ADVERTISEMENT

ಮಂಗಳ ಗ್ರಹದಲ್ಲಿ ಜೀವಿಗಳಿರುವುದಕ್ಕೆ ಉಲ್ಕಾಶಿಲೆಯಲ್ಲಿ ಪುರಾವೆ ಇಲ್ಲ: ಹೊಸ ಅಧ್ಯಯನ

ಏಜೆನ್ಸೀಸ್
Published 18 ಜನವರಿ 2022, 7:24 IST
Last Updated 18 ಜನವರಿ 2022, 7:24 IST
ಅಂಟಾರ್ಟಿಕಾದಲ್ಲಿ ಸಿಕ್ಕಿರುವ ಉಲ್ಕಾಶಿಲೆ 'ಅಲನ್‌ ಹಿಲ್ಸ್‌ 84001' (ಚಿತ್ರ: ನಾಸಾ)
ಅಂಟಾರ್ಟಿಕಾದಲ್ಲಿ ಸಿಕ್ಕಿರುವ ಉಲ್ಕಾಶಿಲೆ 'ಅಲನ್‌ ಹಿಲ್ಸ್‌ 84001' (ಚಿತ್ರ: ನಾಸಾ)   

ವಾಷಿಂಗ್ಟನ್‌: ದಶಕಗಳ ಹಿಂದೆ ಅಂಟಾರ್ಟಿಕಾದಲ್ಲಿ ಬಂದು ಬಿದ್ದಿದ್ದ ಉಲ್ಕಾಶಿಲೆ 'ಅಲನ್‌ ಹಿಲ್ಸ್‌ 84001'ನಲ್ಲಿ ಪ್ರಾಚೀನ ಕಾಲದಲ್ಲಿ ಮಂಗಳ ಗ್ರಹದಲ್ಲಿ ಜೀವಿಗಳು ಇದ್ದಿರಬಹುದಾದ ಬಗೆಗಿನ ಯಾವುದೇ ಪುರಾವೆಗಳು ಇಲ್ಲ ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ.

ಮಂಗಳ ಗ್ರಹದಿಂದ 4 ಶತಕೋಟಿ ವರ್ಷಗಳ ಹಿಂದೆ ತೂರಿ ಬಂದಿದ್ದ ಉಲ್ಕಾಶಿಲೆಯು ಸೆಳೆತಕ್ಕೆ ಒಳಗಾಗಿ ಭೂಮಂಡಲವನ್ನು ಪ್ರವೇಶಿಸಿತ್ತು. 1984ರಲ್ಲಿ ಅಂಟಾರ್ಟಿಕಾದ ಅಲನ್‌ ಹಿಲ್ಸ್‌ ಪ್ರದೇಶದಲ್ಲಿ ಉಲ್ಕಾಶಿಲೆ ಸಿಕ್ಕಿದ್ದರಿಂದ ಅದೇ ಹೆಸರಿನಿಂದ ಗುರುತಿಸಲಾಗಿದೆ. ಇದು 2 ಕೆಜಿ ತೂಕವಿದೆ.

1996ರಲ್ಲಿ, ಅಲನ್‌ ಹಿಲ್ಸ್‌ ಉಲ್ಕಾಶಿಲೆಯಲ್ಲಿನ ಸಾವಯವ ಸಂಯುಕ್ತಗಳ ಮೇಲೆ ಅಧ್ಯಯನ ನಡೆಸಿದ್ದ ನಾಸಾ ನೇತೃತ್ವದ ತಂಡ ಜೀವಿಗಳು ಇರಬಹುದಾದ ಬಗ್ಗೆ ಘೋಷಣೆ ಮಾಡಿದ್ದರು.

ADVERTISEMENT

ಉಲ್ಕಾಶಿಲೆಯ ಸೂಕ್ಷ್ಮ ಮಾದರಿಗಳು ಇಂಗಾಲ ಸಮೃದ್ಧವಾಗಿರುವ ಸಂಯುಕ್ತಗಳನ್ನು ಹೊಂದಿರುವುದನ್ನು ತೋರಿಸುತ್ತದೆ. ಇದು ಪ್ರಾಚೀನ ಕಾಲದಲ್ಲಿ ಕಲ್ಲಿನ ಮೇಲೆ ಉಪ್ಪಿನ ನೀರು ಹರಿದಿರಬಹುದಾದ ಕುರುಹು ಎಂದು ಕಾರ್ನಿಜ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಸೈನ್ಸ್‌ನ ಆ್ಯಂಡ್ರೂ ಸ್ಟೀಲ್‌ ಹೇಳಿದ್ದಾರೆ. ಇದು 'ಸೈನ್ಸ್‌'ನಲ್ಲಿ ವರದಿಯಾಗಿದೆ.

ಉಲ್ಕಾಶಿಲೆಯು ಮಂಗಳ ಗ್ರಹದಲ್ಲಿದ್ದಾಗ, ಬಿರುಕು ಬಿಟ್ಟಿರುವ ಸಂದಿಯಲ್ಲಿ ಅಂತರ್ಜಲ ಹರಿದಿದ್ದರ ಪರಿಣಾಮ ಇದೀಗ ಇಂಗಾಲವಿರುವ ಸೂಕ್ಷ್ಮ ಸಂಯುಕ್ತ ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಭೂಮಿಯ ಮೇಲೂ ಇಂತಹದ್ದೇ ಘಟನೆ ನಡೆದಿರಬಹುದು. ಮಂಗಳ ಗ್ರಹದ ವಾತಾವರಣದಲ್ಲಿ ಮೀಥೇನ್‌ ಇರುವಿಕೆ ಬಗ್ಗೆ ವಿವರಿಸಲು ಸಹಾಯಕಾರಿ ಆಗಬಹುದು ಎಂದಿದ್ದಾರೆ.

ಆದರೆ ಇಬ್ಬರು ವಿಜ್ಞಾನಿಗಳು 1996ರ ನಾಸಾ ತಂಡದ ಅಭಿಪ್ರಾಯವನ್ನೇ ಪುಷ್ಠಿಕರಿಸಿದ್ದಾರೆ. ಹೊಸ ಸಂಶೋಧನೆಯಿಂದ ಬೇಸರ ಉಂಟಾಗಿರುವುದಾಗಿ ತಿಳಿಸಿದ್ದಾರೆ.

'ಮಂಗಳ ಗ್ರಹದಲ್ಲಿ ಜೀವಿಗಳು ಇದ್ದವೇ ಅಥವಾ ಈಗಲೂ ಸೂಕ್ಷ್ಮ ಜೀವಿಗಳು ಇವೆಯೇ ಎಂಬುದನ್ನು ನಿಖರವಾಗಿ ತಿಳಿಯಲು ನಾಸಾದ 'ಮಾರ್ಸ್‌ ರೋವರ್‌' ಭೂಮಿಗೆ ಹಿಂದಿರುಗಬೇಕಿದೆ. ಈಗಾಗಲೇ ಮಂಗಳ ಗ್ರಹದಿಂದ 6 ಮಾದರಿಗಳನ್ನು ಸಂಗ್ರಹಿಸಿದೆ. ಸುಮಾರು 3 ಡಜನ್‌ ಮಾದರಿಗಳನ್ನು ಸಂಗ್ರಹಿಸಲಿರುವ 'ಮಾರ್ಸ್‌ ರೋವರ್‌' ದಶಕದಲ್ಲಿ ಭೂಮಿಗೆ ವಾಪಸ್‌ ಆಗಲಿದೆ ಎಂದು 'ಎಪಿ' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.