ADVERTISEMENT

ಕೊರೊನಾದಿಂದ ರಕ್ಷಣೆ: ಹೊಸ ಮಾದರಿ ಮುಖಗವಸು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

ಕೊರೊನಾ ವೈರಾಣುವಿನಿಂದಲೂ ರಕ್ಷಣೆ, ದಿನವಿಡೀ ಧರಿಸುವುದಕ್ಕೂ ಹಿತ

ಪಿಟಿಐ
Published 5 ಸೆಪ್ಟೆಂಬರ್ 2020, 12:30 IST
Last Updated 5 ಸೆಪ್ಟೆಂಬರ್ 2020, 12:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ವಾಷಿಂಗ್ಟನ್‌: ಭಾರತ ಮೂಲದ ವಿಜ್ಞಾನಿಯೊಬ್ಬರು ಇರುವ ಅಮೆರಿಕದ ಜಾರ್ಜಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿಜ್ಞಾನಿಗಳ ತಂಡವೊಂದು, ಕೊರೊನಾ ವೈರಾಣುವಿನಿಂದ ರಕ್ಷಣೆ ನೀಡುವ,ಮರುಬಳಕೆ ಮಾಡಬಹುದಾಂತಹ ಹಾಗೂ ದಿನವಿಡೀ ಧರಿಸಿದರೂ ಅಹಿತ ಅನುಭವವಾಗದಂಥ ಹೊಸ ವಿನ್ಯಾಸದ ಮುಖಗವಸೊಂದನ್ನು ಅಭಿವೃದ್ಧಿಪಡಿಸಿದೆ.

ಈ ಆವಿಷ್ಕಾರವು ಕೋವಿಡ್‌–19 ಪಿಡುಗು ಇನ್ನಷ್ಟು ಹರಡದಂತೆ ತಡೆಯುವಲ್ಲಿ ಸಹಕಾರಿಯಾಗಲಿದೆ ಎನ್ನಲಾಗಿದೆ. ಈ ಪ್ರಾಯೋಗಿಕ ಮುಖಗವಸಿನ ಕುರಿತು ಸಂಸ್ಥೆಯ ನಿಯತಕಾಲಿಕದಲ್ಲಿ ವರದಿ ಪ್ರಕಟವಾಗಿದೆ. ಬಟ್ಟೆಯಿಂದ ತಯಾರಿಸಿದ ಬಹುತೇಕ ಮರುಬಳಕೆ ಮಾಡಬಹುದಂತಾದ ಮುಖಗವಸುಗಳಲ್ಲಿ, ಗಾಳಿಯು ಹೆಚ್ಚು ಸೋರಿಕೆ ಆಗುತ್ತದೆ. ಇದರ ಮುಖಾಂತರ ವೈರಾಣುಗಳು ಪ್ರವೇಶಿಸುವ ಸಾಧ್ಯತೆ ಹೆಚ್ಚು. ಈ ರೀತಿ ಮುಖಗವಸುಗಳನ್ನು ಬಳಸುವ ಸೋಂಕಿತ ವ್ಯಕ್ತಿ ಉಸಿರಾಡುವಾಗ, ಕೆಮ್ಮುವ ಸಂದರ್ಭದಲ್ಲಿ, ವೈರಾಣುಗಳು ಹೊರಬರುವ ಸಾಧ್ಯತೆಯೂ ಹೆಚ್ಚಿದೆ. ಇದರಿಂದಾಗಿ ಮುಖಗವಸುಗಳನ್ನು ಬಳಸಿಯೂ ಪ್ರಯೋಜನವಿಲ್ಲದಂತಾಗುತ್ತದೆ’ ಎನ್ನುತ್ತಾರೆ ವಿಜ್ಞಾನಿ ಸುಂದರೇಶನ್‌ ಜಯರಾಮನ್‌.

‘ಹೊಸದಾಗಿ ವಿನ್ಯಾಸಗೊಳಿಸಿದ ಮುಖಗವಸಿನಲ್ಲಿ ಮೂಗು ಹಾಗೂ ಬಾಯಿಗೆ ಬಟ್ಟೆ ತಾಗುವುದಿಲ್ಲ. ಇದರಿಂದಾಗಿ ಉಸಿರಾಟಕ್ಕೆ ಹಾಗೂ ಮಾತನಾಡುವಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಜನರು ಆಗಾಗೆ ಮುಖಗವಸುಗಳನ್ನು ಮುಟ್ಟುವ ಅವಶ್ಯಕತೆಯೂ ಬರುವುದಿಲ್ಲ. ಕ್ರೀಡೆಗೆ ಬಳಸುವ ಬಟ್ಟೆಯನ್ನು ಇಲ್ಲಿ ಬಳಸಲಾಗಿದ್ದು, ಇದು ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. 20ಕ್ಕೂ ಅಧಿಕ ಬಾರಿ ಇದನ್ನು ಒಗೆದು ಮತ್ತೆ ಬಳಸಿಕೊಳ್ಳಬಹುದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.