ADVERTISEMENT

ರಕ್ತನಾಳ ಪತ್ತೆಗೆ ಸರಳ ಸಾಧನ ರೂಪಿಸಿದ ಐಐಟಿ ವಿದ್ಯಾರ್ಥಿ: ನೋವಿನಿಂದ ಮುಕ್ತಿ

ಏಜೆನ್ಸೀಸ್
Published 30 ಜೂನ್ 2018, 12:42 IST
Last Updated 30 ಜೂನ್ 2018, 12:42 IST
ರಕ್ತನಾಳ ಪತ್ತೆ ಮಾಡುವ ಇನ್ಫ್ರಾರೆಡ್‌ ಸಾಧನ
ರಕ್ತನಾಳ ಪತ್ತೆ ಮಾಡುವ ಇನ್ಫ್ರಾರೆಡ್‌ ಸಾಧನ   

ಮುಂಬೈ: ಇಂಜೆಕ್ಷನ್‌ ಹಿಡಿದಿರುವ ವೈದ್ಯರನ್ನು ಕಂಡರೆ ಗಾಬರಿಯಾಗುವವರ ಪೈಕಿ ಮಕ್ಕಳು, ಹಿರಿಯರು, ವಯಸ್ಕರು ಎಂಬಿತ್ಯಾದಿ ಯಾವುದೇ ಭೇದವಿಲ್ಲ. ಇನ್ನೂ ರಕ್ತ ಪರೀಕ್ಷೆಗಾಗಿ ಕೈ ನೇರ ಮಾಡಿಸಿ, ಮುಷ್ಠಿ ಹಿಡಿಸಿ ಸೂಜಿ ನರದೊಳಗೆ ಇಳಿಸಿದರೆ...ಅಯ್ಯಯ್ಯೋ...! ಅದರಲ್ಲೂ ರಕ್ತನಾಳ ಸರಿಯಾಗಿ ಸಿಗದೇ ಹೋದರೆ, ನೋವಿ ಕಥೆ ಶುರು. ಐಐಟಿ ವಿದ್ಯಾರ್ಥಿ ಇದಕ್ಕೊಂದು ಪರಿಹಾರ ಕಂಡು ಹಿಡಿದಿದ್ದಾರೆ.

ಸೂಜಿ ಚುಚ್ಚುವ ಮುನ್ನ ಸರಿಯಾದ ರಕ್ತನಾಳಪತ್ತೆ ಮಾಡಲು ಸಹಕಾರಿಯಾಗುವಸಾಧನವನ್ನು ಬಾಂಬೆಐಐಟಿ ವಿದ್ಯಾರ್ಥಿ ಅಭಿವೃದ್ಧಿ ಪಡಿಸಿದ್ದಾರೆ.

ರಕ್ತನಾಳ ಸಿಗದೆ ಪದೇ ಪದೇ ಸೂಜಿ ಚುಚ್ಚುವುದರಿಂದ ರೋಗಿಗಳು ಸಾಕಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿ ತ್ರಿವಿಕ್ರಮ್ ಅಣ್ಣಾಮಲೈ ಅಭಿವೃದ್ಧಿ ಪಡಿಸಿರುವ ’ರಕ್ತನಾಳ ಪತ್ತೆ’ ಸಾಧನವು ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗಲಿದೆ.

ADVERTISEMENT

ಸುಲಭವಾಗಿ ಕೈಯಲ್ಲಿ ಹಿಡಿಯಬಹುದಾದ, ಹಗುರ–ಸರಳ ಸಾಧನದ ಮೂಲಕ ಇನ್ಫ್ರಾರೆಡ್‌ ಬೆಳಕು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ರಕ್ತ ಪಡೆಯುವಾಗ ಅಥವಾ ಇಂಜೆಕ್ಷನ್‌ ನೀಡುವುದಕ್ಕೂ ಮುನ್ನ ಕೈ ತೋಳಿನ ಬಳಿ ಈ ಸಾಧನವನ್ನು ಇಟ್ಟು ಬೆಳಕು ಹರಿಸಿಸುತ್ತಿದ್ದಂತೆ ರಕ್ತದ ಮೇಲೆ ಬೀಳುವ ಬೆಳಕು ಹಿಂದಿರುಗುವಾಗ ರಕ್ತನಾಳಗಳು ನೆರಳಿನಂತೆ ಗೋಚರಿಸುತ್ತವೆ. ಇದರಿಂದ ವೈದ್ಯಕೀಯ ತಜ್ಞರು ಸುಲಭವಾಗಿ ರಕ್ತನಾಳ ಗುರುತಿಸಿ ಸೂಜಿ ಚುಚ್ಚುವ ಪ್ರಕ್ರಿಯೆ ಮುಂದುವರಿಸಬಹುದಾಗಿದೆ.

ಈ ಸಾಧನ ತಯಾರಿಗೆ ₹2000 ವೆಚ್ಚವಾಗಿದ್ದು, ಸಣ್ಣ ಕ್ಲಿನಿಕ್‌ ಹಾಗೂ ಆಸ್ಪತ್ರೆಗಳಿಗೆಖರೀದಿಗೆ ಅನುಕೂಲವಾಗಲಿದೆ. ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದ್ದು, ಕ್ಯಾಂಪ್‌ಗಳಲ್ಲಿ ಬಹಳ ಉಪಯುಕ್ತ ಎನ್ನಲಾಗಿದೆ. ಸದ್ಯ ಈ ಸಾಧನದ ಮಾದರಿಯಷ್ಟೇ ಸಿದ್ಧವಾಗಿದ್ದು, ಮುಂದಿನ ಹಂತದ ಅಭಿವೃದ್ಧಿ ನಡೆಯುತ್ತಿದೆ. ಈ ಸಾಧನದ ಮೂಲಕ ಯಾವುದೇ ವಯಸ್ಸಿನ ವ್ಯಕ್ತಿಯಲ್ಲಿ ರಕ್ತನಾಳ ಪತ್ತೆ ಸಾಧ್ಯವಿದೆ.

ಪ್ರೊ.ಪುರ್ಬಾ ಜೋಷಿ ಮತ್ತು ಪ್ರೊ.ಬಿ.ಕೆ.ಚಕ್ರವರ್ತಿ ಈ ಆವಿಷ್ಕಾರದ ಮಾರ್ಗದರ್ಶನ ನೀಡಿದ್ದಾರೆ. ಈ ಸಾಧನ 2018ರ ಗಾಂಧಿಯನ್‌ ಯಂಗ್‌ ಟೆಕ್ನಾಲಜಿಕಲ್‌ ಇನೊವೇಷನ್‌ ಪ್ರಶಸ್ತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.