ADVERTISEMENT

ಪಿ. ಡಿ. ಎಂ. ಎಂಬ ಪದ್ಮಪತ್ರದ ಜಲಬಿಂದು!

ಕ್ಷಮಾ ವಿ.ಭಾನುಪ್ರಕಾಶ್
Published 5 ಆಗಸ್ಟ್ 2025, 23:30 IST
Last Updated 5 ಆಗಸ್ಟ್ 2025, 23:30 IST
   
ನಾನ್-ಸ್ಟಿಕ್ ಪಾತ್ರೆಗಳಲ್ಲಿ ಬಹಳ ಹೆಚ್ಚಿನ ತಾಪಮಾನ ಬಳಸಿ ಅಡುಗೆ ಮಾಡಿದಾಗ ಅದರಲ್ಲಿರುವ ‘ಟೆಫ್ಲಾನ್’ ಅಂಶ ನಮ್ಮ ಹೊಟ್ಟೆಯನ್ನು ಸೇರಿ, ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಕಾವಲಿಯ ಮೇಲೆ ನೀವು ಹರವಿದ ದೋಸೆಯ ಹಿಟ್ಟು ಗರಿಗರಿಯಾಗಿಯೋ, ಮಲ್ಲಿಗೆಯಂತೆ ಮೃದುವಾಗಿಯೋ ದೋಸೆಯಾಗಿಯೋ ಏಳದೆ, ಕಾವಲಿಗೆ ಅಂಟಿ ಕೂತರೆ, ಅಲ್ಲಿಗೆ ಅಂದಿನ ಬೆಳಗು ಕಿರಿಕಿರಿಯ ಸೆರಗು ಹೊದ್ದಿತೆಂದೇ ಅರ್ಥ; ಇಂತಹ ಸಮಸ್ಯೆಗೆ ಪರಿಹಾರವೆಂಬಂತೆ ಮನೆಮನೆ ಅಡುಗೆಮನೆಯನ್ನು ಸೇರಿದ್ದೇ ‘ನಾನ್-ಸ್ಟಿಕ್’ ಪಾತ್ರೆಗಳು.1930ರ ದಶಕದಲ್ಲಿ ಕಂಡುಹಿಡಿಯಲಾದ ‘ಪಾಲಿ ಟೆಟ್ರಾಫ್ಲೂರೋ ಇಥೆಲೀನ್‘ ಎಂಬ ರಾಸಾಯನಿಕವು ಇದಕ್ಕೆಲ್ಲಾ ಕಾರಣ. ತವಾ, ಕಡಾಯಿಯಂತಹ ಅನೇಕ ರೂಪದಲ್ಲಿ ಪ್ರತ್ಯಕ್ಷವಾದ ನಾನ್-ಸ್ಟಿಕ್ ಪಾತ್ರೆಗಳನ್ನು ಬಳಸಿದವರು, ಅದರ ‘ಅಂಟಿಯೂ ಅಂಟದಂತಿರುವ‘ ಬಗೆಯನ್ನು ಕಂಡು ಅಚ್ಚರಿ ಪಟ್ಟು, ಮತ್ತಷ್ಟು ದೋಸೆಹಿಟ್ಟಿಗೆ ಅಕ್ಕಿ ನೆನಸಿಟ್ಟರು! ನಾನ್-ಸ್ಟಿಕ್ ಪಾತ್ರೆಗಳ ಹೊಟ್ಟೆಗೆ ಮೆತ್ತಲಾದ ಈ ‘ಪಾಲಿ ಟೆಟ್ರಾಫ್ಲೂರೋ ಇಥೆಲೀನ್‘, ಎಂದರೆ ‘ಟೆಫ್ಲಾನ್’ ಎಂಬ ರಾಸಾಯನಿಕವನ್ನು ಕಂಡುಹಿಡಿದ ವಿಜ್ಞಾನಿಗಳು, ಅಡುಗೆಮನೆಯಲ್ಲಿ ಸಮಯವನ್ನು ಉಳಿಸಿ, ಕಿರಿಕಿರಿಯನ್ನು ತಪ್ಪಿಸಿ ಜಗತ್ಪ್ರಸಿದ್ಧರಾದರು.

ಟೆಫ್ಲಾನನ್ನು ಕೇವಲ ಪಾತ್ರೆಗಳಲ್ಲಿ ಮಾತ್ರವಲ್ಲ, ಗಾಡಿಗಳ ಬಣ್ಣ ಹಾಳಾಗದಂತೆ ಅದರ ಮೇಲೊಂದು ಪದರವಾಗಿ, ವೈದ್ಯಕೀಯ ಉಪಕರಣಗಳ ಮೇಲ್ಪದರವಾಗಿ, ‘ವಾಲ್ವ್’ಗಳು, ‘ಬುಶ್-ಬೇರಿಂಗ್ ಗಳು, ವಿದ್ಯುತ್ ತಂತಿಗಳ ಹೊರಕವಚದಲ್ಲಿ - ಹೀಗೆ ಅನೇಕ ಕಡೆ ಬಳಸಲಾಗುತ್ತಿದ್ದರೂ, ಅಲ್ಲೆಲ್ಲೂ ಆರೋಗ್ಯಕ್ಕೆ ‘ಟೆಫ್ಲಾನ್’ನಿಂದ ಸಮಸ್ಯೆಯಿಲ್ಲ; ಸಾಮಾನ್ಯವಾಗಿ ಸುರಕ್ಷಿತ ಎಂದು ಸಾಬೀತಾಗಿದ್ದರೂ, ನಾನ್-ಸ್ಟಿಕ್ ಪಾತ್ರೆಗಳಲ್ಲಿ ಬಹಳ ಹೆಚ್ಚಿನ ತಾಪಮಾನ ಬಳಸಿ ಅಡುಗೆ ಮಾಡಿದಾಗ ಮಾತ್ರ, ಇವು ಜನರ ಉದರವನ್ನು ಸೇರಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾದ ಉದಾಹರಣೆಗಳಿವೆ. ವಿಜ್ಞಾನಿಗಳ ಪ್ರಕಾರ ಜಠರದ ಸಮಸ್ಯೆ, ಥೈರಾಯ್ಡ್ ಸಮಸ್ಯೆ, ರೋಗನಿರೋಧಕತೆಯಲ್ಲಿ ಇಳಿಕೆಯಷ್ಟೇ, ಅಲ್ಲದೇ ಕೆಲಬಗೆಯ ಕ್ಯಾನ್ಸರ್‌ಗೆ ಕೂಡ ಕಾರಣವಾಗಬಹುದು. ಹೀಗಿರುವಾಗ, ಟೆಫ್ಲಾನ್‌ಗಿಂತಲೂ ಸುರಕ್ಷಿತವಾದ ರಾಸಾಯನಿಕವೊಂದನ್ನು ತಯಾರಿಸಬೇಕು; ಇಲ್ಲಿ, ವಿಜ್ಞಾನಿಗಳಿಗೆ ಸವಾಲೆಂದರೆ, ನೀರನ್ನು ಮಾತ್ರವಲ್ಲ, ಎಣ್ಣೆಯನ್ನೂ ದೂರವಿಡುವ ರಾಸಾಯನಿಕವನ್ನು ತಯಾರಿಸುವುದು!

ಸಾಮಾನ್ಯವಾಗಿ, ರಾಸಾಯನಿಕಗಳು ನೀರಿನಲ್ಲಿ ಕರಗುವುದಾದರೆ, ಎಣ್ಣೆಯಂತಹ ಸಂಯುಕ್ತ ಪದಾರ್ಥಗಳೊಂದಿಗೆ ಬೆರೆಯುವುದಿಲ್ಲ. ಉದಾಹರಣೆಗೆ, ನಾವು ದಿನನಿತ್ಯವೂ ಬಳಸುವ ಉಪ್ಪು. ನೀರಿಗೆ ಹಾಕಿದಾಕ್ಷಣವೇ ಕರಗುವ ಉಪ್ಪನ್ನು, ಒಮ್ಮೆ ಎಣ್ಣೆಗೆ ಹಾಕಿ ನೋಡಿ? ಅದು ಕರಗದು! ಇನ್ನು, ಎಣ್ಣೆಯೊಂದಿಗೆ ರಾಸಾಯನಿಕವಾಗಿ ಬೆರೆಯಬಲ್ಲ ಪದಾರ್ಥಗಳು, ನೀರಿನೊಂದಿಗೆ ಸೇರುವುದಿಲ್ಲ. ಇದು ಧ್ರುವೀಯತೆಯನ್ನು ಪ್ರದರ್ಶಿಸುವ ‘ಪೋಲಾರ್-ನಾನ್ ಪೋಲಾರ್’ ರಾಸಾಯನಿಕಗಳ ‘ಜಾತಿವಾದ’ದ ಕಥೆ! ಹಾಗಾಗಿ, ನೀರು ಮತ್ತು ಎಣ್ಣೆ - ಇವೆರಡನ್ನೂ ಸಮಾನವಾಗಿ ದೂರವಿಡುವ ರಾಸಾಯನಿಕವೊಂದು ಬೇಕೆಂದಾಗ, ಸಹಜವಾಗಿಯೇ, ಸಂಶೋಧಕರು ಬೇರೆಯದೇ ದಿಕ್ಕಿನಲ್ಲಿ ಯೋಚಿಸಬೇಕಾಯ್ತು. ಟೊರೊಂಟೋದ ಆನ್ವಯಿಕವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಹೊಸದೊಂದು ಪಾಲಿಮರ್ ಅನ್ನು ತಯಾರಿಸಿದ್ದಾರೆ; ಇದು ಟೆಫ್ಲಾನ್‌ಗಿಂತಲೂ ಸುರಕ್ಷಿತ ಎಂದೂ ಸಾಬೀತು ಪಡಿಸಿದ್ದಾರೆ.

ADVERTISEMENT

ಪ್ರೊಫೆಸರ್ ಕೆವಿನ್ ಗೊಲೊವಿನ್ ಮತ್ತು ಅವರ ತಂಡದ ಸಂಶೋಧಕರು ತಯಾರಿಸಿದ ಈ ಪಾಲಿಮರ್ ‘ಪಾಲಿ ಡೈಮೀಥೈಲ್ ಸಿಲಾಕ್ಸೇನ್’ (ಪಿ. ಡಿ. ಎಂ.). ಈ ಹೊಸ ಪಾಲಿಮರನ್ನು ಅರ್ಥ ಮಾಡಿಕೊಳ್ಳುವ ಮುನ್ನ ನಮ್ಮ ಹಳೆಯ ‘ಟೆಫ್ಲಾನ್’ ಎನ್ನುವ ಪಾಲಿಮರನ್ನು ಅರ್ಥೈಸಿಕೊಳ್ಳಬೇಕು. ‘ಪಾಲಿಮರ್’ ಎಂದರೆ ಅನೇಕ ಮಣಿಗಳನ್ನು ಪೋಣಿಸಿ ಮಾಡಿದ ಸರದಂತಹ ಉದ್ದನೆಯ ರಾಸಾಯನಿಕ; ಅನೇಕ ಪರ್/ಪಾಲಿ ಫ಼್ಲೂರೋ ಆಲ್ಕೈಲ್ ಘಟಕಗಳನ್ನು ಮಣಿಯಂತೆ ಪೋಣಿಸಿ ಅಂದರೆ, ರಾಸಾಯನಿಕವಾಗಿ ಜೋಡಿಸಿ, ತಯಾರಿಸಿದ ಸರ, ಅಂದರೆ ಪಾಲಿಮರ್, ನಮ್ಮ ಟೆಫ್ಲಾನ್. ಇಲ್ಲಿ ಪ್ರತಿ ಘಟಕದ ಪ್ರತಿ ಇಂಗಾಲದ ಅಣುವಿಗೂ, ಹಲವು ಫ್ಲೋರೀನ್ ಅಣುಗಳು ರಾಸಾಯನಿಕವಾಗಿ ಅಂಟಿಕೊಂಡಿರುತ್ತವೆ. ಈ ಇಂಗಾಲ-ಫ್ಲೋರೀನ್ ರಾಸಾಯನಿಕ ಬಂಧವು ಅಷ್ಟೇನೂ ಪ್ರತಿಕ್ರಿಯಾತ್ಮಕವಲ್ಲದ, ತನ್ನ ಪಾಡಿಗೆ ತಾನಿರುವ ಜಾಯಮಾನದವು; ಈ ಪ್ರತಿ ರಾಸಾಯನಿಕ ಬಂಧದ ನಿರ್ಲಿಪ್ತತೆಯೇ, ಒಟ್ಟಾರೆಯಾಗಿ ಪಿ.ಎಫ಼್.ಎ. ಪದಾರ್ಥಕ್ಕೂ ನೀರಿಗೆ ಅಂಟದ, ಎಣ್ಣೆಯನ್ನೂ ಅಂಟಿಸಿಕೊಳ್ಳದ ಗುಣ ನೀಡಿದೆ. ಹಾಗಾಗಿ, ಟೆಫ್ಲಾನ್‌ನ ಕಣಗಳು ನಮ್ಮ ಆಹಾರದ ಜೊತೆಗೆ ಉದರವನ್ನು ಸೇರಿದರೆ, ಅದು ತನ್ನ ರಾಸಾಯನಿಕ ನಿರ್ಲಿಪ್ತತೆಯಿಂದ ಹಾಗೇ ಉಳಿದು, ಆಹಾರದೊಂದಿಗೆ ಜೀರ್ಣವಾಗದೇ, ನಮ್ಮ ಜೀರ್ಣಾಂಗವ್ಯವಸ್ಥೆಯ ಭಾಗವಾಗಿಯೇ ಉಳಿದುಬಿಡುತ್ತದೆ; ಅಥವಾ ಹೊರಬಂದರೂ, ಪ್ರಕೃತಿಯಲ್ಲಿ ಜೈವಿಕಶೇಖರಣೆಗೆ ಕಾರಣವಾಗಿ, ಆಹಾರಸರಪಳಿಯ ಭಾಗವಾಗಿ ಮತ್ತೆಂದೋ ನಮ್ಮನ್ನು ಕಾಡದೇ ಬಿಡುವುದಿಲ್ಲ.

ಹಾಗಾಗಿಯೇ, ಪಿ.ಎಫ್‌.ಎ.ಗಳ (ಪರ್/ಪಾಲಿ ಫ಼್ಲೂರೋ ಆಲ್ಕೈಲ್ ರಾಸಾಯನಿಕಗಳು) ಬದಲಿಗೆ ಈಗ ತಯಾರಿಸಲಾದ ನಾನ್-ಸ್ಟಿಕ್ ರಾಸಾಯನಿಕವಾದ ಪಾಲಿ ಡೈಮೀಥೈಲ್ ಸಿಲಾಕ್ಸೇನ್ (ಪಿ. ಡಿ. ಎಂ.) ವಿಭಿನ್ನವಾಗಿ ನಿಲ್ಲುತ್ತದೆ. ಇದು ನೀರಿಗೆ ಮತ್ತು ಎಣ್ಣೆಗೆ ಅಂಟದೇ ಇರುವುದು ಮಾತ್ರವಲ್ಲ, ಪರಿಸರಕ್ಕೆ ಮತ್ತು ನಮ್ಮ ಆರೋಗ್ಯಕ್ಕೂ ಸಮಸ್ಯೆ ಉಂಟುಮಾಡದು ಎಂದು ವಿವರಿಸುತ್ತಾರೆ ವಿಜ್ಞಾನಿಗಳು. ಈಗಾಗಲೇ ವೈದ್ಯಕೀಯರಂಗದಲ್ಲಿ ಬಳಕೆಯಲ್ಲಿರುವ ‘ಕೆಥೆಟರ್‌’ಗಳಲ್ಲಿ, ಕೇಕ್ ತಯಾರಿಕೆಗೆ ಬೇಕಾದ ಅಚ್ಚುಗಳಲ್ಲಿ ಬಳಕೆಯಲ್ಲಿರುವ ‘ಸಿಲಿಕೋನ್’, ಈ ಹೊಸ ‘ಪಿ. ಡಿ. ಎಂ’ನ ಮೂಲವಸ್ತು. ಈಗಾಗಲೇ ಅಪಾಯಕಾರಿಯಲ್ಲ ಎಂದು ಸಾಬಿತಾಗಿರುವ ‘ಸಿಲಿಕೋನ್‌’ಅನ್ನು ಕೊಂಚ ಮಾರ್ಪಾಡು ಮಾಡಿ, ಕೆಲವೇ ಇಂಗಾಲ ಮತ್ತು ಫ್ಲೋರೀನ್ ಬಂಧಗಳಿರುವಂತೆ ಮಾಡಿ ತಯಾರಿಸಲಾದ ಈ ಹೊಸ ‘ಪಿ. ಡಿ. ಎಂ’ ಪದರವು ಸುರಕ್ಷಿತ ಎಂದು ಪ್ರಯೋಗಾಲಯದಲ್ಲಿ ಸಾಬೀತು ಪಡಿಸಿದ್ದಾರೆ, ವಿಜ್ಞಾನಿಗಳು. ಅದು ನಾನ್-ಸ್ಟಿಕ್ ಪಾತ್ರೆಯ ಹೊರಕವಚವಾಗಿ ಮನೆಮನೆಗೆ ಅಡಿಯಿಡಲು ಇನ್ನು ಕೊಂಚ ಕಾಯಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.