ADVERTISEMENT

ಭಾರತದ ಫೋನ್‌ಗಳು ಸ್ಮಾರ್ಟ್‌ ಆಗುತ್ತಿವೆ

ಕೃಷ್ಣ ಭಟ್ಟ
Published 28 ಜನವರಿ 2026, 0:30 IST
Last Updated 28 ಜನವರಿ 2026, 0:30 IST
   

ಕೆಲವು ದಿನಗಳ ಹಿಂದೆ ಸ್ಮಾರ್ಟ್‌ಫೋನ್ ಮಾರ್ಕೆಟ್ ಅನ್ನು ಗಮನಿಸುತ್ತಿರುವವರಿಗೆ ಒಂದು ದೊಡ್ಡ ಆಘಾತಕಾರಿಯಂತಹ ಸುದ್ದಿಯೊಂದು ಹರಡಿತ್ತು. ಚೀನಾ ಮೂಲದ ಒನ್‌ಪ್ಲಸ್‌ ಕಂಪನಿ ಭಾರತದಲ್ಲಿ ಬಾಗಿಲು ಹಾಕುತ್ತಿದೆ ಎಂಬುದು ಈ ಸುದ್ದಿ! ತಕ್ಷಣವೇ ಕಂಪನಿ ‘ಇಲ್ಲ, ನಾವು ಭಾರತದಲ್ಲಿ ಎಂದಿನಂತೆಯೇ ಕಾರ್ಯಾಚರಣೆ ಮಾಡುತ್ತಿದ್ದೇವೆ’ ಎಂದು ಸ್ಪಷ್ಟನೆ ನೀಡಿತು. ಅದಾದ ಮೇಲೆ, ಮೊನ್ನೆ ಡಾವೋಸ್‌ನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್, ಮುಂದಿನ ಒಂದು ಅಥವಾ ಒಂದೂವರೆ ವರ್ಷದಲ್ಲಿ ಭಾರತದ್ದೇ ಜಾಗತಿಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಈ ಎರಡೂ ಘಟನೆಗಳ ಜೊತೆಗೆ ಭಾರತದ ಸದ್ಯದ ಸ್ಮಾರ್ಟ್‌ಫೋನ್ ಮಾರ್ಕೆಟ್‌ನಲ್ಲಿ ಆಗುತ್ತಿರುವ ಸ್ಥಿತ್ಯಂತರವನ್ನು ಗಮನಿಸಿದರೆ ಭವಿಷ್ಯದಲ್ಲಿ ಭಾರತದಿಂದ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳು ಕಾಲುಕೀಳುವ ಹೊತ್ತು ಬರುತ್ತಿದೆ ಎನ್ನಬಹುದು. ಇದನ್ನು ತಕ್ಷಣಕ್ಕೆ ಓದಿದಾಗ ಇದೊಂದು ಅತಿರಂಜಿತ ಅನ್ನಿಸಬಹುದು. ಎಷ್ಟು ಭಾರತೀಯ ಬ್ರ್ಯಾಂಡ್‌ಗಳು ಬಂದು ಅವು ಹಾಗೆಯೇ ನೆಲಕಚ್ಚಿವೆ, ಮೈಕ್ರೋಮ್ಯಾಕ್ಸ್ ಕಥೆ ಏನಾಯ್ತು? ಲಾವಾ ಇನ್ನೂ ಉಸಿರಾಡುತ್ತಿದೆಯೇ? ಜಿಯೋದ ಬೇಸಿಕ್‌ ಫೋನ್‌ಗಳು ಯಾರ ಕೈಯಲ್ಲಾದರೂ ಕಾಣಿಸುತ್ತಾ ಇದೆಯೇ? - ಎಂದೆಲ್ಲ ಪ್ರಶ್ನೆಗಳು ಮಾಡಬಹುದು.

ಕಳೆದ ಒಂದೆರಡು ವರ್ಷದಲ್ಲಿ ಚೀನಾದ ಹಲವು ಪ್ರಾಡಕ್ಟ್‌ಗಳು ಸದ್ದಿಲ್ಲದೇ ಆನ್‌ಲೈನ್‌ ಮಾರ್ಕೆಟ್‌ಪ್ಲೇಸ್‌ನಲ್ಲಿ ಕಳೆದ ಒಂದು ಒಂದೂವರೆ ವರ್ಷದಿಂದ ಮರೆಯಾಗುತ್ತಿರುವುದು ಯಾಕೆ?

ADVERTISEMENT

ಭಾರತದ ಸ್ಮಾರ್ಟ್‌ಫೋನ್ ಮಾರ್ಕೆಟ್‌ನಲ್ಲಿ ಸದ್ದಿಲ್ಲದೇ ಒಂದು ಸಂಚಲನ ನಡೆಯುತ್ತಿದೆ. ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ ವೆಚ್ಚದಲ್ಲಿ ಹೆಚ್ಚಳವಾಗಿದೆ. ಚಿಪ್‌ಗಳು ಮತ್ತು ಸ್ಕ್ರೀನ್‌ಗಳ ದರದಲ್ಲಿ ಶೇ 40-50ರಷ್ಟು ಏರಿಕೆಯಾಗಿದೆ. ಇದರಿಂದ ಭಾರತದಂತಹ ದೇಶದಲ್ಲಿ ಕಡಿಮೆ ದರದಲ್ಲಿ, ಕಡಿಮೆ ಮಾರ್ಜಿನ್‌ನಲ್ಲಿ ಸ್ಮಾರ್ಟ್‌ಫೋನ್ ಮಾರುವುದು ಕಂಪನಿಗಳಿಗೆ ಕಷ್ಟವಾಗಿದೆ. ಈ ಹಿಂದೆ ಈ ಚೀನಾ ಕಂಪನಿಗಳು ಅತಿ ಕಡಿಮೆ ಮಾರ್ಜಿನ್ ಇಟ್ಟುಕೊಂಡು ಮಾರುತ್ತಿದ್ದವು. ಆದರೆ, ಈಗ ಲಾಭ ಮಾಡುವುದಕ್ಕೆ ಹೊರಟಿವೆ. ಇನ್ನೊಂದು ಕಡೆಗೆ ಭಾರತ ಸರ್ಕಾರವೂ ಇವರ ಮೇಲಿನ ನಿಯಮಗಳನ್ನು ಬಿಗಿ ಮಾಡುತ್ತಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಇವರ ಅಸ್ತಿತ್ವವನ್ನು ಕಡಿಮೆ ಮಾಡಿ, ಅಲ್ಲಿ ಭಾರತೀಯ ಕಂಪನಿಗಳು ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಲಾವಾ ಕಂಪನಿಯ ಅಗ್ನಿ ಸರಣಿಯ ಫೋನ್‌ಗಳು ವರ್ಷದಿಂದ ವರ್ಷಕ್ಕೆ ಶೇ 100ಕ್ಕಿಂತ ಹೆಚ್ಚು ಮಾರಾಟ ಏರಿಕೆ ಕಾಣುತ್ತಿವೆ. ಆದರೆ, ಅದರ ಮಾರಾಟದ ಸಂಖ್ಯೆಯು ಉಳಿದ ಕಂಪನಿಗಳಿಗೆ ಹೋಲಿಸಿದರೆ ಇನ್ನೂ ಕಡಿಮೆಯೇ ಇದೆ.

ಇನ್ನೊಂದು ಮಹತ್ವದ ಬದಲಾವಣೆಯೇನೆಂದರೆ, ಭಾರತದ ಗ್ರಾಹಕರ ಮನಃಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದೆ. ಈ ಹಿಂದೆ 10-12 ಸಾವಿರದ ಸ್ಮಾರ್ಟ್‌ಫೋನ್ ತೆಗೆದುಕೊಂಡು ಒಂದೆರಡು ವರ್ಷಕ್ಕೇ ‘ಸ್ಲೋ’ ಆಗುತ್ತಿದ್ದುದನ್ನು ಅನುಭವಿಸಿದ ಜನರು ಈಗ ಪ್ರೀಮಿಯಂ ಸ್ಮಾರ್ಟ್‌ಫೋನ್ ಕಡೆಗೆ ಹೊರಳಿಕೊಳ್ಳುತ್ತಿದ್ದಾರೆ. ಆದರೆ, ಪ್ರೀಮಿಯಂ ಫೋನ್‌ಗಳ ವಿಷಯ ಬಂದಾಗ ಚೀನಾ ಬ್ರ್ಯಾಂಡ್‌ಗಳಿಗಿಂತ ಯುರೋಪಿಯನ್ ಅಮೆರಿಕನ್ ಬ್ರ್ಯಾಂಡ್‌ಗಳ ಬಗ್ಗೆ ಜನರಿಗೆ ವಿಶ್ವಾಸ ಹೆಚ್ಚು. ಸೆಕೆಂಡ್ ಹ್ಯಾಂಡ್ ಐಫೋನನ್ನಾದರೂ ಖರೀದಿ ಮಾಡುತ್ತಾರೆಯೇ ಹೊರತು, ಅದೇ ದರಕ್ಕೆ ಒಪ್ಪೊ, ವಿವೊ ಖರೀದಿ ಮಾಡುವುದಕ್ಕೆ ಮನಸು ಮಾಡುವುದಿಲ್ಲ. ಇದರಿಂದ ಆ ಕಡೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಸೇಲ್ ಆಗದ, ಈ ಕಡೆ ಬಜೆಟ್ ಸ್ಮಾರ್ಟ್‌ಫೋನ್‌ನಲ್ಲಿ ಲಾಭ ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ ಕಂಪನಿಗಳಿವೆ.

ಹಾಗೆಂದ ಮಾತ್ರಕ್ಕೆ ಮುಂದಿನ ಒಂದೆರಡು ವರ್ಷದಲ್ಲಿ ಚೀನಾದ ಕಂಪನಿಗಳೆಲ್ಲ ನಷ್ಟ ಮಾಡಿಕೊಂಡು ಹೋಗುತ್ತವೆ ಎಂದು ನಾವು ಈಗಲೇ ಷರಾ ಬರೆಯಬೇಕಿಲ್ಲ. ಎರಡು ವರ್ಷ ಮಾರ್ಕೆಟ್‌ನಲ್ಲಿ ಅಷ್ಟೇನೂ ಉತ್ಸಾಹ ತೋರಿಸದ ಒಪ್ಪೊ ಕಂಪನಿಯ ಫೋನ್‌ಗಳು 2025ರಲ್ಲಿ ಸ್ವಲ್ಪ ಚೇತರಿಕೆ ಕಂಡು, ಶೇ 10ರಷ್ಟು ಏರಿಕೆಯಾಗಿದೆ. ಆದರೆ, ವಿವೋ ಫೋನ್‌ಗಳು 2025ರಲ್ಲಿ ಶೇ 19ರಷ್ಟು ಏರಿಕೆಯನ್ನು ಕಂಡಿವೆ. ಇನ್ನು ವಿವೋದ ಹೊಸ ಬ್ರ್ಯಾಂಡ್ ಐಕ್ಯೂ ಕೂಡ ಗೇಮರ್‌ಗಳಿಗೆ ಭಾರಿ ಇಷ್ಟದ ಸ್ಮಾರ್ಟ್‌ಫೋನ್ ಆಗಿದೆ. ಆದರೆ, ಒಂದು ಕಾಲದಲ್ಲಿ ಭಾರತದಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಅಲೆ ಎಬ್ಬಿಸಿದ್ದ ಶಓಮಿ 2025ರಲ್ಲಿ ಶೇ 26ರಷ್ಟು ಕುಸಿದಿದೆ. ಆಮೇಲೆ ಬಂದ ರಿಯಲ್‌ಮಿ ಮಾರಾಟ ಶೇ 18ರಷ್ಟು ಕುಸಿದಿದೆ. ಒನ್‌ಪ್ಲಸ್ ಅಂತೂ ಶೇ 40ರಷ್ಟು ಮಾರಾಟ ಕುಸಿತ ಕಂಡಿದೆ!

ಭಾರತ ಯಾಕೆ ಇನ್ನೂ ಹಿಂದಿದೆ?

ಈ ಹತ್ತು ವರ್ಷದಲ್ಲಿ ಭಾರತದ ಸ್ಮಾರ್ಟ್‌ಫೋನ್ ವಲಯದಲ್ಲಿ ಸದ್ದಿಲ್ಲದೇ ಒಂದು ಚಮತ್ಕಾರ ನಡೆದಿದೆ. ಮೊದಲು ಭಾರತಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು ಮೈಕ್ರೋಮ್ಯಾಕ್ಸ್ ಎಂಬ ಕಂಪನಿ. ಈ ಕಂಪನಿ ವಾಸ್ತವದಲ್ಲಿ ಆಮದು ಕಂಪನಿಯಾಗಿ ಕೆಲಸ ಮಾಡಿತ್ತು. ಅಂದರೆ, ಚೀನಾದಿಂದ ಐಟಮ್‌ಗಳನ್ನು ತಂದು ಇಲ್ಲಿ ಅದನ್ನು ಅಸೆಂಬಲ್ ಮಾಡಿ ಮೈಕ್ರೋಮ್ಯಾಕ್ಸ್ ಎಂದು ಬ್ರ್ಯಾಂಡ್ ಮಾಡಿ ಮಾರಾಟ ಮಾಡುತ್ತಿತ್ತು. ಆಮೇಲೆ ನಿಧಾನವಾಗಿ ಇವರಿಗೆ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಗಳೇ ಭಾರತಕ್ಕೆ ಕಾಲಿಟ್ಟವು. ಆದರೆ, ಆರಂಭದಲ್ಲಿ ಚೀನಾದಲ್ಲೇ ಅಸೆಂಬಲ್ ಮಾಡುತ್ತಿದ್ದ ಈ ಕಂಪನಿಗಳು ಭಾರತದ ನಿಯಮಗಳ ಕಾರಣದಿಂದ ಭಾರತದಲ್ಲಿ ಅಸೆಂಬಲ್ ಮಾಡಲು ಶುರು ಮಾಡಿದವು. ಆಗ ಭಾರತದಲ್ಲಿ ಸನ್ನಿವೇಶ ಬದಲಾಯಿತು. ಇದೇ ಮೈಕ್ರೋಮ್ಯಾಕ್ಸ್‌ನ ಫ್ಯಾಕ್ಟರಿಯಲ್ಲೇ ಈಗಲೂ ಬಹುತೇಕ ಎಲ್ಲ ಚೀನಾದ ಸ್ಮಾರ್ಟ್‌ಫೋನ್‌ಗಳು ಅಸೆಂಬಲ್ ಆಗುತ್ತಿವೆ. ಆದರೆ, ನಮಗೆ ಅದು ಕಾಣಿಸುತ್ತಿಲ್ಲ ಅಷ್ಟೇ!

ನಾವೆಲ್ಲ ಹಿಂದೆ ಚೀನಾದಿಂದ ಬಂದ ಬಿಡಿಭಾಗಗಳನ್ನು ಭಾರತದಲ್ಲಿ ಅಸೆಂಬಲ್ ಮಾಡಿ, ಮೈಕ್ರೋಮ್ಯಾಕ್ಸ್‌ ಬ್ರ್ಯಾಂಡ್‌ನಲ್ಲಿದ್ದ ಸ್ಮಾರ್ಟ್‌ಫೋನ್ ಬಳಸುತ್ತಿದ್ದೆವು. ಈಗ ಭಾರತದಲ್ಲೇ ಬಿಡಿಭಾಗಗಳನ್ನು ತಯಾರಿಸಿ ಭಾರತದಲ್ಲಿ ಅಸೆಂಬಲ್ ಆದ ಚೀನಾ ಬ್ರ್ಯಾಂಡ್‌ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದೇವೆ. ಕಳೆದ ಎರಡು ವರ್ಷಗಳ ಹಿಂದೆ ನೋಯ್ಡಾದಲ್ಲಿ ಮೈಕ್ರೋಮ್ಯಾಕ್ಸ್‌ನ ಭಗವತಿ ಪ್ರಾಡಕ್ಟ್ಸ್‌ ಲಿಮಿಟೆಡ್‌ನ ಫ್ಯಾಕ್ಟರಿಯಲ್ಲಿ ಸದ್ಯಕ್ಕೆ ದಿನವೊಂದಕ್ಕೆ 20 ಲಕ್ಷ ಯೂನಿಟ್‌ಗಳು ಉತ್ಪಾದನೆಯಾಗುತ್ತಿವೆ! ಈ ಹಿಂದೆ ಬರಿ ಅಸೆಂಬಲ್ ಮಾಡುತ್ತಿದ್ದ ಕಂಪನಿ ಈಗ ಮದರ್‌ಬೋರ್ಡ್‌ಗಳನ್ನು ತಾನೇ ಡಿಸೈನ್ ಮಾಡಿ, ತಾನೇ ಪ್ರೊಡಕ್ಷನ್ ಮಾಡುತ್ತಿದೆ.

ಇದು ಸಣ್ಣ ಸಾಧನೆಯೇನಲ್ಲ. ಹಾಗಿದ್ದರೆ, ಭಾರತದ್ದೇ ಸ್ಮಾರ್ಟ್‌ಫೋನ್ ಬ್ರ್ಯಾಂಡನ್ನು ಪ್ರಚಾರ ಮಾಡಿ, ಚೀನಾದ ಬ್ರ್ಯಾಂಡ್‌ಗಳಿಗೆ ತೆರಿಗೆ ಹಾಕಿ ಮಾರ್ಕೆಟ್‌ನಿಂದ ಆಚೆ ಕಳಿಸುವುದಕ್ಕೆ ಸಾಧ್ಯವಿಲ್ಲವೇ ಎಂದು ಯೋಚಿಸಬಹುದು. ಆದರೆ, ಇಲ್ಲೊಂದು ಸಮಸ್ಯೆ ಇನ್ನೂ ಇದೆ. ಅದೇನೆಂದರೆ, ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಕೊರತೆ ಇದೆ. ನಾಲ್ಕೈದು ವರ್ಷಗಳವರೆಗೆ ನಮ್ಮಲ್ಲಿ ಉತ್ಪಾದನೆ ಸಾಮರ್ಥ್ಯದ ಕೊರತೆ ಇತ್ತು. ಅದನ್ನು ನಾವು ಈಗ ಬಹುತೇಕ ನೀಗಿಸಿದ್ದೇವೆ. ಈಗ ನಮ್ಮಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆ ಮಾಡುವುದಕ್ಕೆ ಅಗತ್ಯ ಪರಿಣತಿ ಇದೆ. ಆದರೆ, ಸ್ಮಾರ್ಟ್‌ಫೋನ್ ಉತ್ಪಾದನೆಯೊಂದೇ ಸಾಲದು, ಆ ಸ್ಮಾರ್ಟ್‌ಫೋನ್‌ನಲ್ಲಿ ಏನಿರಬೇಕು, ಯಾವ ಫೀಚರ್ ಜನರಿಗೆ ಇಷ್ಟವಾಗುತ್ತದೆ ಎಂಬ ಸಂಶೋಧನೆಯ ಕೊರತೆಯಿದೆ. ಇದನ್ನು ನೀಗಿಸುವುದಕ್ಕೆ ನಮ್ಮಲ್ಲಿ ಹಣ ಹೂಡಿಕೆ, ಪ್ರೋತ್ಸಾಹ, ಅನುಕೂಲ ಎಲ್ಲ ಅಗತ್ಯವಿದೆ. ಸದ್ಯಕ್ಕೆ ಪರಿಸ್ಥಿತಿ ಅನುಕೂಲಕರವಾಗಿದೆ. ಆದರೆ, ಅದಕ್ಕೆ ಪೂರಕವಾದ ಸಂಶೋಧನೆಯೂ ನಡೆಯಬೇಕಿದೆ, ಅಷ್ಟೇ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದಂತೆ ಒಂದೂವರೆ ವರ್ಷದಲ್ಲಿ ಅಲ್ಲದೇ ಇದ್ದರೂ, ಇನ್ನು ಸ್ವಲ್ಪ ವರ್ಷದಲ್ಲೇ ನಮ್ಮ ದೇಶದ ಪ್ರೀಮಿಯಂ ಬ್ರ್ಯಾಂಡ್‌ಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವ ವಿಶ್ವಾಸವಂತೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.