ADVERTISEMENT

‘ಐ.ಆರ್‌.’: ವೈದ್ಯವಿಜ್ಞಾನದ ಬೆರಗು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 23:30 IST
Last Updated 7 ಅಕ್ಟೋಬರ್ 2025, 23:30 IST
   
ಪಾರ್ಶ್ವವಾಯು, ಹೃದಯ ಸಂಬಂಧಿತ ಹಲವು ಕಾಯಿಲೆಗಳು, ಕೆಲವು ಬಗೆಯ ಕಾನ್ಸರ್‌ಗಳನ್ನು ಐ.ಆರ್‌. ವಿಧಾನದಿಂದ ಸುಲಭವಾಗಿ ಪತ್ತೆ ಮಾಡಬಹುದು. ಈ ತಂತ್ರದಲ್ಲಿ ರಕ್ತನಾಳ ಅಥವಾ ಇತರ ನಾಳದಂತಹ ಟೊಳ್ಳಾದ ರಚನೆಗೆ ಇಮೇಜಿಂಗ್‌ ಉಪಕರಣವೊಂದನ್ನು ಚುಚ್ಚಲಾಗುತ್ತದೆ. ಇದರಿಂದ ವಿವಿಧ ಅಂಗ, ಅಂಗಾಂಶ, ಜೀವಕೋಶ ಅಥವಾ ಜೀವಕೋಶದ ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ. ಆ ಚಿತ್ರಗಳ ವಿಶ್ಲೇಷಣೆಯ ಮೂಲಕ ರೋಗವನ್ನು ಪತ್ತೆ ಮಾಡಲಾಗುತ್ತದೆ.

ಹಿಂದೆಲ್ಲ ಯಾರಾದರೂ ಪಾರ್ಶ್ವವಾಯುಪೀಡಿತ ರಾದರೆ ಮುಂದೆ ಅವರು ಸಾಯುವವರೆಗೆ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತಿತ್ತು. ಕೆಲವರಂತೂ ಹತ್ತು ಹದಿನೈದು ವರ್ಷಗಳವರೆಗೆ ಹಾಸಿಗೆಯಲ್ಲಿಯೇ ಮಲಗಿ ಜೀವನವನ್ನು ಕಳೆಯಬೇಕಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ರೋಗಪೀಡಿತರಾಗಿ ಐದೂವರೆ ಗಂಟೆಯ ಒಳಗೆ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದರೆ ವಾರ ಕಳೆಯುವಷ್ಟರಲ್ಲಿ ಚೇತರಿಸಿಕೊಂಡು ಎಂದಿನಂತೆ ತಮ್ಮ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮಾಡುವಷ್ಟು ವೈದ್ಯವಿಜ್ಞಾನ ಇಂದು ಮುಂದುವರಿದಿದೆ. ಇದಕ್ಕೆ ಬಳಸುವ ವಿಧಾನವೇ ‘ಪಾರಿಹಾರಿಕ ವಿಕಿರಣವಿಜ್ಞಾನ’ ಅಥವಾ ‘ಇಂಟರ್‌ವೆನ್ಷನಲ್  ರೇಡಿಯಾಲಜಿ’ ಅಥವಾ ‘ಐ.ಆರ್.’. ಇದೊಂದು ವೈದ್ಯಕೀಯ ವಿಶೇಷ ತಂತ್ರಜ್ಞಾನ. ಶರೀರದ ಒಳಭಾಗದ ಅಂಗಗಳನ್ನು ಹೊರಭಾಗದಿಂದಲೇ ಚಿತ್ರೀಕರಣ ಮಾಡಿ ಒಳಭಾಗದಲ್ಲಿ ಉಂಟಾಗುವ ಅಂಗಗಳ ನ್ಯೂನತೆ ಅಥವಾ ಆಂತರಿಕ ಬದಲಾವಣೆಗಳನ್ನು ಕಂಡುಹಿಡಿದು ಚಿಕಿತ್ಸೆಯನ್ನು ನೀಡಲಾಗುತ್ತದೆ.

ಹೀಗೆಂದು ಇದು ಬಹಳ ಹೊಸ ತಂತ್ರವೇನೂ ಅಲ್ಲ. 1970-80ರ ದಶಕದಲ್ಲಿ ಕೆಲವು ಹೃದ್ರೋಗ ಚಿಕಿತ್ಸೆಗೆ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಈಗ ಈ ತಂತ್ರದಲ್ಲಿ ಇತ್ತೀಚೆಗೆ ಅಭಿವೃದ್ಧಿಗೊಳಿಸಿದ ‘ಕ್ಷ-ಕಿರಣ ಪ್ರತಿದೀಪ್ತಿದರ್ಶಕ’ (ಎಕ್ಸ್-ರೇ ಫ್ಲೋರೋಸ್ಕೋಪಿ), ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ), ಮ್ಯಾಗ್ನೆಟಿಕ್ ರೆಸೊನನ್ಸ್ ಇಮೇಜಿಂಗ್ (ಎಂಆರ್‍ಐ) ಅಥವಾ ಅಲ್ಟ್ರಾಸೌಂಡ್‍ನಂತಹ ಹೊಸದಾಗಿ ಆವಿಷ್ಕರಣಗೊಂಡಿರುವ ವೈದ್ಯಕೀಯ ಚಿತ್ರೀಕರಣದ ಉಪಕರಣಗಳನ್ನ ರೋಗಪತ್ತೆ ಹಾಗೂ ಚಿಕಿತ್ಸೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಪಾರ್ಶ್ವವಾಯು, ಹೃದಯ ಸಂಬಂಧಿತ ಹಲವು ಕಾಯಿಲೆಗಳು, ಕೆಲವು ಬಗೆಯ ಕಾನ್ಸರ್‌ಗಳನ್ನು ಈ ಐ.ಆರ್‌. ವಿಧಾನದಿಂದ ಸುಲಭವಾಗಿ ಪತ್ತೆ ಮಾಡಬಹುದು. ಈ ತಂತ್ರದಲ್ಲಿ ರಕ್ತನಾಳ ಅಥವಾ ಇತರ ನಾಳದಂತಹ ಟೊಳ್ಳಾದ ರಚನೆಗೆ ಇಮೇಜಿಂಗ್‌ ಉಪಕರಣವೊಂದನ್ನು ಚುಚ್ಚಲಾಗುತ್ತದೆ. ಇದರಿಂದ ವಿವಿಧ ಅಂಗ, ಅಂಗಾಂಶ, ಜೀವಕೋಶ ಅಥವಾ ಜೀವಕೋಶದ ಭಾಗಗಳ ಚಿತ್ರೀಕರಣ ಸಾಧ್ಯವಾಗುತ್ತದೆ. ಆ ಚಿತ್ರಗಳ ವಿಶ್ಲೇಷಣೆಯ ಮೂಲಕ ರೋಗವನ್ನು ಪತ್ತೆ ಮಾಡಲಾಗುತ್ತದೆ. ಸಾಮಾನ್ಯ ವಿಧಾನಗಳ ಮೂಲಕ ಚಿಕಿತ್ಸೆ ನೀಡಲು ಸಾಧ್ಯವಾಗದ ರೋಗಗಳನ್ನು ‘ಐ.ಆರ್.’ ತಂತ್ರಗಳ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಬಹುದು. ಐ.ಆರ್. ನೇರವಾದ ಚಿಕಿತ್ಸೆಯನ್ನು ಒದಗಿಸುತ್ತದೆ. ತೂರುನಳಿಕೆಯ ಮೂಲಕ ಔಷಧಗಳ ಸೇಚನ, ವೈದ್ಯಕೀಯ ಸಾಧನಗಳ ಜೋಡಣೆ (ಉದಾ: ಸ್ಟೆಂಟ್ ಹಾಕುವುದು), ಅತ್ಯಂತ ಚಿಕ್ಕದಾದ ಭಾಗಗಳಿಗೆ ಚಿಕಿತ್ಸೆ (ಉದಾ: ಆಂಜಿಯೋಪ್ಲಾಸ್ಟಿ)– ಇಂಥ ಕ್ರಿಯೆಗಳೆಲ್ಲವನ್ನೂ ಐ.ಆರ್. ಸಾಧ್ಯವಾಗಿಸಿದೆ.

ಐ.ಆರ್.ತಂತ್ರದ ಪ್ರಮುಖ ಅಂಶಗಳು ಹೀಗಿವೆ

ಇದರಿಂದ ಆಗುವ ಅಡ್ಡಪರಿಣಾಮಗಳು ಕಡಿಮೆ. ಅಂದರೆ ಇದು ಶಸ್ತ್ರ ಚಿಕಿತ್ಸೆಯೇ ಇಲ್ಲದೆ, ಕಡಿಮೆ ನೋವು, ಕಡಿಮೆ ಚೇತರಿಕೆ ಸಮಯ ಮತ್ತು ಸೋಂಕಿನ ಸಾಧ್ಯತೆಯ ಪ್ರಮಾಣ ಕಡಿಮೆ. ಇದು ಕಡಿಮೆ ಅಪಾಯದ ಚಿಕಿತ್ಸಾಕ್ರಮ. ತೊಂದರೆಗೆ ಒಳಗಾಗಿರುವ ಶರೀರದ ಭಾಗವನ್ನು ನಿಖರವಾದ ಚಿತ್ರೀಕರಣದಿಂದಾಗಿ ಗುರುತಿಸಲು ಸಾಧ್ಯವಾಗುವುದರಿಂದ ಪರಿಹಾರದ ಸಾಧ್ಯತೆಯೂ ಹೆಚ್ಚು. ಆರೋಗ್ಯಕರ ಅಂಗಾಂಶಗಳಿಗೂ ಈ ಚಿಕಿತ್ಸಾಕ್ರಮದಲ್ಲಿ ಹಾನಿಯಾಗದು. ಚಿಕಿತ್ಸೆಯ ನಂತರ ವೇಗವಾದ ಚೇತರಿಕೆಯೂ ಸಾಧ್ಯ. ಇತರ ಶಸ್ತ್ರಚಿಕಿತ್ಸೆಯ ವಿಧಾನಗಳಿಗೆ ಹೋಲಿಸಿದರೆ ಕಡಿಮೆ ಅಪಾಯ, ಕಡಿಮೆ ತೊಡಕುಗಳು. ಚಿಕಿತ್ಸೆಯ ನಂತರದಲ್ಲಿ ರೋಗಿಯ ಜೀವನಮಟ್ಟದಲ್ಲಿಯೂ ಗಣನೀಯ ವ್ಯತ್ಯಾಸಗಳಾಗುವುದಿಲ್ಲ.

ADVERTISEMENT

ಮೂಲವಿಧಾನ

ಇದು ಅಪಧಮನಿಗಳು ಮತ್ತು ಅಭಿಧಮನಿಗಳಿಗೆ ಸಂಬಂಧಿಸಿದ ರೋಗಗಳ ಚಿಕಿತ್ಸೆಗೆ ಹೆಚ್ಚು ಪ್ರಯೋಜನಕಾರಿ. ಉದಾಹರಣೆಗೆ ಆಂಜಿಯೊಗ್ರಾಮ್; ಅಸಹಜ ರಕ್ತನಾಳ ಅಥವಾ ನಾಳಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಲು ಇದು ನೆರವಾಗುತ್ತದೆ. ಸಾಮಾನ್ಯವಾಗಿ ಮಿದುಳು, ಶರೀರದ ವಿವಿಧ ಭಾಗಗಳಲ್ಲಿ ನಾಳೀಯ ವಿರೂಪಗಳನ್ನು, ಕಿಬ್ಬೊಟ್ಟೆಯ ನಾಳೀಯ (ವೆಸೆಲ್ಸ್‌ನಲ್ಲಿ) ಬದಲಾವಣೆಗಳನ್ನು ಗುರುತಿಸಲು ಬಳಸಲಾಗುತ್ತದೆ. ಕಿರಿದಾದ ಅಥವಾ ರಕ್ತಸಂಚಾರಕ್ಕೆ ತೊಂದರೆ ಒಡ್ಡುವ ರಕ್ತನಾಳಗಳಲ್ಲಿ ರಕ್ತಸಂಚಾರಕ್ಕೆ ಅವಕಾಶ ಕಲ್ಪಿಸಲು, ದೇಹದ ಬೇರೆ ಬೇರೆ ಅಂಗಗಳಿಗೆ ರಕ್ತಸಂಚಾರವನ್ನು ಸುಧಾರಿಸಲು ಇದು ಉಪಯುಕ್ತವಾಗುತ್ತದೆ. ಕ್ಯಾರೋಟಿಡ್ ಸ್ಟೆನೋಸಿಸ್, ಬಾಹ್ಯ ಅಪಧಮನಿಯ ಕಾಯಿಲೆ, ಮೂತ್ರಪಿಂಡ – ಕಿಬ್ಬೊಟ್ಟೆಯ ಅಪಧಮನಿ ಸ್ಟೆನೋಸಿಸ್, ಮುಂತಾದವುಗಳ ಚಿಕಿತ್ಸೆಗೆ ಈ ವಿಧಾನ ವರದಾನವಾಗಬಲ್ಲದು. ಶರೀರದ ಒಳಭಾಗದಲ್ಲಿ ಯಾವುದೇ ಕಾರಣದಿಂದ ಉಂಟಾಗುವ ಅಸಹಜ ರಕ್ತಸ್ರಾವವನ್ನು ತಡೆಯಲು ಇದು ಉಪಯುಕ್ತವಾಗಿದೆ (ಎಂಬೊಲೈಸೇಶನ್).

ನರವಿರೂಪಗಳು, ನಾಳೀಯ ವಿರೂಪಗಳು, ಜಠರಗರುಳಿನ / ಶ್ವಾಸಕೋಶದ / ಜನನೇಂದ್ರೀಯ / ಮೂಗಿನ ರಕ್ತಸ್ರಾವ, ಗರ್ಭಾಶಯದ ನಾರುಗಳು, ವೆರಿಕೋಸ್ ಅಭಿಧಮನಿ, ಪ್ರಾಸ್ಟೇಟ್ ಅಪಧಮನಿ ರಕ್ತಸ್ರಾವ, ಅತಿನಾಳೀಯ ಗೆಡ್ಡೆಗಳ ಪೂರ್ವಶಸ್ತ್ರ ಚಿಕಿತ್ಸೆ ಮುಂತಾದವುಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮಾಡಬಹುದು. ರಕ್ತನಾಳಗಳು ಅಥವಾ ಅಪಧಮನಿಗಳಿಂದ ರಕ್ತ ಹೆಪ್ಪುಗಟ್ಟುವಿಕೆಯನ್ನು ತೂರುನಳಿಕೆಯ ಮೂಲಕ (ಥ್ರಾಂಬೆಕ್ಟಮಿ) ತೆಗೆಯಬಹುದು.

ಯಕೃತ್ತಿನ ಕ್ಯಾನ್ಸರ್, ಮೂತ್ರಪಿಂಡದ ಗೆಡ್ಡೆಗಳು ಮುಂತಾದವುಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಈ ರೋಗಗಳಿಗೆ ತುತ್ತಾದವರ ಬದುಕುಳಿಯುವಿಕೆಯ ಸಾಧ್ಯತೆ ಹೆಚ್ಚಿಸಬಹುದು. ಅಸಹಜವಾಗಿ ಹಿಗ್ಗಿ ಉಬ್ಬಿದ ರಕ್ತನಾಳಗಳಿಗೆ (ಅಬ್ಲೇಷನ್) ಚಿಕಿತ್ಸೆ ನೀಡಬಹುದು. ಐ.ಆರ್. ತಂತ್ರವು ನಾಳೀಯವಲ್ಲದ ರಕ್ತನಾಳಗಳ ಹೊರಗಿನ ಅಂಗಗಳ ನ್ಯೂನತೆಗಳನ್ನು ಕೂಡ ಗುರಿಯಾಗಿರಿಸಿಕೊಳ್ಳುತ್ತದೆ. ಇದರಿಂದ ಇಮೇಜ್-ಗೈಡೆಡ್ ಬಯಾಪ್ಸಿ-ಯಕೃತ್ತು, ಶ್ವಾಸಕೋಶ, ವಪೆ, ಥೈರಾಯ್ಡ್, ದುಗ್ಧರಸಗ್ರಂಥಿಗಳ ಸೋಂಕಿತ ಅಂಗಾಂಶಗಳ ಮಾದರಿಯನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಸಂಗ್ರಹಿಸಲು ಸಾಧ್ಯವಾಗುತ್ತದೆ. ಶರೀರದ ಒಳಭಾಗದ ಹುಣ್ಣು ಅಥವಾ ಅಸಹಜ ದ್ರವಸಂಗ್ರಹಗಳನ್ನು ಹೊರಹಾಕಲು ಬಳಕೆಯಾಗುತ್ತದೆ. ಯಕೃತ್ತು , ಮೂಳೆ, ಥೈರಾಯ್ಡ್ , ಮೂತ್ರಪಿಂಡ, ಶ್ವಾಸಕೋಶದ ಗೆಡ್ಡೆಗಳು ಮುಂತಾದ ಅಂಗಗಳಲ್ಲಿ ಉಂಟಾಗುವ ಗೆಡ್ಡೆಗಳನ್ನು ಹೊರಹಾಕಲು (ಅಬ್ಲೇಷನ್) ಬಳಸಲಾಗುತ್ತದೆ. ಸ್ಥಳೀಯ ಅರವಳಿಕೆಯ ಅಡಿಯಲ್ಲಿ ದೀರ್ಘಕಾಲದ ನೋವುಗಳ ಉಪಶಮನಗೊಳಿಸಬಹುದು.

ರೋಗಿಗಳಿಗೆ ಐ.ಆರ್. ಅನ್ನು ಏಕೆ ಅಳವಡಿಸಬೇಕು?

ಸಣ್ಣ ಛೇದನಗಳು, ಕಡಿಮೆ ಗುರುತುಗಳು, ಕಡಿಮೆ ಚೇತರಿಕೆ ಸಮಯ, ಕಡಿಮೆ ಆಸ್ಪತ್ರೆ ವಾಸ್ತವ್ಯ, ಕಡಿಮೆ ಅಪಾಯ, ಕಡಿಮೆ ಅರವಳಿಕೆಯ ಬಳಕೆ, ಕಡಿಮೆ ಖರ್ಚು ಹಾಗೂ ಸಂಪನ್ಮೂಲಗಳು ಮುಂತಾದವು ಐ.ಆರ್. ತಂತ್ರದ ಅನುಕೂಲಗಳು. ರೋಗಿಗಳಲ್ಲಿ ರೋಗತಾಳಿಕೆಯ ಗುಣ, ನಿಖರವಾದ ಚಿಕಿತ್ಸೆ ಹಾಗೂ ಸುಲಭದಲ್ಲಿ ಚಿಕಿತ್ಸೆಯ ಪರಿಣಾಮದ ಕುರಿತ ಅರಿವು ಮುಂತಾದವು ಕೂಡ ರೋಗಿಗೆ ಉಪಯುಕ್ತವಾಗುವಂಥ ಅಂಶಗಳು. ಚಿಕಿತ್ಸೆ ಪರಿಣಾಮಕಾರಿಯಾಗಿದೆಯೇ ಇಲ್ಲವೇ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.