ADVERTISEMENT

ಚೀನಾದಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ನೆರವಾದ ಯಂತ್ರವಿದು

ಏಜೆನ್ಸೀಸ್
Published 20 ಮಾರ್ಚ್ 2020, 10:34 IST
Last Updated 20 ಮಾರ್ಚ್ 2020, 10:34 IST
ಸ್ಕ್ಯಾನ್ ಮೂಲಕ ದೇಹದ ತಾಪಮಾನ ಪತ್ತೆ ಮಾಡಬಲ್ಲ ಫಿರೆಟಿನಾಸ್
ಸ್ಕ್ಯಾನ್ ಮೂಲಕ ದೇಹದ ತಾಪಮಾನ ಪತ್ತೆ ಮಾಡಬಲ್ಲ ಫಿರೆಟಿನಾಸ್   

ಶಾಂಘಾಯ್: ಚೀನಾದಲ್ಲಿ ಕೊರೊನಾ ವೈರಸ್ (CoViD-19) ಕ್ಷಿಪ್ರಗತಿಯಲ್ಲಿ ಹರಡದಂತೆ ತಡೆಯುವಲ್ಲಿ ಕೇಂಬ್ರಿಜ್ ಯುನಿವರ್ಸಿಟಿ ಹಾಗೂ ಮ್ಯಾಂಚೆಸ್ಟರ್ ಯುನಿವರ್ಸಿಟಿಯ ತಜ್ಞರ ತಂಡವು ಆವಿಷ್ಕರಿಸಿದ ಫಿರೆಟಿನಾಸ್ (Firetinas) ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ರೋಗ ನಿಯಂತ್ರಣಕ್ಕಾಗಿ ಚೀನೀಯರು ಅನುಸರಿಸುತ್ತಿರುವ ಮಾರ್ಗೋಪಾಯಗಳಲ್ಲಿ ಫಿರೆಟಿನಾಸ್ ಕೂಡ ಒಂದು. ಇದರ ಬಳಕೆಯ ಮೂಲಕ, ಹೆಚ್ಚು ಉಷ್ಣತೆ ಇರುವ ಜನರನ್ನು ಕ್ಷಿಪ್ರವಾಗಿ, ಸಾಮೂಹಿಕವಾಗಿ ಗುರುತಿಸಲು ನೆರವಾಗುತ್ತದೆ ಎಂದು ಬಿಜಿನೆಸ್ ವೈರ್ ವರದಿ ಮಾಡಿದೆ.

ಕೊರೊನಾ ವೈರಸ್‌ನಿಂದ ಹರಡುವ ಕೋವಿಡ್-19 ನಿಯಂತ್ರಣಕ್ಕಾಗಿ ಇದುವರೆಗೆ ಪರಿಣಾಮಕಾರಿ ಔಷಧಿಯನ್ನು ಪತ್ತೆ ಹಚ್ಚಲಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ, ಅದರ ಪ್ರಸಾರ ತಡೆಗೆ ಕಡಿವಾಣ ಹಾಕುವ ಮುನ್ನೆಚ್ಚರಿಕೆ ತಂತ್ರವೇ ಅತ್ಯಂತ ಸೂಕ್ತವಾದ ಕ್ರಮ. ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಮತ್ತು ಶಂಕಿತ ವ್ಯಕ್ತಿಗಳನ್ನು ಪ್ರತ್ಯೇಕೀಕರಿಸುವುದೇ ಈ ಸೋಂಕು ಹರಡುವುದನ್ನು ತಡೆಗಟ್ಟಲು ಇರುವ ಪರಿಣಾಮಕಾರಿ ಮಾರ್ಗ. ಆದರೆ ಯಾರಿಗೆ ಸೋಂಕು ತಗುಲಿದೆ ಅಂತ ತಿಳಿಯುವುದು ಹೇಗೆ? ಕೋವಿಡ್-19 ಬಾಧಿತರ ದೇಹದ ಉಷ್ಣತೆ ಹೆಚ್ಚಿರುತ್ತದೆ. ಇದೇ ಕಾರಣಕ್ಕಾಗಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ವೇಳೆ ಉಷ್ಣತಾ ಪರೀಕ್ಷೆಯನ್ನು ಮಾಡಲಾಗುತ್ತದೆ. ಜನದಟ್ಟಣೆ ಇರುವಲ್ಲಿ ದೇಹದ ಉಷ್ಣತೆ ಸ್ಕ್ಯಾನ್ ಮಾಡಬಲ್ಲ ವ್ಯವಸ್ಥೆಯು ಕೊರೊನಾ ವೈರಸ್ ಸೋಂಕಿತರನ್ನು ಸುಲಭವಾಗಿ ಗುರುತಿಸಲು ನೆರವಾಗಬಲ್ಲದು. ಏಕಕಾಲದಲ್ಲಿ ಹಲವು ಮಂದಿಯನ್ನು ತಪಾಸಣೆಗೊಳಪಡಿಸುವುದು ಈ ಸಾಧನದಿಂದ ಸಾಧ್ಯವಾಗುತ್ತದೆ.

ಫಿರೆಟಿನಾಸ್ ಎಂಬ ಈ ಸಾಧನದಲ್ಲಿ ಅಂತರ್-ನಿರ್ಮಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದೊಂದಿಗೆ ಚಿಪ್ ಅಳವಡಿಸಲಾಗಿದೆ. ಸುಮಾರು 100 ಮಂದಿಯನ್ನು ಏಕಕಾಲಕ್ಕೆ ಸ್ಕ್ಯಾನ್ ಮಾಡಬಲ್ಲ ಸಾಮರ್ಥ್ಯವಿರುವ ಫಿರೆಟಿನಾಸ್, ವೇಗವಾಗಿ ಎಂದರೆ ಸೆಕೆಂಡಿಗೆ 3 ಟ್ರಿಲಿಯನ್ ಬಾರಿ ಸ್ಕ್ಯಾನ್ ಮಾಡಿ, ಉಷ್ಣತೆ ಹೆಚ್ಚಾಗಿರುವ ದೇಹವಿರುವ ವ್ಯಕ್ತಿಗಳನ್ನು ಗುರುತಿಸಬಲ್ಲುದು. ಹಣೆ ಭಾಗದಲ್ಲಿನ ಉಷ್ಣತೆಯನ್ನು ಗುರುತಿಸುವಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನೆರವಾಗಲಿದೆ.

ADVERTISEMENT

ಸಾಮಾನ್ಯವಾಗಿ ದೇಹದ ಉಷ್ಣತೆಯನ್ನು ಪತ್ತೆ ಹಚ್ಚುವ ಇನ್‌ಫ್ರಾರೆಡ್ ಥರ್ಮಲ್ ವ್ಯವಸ್ಥೆಯು ಸುತ್ತಮುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ನಿಖರವಾಗಿ ರೀಡಿಂಗ್ ನೀಡುವುದು ಸಾಧ್ಯವಾಗಲಾರದು. ಹಲವು ಮಂದಿಯನ್ನು ಏಕಕಾಲಕ್ಕೆ ಉಷ್ಣತಾ ತಪಾಸಣೆಗೆ ಒಳಪಡಿಸಬೇಕಾದಾಗ, ನಿಖರತೆ ಅತೀ ಮುಖ್ಯವಾಗುತ್ತದೆ. ಆರೋಗ್ಯವಂತರ ರೀಡಿಂಗ್‌ನಲ್ಲಿ 0.3 ಡಿಗ್ರಿಯಷ್ಟು ಹೆಚ್ಚು ಕಡಿಮೆಯಾದರೂ, ಅದು ರೋಗ ಪತ್ತೆಯ ವ್ಯವಸ್ಥೆಯ ದಾರಿ ತಪ್ಪಿಸಬಹುದಾಗಿದೆ.

ದೊಡ್ಡ ಇನ್‌ಫ್ರಾರೆಡ್ ವ್ಯವಸ್ಥೆಗಳು ಮೇಲ್ಮೈ ಉಷ್ಣತೆ ಪತ್ತೆ ಹಚ್ಚಲು ನೇರಳಾತೀತ ಕಿರಣಗಳನ್ನು ಅವಲಂಬಿಸಿರುವುದರಿಂದ, ಎಷ್ಟು ಅಂತರದಿಂದ ಎಂಬುದು ಕೂಡ ಸರಿಯಾದ ಅಳತೆಗೆ ಹಿನ್ನಡೆಯಾಗಬಹುದು. ಸಾಮಾನ್ಯ ಇನ್‌ಫ್ರಾರೆಡ್ ಸ್ಕ್ಯಾನರ್ 2-3 ಮೀಟರ್ ಅಂತರದಿಂದ ಮಾತ್ರವೇ ಸರಿಯಾಗಿ ಕೆಲಸ ಮಾಡಿದರೆ, 10 ಮೀಟರ್ ದೂರದಲ್ಲಿರುವವರ ಉಷ್ಣತೆಯನ್ನು ಕಡಿಮೆ ಮಟ್ಟದಲ್ಲಿ ತೋರಿಸುವ ಸಾಧ್ಯತೆಗಳಿವೆ. ಈ ಸಮಸ್ಯೆಯ ನಿವಾರಣೆಗಾಗಿ ಫಿರೆಟಿನಾಸ್ ಅಭಿವೃದ್ಧಿಪಡಿಸಲಾಗಿದ್ದು, ದೂರದಲ್ಲಿರುವ ವ್ಯಕ್ತಿಯ ದೇಹದ ತಾಪಮಾನವನ್ನು ಕೂಡ ನಿಖರವಾಗಿ ಅಳೆಯಬಲ್ಲುದು ಎನ್ನುತ್ತದೆ ಪತ್ರಿಕಾ ಪ್ರಕಟಣೆ.

ಚೀನಾದಲ್ಲಿನ ತನ್ನ ಅನುಭವವನ್ನು ಮುಂದಿಟ್ಟು, ಜಾಗತಿಕ ಪಾಲುದಾರರಿಗಾಗಿ ಫಿರೆಟಿನಾಸ್ ಎದುರುನೋಡುತ್ತಿದೆ. ಸಾಂಕ್ರಾಮಿಕ ಕೊರೊನಾ ವೈರಸ್ ಪಿಡುಗಿನ ಆಟಾಟೋಪ ಕಡಿಮೆಯಾದ ಬಳಿಕ ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.