Planetary Parade 2025
ಸೌರಮಂಡಲದಲ್ಲಿ ಸೂರ್ಯನ ಸುತ್ತ ಅದೆಷ್ಟೋ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ತಮ್ಮದೇ ಕಕ್ಷೆಗಳಲ್ಲಿ ಪರಿಭ್ರಮಣ ಮಾಡುತ್ತಿರುವ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ - ಈ ಆರು ಗ್ರಹಗಳು ಪರಸ್ಪರ ತೀರಾ ಹತ್ತಿರದಲ್ಲಿ ಜನವರಿ ತಿಂಗಳಿನಲ್ಲಿ ಹಾದುಹೋಗುತ್ತಿವೆ.
ಆಗಸದಲ್ಲಿ ಬೆಳಗುವ ಚಂದ್ರನನ್ನು ಅಥವಾ ಪ್ರಖರವಾಗಿ ಹೊಳೆಯುವ ನಕ್ಷತ್ರಗಳನ್ನು, ಗ್ರಹಗಳನ್ನು ತಮ್ಮ ಮಕ್ಕಳಿಗೆ ತೋರಿಸುವುದು, ಅವರ ಮುಖದಲ್ಲಿ ನಗು, ಆನಂದ ನೋಡುವುದು ಆ ದಿನಗಳಲ್ಲಿ ಸಾಮಾನ್ಯವಾಗಿತ್ತು. ಆದರೆ ಈಗಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದಾರೆ. ಹಿಂದೆಲ್ಲ, ಚಂದಿರನನ್ನು ತೋರಿಸಿ, ಪುಸಲಾಯಿಸಿ ಮಕ್ಕಳಿಗೆ ಊಟ ತಿನ್ನಿಸಲಾಗುತ್ತಿತ್ತು. ಆಗಸದ ಅಚ್ಚರಿಗಳನ್ನು, ಸೊಬಗನ್ನು ತೋರಿಸುತ್ತಲೇ, ಮಕ್ಕಳಿಗೆ ಆಕಾಶಕಾಯಗಳಲ್ಲಿ ಆಸಕ್ತಿ ಬೆಳೆಯುವಂತೆ ಮಾಡುತ್ತಿದ್ದ ಅಂಥ ಪ್ರಕ್ರಿಯೆಯ ಸೊಬಗನ್ನು ಇಂದು ಸ್ಮಾರ್ಟ್‌ಫೋನ್‌ಗಳು ಕಸಿದುಕೊಂಡಿವೆ. ನಗರಗಳಲ್ಲಾದರೆ ಗ್ರಹ-ನಕ್ಷತ್ರಗಳನ್ನು, ಆಗಸದಲ್ಲಾಗುತ್ತಿರುವ ವಿದ್ಯಮಾನಗಳನ್ನು ವೀಕ್ಷಿಸಲು ಪ್ಲಾನೆಟೋರಿಯಂ ಅಥವಾ ಖಗೋಳ ವೀಕ್ಷಣಾಲಯಗಳು ಇವೆ. ಆಕಾಶಕಾಯಗಳನ್ನು ನೋಡುವ, ರಾತ್ರಿ ಆಗಸದಲ್ಲಾಗುವ ಗ್ರಹ-ನಕ್ಷತ್ರಗಳ ಸ್ಥಾನಪಲ್ಲಟವನ್ನು ಗಮನಿಸುವ, ಈ ಮೂಲಕ ತಮ್ಮ ಏಕಾಗ್ರತೆಯ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುವ ಮಂದಿ ಈಗಲೂ ಇದ್ದಾರೆ. ಟೆಲಿಸ್ಕೋಪ್ ಇಲ್ಲವೇ ಬೈನಾಕ್ಯುಲರ್ ಬಳಸಿ ಆಕಾಶವೀಕ್ಷಣೆಯನ್ನೇ ಹವ್ಯಾಸವಾಗಿಸಿಕೊಂಡ ಅದೆಷ್ಟೋ ಮಂದಿ ನಮ್ಮೆದುರಿದ್ದಾರೆ.
ಆದರೆ, ಮತ್ತೆ ಈ ಆಸಕ್ತಿಯನ್ನು ಕೆರಳಿಸಲು, ಹವ್ಯಾಸವನ್ನು ಬೆಳೆಸಲು ಇಲ್ಲೊಂದು ಸುವರ್ಣಾವಕಾಶವಿದೆ. ಈಗಾಗಲೇ ಹಲವು ದಿನಗಳಿಂದ ದೇಶ-ವಿದೇಶದ ಕೋಟ್ಯಂತರ ಮಂದಿ ಆರು ಗ್ರಹಗಳು ಸೇರಿಕೊಂಡು ಆಗಸದಲ್ಲಿ ಮಾಡುತ್ತಿರುವ ‘ಸಮಾವೇಶ’ವನ್ನು, ಎಂದರೆ ಪಥಕೂಟವನ್ನು (Planetary Parade) ವೀಕ್ಷಿಸಿ ಸಂಭ್ರಮ ಪಟ್ಟಿದ್ದಾರೆ.
ಇದೊಂದು ತೀರಾ ಅಪರೂಪದ ಖಗೋಳ ವಿದ್ಯಮಾನ. ಗ್ರಹಗಳು ಸೌರವ್ಯೂಹದಲ್ಲಿ ಸೂರ್ಯನ ಸುತ್ತಲಿನ ನಿಗದಿತ ಕಕ್ಷೆಯಲ್ಲಿ ಪರಿಭ್ರಮಿಸುತ್ತಾ ಇರುತ್ತವೆ. ಈ ಹಂತದಲ್ಲಿ ಮೂರ್ನಾಲ್ಕು ಗ್ರಹಗಳು ಆಗಸದಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಸಮೀಪದಲ್ಲೇ ಕಾಣಿಸಿಕೊಳ್ಳುತ್ತವೆ; ಸರಳ ರೇಖೆಯಲ್ಲೇ ಕಾಣಿಸಬೇಕೆಂದೇನಿಲ್ಲ. ಇದನ್ನು ‘ಪ್ಲಾನೆಟರಿ ಪೆರೇಡ್’ (ಗ್ರಹಗಳ ಪಥಕೂಟ) ಎಂದು ನಾಸಾ ಕರೆದಿದೆ. ಆದರೆ ಈ ಕುರಿತ ವೈಜ್ಞಾನಿಕ ಹೆಸರು ಅಧಿಕೃತವಾಗಿ ಇನ್ನೂ ನಿರ್ಧಾರವಾಗಿಲ್ಲ.
ಸೌರಮಂಡಲದಲ್ಲಿ ಸೂರ್ಯನ ಸುತ್ತ ಅದೆಷ್ಟೋ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ತಮ್ಮದೇ ಕಕ್ಷೆಗಳಲ್ಲಿ ಪರಿಭ್ರಮಣ ಮಾಡುತ್ತಿರುವ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ - ಈ ಆರು ಗ್ರಹಗಳು ಪರಸ್ಪರ ತೀರಾ ಹತ್ತಿರದಲ್ಲಿ ಮತ್ತು ಭೂಮಿಗೆ ಸಮೀಪದಲ್ಲಿ ಜನವರಿ ತಿಂಗಳಿನಲ್ಲಿ ಹಾದುಹೋಗುತ್ತಿವೆ. ಈ ಜನವರಿ 21ರಿಂದ ಭಾರತದಲ್ಲಿ ಕಾಣಿಸಲು ಆರಂಭವಾಗಿರುವ ಈ ಗ್ರಹಗಳ ‘ಆನ್‌ಲೈನ್ ಮೀಟಿಂಗ್’ ವಿದ್ಯಮಾನವು ಸಂಜೆಗತ್ತಲಾದ ಬಳಿಕ ಆಗಸದಲ್ಲಿ ಗೋಚರಿಸುತ್ತದೆ. ಈ ಆರರಲ್ಲಿ, ಹೆಚ್ಚು ಪ್ರಖರ ಬೆಳಕಿನಲ್ಲಿರುವ ನಾಲ್ಕು ಗ್ರಹಗಳನ್ನು ಬರಿಗಣ್ಣಿಂದ ನೋಡಿ ಆನಂದಿಸಲು ಇಂದು (ಜ.29) ಕೊನೆಯ ದಿನ.
ಸೌರವ್ಯೂಹದಲ್ಲಿ ಗ್ರಹಗಳು ಪರಸ್ಪರ ಸಮೀಪದಲ್ಲಿ ಹಾದುಹೋಗುವುದೊಂದು ಸಾಮಾನ್ಯ ಪ್ರಕ್ರಿಯೆಯಾದರೂ ಈ ಬಾರಿ ಆರು ಗ್ರಹಗಳು ತೀರಾ ಹತ್ತಿರದಲ್ಲೇ, ಸೂರ್ಯನ ಒಂದು ಮಗ್ಗುಲಿನಲ್ಲಿ ಏಕಕಾಲಕ್ಕೆ ಹಾದುಹೋಗುವುದು ಮತ್ತು ಅವುಗಳಲ್ಲಿ ನಾಲ್ಕು ಗ್ರಹಗಳಂತೂ ಬರಿಗಣ್ಣಿಗೆ ಗೋಚರಿಸುವಷ್ಟು, ಭೂಮಿಗೆ ಸಮೀಪದಲ್ಲಿ ಕಾಣಿಸಿಕೊಳ್ಳುವುದು ಅಪರೂಪದ ವಿದ್ಯಮಾನ.
-ಸೂರ್ಯಾಸ್ತವಾದ ಸುಮಾರು ಒಂದು ಗಂಟೆಯ ಬಳಿಕ ಈ ಗ್ರಹಗಳ ‘ರಾತ್ರಿಕೂಟ’ ಶುರುವಾಗುತ್ತದೆ. ಶುಕ್ರ, ಮಂಗಳ, ಗುರು ಮತ್ತು ಶನಿಗ್ರಹಗಳು ಬರಿಗಣ್ಣಿಗೆ ಕಾಣಿಸಿದರೆ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ನೋಡಬೇಕಿದ್ದರೆ ಟೆಲಿಸ್ಕೋಪ್ ಅಗತ್ಯವಿರುತ್ತದೆ. ಶುಕ್ರಗ್ರಹವು ಎಲ್ಲವುಗಳಿಗಿಂತ ಹೆಚ್ಚು ಪ್ರಖರವಾಗಿ ಆಗ್ನೇಯ ಭಾಗದಲ್ಲಿ ಗೋಚರಿಸಿದರೆ, ಮಂಗಳಗ್ರಹವು ತನ್ನ ಕೆಂಬಣ್ಣದಿಂದಾಗಿ ಬಲ್ಬ್ ಮಾದರಿಯಲ್ಲಿ ಪೂರ್ವದಲ್ಲಿ, ಶನಿಗ್ರಹವು ಪುಟ್ಟ ಬಿಂದುವಿನಂತೆ ಪಶ್ಚಿಮದಲ್ಲಿ, ಗುರುಗ್ರಹವು ಮಧ್ಯ ಆಗಸದಲ್ಲಿ ಪ್ರಖರವಾಗಿ ಕಾಣಿಸುತ್ತದೆ. ನಾವು ಭೂಮಿಯಿಂದ ನೋಡುವ ಕಾರಣ, ಇವೆಲ್ಲವೂ ಒಂದಿಷ್ಟು ಅಂತರದಲ್ಲಿರುವಂತೆ ಕಾಣಿಸುತ್ತವೆ.
ಆಕಾಶವು ಮೋಡಗಳಿಲ್ಲದೆ ಶುಭ್ರವಾಗಿದ್ದರೆ ಆಕಾಶ ವೀಕ್ಷಕರ ಅದೃಷ್ಟ ಮತ್ತು ಅವರ ಕಣ್ಣುಗಳಿಗೆ ಹಬ್ಬ ಖಚಿತ. ಆದರೆ ಸೂರ್ಯಾಸ್ತಮಾನವಾದ ಸುಮಾರು ಮೂರು ಗಂಟೆಗಳ ಬಳಿಕ ನೋಡಿದರೆ, ಶುಕ್ರ ಮತ್ತು ಶನಿಗ್ರಹಗಳು ದೂರ ಸಾಗಿರುತ್ತವೆ. ಡಿಎಸ್ಎಲ್ಆರ್ ಕ್ಯಾಮೆರಾ ಇದ್ದರೆ ಮತ್ತು ಹೆಚ್ಚು ಆಪ್ಟಿಕಲ್ ಝೂಮ್ ವ್ಯವಸ್ಥೆಯಿರುವ ಸ್ಮಾರ್ಟ್‌ಫೋನ್ ಇದ್ದರೆ ಚಿತ್ರ ಮತ್ತು ವಿಡಿಯೊಗಳನ್ನು ಸೆರೆಹಿಡಿಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.