ADVERTISEMENT

ವಯಸ್ಸಿನ ವೇಗಕ್ಕೆ ಬ್ರೇಕ್‌ ಬಿದ್ದೀತೆ?

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 21:11 IST
Last Updated 19 ಆಗಸ್ಟ್ 2025, 21:11 IST
   

ಹುಟ್ಟಿನಿಂದ ಸಾಯುವವರೆಗೆ ನಮ್ಮ ವಯಸ್ಸು ಮುಂದೆ ಸಾಗುತ್ತಲೇ ಇರುತ್ತದೆ. ಓರ್ವ ವ್ಯಕ್ತಿಗೆ ಎಷ್ಟು ವಯಸ್ಸಾಗಿದೆ ಎಂಬುದನ್ನು ಆತ/ಆಕೆಯ ಮುಖ ಚಹರೆಗಳನ್ನು ನೋಡಿ ಊಹಿಸಬಹುದಲ್ಲವೇ? ಹುಟ್ಟಿನಿಂದ ಪ್ರಾರಂಭವಾಗುವ ವಯಸ್ಸು ಶಾರೀರಿಕ, ಆಂಗಿಕ ಬದಲಾವಣೆಗಳನ್ನು ತರುತ್ತದೆ. ಈ ಬದಲಾವಣೆಗಳು ಸಾವಿನೊಂದಿಗೆ ಅಂತ್ಯಗೊಳ್ಳುತ್ತದೆ. ಅಪಘಾತ, ರೋಗರುಜಿನ ಮುಂತಾದ ಆಕಸ್ಮಿಕಗಳನ್ನು ಹೊರತುಪಡಿಸಿದರೆ ಯಾವುದೇ ವ್ಯಕ್ತಿಯ ವಯಸ್ಸಿಗೆ ಹಾಗೂ ಸಾಮಾನ್ಯ ಬೆಳವಣಿಗೆಗೆ ಒಂದು ಮಿತಿ ಇದೆ. ಕೆಲವರು ಆರಂಭಿಕ ಹಂತದಲ್ಲಿಯೇ ಜೀವನವನ್ನು ಪೂರೈಸುತ್ತಾರೆ; ಕೆಲವರು ಶತಾಯುಷಿಗಳೂ ಆಗುತ್ತಾರೆ. ಹುಟ್ಟಿದಾಗಲೇ ಅಥವಾ ಮನುಷ್ಯನ ಜೀವಿತದ ಯಾವುದೇ ಹಂತದಲ್ಲಿ ಆತನ/ಆಕೆಯ ವಯಸ್ಸು ಯಾವ ವೇಗದಲ್ಲಿ ಸಾಗುತ್ತಿದೆ ಎಂದು ಕಂಡುಹಿಡಿಯಲು ಸಾಧ್ಯವೇ? ‘ಹೌದು’ ಎನ್ನುತ್ತಾರೆ, ಉತ್ತರ ಕೆರೊಲಿನಾದ ಡರ್‍ಹ್ಯಾಂನಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಮಿದುಳಿನ ಮೇಲೆ ಸಂಶೋಧನೆ ನಡೆಸುತ್ತಿರುವ ಎಥಾನ್ ವಿಟ್‍ಮನ್ ಮತ್ತು ಸಹೋದ್ಯೋಗಿಗಳು.

ಮಾನವನ ಮಿದುಳಿನಲ್ಲಿ ಮುಮ್ಮೆದುಳು ಅರೆಗೋಲ (ಸೆರೆಬ್ರಲ್ ಹೆಮಿಸ್ಪೀಯರ್), ಮಧ್ಯಮೆದುಳು (ಮಿಡ್ ಬ್ರೇನ್), ಹಾಗೂ ಹಿಮ್ಮೆದುಳು (ಸೆರೆಬ್ರಂ ಮತ್ತು ಮೆಡುಲ ಒಬ್‍ಲಾಂಗೆಟಾ) ಎಂಬ ಮೂರು ಮುಖ್ಯ ಭಾಗಗಳಿವೆ. ವಿವಿಧ ಕ್ರಿಯೆಗಳ ನಿಯಂತ್ರಣ ಕೇಂದ್ರಗಳು ಈ ಭಾಗಗಳಲ್ಲಿ ಹಂಚಿಕೆಯಾಗಿರುತ್ತವೆ. ಈ ಕೇಂದ್ರಗಳ ರಚನೆ, ದಪ್ಪ ಮುಂತಾದ ಭೌತಿಕ ಅಂಶಗಳು ಆಯಾ ಭಾಗಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.

ಮುಮ್ಮೆದುಳಿನ ತೊಗಟೆಯ ಭಾಗವು ನಾವು ಆಡುವ ಭಾಷೆ ಮತ್ತು ಆಲೋಚನೆಗಳನ್ನು ನಿಯಂತ್ರಿಸುತ್ತವೆ. ಆ ಭಾಗದಲ್ಲಿರುವ ಬೂದು ದ್ರವ್ಯ - ‘ಗ್ರೇ ಮಾಟರ್‌’ನ (ಇದು ನರಕೋಶಗಳ ಮುಖ್ಯ ಭಾಗವನ್ನು ಒಳಗೊಂಡಿರುತ್ತದೆ) ಪರಿಮಾಣವು ವ್ಯಕ್ತಿಯ ಯೋಚಿಸುವ ಮತ್ತು ನೆನಪಿನ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ವಯಸ್ಸಾದಂತೆ ವ್ಯಕ್ತಿಯ ಯೋಚಿಸುವ ಹಾಗೂ ನೆನಪಿಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಈ ಬದಲಾವಣೆ ಮುಮ್ಮೆದುಳಿನ ತೊಗಟೆಯ ದಪ್ಪದ ಮೇಲೂ ಪರಿಣಾಮವನ್ನು ಬೀರುತ್ತದೆ. ತೊಗಟೆಯ ದಪ್ಪ ವ್ಯಕ್ತಿಯ ದೌರ್ಬಲ್ಯ, ರೋಗ ಮತ್ತು ಸಾವಿನ ಅಪಾಯಗಳನ್ನು ಕೂಡ ಸೂಚಿಸುತ್ತದೆ ಎನ್ನುತ್ತದೆ, ಈ ಅಧ್ಯಯನ.

ADVERTISEMENT

ಪ್ರತಿಯೊಂದು ಜೀವಕೋಶದಲ್ಲಿಯೂ ಆಂತರಿಕ ಗಡಿಯಾರದಂತಹ ಒಂದು ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯು ಜೀವಕೋಶಗಳಲ್ಲಿ ವಿವಿಧ ಕಾರ್ಯಗಳು ಸಮಯಕ್ಕೆ ಸರಿಯಾಗಿ ಸಾಗುವಂತೆ ನೋಡಿಕೊಳ್ಳುತ್ತದೆ. ಕೋಶಗಳ ವಯಸ್ಸಾಗುವಿಕೆಯನ್ನೂ ಈ ಗಡಿಯಾರಗಳೇ ನಿರ್ಧರಿಸುತ್ತವೆ. ಜಾಫ್ರಿ ಹಾಲ್, ಮೈಖೆಲ್ ರಾಸ್‍ಬಾಶ್ ಮತ್ತು ಮೈಖೆಲ್ ಯಂಗ್ ಎಂಬುವವರು, ಈ ಗಡಿಯಾರದ ಅಸ್ತಿತ್ವವನ್ನು ಕಂಡುಹಿಡಿದು 2017ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ವಯಸ್ಸಿನ ವೇಗವನ್ನು ಕಂಡುಹಿಡಿಯಲು ಇವರ ಸಂಶೋಧನೆಗಳೇ ಆಧಾರ. ಈ ಗಡಿಯಾರದ ಕಾರ್ಯನಿರ್ವಹಣೆಯ ವೇಗ ವಯಸ್ಸಿನ ವೇಗವನ್ನು ಸೂಚಿಸುತ್ತದೆ ಎನ್ನುತ್ತಾರೆ, ಈ ವಿಜ್ಞಾನಿಗಳು.

ಈ ಗಡಿಯಾರದ ಓಟದ ವೇಗವನ್ನು ಕಂಡು ಹಿಡಿಯುವುದು ಹೇಗೆ? ವಿಜ್ಞಾನಿಗಳು ಅದಕ್ಕೂ ಒಂದು ವಿಧಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈಗಿನ ದಿನಗಳಲ್ಲಿ ಎಂಆರ್‍ಐ ಹಾಗೂ ಸಿಟಿ ಯಂತ್ರಗಳ ಮೂಲಕ ಮಿದುಳಿನ ಆಂತರಿಕ ಚಿತ್ರಣವನ್ನು (ಸ್ಕ್ಯಾನ್) ಪಡೆಯುವುದು ಸಾಧ್ಯವಿದೆ. ಈ ಸ್ಕ್ಯಾನ್‍ಗಳ ಮೂಲಕ ಪಡೆದ ಚಿತ್ರಗಳನ್ನು ಕಂಪ್ಯೂಟರ್ ಮೂಲಕ ವಿಶ್ಲೇಷಿಸಿ ಯಾವುದೇ ವ್ಯಕ್ತಿಯ ವಯಸ್ಸಿನ ವೇಗವನ್ನು ಕಂಡುಹಿಡಿಯಬಹುದು ಎನ್ನುತ್ತವೆ ಸಂಶೋಧನೆಗಳು. ಅಮೆರಿಕದ ಮ್ಯಾಸಚೂಸೆಟ್ಸ್‍ನ ಬೋಸ್ಟನ್‍ನಲ್ಲಿರುವ ಹಾರ್ವರ್ಡ್ ವೈದ್ಯಕೀಯ ಶಾಲೆಯ ಕಂಪ್ಯೂಟೇಶನಲ್ ಜೀವವಿಜ್ಞಾನಿ ಮಹ್ದಿ ಮೊಕ್ರಿ ಅವರು ಐವತ್ತು ಸಾವಿರ ವ್ಯಕ್ತಿಗಳ ಮಿದುಳಿನ ಸ್ಕ್ಯಾನ್‍ಅನ್ನು ಪಡೆದು ವಿಶ್ಲೇಷಿಸಿ ಅದರ ಫಲಿತಾಂಶಗಳನ್ನು ಇತ್ತೀಚೆಗೆ ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರು ಮುಮ್ಮೆದುಳಿನ ತೊಗಟೆಯ ದಪ್ಪ ಮತ್ತು ಅದರಲ್ಲಿನ ಕೆಲವು ವಿಶಿಷ್ಟ ಭಾಗಗಳು ವಯಸ್ಸಾಗುವಿಕೆಯ ವೇಗವನ್ನು ತಿಳಿಸುತ್ತವೆ ಎನ್ನುತ್ತಾರೆ. ಈ ಛಾಯಾಚಿತ್ರಣ (ಇಮೇಜಿಂಗ್) ಮಿದುಳಿನಲ್ಲಿ ರಚನಾತ್ಮಕವಾಗಿ ವಯಸ್ಸಾಗುವ ಬಗ್ಗೆ ಅನನ್ಯವಾದ ಮಾಹಿತಿಯನ್ನು ಒದಗಿಸುತ್ತದೆ. ರಕ್ತ ಆಧಾರಿತ ಅಥವಾ ಗುರುತಿಗಗಳು (ಆಣ್ವಿಕ ಬಯೋಮಾರ್ಕರ್‌ಗಳು) ಕೂಡ ಸೆರೆಹಿಡಿಯಲು ಸಾಧ್ಯವಾಗದ ಮಾಹಿತಿಯನ್ನು ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗಡಿಯಾರ ಕುರಿತ ಮಾಹಿತಿ ಪಡೆಯಲು ಎಥಾನ್ ವಿಟ್‍ಮನ್ ಸಂಗಡಿಗರು 1972-1973ರ ನಡುವೆ ನ್ಯೂಜಿಲೆಂಡ್‍ನ ಡ್ಯೂನೆಡಿನ್‍ನಲ್ಲಿ ಜನಿಸಿದ ಸಾವಿರಕ್ಕೂ ಹೆಚ್ಚು ಜನರನ್ನು ಅಧ್ಯಯನಕ್ಕೆ ಒಳಪಡಿಸಿ ಎಂಆರ್‍ಐ ಬಳಸಿ, ಅವರು ಹುಟ್ಟಿದಾಗಿನಿಂದ ವಿವಿಧ ವಯಸ್ಸಿನಲ್ಲಿ ಅವರೆಲ್ಲರ ಮಿದುಳಿನ ಚಿತ್ರಣ ಮಾಡಿ ಅವುಗಳನ್ನು ಕಂಪ್ಯೂಟರಿನ ಆಲ್ಗಾರಿದಂಗೆ ಸೇರಿಸಿದರು. ಅವುಗಳಲ್ಲಿ 860 ಚಿತ್ರಗಳಿಂದ ಪಡೆದ ಅಳತೆಗಳನ್ನು ಹೋಲಿಕೆ ಮಾಡಿದರು. ಇದರಿಂದ ಒಬ್ಬರ ವಯಸ್ಸಿನ ವೇಗ ಇನ್ನೊಬ್ಬರಿಗಿಂತ ಭಿನ್ನವಾಗಿರುವುದು ಕಂಡುಬಂತು. ಹೊರನೋಟಕ್ಕೆ ಹೃದಯರಕ್ತನಾಳಗಳ ಕಾರ್ಯ, ರೋಗನಿರೋಧಕ ಸಾಮರ್ಥ್ಯ, ಚಯಾಪಚಯ ಕ್ರಿಯೆಗಳು, ಪರಿಸರ ಮತ್ತು ಸಾಂಕ್ರಾಮಿಕ ರೋಗಗಳೆಲ್ಲವೂ ವಯಸ್ಸಾಗುವ ವೇಗವನ್ನು ನಿರ್ಧರಿಸುತ್ತವೆ ಎನಿಸಿದರೂ ಆನುವಂಶೀಯತೆ ವಯಸ್ಸಾಗುವಿಕೆಯ ವೇಗದ ಮೇಲೆ ಹೆಚ್ಚು ಪ್ರಭಾವ ಹೊಂದಿದೆ ಎಂದು ಈ ಅಧ್ಯಯನಗಳು ತಿಳಿಸಿದವು.

ಇದಕ್ಕೆ ಪೂರಕವಾಗಿ ವಯಸ್ಸಿನ ವೇಗವನ್ನು ನಿಯಂತ್ರಿಸುವ ಮೂರು ಜೀನ್‍ಗಳನ್ನು (ಲಾಂಜಿವಿಟಿ ಜೀನ್ಸ್) ಕಂಡುಹಿಡಿಯಲಾಗಿದೆ. ಈ ಮೂರು ಜೀನ್‍ಗಳು ಶರೀರದ 1800 ಇತರ ಜೀನ್‍ಗಳ ಕ್ರಿಯೆಗಳ ಮೇಲೆ ಪರಿಣಾಮ ಬೀರುವ ಮೂಲಕ ಅಂಗಾಂಗಳ ಮೇಲೆ ಪರಿಣಾಮ ಬೀರುತ್ತವೆ, ಇವು ಮಿದುಳಿನ ಗಾತ್ರದ ಮೇಲೂ ಪರಿಣಾಮ ಬೀರುವುದರಿಂದ ಮಿದುಳಿನ ಭಾಗಗಳ ಹಾಗೂ ಇತರ ಶಾರೀರಿಕ ಅಳತೆಗಳ ಮೂಲಕ ವಯಸ್ಸಾಗುವಿಕೆಯ ವೇಗವನ್ನು ಅಳೆಯಬಹುದು ಎಂದು ಊಹಿಸಲಾಗಿದೆ. ಹೀಗೆ ವಯಸ್ಸಾಗುವಿಕೆಯ ವೇಗವನ್ನು ವಿಜ್ಞಾನಿಗಳು ಕಂಡುಹಿಡಿಯುವುದಾದರೆ ಮುಂದೊಂದು ದಿನ ಈ ವೇಗವನ್ನು ತಗ್ಗಿಸಿ, ಮರಣವನ್ನು ಮುಂದೂಡುವರೇ? ಸದ್ಯಕ್ಕಂತೂ ಇದು ಊಹೆಯೇ! ಮುಂದೊಂದು ದಿನ ಸಾಧ್ಯವಾಗಬಹುದೇನೊ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.