ADVERTISEMENT

ಗಿಡಗಳೇ ಬಲ್ಬುಗಳು!

ಕೊಳ್ಳೇಗಾಲ ಶರ್ಮ
Published 2 ಸೆಪ್ಟೆಂಬರ್ 2025, 21:54 IST
Last Updated 2 ಸೆಪ್ಟೆಂಬರ್ 2025, 21:54 IST
   

ಬೆಳಗ್ಗೆ ಬಿಸಿಲಿದ್ದಾಗ ಛಾರ್ಜ್‌ ಆಗಿ, ರಾತ್ರಿ ಕತ್ತಲಾದ ಕೂಡಲೆ ಬೆಳಗುವ ಎಲ್‌ಇಡಿಗಳು ಈಗ ಸಿಗುತ್ತಿವೆ. ಸ್ವಿಚ್‌ ಒತ್ತಿದರೆ ಬಿಳಿ, ಹಳದಿ ಇಲ್ಲವೇ ನೀಲಿ ಬಣ್ಣದವಾಗಿ ಹೊಳೆಯುವವೂ ಇವೆ. ಈ ಎರಡೂ ಗುಣಗಳೂ ಇರುವ ಗಿಡಗಳು ಇವೆ ಎಂದರೆ ಏನೆನ್ನುತ್ತೀರಿ? ಚೀನಾದ ದಕ್ಷಿಣ ಚೀನಾ ಕೃಷಿ ವಿಶ್ವವಿದ್ಯಾನಿಲಯದ ಜೈವಿಕ ವಸ್ತುಗಳ ಪ್ರಯೋಗಶಾಲೆಯ ವಿಜ್ಞಾನಿ ಶ್ವೈಜೀ ಝಾಂಗ್‌ ಮತ್ತು ಸಂಗಡಿಗರು ಇಂತಹ ಗಿಡಗಳನ್ನು ರೂಪಿಸಿದ್ದಾರೆ. ಬೆಳಗ್ಗೆ ಬಿಸಿಲಿನಲ್ಲಿ ಇಟ್ಟರೆ ಸೂರ್ಯನ ಬೆಳಕಿನ ಶಕ್ತಿಯನ್ನು ಹೀರಿಕೊಳ್ಳುವ ಈ ಗಿಡಗಳು, ರಾತ್ರಿ ಅಥವಾ ಕತ್ತಲಿನಲ್ಲಿ ತುಸು ಮಂದವಾದ ವಿವಿಧ ಬಣ್ಣಗಳ ಬೆಳಕು ಹೊಮ್ಮಿಸುತ್ತಾ ಮಿಂಚುತ್ತವೆಯಂತೆ.

ಓಹೋ. ಈ ಹಿಂದೆ ಜೈವಿಕ ತಂತ್ರಜ್ಞಾನದಿಂದ ಮಿರುಗುವ ಮೈಯ ಮೊಲ, ಮಂಗಗಳನ್ನು ರೂಪಿಸಲಾಗಿತ್ತಲ್ಲ, ಹಾಗೆಯೋ ಎಂದಿರಾ. ಅಲ್ಲವಂತೆ. ಇದು ಅಪ್ಪಟ ರಾಸಾಯನಿಕ ವಿಜ್ಞಾನ. ಸೂರ್ಯನ ಬೆಳಕನ್ನು ಹೀರಿಕೊಂಡು, ಅನಂತರ ಅದೇ ಶಕ್ತಿಯನ್ನೇ ಬೇರೊಂದು ರಂಗಿನ ಬೆಳಕನ್ನಾಗಿ ಚಿಮ್ಮುವ ನ್ಯಾನೊಕಣಗಳ ಮಹಾತ್ಮೆಯಂತೆ. ಝಾಂಗ್‌ ತಂಡ ಇಂತಹ ನ್ಯಾನೊಕಣಗಳನ್ನು ರೂಪಿಸುವ ತಂತ್ರವನ್ನು ಸಿದ್ಧಪಡಿಸುವುದರ ಜೊತೆಗೇ, ಅವನ್ನು ಗಿಡಗಳಿಗೆ ಚುಚ್ಚಿ, ಪರೀಕ್ಷಿಸಿದೆ. ಈ ಗಿಡಗಳು ಜೈವಿಕ ತಂತ್ರಜ್ಞಾನದಿಂದ ಮಿನುಗುವ ಗಿಡಗಳಿಗಿಂತ ಪ್ರಖರವಾಗಿ ಬೆಳಕನ್ನು ಸೂಸುತ್ತವೆಯಂತೆ.

ಇಂತಹ ಗಿಡಗಳನ್ನು ರೂಪಿಸಬಹುದೆನ್ನುವ ಝಾಂಗ್‌ ತಂಡದ ತರ್ಕ ಬಹಳ ಸರಳ. ಆಫ್ಟರ್‌ಗ್ಲೋ ಫಾಸ್ಫರುಗಳು ಎನ್ನುವ ವಸ್ತುಗಳಿವೆ. ಅತ್ಯಲ್ಪ ಪ್ರಮಾಣದಲ್ಲಿ ಡಿಸ್ಪೋರಿಯಂ ಮತ್ತು ಯುರೋಪಿಯಂ ಲೋಹಗಳನ್ನು ಬೆರೆಸಿದ ಸ್ಟ್ರಾಂಶಿಯಂ ಅಲ್ಯುಮಿನಿಯಂ ಆಕ್ಸೈಡುಗಳು ಬಿಸಿಲಿನಲ್ಲಿ ಇಟ್ಟಾಗ ಸೂರ್ಯನ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಅನಂತರ ಸಾಕಷ್ಟು ಸಮಯ ಕಳೆದ ಮೇಲೆ, ಅಲ್ಲಾಡಿದಾಗಲೋ ಬಿಸಿಯಾದಾಗಲೋ ಹೀರಿಕೊಂಡ ಶಕ್ತಿಯನ್ನು ಬೇರೊಂದ ಬಣ್ಣದ ಬೆಳಕಾಗಿ ಹೊಮ್ಮಿಸುತ್ತವೆ; ಸರಳವಾಗಿ ಹೇಳುವುದಾದರೆ ಬೇರೊಂದು ಬಣ್ಣದಿಂದ ಹೊಳೆಯುತ್ತವೆ. ಇವನ್ನು ‘ನಿಧಾನಸ್ಫುರಣ ವಸ್ತುಗಳು’ ಎನ್ನೋಣ.

ADVERTISEMENT

ಝಾಂಗ್‌ ತಂಡ ಇಂತಹ ನಿಧಾನವಾಗಿ ಶಕ್ತಿಯನ್ನು ಸ್ಫುರಿಸುವ ವಸ್ತುಗಳನ್ನು ಅತ್ಯಂತ ಸೂಕ್ಷ್ಮಕಣಗಳ ರೂಪದಲ್ಲಿ ಗಿಡಗಳಿಗೆ ಚುಚ್ಚಿದರೆ, ಗಿಡಗಳೂ ಮಿನುಗಬಹುದೇ ಎಂದು ಕಲ್ಪಿಸಿತು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತು. ನಿಧಾನಸ್ಫುರಣ ವಸ್ತುಗಳು ಈಗಾಗಲೇ ಬಳಕೆಯಲ್ಲಿವೆ. ವೈದ್ಯಕೀಯದಲ್ಲಿ ಎಂಆರ್‌ಐನಂತಹ ತಂತ್ರಗಳಲ್ಲಿ, ಮಿನುಗುವ ಕಾಗದದ ತಯಾರಿಕೆಗೆ ಅಥವಾ ಆಹಾರದ ಪೊಟ್ಟಣಗಳ ಮೇಲೆ ಮುದ್ರಿಸುವ ಶಾಯಿಯಲ್ಲಿ ಬಳಸುವ ಯತ್ನಗಳು ನಡೆದಿವೆ. ಇದೇ ರಾಸಾಯನಿಕವನ್ನು ಗಿಡಗಳಿಗೂ ಚುಚ್ಚಿ ಪರೀಕ್ಷಿಸಿದ್ದರು. ಆದರೆ ಆಗ ಬಳಸಿದ ಹರಳುಗಳ ಗಾತ್ರ ಹಲವು ನೂರು ಮೈಕ್ರೊಮೀಟರು ಪ್ರಮಾಣದ್ದಾಗಿದ್ದು, ಬಿಸಿಲಿನಲ್ಲಿನ ಶಕ್ತಿಯನ್ನು ಹಿಡಿದಿಡುತ್ತಿರಲಿಲ್ಲ. ಜೊತೆಗೆ ನಿರ್ದಿಷ್ಟ ಬಣ್ಣವನ್ನೂ ಕೊಡುತ್ತಿರಲಿಲ್ಲ. ಝಾಂಗ್‌ ತಂಡ ಇಂತಹುದೇ ವಸ್ತುಗಳನ್ನು ಇನ್ನೂ ಕಿರಿದಾಗಿಸಿ, ನ್ಯಾನೊಕಣಗಳ ರೂಪದಲ್ಲಿ ಸಸ್ಯಗಳಿಗೆ ಚುಚ್ಚಿದ್ದಾರೆ. ಜೊತೆಗೆ ಸಸ್ಯಗಳ ಅಂಗರಚನೆಯನ್ನೂ ಗಮನದಲ್ಲಿಟ್ಟುಕೊಂಡು ಪ್ರಯೋಗಗಳನ್ನು ನಡೆಸಿದ್ದಾರೆ. ಲೋಳೆಸರದಂತಹ ದಪ್ಪನಾದ, ಲೋಳೆ ಅಥವಾ ನೀರು ತುಂಬಿದ ಎಲೆಗಳಿರುವ ಗಿಡಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಂಡರು. ಈ ಎಲೆಗಳ ಒಳರಚನೆ ವಿಶಿಷ್ಟ. ಹೊರಗಡೆ ನೀರು ಬಿದ್ದರೂ ತೇವವಾಗದ ಮೇಣದ ಲೇಪ, ಅದರ ಕೆಳಗೆ ಸೂರ್ಯನ ಬೆಳಕನ್ನು ಹೀರುವ ಹಸಿರು ಕಣಗಳಿರುವ ಕೋಶಗಳ ಪದರ. ಇನ್ನೂ ಕೆಳಗೆ ಹಲವಾರು ಜೀವಕೋಶಗಳಷ್ಟು ದಪ್ಪದ ‘ಮೀಸೊಫಿಲ್‌’ ಎನ್ನುವ ಪದರ ಇರುತ್ತದೆ. ಅನಂತರ ಮತ್ತೊಂದು ಪದರ ಹಸಿರುಕೋಶಗಳಿರುತ್ತವೆ.

ಲೋಳೆಸರದ ಮೀಸೋಫಿಲ್‌ ಪದರ ವಿಶಿಷ್ಟ. ಅದರಲ್ಲಿರುವ ಜೀವಕೋಶಗಳ ನಡುವೆ ಸಾಕಷ್ಟು ತೆರಪು ಇರುತ್ತದೆ. ಈ ತೆರಪಿನಲ್ಲಿ ಲೋಳೆ ಅಥವಾ ನೀರು ಇರುತ್ರದೆ. ಜೊತೆಗೆ ಅಲ್ಪ, ಸ್ವಲ್ಪ ಗಾಳಿಯೂ ಇರುತ್ತದೆ. ಜೊತೆಗೆ ಮೀಸೋಫಿಲ್‌ ಮೇಲಿರುವ ಹೊರ ಪದರ ಬಹಳ ತೆಳುವಾದದ್ದು. ಆದ್ದರಿಂದ ಈ ಗಿಡಗಳೊಳಗೆ ಸಾಕಷ್ಟು ಪ್ರಮಾಣದಲ್ಲಿ ನ್ಯಾನೊಕಣಗಳನ್ನು ತುರುಕಬಹುದು. ಹೊರಪದರ ತೆಳುವಾಗಿರುವುದರಿಂದ ನ್ಯಾನೊಕಣಗಳು ಚಿಮ್ಮಿದ ಬೆಳಕು ಎದ್ದುಕಾಣಬಹುದು ಎನ್ನುವುದು ಈ ತಂಡದ ತರ್ಕ. ಇದಕ್ಕಾಗಿ ಇವರು ಫಾಸ್ಫರುಗಳನ್ನು ರುಬ್ಬಿ ಒಂದರಿಂದ ಹತ್ತು ಮೈಕ್ರೊಮೀಟರು ದಪ್ಪನೆಯ ಹರಳುಗಳನ್ನು ರೂಪಿಸಿದರು. ದಪ್ಪನೆಯ ಹರಳುಗಳು ಬೆಳಕನ್ನು ಹೀರಿಕೊಂಡರೂ, ಬಲು ಬೇಗನೆ ಶಕ್ತಿಗುಂದುವುದನ್ನು ಗಮನಿಸಿದರು. ಅವು ಹೊಮ್ಮಿಸಿದ ಬಣ್ಣಗಳು ಒಂದೇ ತೆರನಾಗಿರುತ್ತಿರಲಿಲ್ಲ. ಇದನ್ನು ನಿವಾರಿಸಲು ಅತಿ ಸಣ್ಣದಾದ ಕಣಗಳನ್ನಷ್ಟೆ ಆಯ್ದು ಅವುಗಳನ್ನು ಫಾಸ್ಫೇಟ್‌ ಅಯಾನುಗಳ ಜೊತೆಗೆ ಸೇರಿಸಿದರು. ಫಾಸ್ಫೇಟ್‌ ಅಯಾನು, ಹರಳುಗಳ ಜೊತೆಗೆ ನೀರು ಪ್ರತಿಕ್ರಯಿಸದಂತೆ ರಕ್ಷಿಸುತ್ತದೆ. ಹೀಗೆ ಫಾಸ್ಫೇಟನ್ನು ಲೇಪಿಸಿದ, ವಿವಿಧ ಗಾತ್ರದ ನ್ಯಾನೊಕಣಗಳನ್ನು ಪ್ರಯೋಗಗಳಲ್ಲಿ ಬಳಸಿದರು.

ಮುಂದಿನ ಪ್ರಯೋಗಗಳಿಗೆ ‘ಎಶೆವೇರಿಯಾ ಮೊಬಿನಾ’ ಎನ್ನುವ ಲೋಳೆಸರದಂತಹ ಗಿಡವನ್ನು ಆಯ್ದುಕೊಂಡರು. ಈ ಗಿಡಕ್ಕೆ ಐದು ಮೈಕ್ರಾನಿಗಿಂತಲೂ ಕಡಿಮೆ ಗಾತ್ರದ ಫಾಸ್ಫೇಟು ಕವಚವಿರುವ ಫಾಸ್ಫರು ನ್ಯಾನೊಕಣಗಳನ್ನು ನೀರಿನಲ್ಲಿ ಚದುರಿಸಿ, ಆ ದ್ರವವನ್ನು ಗಿಡಗಳ ಎಲೆಗಳಿಗೆ ಚುಚ್ಚಿದರು. ದೊಡ್ಡ ಎಲೆಗಳಿಗೆ ಹತ್ತಾರು ಕಡೆಯಲ್ಲಿ ಚುಚ್ಚಬೇಕಾಯಿತು ಎನ್ನುತ್ತಾರೆ, ಝಾಂಗ್‌. ಫಾಸ್ಫರನ್ನು ಚುಚ್ಚಿದ ಗಿಡಗಳನ್ನು ಬಿಸಿಲಿನಲ್ಲಿ ಇಟ್ಟು ಛಾರ್ಜು ಮಾಡಿದರು. ಅನಂತರ ಅವನ್ನು ಕತ್ತಲಿನಲ್ಲಿಟ್ಟು ಊದಾತೀತ ಬೆಳಕನ್ನು ಚೆಲ್ಲಿದರು. ಇದು ಸ್ವಿಚ್ಚಿನಂತೆ ಕೆಲಸ ಮಾಡಿ, ಫಾಸ್ಫರುಗಳಲ್ಲಿ ಅಡಗಿದ್ದ ಶಕ್ತಿಯನ್ನು ಬೆಳಕಾಗಿ ಹೊಮ್ಮಿಸಿತು. ತಿಂಗಳುಗಳ ಕಾಲ ಈ ಮಿನುಗುವ ಶಕ್ತಿ ಉಳಿದಿರುತ್ತದೆ.
ಸ್ಟ್ರಾಂಶಿಯಂ ಅಲ್ಯುಮಿನಿಯಂ ಆಕ್ಸೈಡಷ್ಟೆ ಅಲ್ಲದೆ ಇತರೆ ಲೋಹಗಳ ಫಾಸ್ಫಟರುಗಳನ್ನು ಝಾಂಗ್‌ ತಂಡ ಪರೀಕ್ಷಿಸಿತು. ಹೀಗೆ ಕೆಂಪು, ನೀಲಿ, ಹಳದಿ ಮೊದಲಾದ ಬಣ್ಣಗಳನ್ನು ಸೂಸುವ ಫಾಸ್ಫರುಗಳನ್ನು ಸೂಕ್ಷ್ಮಕಣಗಳಾಗಿ ಚುಚ್ಚಿದಾಗ, ಎಲ್ಲ ಬಣ್ಣಗಳೂ ಮಿನುಗಿತಂತೆ. ಒಂದೇ ಗಿಡದ ಬೇರೆ, ಬೇರೆ ಎಲೆಗಳಿಗೆ ವಿಭಿನ್ನ ಬಣ್ಣಗಳನ್ನು ಚುಚ್ಚಿ ರಂಗು, ರಂಗಿನ ಹಣತೆಯಂತೆ ಮಿನುಗುವ ಗಿಡಗಳನ್ನು ಇವರು ಸೃಷ್ಟಿಸಿದ್ದಾರೆ.

ಹೀಗೆ ಅತಿ ಸರಳವಾದ ತಂತ್ರದಿಂದ ಲೋಳೆಸರದಂತಹ ದಪ್ಪ ಎಲೆಯ ಗಿಡಗಳನ್ನು ರಂಗು, ರಂಗಾಗಿಸಬಹುದು ಎನ್ನುತ್ತಾರೆ ಝಾಂಗ್‌. ಇದೇ ತಂತ್ರವನ್ನು ಬಳಸಿದರೆ ಬಹುಶಃ ಬಟ್ಟೆಗಳನ್ನೂ, ಸ್ವಲ್ಪ ಮುಂದುವರೆದು ನಮ್ಮ ಹಚ್ಚೆಗಳನ್ನೂ ರಾತ್ರಿ ಮಿನುಗುವಂತೆ ಮಾಡಬಹುದು. ಒಂದೇ ಪ್ರಶ್ನೆ. ಈ ನ್ಯಾನೊಕಣಗಳಿಂದ ಏನಾದರೂ ಅಪಾಯ ಇರಬಹುದೇ? ಗೊತ್ತಿಲ್ಲ. ಈ ಸಂಸೋಧನೆಯ ವಿವರಗಳನ್ನು ಮ್ಯಾಟರ್‌ ಪತ್ರಿಕೆ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.