ಅದು ನಮ್ಮದೇ ಕಾಶ್ಮೀರವಾಗಲೀ, ದೂರದ ಗಾಜಾ ಆಗಲೀ, ಪರ-ವಿರೋಧಗಳ ನಡುವೆ, ಕುತಂತ್ರ–ಕುಯುಕ್ತಿಗಳ ನಡುವೆ, ಯಾರದ್ದೋ ಹಟಕ್ಕೆ, ಯಾರದ್ದೋ ಮೂಲಭೂತವಾದಕ್ಕೆ ಸಿಲುಕಿ ಸಮಸ್ಯೆ ಅನುಭವಿಸುವವರು ಸಾಮಾನ್ಯ ಜನರೇ. ಗಾಜಾದಲ್ಲಿ ಈಗಿರುವಂತಹ ಯುದ್ಧದ ಪರಿಸ್ಥಿತಿಯಲ್ಲಿಯೇ ಗುಳೇ ಹೊರಟ ಕುಟುಂಬದ ಸಾಮಾನ್ಯ ಹುಡುಗನೊಬ್ಬ, ಇಂದು ರಸಾಯನವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕಥೆಯಿದು. ಈ ವರ್ಷದ ರಸಾಯನ ವಿಜ್ಞಾನ ನೊಬೆಲ್ ಸಿಕ್ಕಿದ್ದು ‘ಲೋಹ-ಸಾವಯವ ಚೌಕಟ್ಟು’ಗಳ ಬಗೆಗಿನ ಸಂಶೋಧನೆಗೆ ಎಂಬುದು ನಿಮಗೀಗಾಲೇ ತಿಳಿದಿರಬಹುದು. ಅದಕ್ಕೆ ಮುನ್ನುಡಿ ಬರೆದದ್ದು ರಿಚರ್ಡ್ ರಾಬ್ಸನ್. ಆದರೆ ಅವರ ಸಿದ್ಧಾಂತಕ್ಕೆ ಅನ್ವಯಿಕತೆ ಮತ್ತು ಪ್ರಾಯೋಗಿಕತೆಗಳನ್ನು ತಂದದ್ದು ಓಮರ್ ಯಾಘಿ ಮತ್ತು ಸುಸುಮು ಕಿಟಾಗವಾ ಎಂಬ ಇಬ್ಬರು ರಸಾಯನವಿಜ್ಞಾನಿಗಳು. ಓಮರ್ ಯಾಘಿ ಅವರ ಬದುಕು ವಿಜ್ಞಾನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಮುಂದಿನ ಪೀಳಿಗೆಗೂ ಸ್ಫೂರ್ತಿದಾಯಕ.
ಓಮರ್ ಯಾಘಿಯವರು 1965ರ ಫೆಬ್ರುವರಿ 9ರಂದು ಪ್ಯಾಲೆಸ್ತೀನ್ ಮೂಲದ ಯುದ್ಧನಿರಾಶ್ರಿತ ಕುಟುಂಬದಲ್ಲಿ ಜನಿಸಿದರು. ವಿದ್ಯುತ್ತು, ಸ್ವಚ್ಛವಾದ ಕುಡಿಯುವ ನೀರಿನಂತಹ ಮೂಲಭೂತ ಸಂಪನ್ಮೂಲಗಳೂ ಲಭ್ಯವಿಲ್ಲದ ಪರಿಸ್ಥಿತಿಯಲ್ಲಿ ಓಮರ್ ತಮ್ಮ ಬಾಲ್ಯ ಕಳೆದರು. ದನದ ಕೊಟ್ಟಿಗೆಯಲ್ಲಿ ಹತ್ತಾರು ಮಕ್ಕಳ ಜೊತೆ ಮಲಗಬೇಕಿದ್ದ ಪರಿಸ್ಥಿತಿ. ಇಂಥ ಕಷ್ಟಗಳ ನಡುವೆಯೇ ತಮ್ಮ ತಂದೆಯ ಪ್ರೋತ್ಸಾಹ ಓಮರ್ ಅವರನ್ನು ಓದಿನ ಕಡೆಗೆ ಹೊರಳಿಸಿತು. ಕೆಳಕ್ಕೆಳೆಯುವ ಕೆಸರಿನೊಳಗೆ ಇದ್ದುಕೊಂಡೂ ಮೇಲಕ್ಕೇಳುವ ಉಮೇದಿಯಲ್ಲಿ ಅರಳುವ ಕಮಲದಂತೆ, ‘ತಾನು ಓದಬೇಕು’ ಎಂಬ ಹಂಬಲ ಓಮರ್ ಅವರನ್ನು ಇತರರಿಗಿಂತ ಭಿನ್ನವಾಗಿ ಬೆಳೆಯುವಂತೆ ಮಾಡಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲೇ ವಿಜ್ಞಾನದ ಬಗ್ಗೆ ಮತ್ತು ಕಲಿಕೆಯ ಬಗ್ಗೆ ಇವರಿಗಿದ್ದ ಆಸಕ್ತಿಯ ಮೇರೆಗೆ, ಓಮರ್ ಅವರ ತಂದೆ ಈ 15 ವರ್ಷದ ಹುಡುಗನನ್ನು ಅಮೆರಿಕ್ಕೆ ಮುಟ್ಟಿಸಿದರು. ಕಷ್ಟದ ಬದುಕನ್ನೇ ಉಂಡು ಬಂದಿದ್ದ ಓಮರ್ ಅವರಿಗೆ, ಅಮೆರಿಕಾದಲ್ಲಿ ದಿನನಿತ್ಯದ ಅನಿವಾರ್ಯ ಅಸೌಕರ್ಯಗಳು ಕಂಗೆಡಿಸಲಿಲ್ಲ. ಅವರ ಲಕ್ಷ್ಯವೇನಿದ್ದರೂ ಓದಿನ ಕಡೆಗೆ, ರಸಾಯನವಿಜ್ಞಾನದ ಅದ್ಭುತಲೋಕದ ಕಡೆಗೆ. ಹಡ್ಸನ್ ವ್ಯಾಲಿ ಸಾಮುದಾಯಿಕ ಕಾಲೇಜು, ನ್ಯೂಯಾರ್ಕ್ ರಾಜ್ಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಮುಂದುವರೆಸುತ್ತಾ, ಇಲಿನೋಯಿಸ್ ವಿಶ್ವವಿದ್ಯಾಲಯದಲ್ಲಿ ರಸಾಯನವಿಜ್ಞಾನದ ಪದವಿ ಪಡೆದರು; ನೀರನ್ನು ಹೊರತು ಪಡಿಸಿ, ಇತರ ಮಾಧ್ಯಮದಲ್ಲಿ ‘ಪಾಲಿ–ಆಕ್ಸೋವಾನಡೇಟ್’ಗಳ ಸಂಶ್ಲೇಷಣೆ, ರಚನೆ, ರಾಸಾಯನಿಕತೆಯ ಸಾಧ್ಯತೆಯ ಬಗ್ಗೆ ಸಂಶೋಧನೆ ನಡೆಸಿ 1990ರಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದರು.
ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಓಮರ್, ನಂತರ ಮಿಶಿಗನ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಂತಹ ಅನೇಕ ಪ್ರತಿಷ್ಠಿತ ವಿದ್ಯಾಲಯಗಳ ಭಾಗವಾಗಿ, ಪ್ರಾಧ್ಯಾಪಕರಾಗಿ ಮಾತ್ರವಲ್ಲದೇ, ಕಮಿಟಿಗಳ, ಅಧ್ಯಯನಪೀಠಗಳ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕೂಡ ಕಾರ್ಯನಿರ್ವಹಿಸಿದರು. ಓಮರ್ ಅವರು ಹೆಚ್ಚು ಸಂಶೋಧನೆ ನಡೆಸಿದ್ದು, ‘ರೆಟಿಕ್ಯುಲಾರ್ ಕೆಮಿಸ್ಟ್ರಿ’ ಎಂಬ ರಸಾಯನವಿಜ್ಞಾನದ ಶಾಖೆಯಲ್ಲಿ. ವಿವಿಧ ಸಾವಯವ ಸಂಯುಕ್ತ ಪದಾರ್ಥಗಳಿಗೆ, ಲೋಹದ ಸಂಯುಕ್ತಗಳಿಗೆ ಪರಮಾಣುಗಳನ್ನು ಸೇರಿಸುವ, ರಾಸಾಯನಿಕ ಬಂಧಗಳನ್ನು ರಚಿಸುವ, ಹೊಸ ರಚನೆಗಳನ್ನು ಸೃಜಿಸುವ ಕ್ರಿಯಾತ್ಮಕ ಶಾಖೆಯಿದು. ಇಲ್ಲಿ ಮೂರು ಆಯಾಮದ ಸ್ಫಟಿಕಗಳ ರಚನೆಗೆ ಪ್ರಾಶಸ್ತ್ಯ; ಅದೇ ನಿಟ್ಟಿನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಓಮರ್ ಅವರನ್ನು ನೊಬೆಲ್ ಪ್ರಶಸ್ತಿಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದು, ಲೋಹ-ಸಾವಯವ ಚೌಕಟ್ಟುಗಳ ಧೃಡತೆಯ ಬಗ್ಗೆ ಅವರ ವಿಷಿಷ್ಟವಾದ ಅನ್ವೇಷಣೆಯೇ!
ರಸಾಯನವಿಜ್ಞಾನದ ಭಾಷೆಯಲ್ಲಿ ‘ಕೊಆರ್ಡಿನೇಶನ್ ಪಾಲಿಮರ್’ ಎಂಬ ಹೆಸರಿನಿಂದ ಗುರುತಿಸಲಾಗುವ ರಚನೆಗಳಿಗೆ ಭೌತಿಕ ದೃಢತೆ ತಂದುಕೊಡುವುದು ಕಷ್ಟದ ಮಾತೇ ಸರಿ. ಇಲ್ಲಿ ಲೋಹವೂ ಉಂಟು, ಸಾವಯವ ಗುಣ ತಂದುಕೊಡುವ ಇಂಗಾಲವೂ ಉಂಟು; ಜೊತೆಗೆ ಅನೇಕ ಅಯಾನುಗಳ, ಎಲೆಕ್ಟ್ರಾನುಗಳ ಕೊಡು-ಕೊಳ್ಳುವಿಕೆ, ಹಂಚಿಕೊಳ್ಳುವಿಕೆ ಮತ್ತು ಧನಾತ್ಮಕ-ಋಣಾತ್ಮಕ ಚಾರ್ಜ್‌ಗಳ ನರ್ತನ - ಇವೆಲ್ಲದರ ನಡುವೆ ರಾಸಾಯನಿಕ ಕ್ರಿಯಾತ್ಮಕತೆಗೂ ಮೀರಿ ಭೌತಿಕ ದೃಢತೆ ಅತಿ ಮುಖ್ಯವೆನಿಸುತ್ತದೆ. ಹೇಗೆಂದರೆ, ಫಳಫಳ ಪೈಂಟು, ಥಳ ಥಳ ಟೈಲ್ಸು, ಮಿರ ಮಿರ ಮಿಂಚುವ ಒಳಾಂಗಣ ವಿನ್ಯಾಸವೆಲ್ಲವೂ ಇದ್ದು ಮನೆಯ ಭೌತಿಕ ರಚನೆಗೆ, ಬುನಾದಿಗೆ, ಗೋಡೆಗೆ ಬಲವಿಲ್ಲದಿದ್ದರೆ ಪ್ರಯೋಜನವೇನು? ಹಾಗೆಯೇ, ಈ ಲೋಹ-ಸಾವಯವ ಚೌಕಟ್ಟುಗಳು ತಮ್ಮ ರಚನೆಯಿಂದ ಕೈಗಾರಿಕೆಗಳಲ್ಲಿ, ವೈದ್ಯಕೀಯ ಲೋಕದಲ್ಲಿ, ಪ್ರಯೋಗಾಲಯಗಳಲ್ಲಿ ಅನೇಕ ಅನ್ವಯಿಕೆಗಳನ್ನು ಸಾಧ್ಯವಾಗಿಸಬಹುದಾಗಿದ್ದರೂ, ಅದರ ಮೂಲಭೂತ ರಚನೆಗೆ ಭೌತಿಕವಾಗಿ ಬಲವಿಲ್ಲದಿಲ್ಲರೆ ಪ್ರಯೋಜನವೇನು?
ಹೀಗಾಗಿ, ಓಮರ್ ಅವರು ಆ ಸಮಸ್ಯೆಯನ್ನು ಪರಿಹರಿಸಲು ಮೂರು ಮುಖ್ಯ ಬದಲಾವಣೆಗಳನ್ನು ತಂದರು. ಈ ಚೌಕಟ್ಟುಗಳನ್ನು ತಯಾರಿಸುವಾಗ, ಲೋಹ ಮತ್ತು ಕಾರ್ಬಾಕ್ಸಿಲೇಟ್ ಅಯಾನುಗಳ ನಡುವೆ ರಾಸಾಯನಿಕ ಬಂಧವನ್ನು ಗಟ್ಟಿಗೊಳಿಸಿದರು. ಸ್ಪಟಿಕೀಕರಣದ ವೇಳೆ ಹೆಚ್ಚುವರಿ ಆಧಾರ ಸ್ತಂಭಗಳಾಗಿ ಲೋಹ-ಕಾರ್ಬಾಕ್ಸಿಲೇಟ್ ಗುಂಪುಗಳನ್ನು ಬಳಸಿದರು. ಈ ಚೌಕಟ್ಟಿನೊಳಗಿರುವ ಪರಮಾಣುಗಳ, ಅಣುಗಳ ನಡುವೆ ಇರುವ ಅಂತರವು, ಹೆಚ್ಚು ರಂಧ್ರಮಯವಾಗಿರುವಂತೆ ನೋಡಿಕೊಂಡರು. ಈ ಮೂರೂ ಬದಲಾವಣೆಗಳು ಅಪರಿಮಿತ ಹೊಸ ಸಾಧ್ಯತೆಗಳಿಗೆ ಎಡೆಮಾಡಿಕೊಟ್ಟಿತು. ಇದರಿಂದಾಗಿ ರಿಚರ್ಡ್ ರಾಬ್ಸನ್ ಅವರ ಸಿದ್ಧಾಂತವು 3-ಡಿ ರೂಪವನ್ನು ಪಡೆದು, ಹೊಸ ಅನ್ವಯಿಕೆಗಳಿಗೆ ತೆರೆದುಕೊಂಡಿತು. ಓಮರ್ ಅವರ ಈ ಸಂಶೋಧನೆ, ವಿಷಾನಿಲ ಸೋರುವಲ್ಲಿ ಅನಿಲದ ಅಣುಗಳನ್ನು ಹಿಡಿದಿಡಲು, ಬಿರುಬಿಸಿಲ ಮರಳುಗಾಡಲ್ಲಿ ಗಾಳಿಯಿಂದ ನೀರನ್ನು ತಯಾರಿಸಲು, ದೇಹದ ನಿರ್ದಿಷ್ಟ ಭಾಗಕ್ಕೆ ಔಷಧವನ್ನು ತಲುಪಿಸಲು ಸಹಾಯಕವಾದ ಲೋಹ-ಸಾವಯವ ಚೌಕಟ್ಟಿಗೆ ಬಲ ತಂದಿದೆ; ಆಧುನಿಕ ಮಾನವನ ಅನೇಕ ಸಮಸ್ಯೆಗಳಿಗೆ ಪರಿಹಾರ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.