ADVERTISEMENT

ಮುದ್ದಿಸದಿರಿ ಬೆಕ್ಕುಗಳ! ಸೋಂಕು ಲಕ್ಷಣವಿರದ ಬೆಕ್ಕಿನಿಂದ ಮತ್ತೊಂದಕ್ಕೆ ಕೋವಿಡ್–19

ಏಜೆನ್ಸೀಸ್
Published 14 ಮೇ 2020, 7:38 IST
Last Updated 14 ಮೇ 2020, 7:38 IST
ಬೆಕ್ಕಿಗೆ ಉಷ್ಣಾಂಶ ಪರೀಕ್ಷೆ ನಡೆಸುತ್ತಿರುವುದು– ಬ್ಯಾಂಕಾಕ್‌
ಬೆಕ್ಕಿಗೆ ಉಷ್ಣಾಂಶ ಪರೀಕ್ಷೆ ನಡೆಸುತ್ತಿರುವುದು– ಬ್ಯಾಂಕಾಕ್‌    
""
""
""

ಚಿಕಾಗೊ: ಮುದ್ದಿನ ಬೆಕ್ಕುಗಳು ಕೊರೊನಾ ವೈರಸ್‌ ಸೋಂಕಿನ ಯಾವುದೇ ಲಕ್ಷಣಗಳು ತೋರದೆ ಮತ್ತೊಂದು ಬೆಕ್ಕಿಗೆ ಸೋಂಕು ಹರಡಬಹುದು ಎಂದು ಪ್ರಯೋಗಗಳಿಂದ ತಿಳಿದು ಬಂದಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

ಆದರೆ, ಕೊರೊನಾ ವೈರಸ್‌ ಮನುಷ್ಯರಿಂದ ಬೆಕ್ಕುಗಳಿಗೆ ಹಾಗೂ ಬೆಕ್ಕುಗಳಿಂದ ಮನುಷ್ಯರಿಗೆ ಹರಡುತ್ತದೆಯೇ ಎಂಬುದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈ ಸಾಧ್ಯತೆಗಳನ್ನು ಆರೋಗ್ಯ ತಜ್ಞರು ತಳ್ಳಿ ಹಾಕಿದ್ದಾರೆ. ಹೊಸ ಪ್ರಕಟಣೆ ಹೊರಡಿಸಿರುವ ಅಮೆರಿಕದ ಪಶುವೈದ್ಯಕೀಯ ಸಂಘ, 'ಪ್ರಯೋಗಾಲಯದಲ್ಲಿ ಬೇಕಾಗಿಯೇ ಪ್ರಾಣಿಗೆ ವೈರಸ್‌ ಸೋಂಕು ತಗುಲಿಸಿದ ಮಾತ್ರಕ್ಕೆ, ನೈಸರ್ಗಿಕ ವಾತಾವರಣದಲ್ಲಿ ಆ ಪ್ರಾಣಿಗೆ ಸುಲಭವಾಗಿ ಸೋಂಕು ತಗುಲುತ್ತದೆ ಎಂದು ಅರ್ಥವಲ್ಲ. ಹಾಗೇನಾದರೂ ಅಂತಹ ಅಪಾಯಗಳ ಬಗ್ಗೆ ಕಳಕಳಿ ಇದ್ದರೆ, ಸಹಜ ನೈರ್ಮಲ್ಯತೆ ಕಾಪಾಡಿಕೊಳ್ಳಿ' ಎಂದು ವೈರಾಣು ತಜ್ಞ ಪೀಟರ್‌ ಹಾಫ್‌ಮನ್‌ ಹೇಳಿದ್ದಾರೆ.

ADVERTISEMENT

ಸಾಕು ಪ್ರಾಣಿಗಳಿಗೆ ಮುತ್ತು ನೀಡುವುದು, ಮುದ್ದಾಡುವುದನ್ನು ನಿಲ್ಲಿಸಿ ಹಾಗೂ ನೆಲ ಸ್ವಚ್ಛವಾಗಿಡುವ ಮೂಲಕ ಪ್ರಾಣಿಗಳಿಗೆ ವೈರಸ್‌ ಸೋಂಕು ಹರಡುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

ಬ್ಯಾಂಕಾಕ್‌ನ ಕ್ಯಾಟ್‌ ಕೆಫೆವೊಂದರಲ್ಲಿ ಬೆಕ್ಕುಗಳಿಗೆ ಆಟ ಆಡಿಸುತ್ತಿರುವುದು

ಯೂನಿರ್ಸಿಟಿ ಆಫ್‌ ವಿಸ್ಕನ್‌ಸಿನ್‌ ಸ್ಕೂಲ್‌ ಆಫ್‌ ವೆಟರ್ನರಿ ಮೆಡಿಸಿನ್‌ನ ಸಂಶೋಧರಕರು ಹಾಗೂ ಪೀಟರ್‌ ಹಾಫ್‌ಮನ್‌ ಪ್ರಯೋಗಾಲಯದಲ್ಲಿ ಪರೀಕ್ಷೆ ಪಡೆಸಿದ್ದಾರೆ. ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಯೋಗದ ಫಲಿತಾಂಶ ಪ್ರಕಟಗೊಂಡಿದೆ.

ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯಿಂದ ವೈರಸ್‌ ಪಡೆದು, ಅದರಿಂದ ಮೂರು ಬೆಕ್ಕುಗಳಿಗೆ ಸೋಂಕು ಹರಡಲಾಗಿದೆ. ಸೋಂಕಿತ ಬೆಕ್ಕನ್ನು ಆರೋಗ್ಯವಾಗಿರುವ ಮತ್ತೊಂದು ಬೆಕ್ಕಿನೊಂದಿಗೆ ಬಿಡಲಾಗಿದೆ. ಕೇವಲ ಐದು ದಿನಗಳಲ್ಲಿಯೇ ಸೋಂಕಿತ ಬೆಕ್ಕುಗಳೊಂದಿಗೆ ಇದ್ದ ಆರೋಗ್ಯಕರ ಬೆಕ್ಕುಗಳು ಸಹ ಸೋಂಕಿಗೆ ಒಳಗಾಗಿವೆ. ಈ ಆರು ಬೆಕ್ಕುಗಳಲ್ಲಿ ಯಾವೊಂದರಲ್ಲೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲ.

'ಸೀನು, ಕೆಮ್ಮು, ಅಧಿಕ ದೇಹದ ಉಷ್ಣಾಂಶ ಅಥವಾ ತೂಕ ಕಡಿಮೆಯಾಗುವುದು; ಇಂಥ ಯಾವುದೇ ಲಕ್ಷಣಗಳು ಬೆಕ್ಕುಗಳಲ್ಲಿ ಕಂಡು ಬಂದಿಲ್ಲ. ಬೆಕ್ಕು ಸಾಕಿರುವವರಿಗೆ ಅದರಲ್ಲಿ ಯಾವುದೇ ಬದಲಾವಣೆಯನ್ನು ಗುರುತಿಸಲಾಗಿಲ್ಲ'. ನ್ಯೂಯಾರ್ಕ್‌ನಲ್ಲಿ ಕಳೆದ ತಿಂಗಳು ಎರಡು ಸಾಕಿರುವ ಬೆಕ್ಕುಗಳಲ್ಲಿ ಕೊರೊನಾ ವೈರಸ್‌ ಸೋಂಕು ಪಾಸಿಟಿವ್‌ ಕಂಡು ಬಂದಿತ್ತು. ಅವುಗಳಲ್ಲಿ ಸ್ವಲ್ಪ ಮಟ್ಟಿನ ಉಸಿರಾಟ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಮನೆಯಿಂದ ಅಥವಾ ಅಕ್ಕಪಕ್ಕದ ಮನೆಗಳ ಜನರಿಂದ ಅವುಗಳಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಬ್ರಾಂನ್ಕ್ಸ್‌ ಪ್ರಾಣಿ ಸಂಗ್ರಹಾಲಯದಲ್ಲಿ ಕೆಲವು ಹುಲಿ ಹಾಗೂ ಸಿಂಹಗಳಿಗೂ ಸೋಂಕು ತಗುಲಿರುವುದು ವರದಿಯಾಗಿವೆ.

ಬ್ಯಾಂಕಾಕ್‌ನ ಕ್ಯಾಟ್‌ ಕೆಫೆಯಲ್ಲಿ ಬೆಕ್ಕಿಗೆ ಊಟ ಮಾಡಿಸುತ್ತಿರುವುದು

ಮನುಷ್ಯರಿಂದ ಸಾಕು ಪ್ರಾಣಿ ಹಾಗೂ ಇತರೆ ಪ್ರಾಣಿಗಳಿಗೆ ಸೋಂಕು ತಗುಲಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಮನುಷ್ಯರಿಂದ ಮನುಷ್ಯರಿಗೆ ಜಾಗತಿಕವಾಗಿ ಸೋಂಕು ಸಾಂಕ್ರಾಮಿಕವಾಗಿದೆ. ಆದರೆ, ಸಾಕು ಪ್ರಾಣಿಗಳು ಮನುಷ್ಯರಿಗೆ ಸೋಂಕು ಹರಡುತ್ತಿವೆ ಎಂಬುದಕ್ಕೆ ಮಾಹಿತಿ ಕೊರತೆಯಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಾಣಿಗಳನ್ನು ಮುಟ್ಟುವ ಮುನ್ನ ಹಾಗೂ ಮುಟ್ಟಿದ ಬಳಿಕ ಚೆನ್ನಾಗಿ ಕೈತೊಳೆದುಕೊಳ್ಳಬೇಕು.ಸಾಕು ಪ್ರಾಣಿಗಳ ಆಹಾರದ ಪಾತ್ರೆ ಹಾಗೂ ನೀರಿನ ಬಟ್ಟಲನ್ನು ಶುಚಿಯಾಗಿಡುವಂತೆ ಸಲಹೆ ನೀಡಿದ್ದಾರೆ.

ಒಂದು ಸೋಂಕು ಹೊಂದಿರುವ ಪ್ರಾಣಿಯು ಮತ್ತೊಂದಕ್ಕೆ ಸೋಂಕು ತಲುಲಿಸುವ ವಿಚಾರ ಗಂಭೀರವಾದುದು ಎಂದು ಹಾಫ್‌ಮನ್‌ ಹೇಳಿದ್ದಾರೆ.

ತಮಿಳುನಾಡಿನ ಚೆನ್ನೈನಲ್ಲಿ ವ್ಯಕ್ತಿಯೊಬ್ಬ ಬೀದಿಬದಿಯ ಬೆಕ್ಕುಗಳಿಗೆ ಆಹಾರ ನೀಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.