್ ಕಳುಹಿಸಿದರೆ ಮೊದಲು ಕಳುಹಿಸಿದವರು ಪರಿಚಯದವರೇ ಎಂದು ನೋಡಿಕೊಳ್ಳಿ. ಪರಿಚಯದವರು ಕಳುಹಿಸಿದರೂ ಕೂಡ ಸಂಬಂಧವಿಲ್ಲದ ಏನನ್ನೋ ಕಳುಹಿಸಿದ್ದರೆ, ತೆರೆಯಬೇಡಿ. ಇಂತಹ ಪಿಡಿಎಫ್ ತೆರೆಯುವುದಕ್ಕೂ ಮೊದಲು ಕಳುಹಿಸಿದವರ ಜೊತೆಗೆ ಮಾತನಾಡಿಕೊಳ್ಳಿ. ಪರಿಚಯದವರಲ್ಲದ ಯಾರೋ ಕಳುಹಿಸಿದರೆ ತಕ್ಷಣ ಡಿಲೀಟ್ ಮಾಡಿ.

ಹೀಗಾಗಿ, ಕೆಲವು ವರ್ಷಗಳ ಹಿಂದೆ ಅತ್ಯಂತ ವಿಶ್ವಾಸಾರ್ಹವಾಗಿದ್ದ ಪಿಡಿಎಫ್‌ ಈಗ ಅಪಾಯಕಾರಿ ಮಾಲ್‌ವೇರ್‌ಗಳ ಅಡಗುತಾಣವಾಗಿ ಕೆಲಸ ಮಾಡುತ್ತಿವೆ. ನಮ್ಮ ಎಚ್ಚರಿಕೆಯಿಂದ ನಾವು ಇದ್ದರೆ ಮಾತ್ರ ಇಂಥ ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.