ADVERTISEMENT

ಗಗನಯಾನಿ ಶುಭಾಂಶು ಶುಕ್ಲಾ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ: ಇಸ್ರೊ

ಪಿಟಿಐ
Published 17 ಜುಲೈ 2025, 12:02 IST
Last Updated 17 ಜುಲೈ 2025, 12:02 IST
<div class="paragraphs"><p>ಶುಭಾಂಶು ಶುಕ್ಲಾ</p></div>

ಶುಭಾಂಶು ಶುಕ್ಲಾ

   

(ಚಿತ್ರ ಕೃಪೆ: X/@SpaceX)

ನವದೆಹಲಿ: ‘20 ದಿನಗಳ ಬಾಹ್ಯಾಕಾಶ ಯಾನದ ನಂತರ ಭೂಮಿಗೆ ಮರಳಿರುವ ಭಾರತದ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರ ಆರೋಗ್ಯದಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಹಾಗೂ ಸ್ಥಿರವಾಗಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಗುರುವಾರ ಹೇಳಿದೆ.

ADVERTISEMENT

ವಾಣಿಜ್ಯ ಉದ್ದೇಶಿತ ಆಕ್ಸಿಯಂ -4 ಮಿಷನ್‌ನ ಭಾಗವಾಗಿ ಗಗನಯಾನ ಕೈಗೊಂಡಿದ್ದ ಗಗನಯಾನಿಗಳಾದ ಶುಭಾಂಶು ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೊಸ್ಜ್ ಉಜ್ನಾನ್‌ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ಜೂನ್ 15ರಂದು ಡ್ರಾಗನ್‌ ಗ್ರೇಸ್‌ ನೌಕೆಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ಬಳಿಯ ಸ್ಯಾನ್ ಡಿಯಾಗೊ ಕಡಲ ತೀರದಲ್ಲಿ ಬಂದಿಳಿದಿದ್ದರು.

ಧರೆಗೆ ಮರಳುತ್ತಿದ್ದಂತೆ ತಜ್ಞರು ಈ ನಾಲ್ವರು ಗಗನಯಾನಿಗಳ ಆರೋಗ್ಯ ತಪಾಸಣೆ ನಡೆಸಿದರು. ನಂತರ ಇವರನ್ನು ಹೆಲಿಕಾಪ್ಟರ್ ಮೂಲಕ ಮೈನ್‌ಲ್ಯಾಂಡ್‌ನಲ್ಲಿ ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಅಲ್ಲಿಂದ ಒಂದು ವಾರಗಳ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಶುಕ್ಲಾ ಅವರು ಹ್ಯೂಸ್ಟನ್‌ಗೆ ಪ್ರಯಾಣಿಸಿದರು. 

ಈ ಶಿಬಿರದಲ್ಲಿ ಆಕ್ಸಿಯಂ ಮತ್ತು ಇಸ್ರೊದ ಫ್ಲೈಟ್ ಸರ್ಜನ್‌ಗಳೂ ಪಾಲ್ಗೊಂಡಿದ್ದಾರೆ. ಇದರಲ್ಲಿ ಹೃದಯ ತಪಾಸಣೆ, ಮಾಂಸಖಂಡಗಳು ಮತ್ತು ಮೂಳೆಗಳ ತಪಾಸಣೆ ನಡೆಯಲಿದೆ. ಮಾನಸಿಕ ಸ್ಥಿತಿಯ ವಿವರಣೆಯೂ ದಾಖಲಾಗಲಿದೆ ಎಂದೆನ್ನಲಾಗಿದೆ.

ಬಾಹ್ಯಾಕಾಶದಿಂದ ಗುರುತ್ವಾಕರ್ಷಣ ಶಕ್ತಿ ಇರುವ ಭೂಮಿಗೆ ಮರಳಿದ ನಂತರ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪುನಶ್ಚೇತನ ಶಿಬಿರ ಆಯೋಜನೆಗೊಂಡಿದೆ. ಇದರಲ್ಲಿ ಶುಭಾಂಶು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ತಪಾಸಣೆ ನಡೆಯಲಿದೆ. ಸಹಜ ಬದುಕಿಗೆ ಮರಳಲು ಅವರನ್ನು ಸಜ್ಜುಗೊಳಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ.

20 ದಿನಗಳ ಬಾಹ್ಯಾಕಾಶ ಪ್ರಯಾಣದಲ್ಲಿ ಶುಕ್ಲಾ ಹಾಗೂ ಅವರ ತಂಡ 18 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದರು. ಸುಮಾರು 60ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿದರು. ಇವುಗಳಲ್ಲಿ ಇಸ್ರೊ ಮತ್ತು ನಾಸಾ ಪ್ರಯೋಗಗಳೂ ಇದ್ದವು. ಈ ಅವಧಿಯಲ್ಲಿ ಇವರು 320 ಬಾರಿ ಭೂಮಿಯನ್ನು ಸುತ್ತಿದ್ದಾರೆ. ಹಾಗೆಯೇ 135.18 ಲಕ್ಷ ಕಿಲೋ ಮೀಟರ್‌ ದೂರವನ್ನು ಕ್ರಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.