ADVERTISEMENT

ಮಂಗಳ ತಲುಪಿದ ‘ಇನ್‌ಸೈಟ್‌’

ಕೆಂಪುಗ್ರಹದ ಮೇಲೆ ಕಾಲಿಟ್ಟ ನಾಸಾದ ಎಂಟನೇ ಬಾಹ್ಯಾಕಾಶ ನೌಕೆ

ಏಜೆನ್ಸೀಸ್
Published 27 ನವೆಂಬರ್ 2018, 19:29 IST
Last Updated 27 ನವೆಂಬರ್ 2018, 19:29 IST
ಮಂಗಳ ಗ್ರಹದಲ್ಲಿ ‘ಇನ್‌ಸೈಟ್‌’ ನೌಕೆಯು ಯಶಸ್ವಿಯಾಗಿ ಇಳಿದ ಮಾಹಿತಿ ದೊರೆಯುತ್ತಿದ್ದಂತೆಯೇ ಹರ್ಷ ವ್ಯಕ್ತಪಡಿಸಿದ ನಾಸಾದ ವಿಜ್ಞಾನಿಗಳು  ಎಎಫ್‌ಪಿ ಚಿತ್ರ 
ಮಂಗಳ ಗ್ರಹದಲ್ಲಿ ‘ಇನ್‌ಸೈಟ್‌’ ನೌಕೆಯು ಯಶಸ್ವಿಯಾಗಿ ಇಳಿದ ಮಾಹಿತಿ ದೊರೆಯುತ್ತಿದ್ದಂತೆಯೇ ಹರ್ಷ ವ್ಯಕ್ತಪಡಿಸಿದ ನಾಸಾದ ವಿಜ್ಞಾನಿಗಳು  ಎಎಫ್‌ಪಿ ಚಿತ್ರ    
ಪಸಡೆನಾ, ಅಮೆರಿಕ:ನಾಸಾದ ಜೆಟ್‌ ಉಡಾವಣಾ ಪ್ರಯೋಗಾಲಯದಲ್ಲಿ ಸೋಮವಾರ ವಿಜ್ಞಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ಏಳು ವರ್ಷಗಳ ಸಾರ್ಥಕ ಪಯಣದ ನಂತರ ‘ಇನ್‌ಸೈಟ್‌’ ಬಾಹ್ಯಾಕಾಶ ನೌಕೆ ಮಂಗಳನ ಅಂಗಳ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು ಈ ಸಂತಸಕ್ಕೆ ಕಾರಣವಾಗಿತ್ತು.

ನಾಸಾದ ಇತಿಹಾಸದಲ್ಲಿ ಮಂಗಳ ಗ್ರಹದ ಮೇಲೆ ಕಾಲಿಟ್ಟ ಎಂಟನೆ ಬಾಹ್ಯಾಕಾಶ ನೌಕೆ ಈ ಇನ್‌ಸೈಟ್‌.

ನೌಕೆಯು ಸುಸ್ಥಿತಿಯಲ್ಲಿ ಮಂಗಳನನ್ನು ತಲುಪಿದ್ದು, ಪ್ರಯೋಗಾಲಯಕ್ಕೆ ಯಶಸ್ವಿಯಾಗಿ ಸಂದೇಶ ರವಾನಿಸಿದೆ. ನೌಕೆಯು ಇಳಿಯುವ ವೇಳೆ ಸಾಕಷ್ಟು ದೂಳು ಎದ್ದಿರುವುದು ಅದು ಕಳುಹಿಸಿದ ಮೊದಲ ಚಿತ್ರದಲ್ಲಿ ಗೊತ್ತಾಗುತ್ತಿದೆ. ಆದರೆ, ನೌಕೆಯ ಎದುರು ಯಾವುದೇ ಬಂಡೆಗಳು ಕಾಣುತ್ತಿಲ್ಲ’ ಎಂದು ವಿಜ್ಞಾನಿಗಳುಹೇಳಿದ್ದಾರೆ.

‘ನೌಕೆಯು ಹೊಂದಿದ್ದ ಸೌರ ರೆಕ್ಕೆಗಳ ಮೂಲಕ ಭೂಮಿಗೆ ಸಂದೇಶ ರವಾನೆಯಾಗಿದೆ. ಮಂಗಳನ ಮೇಲ್ಮೈನಲ್ಲಿನ ಸೌರಕಿರಣಗಳನ್ನು ಬಳಸಿಕೊಂಡು ಈ ರೆಕ್ಕೆಗಳು ಸಂಕೇತಗಳನ್ನು ಕಳುಹಿಸಿವೆ’ ಎಂದು ನೌಕೆಯ ಯೋಜನಾ ವ್ಯವಸ್ಥಾಪಕ ಟಾಮ್‌ ಹಾಫ್‌ಮನ್‌ ತಿಳಿಸಿದ್ದಾರೆ.

ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ನಾಸಾದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೆಂಪುಗ್ರಹದ ಮೇಲೆ ಬಾಹ್ಯಾಕಾಶ ನೌಕೆ. ವಿಜ್ಞಾನಿಗಳ ಕಲ್ಪನೆಯ ಚಿತ್ರ

‘ಇನ್‌ಸೈಟ್‌’ ಉದ್ದೇಶ

ಮಂಗಳ ಗ್ರಹದಲ್ಲಿನ ವಿಸ್ಮಯಗಳು, ಶತಕೋಟಿ ವರ್ಷಗಳ ಹಿಂದೆ ಈ ಕೆಂಪು ಗ್ರಹ ರೂಪುಗೊಂಡಿದ್ದು ಹೇಗೆ? ಅದರ ವಿಕಾಸ, ಭೂಮಿಯಂತಹ ಗ್ರಹಗಳು ಈ ಸ್ವರೂಪ ಪಡೆದುಕೊಂಡಿದ್ದು ಹೇಗೆ ಎಂಬುದರ ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ಈ ನೌಕೆಯನ್ನು ಉಡಾವಣೆ ಮಾಡಲಾಗಿತ್ತು.

‘2030ರ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಮಂಗಳನೆಡೆ ಕಳುಹಿಸುವ ಉದ್ದೇಶವಿದೆ’ ಎಂದು ನಾಸಾದ ಆಡಳಿತಾಧಿಕಾರಿ ಜಿಮ್‌ ಬ್ರಿಡನ್‌ಸ್ಟೈನ್‌ ತಿಳಿಸಿದ್ದಾರೆ.

ಭೂಕಂಪ ಸಂಭವಿಸುವ ಕುರಿತು ಮುಂಚೆಯೇ ತಿಳಿಯುವ ಉದ್ದೇಶದಿಂದಲೂ ಈ ಪ್ರಯೋಗ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

**

ನಾಸಾಗೆ ‘ಮಂಗಳಕರ’

ಜಗತ್ತಿನ ಹಲವು ಬಾಹ್ಯಾಕಾಶ ಸಂಸ್ಥೆಗಳು ಮಂಗಳನ ಅಧ್ಯಯನಕ್ಕಾಗಿ ಈವರೆಗೆ 43 ಬಾರಿ ನೌಕೆಗಳನ್ನು ಹಾರಿ ಬಿಟ್ಟಿವೆ. ಆದರೆ, ಇವುಗಳಲ್ಲಿ ಅರ್ಧದಷ್ಟು ಪ್ರಯತ್ನಗಳು ವಿಫಲವಾಗಿವೆ. ನಾಸಾ ಮಾತ್ರ ಈ ವಿಷಯದಲ್ಲಿ ಯಶಸ್ವಿಯಾಗಿದೆ.

‘ಮಂಗಳ ಗ್ರಹವನ್ನು ಯಾವುದೇ ಕಾರಣಕ್ಕೂ ನಾವು ಹಗುರವಾಗಿ ಪರಿಗಣಿಸುವುದಿಲ್ಲ. ವಿಜ್ಞಾನಿಗಳಿಗೆ ಅದು ಕ್ಲಿಷ್ಟಕರ ಗ್ರಹವಾಗಿದೆ. ಆದರೆ, ಅದರ ಅಧ್ಯಯನದಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ’ ಎಂದು ನಾಸಾದ ಸೈನ್ಸ್‌ ಮಿಷನ್‌ ನಿರ್ದೇಶಕ ಥಾಮಸ್‌ ಝಬರ್‌ಚೆನ್‌ ಹೇಳಿದ್ದಾರೆ.

**

ಇನ್‌ಸೈಟ್‌ ಯಶಸ್ವಿಯಾಗಿ ತನ್ನ ಗುರಿ ಮುಟ್ಟಿದ್ದಕ್ಕೆ ಸಂತಸವಾಗಿದೆ. ಮಂಗಳನ ಮೇಲೆ ಮಾನವ ಕಾಲಿಡುವ ದಿನಗಳು ದೂರವಿಲ್ಲ ಎಂಬುದು ಇದರಿಂದ ಖಾತ್ರಿಯಾಗಿದೆ.
-ಜಿಮ್‌ ಬ್ರಿಡನ್‌ಸ್ಟೈನ್‌, ನಾಸಾ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.