ಪ್ಲಾಸ್ಟಿಕ್ – ನೈಸರ್ಗಿಕವಲ್ಲದ ಕೃತಕ ವಸ್ತು. ಕೃತಕವಾದ ರಾಸಾಯನಿಕ ಕ್ರಿಯೆಗಳಿಂದ ಹುಟ್ಟಿದ ಭೂತ ಎಂದೆಲ್ಲ ಕೇಳಿದ್ದೀವಿ. ಈಗ ಇಂತಹುದೇ ಕೃತಕವಾದೊಂದು, ನಿಸರ್ಗದಲ್ಲಿ ಇಲ್ಲವೇ ಇಲ್ಲದಂತಹ ರಾಸಾಯನಿಕ ಕ್ರಿಯೆ ಪ್ಲಾಸ್ಟಿಕ್ಕನ್ನು ನಾವೆಲ್ಲ ನಿತ್ಯ ಬಳಸುವ ಮದ್ದನ್ನಾಗಿ ಪರಿವರ್ತಿಸುತ್ತದೆಯಂತೆ. ಇಂಗ್ಲೆಂಡಿನ ಎಡಿನ್‌ಬರೋ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನಿ ಸ್ಟೀಫನ್ ವ್ಯಾಲೇಸ್ ಮತ್ತು ತಂಡ, ಪ್ಲಾಸ್ಟಿಕ್ಕಿನಲ್ಲಿರುವ ವಸ್ತುಗಳನ್ನು ಬ್ಯಾಕ್ಟೀರಿಯಾದ ನೆರವಿನಿಂದ ನಾವು ಜ್ವರ, ನೋವಿಗೆ ಬಳಸುವ ‘ಪ್ಯಾರಾಸಿಟಮಾಲ್’ ಔಷಧವನ್ನಾಗಿ ಬದಲಾಯಿಸಿದ್ದಾರಂತೆ. ಇದಕ್ಕಾಗಿ ಇವರು ‘ಎಶ್ಚೆರಿಶಿಯಾ ಕೋಲಿ’ ಎನ್ನುವ ಬ್ಯಾಕ್ಟೀರಿಯಾದ ಮೂಲಕ, ಅದುವರೆವಿಗೂ ಯಾವುದೇ ಜೀವಿಯಲ್ಲಿಯೂ ನಡೆಯದಂತಹ ರಾಸಾಯನಿಕ ಕ್ರಿಯೆಯು ನಡೆಯುವಂತೆ ಮಾಡಿದ್ದಾರೆ.
ಜೀವಿಗಳು ಅಸಂಖ್ಯವಾಗಿದ್ದರೂ, ಅವುಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳು ಸೀಮಿತ. ಇದಕ್ಕೆ ಕಾರಣ ಸರಳ. ನೈಸರ್ಗಿಕವಾಗಿ ಹುಟ್ಟುವ ಯಾವುದೇ ವಸ್ತುವೂ ಇನ್ನೊಂದು ಜೀವಿಗೆ ಆಹಾರವಾಗುವುದರಿಂದ, ವಿಶಿಷ್ಟವಾದ, ಬೇರೆಲ್ಲಿಯೂ ಜರುಗದ ರಾಸಾಯನಿಕ ಕ್ರಿಯೆಗಳಿವೆ ಅವಕಾಶವಿಲ್ಲ. ಇದೇ ಕಾರಣದಿಂದಾಗಿಯೇ, ನೈಸರ್ಗಿಕವಾಗಿ ಹುಟ್ಟದ ಪ್ಲಾಸ್ಟಿಕ್ಕಿನಂತಹ ವಸ್ತುಗಳನ್ನು ಜೀವಿಗಳು ಬಳಸಲಾಗದು. ಪರಿಣಾಮ: ಎಲ್ಲೆಡೆ ಕೊಳೆಯದೆ ಉಳಿದ ಪ್ಲಾಸ್ಟಿಕ್ ತ್ಯಾಜ್ಯಗಳು. ಇದೀಗ, ಜೀವರಾಸಾಯನಿಕ ತತ್ವಗಳ ಜೊತೆಗೆ, ಕೃತಕ ರಾಸಾಯನಿಕ ಕ್ರಿಯೆಯೊಂದನ್ನು ಬೆಸೆಯುವ ಮೂಲಕ ಪ್ಲಾಸ್ಟಿಕ್ಕನ್ನು ಬ್ಯಾಕ್ಟೀರಿಯಾಗಳು ಬಳಸುವಂತೆ ಹಾಗೂ ಆ ಮೂಲಕ ಲಾಭದಾಯಕವಾದ ಪ್ಯಾರಾಸಿಟಮಾಲ್ ತಯಾರಾಗುವಂತೆ ಸ್ಟೀಫನ್ ವ್ಯಾಲೇಸ್ ತಂಡ ಮಾಡಿದೆ.
ಪ್ಯಾರಾಸಿಟಮಾಲ್ ನೋವು, ಜ್ವರಕ್ಕೆ ನೀಡುವ ಔಷಧ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಇದರ ಬಳಕೆ ಮೇರುಮಟ್ಟವನ್ನು ತಲುಪಿ, ಕೊರತೆಯನ್ನು ಅನುಭವಿಸಿದ್ದೆವಷ್ಟೆ. ಡೋಲೋ ಎನ್ನುವ ಗುಳಿಗೆಯ ಪ್ರಮುಖ ಅಂಶ ಇದು. ರಸಾಯನಿಕ ವಿಜ್ಞಾನಿಗಳು ಇದನ್ನು ಅಸಿಟಮಿನೋಫೆನ್ ಅಥವಾ ಎನ್-ಅಸಿಟೈಲ್ ಪ್ಯಾರಾ ಅಮೈನೊ ಫೇನಾಲ್ ( n-acetyl-para-aminophenol ) ಎಂದು ಕರೆಯುತ್ತಾರೆ. ಈ ಔಷಧವನ್ನು ರಾಸಾಯನಿಕ ತಂತ್ರಗಳಿಂದ ತಯಾರಿಸಲಾಗುತ್ತಿದೆ. ಯಾವುದೇ ಜೀವಿಯಲ್ಲಿಯೂ ಇದು ತಯಾರಾಗುವುದಿಲ್ಲ.
ಇದಕ್ಕೆ ಕಾರಣ ಪ್ಯಾರಾಸಿಟಮಾಲ್‌ನ ರಚನೆ. ‘ಬೆಂಜೀನ್’ ಎನ್ನುವ ಬಳೆಯಾಕಾರಾದ ಕಾರ್ಬನ್ ಸಂಯುಕ್ತಕ್ಕೆ ಎರಡು ಬದಿಯಲ್ಲಿ, ಬಾಣಲೆಗೆ ಹಿಡಿ ಹಾಕಿದ ಹಾಗೆ ಇನ್ನೆರಡು ಅಣುಗಳನ್ನು ಜೋಡಿಸಿದ ಆಕಾರ. ಪೆಟ್ರೋಲ್ ತಯಾರಿಸುವ ವೇಳೆ ಪಡೆಯುವ ಫೀನಾಲ್ ಎನ್ನುವ ರಾಸಾಯನಿಕದಿಂದ, ಕೆಟಲಿಸ್ಟುಗಳೆನ್ನುವ ಲೋಹದ ವಸ್ತುವಿನ ಜೊತೆಗೆ ಅಸೆಟಿಕ್ ಆಮ್ಲವನ್ನು ಸೇರಿಸಿ ಬಿಸಿ ಮಾಡುವ ಮೂಲಕ ಪ್ಯಾರಾಸಿಟಮಾಲನ್ನು ತಯಾರಿಸುತ್ತಾರೆ. ಸ್ಟೀಫನ್ ವ್ಯಾಲೇಸ್ ತಂಡ ಈ ಬಳೆಯಾಕಾರದ ರಾಸಾಯನಿಕವನ್ನು ಜೈವಿಕ ಕ್ರಿಯೆಯೊಂದನ್ನು ರೂಪಿಸುವ ಮೂಲಕ ತಯಾರಿಸಿದೆ.
ಜೀವಿಗಳಲ್ಲಿ ರಾಸಾಯನಿಕ ಕ್ರಿಯೆಗಳು ಸಾಮಾನ್ಯ ಉಷ್ಣತೆಯಲ್ಲಿ ಹಾಗೂ ಕಿಣ್ವಗಳು ಅಥವಾ ಎಂಜೈಮುಗಳ ನೆರವಿನಿಂದ ನಡೆಯುತ್ತದೆ. ಪ್ರತಿಯೊಂದು ಕ್ರಿಯೆಗೂ ಒಂದು ಎಂಜೈಮು ಇರುತ್ತದೆ. ಉದಾಹರಣೆಗೆ, ಗ್ಲುಕೋಸು ಸಕ್ಕರೆಯನ್ನು ಈಥೈಲ್ ಅಲ್ಕೊಹಾಲ್ ಎನ್ನುವ ಮದ್ಯವನ್ನಾಗಿ ಹುದುಗಿಸುವಾಗ, ಯೀಸ್ಟ್ ಜೀವಿಗಳು ಕಿಣ್ವಗಳನ್ನು ಬಳಸುತ್ತವೆ. ನಾವು ತಿನ್ನುವ ಪ್ರತಿಯೊಂದು ಆಹಾರವೂ ದೇಹದಲ್ಲಿ ಪಚನವಾಗುವುದಕ್ಕೆ ಒಂದಲ್ಲ ಒಂದು ಕಿಣ್ವ ಕಾರಣ. ಆದರೆ ಜೀವಿಗಳಲ್ಲಿ ಇಲ್ಲದೇ ಇರುವ ಕ್ರಿಯೆಗೆ ಕಿಣ್ವ ಎಲ್ಲಿಂದ ಸಿಗಬೇಕು? ಇಂತಹ ಕಿಣ್ವವನ್ನು ತಯಾರಿಸುವುದು ವ್ಯಾಲೇಸ್ ತಂಡದ ಉದ್ದೇಶವಾಗಿತ್ತು.
ಸ್ಟೀಫನ್ ವ್ಯಾಲೇಸ್ ತಂಡ ಇದಕ್ಕಾಗಿ ಇದೀಗ ರಸಾಯನ ವಿಜ್ಞಾನದಲ್ಲಿ ಸುದ್ದಿ ಮಾಡುತ್ತಿರುವ ಕೃತಕಕಿಣ್ವಗಳು ಅಥವಾ ಲೋಹದ ಕಿಣ್ವಗಳನ್ನು ಬಳಸಿದ್ದಾರೆ. ಲೋಹದ ಕಿಣ್ವಗಳು ಎಂದರೆ ಇನ್ನೇನಲ್ಲ. ಕೆಟಲಿಸ್ಟುಗಳಾಗಿ ಕಾರ್ಯ ನಿರ್ವಹಿಸುವ ಕೆಲವು ಲೋಹದ ಅಣುಗಳನ್ನು ಕೆಲವು ಜೈವಿಕ ವಸ್ತುಗಳೊಂದಿಗೆ ಬೆಸೆದು ಕೃತಕಕಿಣ್ವಗಳು ಅಥವಾ ಲೋಹದ ಕಿಣ್ವಗಳನ್ನು ತಯಾರಿಸಬಹುದು. ಈ ಕಿಣ್ವಗಳು ಸಾಮಾನ್ಯ ಉಷ್ಣತೆಯಲ್ಲಿ ಜಟಿಲವಾದ ರಾಸಾಯನಿಕಗಳನ್ನು ತಯಾರಿಸುತ್ತವೆ. ಇಂತಹ ಲೋಹದ ಕಿಣ್ವವನ್ನು ಬಳಸಿಕೊಂಡು, ಪ್ಯಾರಾ ಅಮೈನೊ ಬೆಂಜೋಯಿಕ್ ಆಮ್ಲ ಅಥವಾ ಪಾಬಾ ಎನ್ನುವ ರಾಸಾಯನಿಕವನ್ನು ತಯಾರಿಸಲು ಇವರು ಯೋಜಿಸಿದ್ದರು. ಅದರ ಫಲವಾಗಿ, ಸಂಪೂರ್ಣ ನೈಸರ್ಗಿಕವಾಗಿ ಪ್ಯಾರಾಸಿಟಮಾಲನ್ನು ತಯಾರಿಸಬಹುದು ಎಂದು ಇವರು ಕಂಡುಕೊಂಡಿದ್ದಾರೆ.
ಹೊಸದಾಗಿ ತಯಾರಿಸಿದ ಕಬ್ಬಿಣದ ಅಣುವಿರುವ ಲೋಹದಕಿಣ್ವದ ಪರೀಕ್ಷೆಯನ್ನು ಸ್ಟೀಫನ್ ವ್ಯಾಲೇಸ್ ತಂಡ ನಡೆಸಿತ್ತು. ಈ ಕಿಣ್ವವು ಲೌಸೆನ್ ಕ್ರಿಯೆ ಎನ್ನುವ ರಾಸಾಯನಿಕ ಕ್ರಿಯೆಯ ಮೂಲಕ ಸ್ಟೈರೀನನ್ನು ಜೀರ್ಣಗೊಳಿಸುತ್ತದೆ ಈ ಕ್ರಿಯೆಯ ಕೊನೆಯಲ್ಲಿ ‘ಪಾಬಾ’ ಎನ್ನುವ ಪೋಷಕಾಂಶ ಉತ್ಪತ್ತಿ ಆಗುತ್ತದೆ. ಪಾಬಾ ತಯಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸಹಜವಾಗಿ ಪಾಬಾ ಉತ್ಪಾದನೆಯಾಗದ ‘ಎಶ್ಚೆರಿಶಿಯಾ ಕೋಲಿ’ ಬ್ಯಾಕ್ಟೀರಿಯಾದ ವಿಶೇಷ ತಳಿಗಳನ್ನು ಬಳಸಿದ್ದರು.
ವಿಚಿತ್ರ ಎಂದರೆ ಪಾಬಾ ಇಲ್ಲದ ಪ್ರನಾಳಗಳಲ್ಲಿಯೂ ಕೂಡ ಬ್ಯಾಕ್ಟೀರಿಯಾ ಬೆಳೆಯುತ್ತಿತ್ತು. ಬಹುಶಃ ತಾವು ತಯಾರಿಸಿದ ಲೋಹಕಿಣ್ವ ಈ ಅವಶ್ಯಕ ಪೋಷಕಾಂಶವನ್ನು ಒದಗಿಸುತ್ತಿರಬೇಕು ಎಂದು ವ್ಯಾಲೇಸ್ ತಂಡ ಊಹಿಸಿತು. ಹಾಗಿದ್ದರೆ ಪಾಬಾವನ್ನು ತಯಾರಿಸಲು ಬೇಕಾದ ಮೂಲವಸ್ತು ಲೋಹದ ಕಿಣ್ವಗಳ ಜೊತೆಗೆ ಒದಗಿಸಿದರೆ ಸಾಕಲ್ಲ. ಪಾಬಾ ತಯಾರಿಕೆ ಸಾಧ್ಯ ಎಂದು ತರ್ಕಿಸಿ, ಈ ಕ್ರಿಯೆಯನ್ನು ಲಾಭಕರವಾಗಿ ಬಳಸಲು ಯೋಚಿಸಿತು.
ಆದರೆ ಪಾಬಾದಿಂದ ನೇರವಾಗಿ ಪ್ಯಾರಾಸಿಟಮಾಲನ್ನು ತಯಾರಿಸುವ ಯಾವುದೇ ಕ್ರಿಯೆ ಇಲ್ಲ. ಇದನ್ನು ಎರಡು ಹಂತದಲ್ಲಿ ಮಾಡಬೇಕು. ಅವಕ್ಕೆ ಬೇಕಾದ ಎರಡೂ ಕಿಣ್ವಗಳನ್ನೂ ಎಶ್ಚೆರಿಶಿಯಾ ಕೋಲಿ ತಯಾರಿಸುವುದಿಲ್ಲ. ಹೀಗಾಗಿ, ವ್ಯಾಲೇಸ್ ತಂಡ, ಬೇರೆ ಮೂಲಗಳಿಂದ ಈ ಕಿಣ್ವಗಳನ್ನು ತಯಾರಿಸುವ ಜೀನ್‌ಗಳನ್ನು ಎಶ್ಚೆರಿಶಿಯಾ ಕೋಲಿ ಬ್ಯಾಕ್ಟೀರಿಯಾದೊಳಗೆ ಸೇರಿಸಿ, ಕುಲಾಂತರಿ ತಳಿಗಳನ್ನು ಸೃಷ್ಟಿಸಿತು. ಈ ಕುಲಾಂತರಿಗಳನ್ನು, ಲೋಹಕಿಣ್ವದ ಜೊತೆಗೆ ಕೂಡಿಸಿ, ಟೆರೆಪ್ತಾಲಿಕ್ ಆಮ್ಲವನ್ನು ನೀಡಿದಾಗ, ಅವು ಪ್ಯಾರಾಸಿಟಮಾಲನ್ನು ತಯಾರಿಸಿವೆ. ಪ್ರತಿ ಲೀಟರಿನಲ್ಲಿಯೂ ಹನ್ನೆರಡರಿಂದ ಹತ್ತೊಂಬತ್ತು ಮಿಲಿಗ್ರಾಂ ಪ್ಯಾರಾಸಿಟಮಾಲನ್ನು ಇವರು ಹೀಗೆ ಉತ್ಪಾದಿಸಿದ್ದಾರೆ.
ಪ್ಯಾರಾಸಿಟಮಾಲನ್ನು ನೈಸರ್ಗಿಕವಾಗಿ ತಯಾರಿಸಿದ ಸಾಧನೆ ಇದು. ಅಷ್ಟೇ ಅಲ್ಲ. ಜೀವಿಲೋಕದಲ್ಲಿಯೇ ಇಲ್ಲದ ಹೊಸದೊಂದು ಕ್ರಿಯೆಯನ್ನು ರೂಪಿಸಬಹುದು ಎಂದು ಈ ಮೂಲಕ ನಿರೂಪಿಸಿರುವ ವ್ಯಾಲೇಸ್, ತ್ಯಾಜ್ಯವೊಂದನ್ನು ವಿಲೇವಾರಿ ಮಾಡಲು ಹೊಸ ಉಪಾಯವನ್ನೂ ಸೂಚಿಸಿದೆ. ವ್ಯಾಲೇಸ್ ತಂಡದ ಶೋಧದ ವಿವರಗಳನ್ನು ‘ನೇಚರ್ ಕೆಮಿಸ್ಟ್ರಿ’ ಪತ್ರಿಕೆ ಇತ್ತೀಚೆಗೆ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.