Nano Fertilizers: ವರವಾದೀತೆ ನ್ಯಾನೋ ಗೊಬ್ಬರ?
ಈಗ ನಾನಾರೂಪದಲ್ಲಿ ನ್ಯಾನೋ ತಂತ್ರಜ್ಞಾನ ಬೆಳೆಯುತ್ತಲೇ ಇದೆ. ನ್ಯಾನೋ ತಂತ್ರಜ್ಞಾನವೆಂದರೆ 1ರಿಂದ 100 ನ್ಯಾನೋ ಮೀಟರ್‌ಗಳ ಮಟ್ಟದಲ್ಲಿ ವಸ್ತುಗಳನ್ನು ಒಳಗೊಂಡಿರುವಂತಹ ವಿಜ್ಞಾನ. ಒಂದು ನ್ಯಾನೋ ಮೀಟರ್ (0.000000001 ಮೀಟರ್), ಎಂದರೆ ಅದರ ದಪ್ಪವು ನಮ್ಮ ಕೂದಲೆಳೆಗಿಂತ ಸರಿಸುಮಾರು ಒಂದು ಲಕ್ಷ ಪಟ್ಟು ಕಡಿಮೆ! ಒಂದು ಕಾಲದಲ್ಲಿ ಕೇವಲ ಇದೊಂದು 'ಸಾಧ್ಯತೆ' ಎನಿಸಿಕೊಂಡಿದ್ದ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ತಂತ್ರಜ್ಞಾನವಾದ ನ್ಯಾನೋ ತಂತ್ರಜ್ಞಾನ ಮೊದಮೊದಲು ಸೂಕ್ಷ್ಮದರ್ಶಕ ತಂತ್ರಜ್ಞಾನ ಹಾಗೂ ವಸ್ತುವಿಜ್ಞಾನದ ಕ್ಷೇತ್ರವನ್ನು ಪ್ರವೇಶಿಸಿತು. ಇಂದು ಔಷಧತಯಾರಿಕೆ, ಆರೋಗ್ಯ, ಪರಸರಮಾಲಿನ್ಯ ನಿರ್ವಹಣೆ, ಸೌರಫಲಕಗಳ ತಯಾರಿಕೆ, ಚಿಪ್‌ಗಳ ವಿನ್ಯಾಸ, ನ್ಯಾನೋ ರೋಬಾಟ್ – ಹೀಗೆ ಹಲವಾರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ನ್ಯಾನೋ ಟೆಕ್ನಾಲಜಿ ಇಂದು ಕೃಷಿಯಲ್ಲಿಯೂ ಬಳಕೆಯಾಗುತ್ತಿದೆ. ಕಳೆದ ಕಾಲು ಶತಮಾನಗಳಿಂದ ನ್ಯಾನೋ ತಂತ್ರಜ್ಞಾನವನ್ನು ಕೃಷಿಯ ಕ್ಷೇತ್ರದಲ್ಲಿಯೂ ಪ್ರಯೋಗ ಮಾಡಲಾಗುತ್ತಿದೆ. ಆ ಅವಿರತ ಪರಿಶ್ರಮದ ಫಲವೇ ನ್ಯಾನೋ ಗೊಬ್ಬರ.
ಗೊಬ್ಬರಗಳಲ್ಲಿನ ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಗೊಬ್ಬರವನ್ನು ನ್ಯಾನೋ ಗಾತ್ರಕ್ಕೆ ತರಲಾಗುವುದು. ಅದೇ ‘ನ್ಯಾನೋ ಗೊಬ್ಬರ’. ಸಾಮಾನ್ಯ ಗೊಬ್ಬರದ ಹಾಗೆ ಮಣ್ಣಿನಲ್ಲಿ ಬೆರೆಸುವುದರ ಬದಲಾಗಿ ಇದನ್ನು ನೇರವಾಗಿ ಕಾಂಡಕ್ಕೆ ಹಾಗೂ ಎಲೆಗಳಿಗೆ ಸಿಂಪಡಿಸಲಾಗುತ್ತದೆ. ಇದು ಸಾಂಪ್ರದಾಯಿಕ ಗೊಬ್ಬರಕ್ಕಿಂತ ಸೋವಿ, ಬಳಕೆಯ ಪ್ರಮಾಣವೂ ಕಡಿಮೆ, ಸುಲಭದ ನಿರ್ವಹಣೆ, ಅತ್ಯಂತ ಪರಿಣಾಮಕಾರಿ; ಅಷ್ಟೇ ಇಳುವರಿ, ಹಾಗೂ ಸುಲಭವಾಗಿ ಇದನ್ನು ಸಂಗ್ರಹಿಸಿಡಬಹುದು. ಕೃಷಿಯಲ್ಲಿ ಸುಸ್ಥಿರತೆಗಾಗಿ ಇದೊಂದು ಅತ್ಯಂತ ಮಹತ್ವದ ಪರಿಹಾರವಾಗಿದೆ. ನ್ಯಾನೋ ಗೊಬ್ಬರದಲ್ಲಿ ನಾಲ್ಕು ಬಗೆಗಳುಂಟು: ನ್ಯಾನೋ ಯುರಿಯಾ ಅಥವಾ ನ್ಯಾನೋ ಸಾರಜನಕ, ನ್ಯಾನೋ ಫಾಸ್ಪರಸ್, ನ್ಯಾನೋ ಪೊಟ್ಯಾಸಿಯಮ್, ಹಾಗೂ ನ್ಯಾನೋ ಸೂಕ್ಷ್ಮ ಪೋಷಕಾಂಶಗಳು. ಈಗ ನ್ಯಾನೋ ಗೊಬ್ಬರದ ಲಕ್ಷಣಗಳನ್ನು ನೋಡೋಣ.
ನ್ಯಾನೋ ಗಾತ್ರ: ಈ ಗೊಬ್ಬರದ ಲಕ್ಷಣವೇ ಅದರ ಸೂಕ್ಷ್ಮ ಗಾತ್ರ. ಸಾಂಪ್ರದಾಯಿಕ ರಾಸಾಯನಿಕ ಗೊಬ್ಬರವು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಅದರ ಬಳಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ಬಳಸಿದ ಎಲ್ಲಾ ಗೊಬ್ಬರವೂ ಬೆಳೆಗಳಿಗೆ ಉಪಯೋಗವಾಗುವುದಿಲ್ಲ; ಪೋಷಕಾಂಶದ ಸೋರಿಕೆಯಾಗುತ್ತದೆ, ಗೊಬ್ಬರವು ನೀರಿನಲ್ಲಿ ಸೇರಿ ಹರಿದು ಹೋಗುತ್ತದೆ, ಇಲ್ಲವೇ ಮಣ್ಣಿನಲ್ಲೇ ಉಳಿದುಬಿಡುತ್ತದೆ. ಅಚ್ಚರಿಯ ವಿಷಯವೆಂದರೆ, ಗೊಬ್ಬರದಲ್ಲಿನ ಶೇ 50-70ರಷ್ಟು ಪೋಷಕಾಂಶವು ಬೆಳೆಗಳಿಗೆ ಸಿಗುವುದೇ ಇಲ್ಲ. ಇದಕ್ಕೆ ರಾಮಬಾಣವೇ ನ್ಯಾನೋ ಗೊಬ್ಬರ. ಇದರ ಗಾತ್ರ ಅತಿ ಚಿಕ್ಕದು; ಅದನ್ನು ಪೋಷಕಾಂಶಗಳ ಸಮೇತ ಕ್ಯಾಪ್ಸೂಲ್‌ನಲ್ಲಿ ತುಂಬಿಸಲಾಗುತ್ತದೆ. ದ್ರವದ ರೂಪದಲ್ಲಿ ನೇರವಾಗಿ ಕಾಂಡಗಳು, ಎಲೆಗಳು, ಕೆಲವೊಮ್ಮೆ ಬೇರುಗಳೂ ಹೀರಿಕೊಳ್ಳುವಂತೆ ಸಿಂಪಡಿಸಲಾಗುತ್ತದೆ.
ಪೋಷಕಾಂಶಗಳ ಬಿಡುಗಡೆ ನಿಧಾನ: ನ್ಯಾನೋ ಗೊಬ್ಬರವನ್ನು ಹಾಕಿದ ಮೇಲೆ ಅದರಲ್ಲಿನ ಪೋಷಕಾಂಶಗಳು ನಿಧಾನವಾಗಿ ಬಿಡುಗಡೆಯಾಗುತ್ತವೆ. ಇದರಿಂದಾಗಿ ಸಸ್ಯಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚುತ್ತದೆ. ಈ ವಿಶೇಷವಾದ ಲಕ್ಷಣದಿಂದಾಗಿ ಪೋಷಕಾಂಶವು ಪೋಲಾಗುವುದು ಕಡಿಮೆ ಆಗುವುದಲ್ಲದೆ, ಮತ್ತೆ ಮತ್ತೆ ಗೊಬ್ಬರದ ಸಿಂಪಡಣೆಯ ಅಗತ್ಯವೂ ಇಲ್ಲ.
ಪರಿಣಾಮಕಾರಿ: 500 ಮಿಲಿಲೀಟರ್ ನ್ಯಾನೋ ಯೂರಿಯಾವು 45 ಕೇಜಿ ಸಾಂಪ್ರದಾಯಿಕ ರಾಸಾಯನಿಕ ಯೂರಿಯಾ ಗೊಬ್ಬರಕ್ಕೆ ಸಮ! ನ್ಯಾನೋ ಗೊಬ್ಬರವು ಕೃಷಿಯಲ್ಲಿ ಒಳ್ಳೆಯ ಇಳುವರಿಯನ್ನು ನೀಡುವುದಲ್ಲದೆ ಕಿಸೆಗೂ ಹಗುರ.
ಪರಿಸರ ಸ್ನೇಹಿ: ನ್ಯಾನೋ ಗೊಬ್ಬರವು ಪರಿಸರಸ್ನೇಹಿ. ಮೊದಲನೆಯದಾಗಿ ಅನಗತ್ಯ ರಾಸಾಯನಿಕ ಸೋರಿಕೆಯು ತಪ್ಪಿ ಜಲಮಾಲಿನ್ಯವು ಕಡಿಮೆಯಾಗುತ್ತದೆ. ಎರಡನೆಯದಾಗಿ ಗೊಬ್ಬರದ ತಯಾರಿಕೆಯಲ್ಲಿ ಗಣನೀಯವಾದ ಇಳಿಕೆಯಾಗಿ ಅದರಿಂದ ಆಗುತ್ತಿರುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಕೂಡ ಇಳಿಕೆಯನ್ನು ಕಾಣಬಹುದು.
ಭಾರತದ ಪಾತ್ರ: 1960ರ ನಂತರದಲ್ಲಿ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯು ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಮಣ್ಣನ್ನು ದುರ್ಬಲಗೊಳಿಸಿದೆ. ಆದರೆ ಈಗ ಭಾರತದ ಕೆಲವು ಸಹಕಾರಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು [ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋ-ಓಪರೇಟಿವ್ ಲಿಮಿಟೆಡ್ (IFFCO), ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (NFL), ಟಾಟಾ ಕೆಮಿಕಲ್ಸ್, ರಾಷ್ಟ್ರೀಯ ಕೆಮಿಕಲ್ಸ್ ಫರ್ಟಿಲೈಸರ್ಸ್ (RCF), ಮುಂತಾದವುಗಳು] ಅಭಿವೃದ್ಧಿ ಪಡಿಸಿದ ನ್ಯಾನೋ ಗೊಬ್ಬರಗಳು ಕೃಷಿಯಲ್ಲಿ ಹೊಸ ಯುಗವನ್ನು ಶುರುಮಾಡಿವೆ. ನ್ಯಾನೋ ಗೊಬ್ಬರದ ಮೂಲಕ ಭಾರತವು ಜಗತ್ತಿಗೆ ಸುಸ್ಥಿರತೆಯ ನಡೆಯಲ್ಲಿ ಒಂದು ಮಾದರಿಯಾಗಿ ನಿಂತಿದೆ ಎಂದರೆ ತಪ್ಪಾಗಲಾರದು. ಚೀನಾ ಹಾಗೂ ಭಾರತವನ್ನು ಹೊರತುಪಡಿಸಿ ಇದರ ಮೇಲೆ ಹೆಚ್ಚು ಸಂಶೋಧನೆಯು ಮತ್ತೆಲ್ಲಿಯೂ ಆಗಿಲ್ಲ. ಈಗಾಗಲೇ ಭಾರತದಲ್ಲಿ ಲಕ್ಷಾಂತರ ರೈತರು ನ್ಯಾನೋ ಗೊಬ್ಬರವನ್ನು ಬಳಸುತ್ತಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ IFFCOವು ಜಗತ್ತಿನಲ್ಲಿ ಅತಿ ಹೆಚ್ಚು ನ್ಯಾನೋ ಗೊಬ್ಬರವನ್ನು ತಯಾರಿಸುವ ಸಂಸ್ಥೆಯಾಗಿದ್ದು, ವರ್ಷಕ್ಕೆ 3.6 ಕೋಟಿ ನ್ಯಾನೋ ಗೊಬ್ಬರದ ಬಾಟಲಿಗಳನ್ನು ಉತ್ಪಾದಿಸಿದೆ. ‘ದಿ ಎನರ್ಜಿ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್’(ಟೆರಿ)ಯ ವರದಿಯ ಪ್ರಕಾರ ಭಾರತದಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯು ಮುಂದಿನ ದಿನಗಳಲ್ಲಿ ಸುಮಾರು ಶೇ 50ರಷ್ಟು ಕಡಿಮೆ ಆಗಲಿದೆಯಂತೆ. ಇದು ನಮ್ಮ ನೆಲ, ಜಲ ಹಾಗೂ ಜನರಿಗೆ ಬಹಳಷ್ಟು ಒಳ್ಳೆಯದು. ಕಾಲಕ್ರಮೇಣ ಬಳಕೆ ಹಾಗೂ ಇದರ ಕುರಿತಾದ ಸಂಶೋಧನೆಗಳು ಹೆಚ್ಚಿದಂತೆ ನ್ಯಾನೋ ಗೊಬ್ಬರದ ಬಳಕೆಯ ಬಗೆಗೆ ಇರುವ ಸಂಶಯಗಳು ಕಡಿಮೆಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.