ADVERTISEMENT

ಮನುಷ್ಯರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಗೆ ಶ್ವಾನಗಳಿಗೆ ತರಬೇತಿ 

ಏಜೆನ್ಸೀಸ್
Published 4 ಮೇ 2020, 13:27 IST
Last Updated 4 ಮೇ 2020, 13:27 IST
ಶ್ವಾನ ತರಬೇತಿ– ಸಾಂಕೇತಿಕ ಚಿತ್ರ
ಶ್ವಾನ ತರಬೇತಿ– ಸಾಂಕೇತಿಕ ಚಿತ್ರ   

ವಾಷಿಂಗ್ಟನ್‌: ಮನುಷ್ಯ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿರುವುದನ್ನು ಪತ್ತೆ ಮಾಡಲು ಶ್ವಾನಗಳಿಗೆ ತರಬೇತಿ ನೀಡುತ್ತಿರುವುದಾಗಿ ಅಮೆರಿಕದ ವಿಜ್ಞಾನಿಗಳು ಹೇಳಿದ್ದಾರೆ.

ಯೂನಿವರ್ಸಿಟಿ ಆಫ್‌ ಪೆನ್ಸಿಲ್ವೇನಿಯಾದ ಸ್ಕೂಲ್‌ ಆಫ್‌ ವೆಟೆರ್ನರಿ ಮೆಡಿಸಿನ್‌ ಪ್ರಕಾರ, ವಾಸನೆ ನೋಡುವ ಮೂಲಕ ಪತ್ತೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಕೋವಿಡ್‌–19 ಪಾಸಿಟಿವ್‌ ರೋಗಿಗಳು ಹಾಗೂ ಕೋವಿಡ್‌–19 ನೆಗೆಟಿವ್‌ ಇರುವುದನ್ನು ಅವರ ಗಂಟಲು ದ್ರವ ಹಾಗೂ ಮೂತ್ರದ ಮಾದರಿಗಳ ವಾಸನೆ ಆಘ್ರಾಣಿಸಿ ಶ್ವಾನಗಳು ಪತ್ತೆ ಮಾಡಲಿವೆ.

ಮನುಷ್ಯರಿಗಿಂತ ಶ್ವಾನಗಳಲ್ಲಿ ವಾಸನೆ ಗ್ರಹಿಸುವ ಸಾಮರ್ಥ್ಯ ಅಧಿಕವಾಗಿರುತ್ತದೆ. ವಾಸನೆ ಗ್ರಹಿಸಲು ಮನುಷ್ಯರ ಮೂಗಿನಲ್ಲಿರುವ ಗ್ರಾಹಕಗಳ ಸಂಖ್ಯೆ ಸುಮಾರು 60 ಲಕ್ಷ ಹಾಗೂ ಶ್ವಾನಗಳ ಮೂಗಿನಲ್ಲಿ 30 ಕೋಟಿ ವಾಸನೆ ಗ್ರಹಿಸುವ ಗ್ರಾಹಕಗಳಿವೆ ಎಂದು ವಿಜ್ಞಾನಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ADVERTISEMENT

ಸೂಕ್ಷ್ಮತೆ ಮತ್ತು ವಾಸನೆಯ ಸುಳಿವಿಗಾಗಿ ನಿರ್ದಿಷ್ಟತೆಯನ್ನು ಗುರುತಿಸುವುದನ್ನು ಅಧ್ಯಯದಿಂದ ಕಂಡುಕೊಳ್ಳಲಾಗಿದೆ. ಮುಖ್ಯವಾಗಿ ಕೋವಿಡ್–19 ಲಕ್ಷಣಗಳು ಕಂಡು ಬರದ ವ್ಯಕ್ತಿಗಳಲ್ಲಿ ಸೋಂಕು ತಗುಲಿದ್ದರೆ, ಅದನ್ನು ಪತ್ತೆ ಮಾಡುವ ಕಾರ್ಯ ಈ ಮಿಷನ್‌ ಮೂಲಕ ಸಾಧ್ಯವಾಗಲಿದೆ.

ಜುಲೈನಲ್ಲಿ ಮಾನವರಲ್ಲಿ ಸೋಂಕು ಪತ್ತೆ ಮಾಡುವ ಕಾರ್ಯವನ್ನು ತರಬೇತಿ ಪಡೆಯುತ್ತಿರುವ ಶ್ವಾನಗಳು ಆರಂಭಿಸಲಿವೆ ಎಂದಿದ್ದಾರೆ.

'ಮನುಷ್ಯರ ರಕ್ತ, ಗಂಟಲು ದ್ರವ, ಮೂತ್ರ ಅಥವಾ ಉಸಿರಿನಲ್ಲಿರುವ ಬಾಷ್ಪಶೀಲ ಸಂಯುಕ್ತಗಳ (ವಿಒಸಿ–volatile organic compounds) ಸಾಂದ್ರತೆಯನ್ನು ಆಧರಿಸಿ ಶ್ವಾನಗಳು ರೋಗ ಪತ್ತೆ ಮಾಡುತ್ತವೆ. ಅಂಡಾಶಯ ಕ್ಯಾನ್ಸರ್‌, ಬ್ಯಾಕ್ಟೀರಿಯಾಗಳಿಂದ ತಲುಲಿದ ಸೋಂಕು, ಮೂಗಿನಲ್ಲಿ ಗಡ್ಡೆ ಬೆಳೆದಿರುವುದು ಸಹ ವಿಒಸಿ ಕಡಿಮೆ ಸಾಂದ್ರತೆಯಿಂದ ತಿಳಿಯುತ್ತದೆ' ಎಂದು ಪ್ರೊ.ಸಿಂಥಿಯಾ ಒಟ್ಟೊ ಹೇಳಿದ್ದಾರೆ.

ಆರಂಭದಲ್ಲಿ ಎಂಟು ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ವಾರಗಳ ತರಬೇತಿಯಲ್ಲಿ ಶ್ವಾನಗಳನ್ನು ಕೋವಿಡ್‌–19 ಪಾಸಿಟಿವ್‌ ಇರುವ ಗಂಟಲು ದ್ರವ ಹಾಗೂ ಮೂತ್ರ ಮಾದರಿಗಳ ವಾಸನೆ ಗ್ರಹಿಸುವುದಕ್ಕೆ ಒಳಪಡಿಸಲಾಗುತ್ತದೆ. ವಾಸನೆ ಗ್ರಹಿಸುವುದನ್ನು ಕಲಿತ ನಂತರದಲ್ಲಿ ಕೋವಿಡ್‌–19 ಪಾಸಿಟಿವ್‌ ಮತ್ತು ನೆಗೆಟಿವ್‌ ಮಾದರಿಗಳ ನಡುವೆ ವ್ಯತ್ಯಾಸ ಸೂಕ್ತ ರೀತಿಯಲ್ಲಿ ಪತ್ತೆ ಮಾಡುವುದನ್ನು ಗಮನಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.