ADVERTISEMENT

ಉಪಗ್ರಹಗಳ ಬೇರ್ಪಡುವಿಕೆ ಯಶಸ್ವಿ: ಇಸ್ರೊ

ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ‘ಪಿಎಸ್‌ಎಲ್‌ವಿ ಸಿ60’ ರಾಕೆಟ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 13:46 IST
Last Updated 31 ಡಿಸೆಂಬರ್ 2024, 13:46 IST
ಎಸ್‌.ಸೋಮನಾಥ್
ಎಸ್‌.ಸೋಮನಾಥ್   

ಶ್ರೀಹರಿಕೋಟಾ: ಅಂತರಿಕ್ಷದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ (ಸ್ಪೇಸ್‌ ಡಾಕಿಂಗ್) ಯೋಜನೆಯಾದ ‘ಸ್ಪೇಡೆಕ್ಸ್’ನಡಿ, ಪ್ರಾತ್ಯಕ್ಷಿಕೆ ಉದ್ದೇಶದಿಂದ ಸಂಸ್ಥೆ ಉಡ್ಡಯನ ಮಾಡಿದ್ದ ಎರಡು ಉಪಗ್ರಹಗಳು ಯಶಸ್ವಿಯಾಗಿ ಬೇರ್ಪಟ್ಟಿದ್ದು, ಅವುಗಳನ್ನು ನಿಗದಿತ ಕಕ್ಷೆಗೆ ಸೋಮವಾರ ತಡರಾತ್ರಿ ಸೇರಿಸಲಾಗಿದೆ ಎಂದು ಇಸ್ರೊ ಹೇಳಿದೆ.

‘ಪಿಎಸ್‌ಎಲ್‌ವಿ ಸಿ60 ರಾಕೆಟ್‌ ಒಳಗೊಂಡ ಸ್ಪೇಡೆಕ್ಸ್ ಯೋಜನೆಯ ‘ಸ್ಪೇಡೆಕ್ಸ್‌ ಎ’ ಮತ್ತು ‘ಸ್ಪೇಡೆಕ್ಸ್‌ ಬಿ’ ಉಪಗ್ರಹಗಳನ್ನು ಬೇರ್ಪಡಿಸುವ ಕಾರ್ಯ ಯಶಸ್ವಿಯಾಗಿದೆ’ ಎಂದು ಯೋಜನೆ ನಿರ್ದೇಶಕ ಎಂ.ಜಯಕುಮಾರ್‌ ಹೇಳಿದ್ದಾರೆ.

‘ಈ ಎರಡು ಉಪಗ್ರಹಗಳನ್ನು ಹೊತ್ತ ರಾಕೆಟ್‌ (ಪಿಎಸ್‌ಎಲ್‌ವಿ ಸಿ60), 15 ನಿಮಿಷಗಳಷ್ಟು ಪಯಣದ ಬಳಿಕ, 475 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಈ ಉಪಗ್ರಹಗಳನ್ನು ಸೇರಿಸಿತು’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

ADVERTISEMENT

‘ಕೆಲ ಸಮಯದ ನಂತರ, ಈ ಉಪಗ್ರಹಗಳು ‍ಪರಸ್ಪರ 20 ಕಿ.ಮೀ.ನಷ್ಟು ದೂರ ಚಲಿಸಿದ ಬಳಿಕ ಮರುಜೋಡಣೆ (ಡಾಕಿಂಗ್‌) ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದ್ದಾರೆ.

‘ಈ ‘ಡಾಕಿಂಗ್’ ವಾರದೊಳಗೆ ಆರಂಭವಾಗಲಿದೆ. ಜನವರಿ 7ರ ಹೊತ್ತಿಗೆ ಈ ಪ್ರಕ್ರಿಯೆ ನಡೆಯಲಿದೆ’ ಎಂದು ಮಿಷನ್‌ ಕಂಟ್ರೋಲ್‌ ಸೆಂಟರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

‘ವಿವಿಧ ಸ್ಟಾರ್ಟ್‌ಅಪ್‌ಗಳು, ಉದ್ದಿಮೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಸಿದ್ಧಪಡಿಸಿರುವ ಪೇಲೋಡ್‌ಗಳನ್ನು ಒಳಗೊಂಡ ‘ಪಿಒಇಎಮ್–4’ ಈ ಯೋಜನೆಯ ಮುಖ್ಯ ಭಾಗ’ ಎಂದೂ ಸೋಮನಾಥ್‌ ಹೇಳಿದ್ದಾರೆ.

ಬೆಂಗಳೂರಿನ ಎಟಿಎಲ್‌ನಲ್ಲಿ ಉಪಗ್ರಹಗಳ ನಿರ್ಮಾಣ

ನವದೆಹಲಿ: ‘ಸ್ಪೇಡೆಕ್ಸ್’ ಬಾಹ್ಯಾಕಾಶ ಯೋಜನೆಯ ‘ಡಾಕಿಂಗ್’ ಪ್ರಯೋಗದ ಉಪಗ್ರಹಗಳಾದ ‘ಚೇಸರ್’ (ಸ್ಪೇಡೆಕ್ಸ್‌ ಎ) ಹಾಗೂ ‘ಟಾರ್ಗೆಟ್’(ಸ್ಪೇಡೆಕ್ಸ್‌  ಬಿ)ಅನ್ನು ಇದೇ ಮೊದಲ ಬಾರಿಗೆ ದೇಶೀಯ ಉದ್ಯಮವೊಂದು ಸಂಸ್ಥೆಯ ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ನಿರ್ಮಿಸಿದೆ ಎಂದು ಇಸ್ರೊ ಹೇಳಿದೆ.

ಈ ಉಪಗ್ರಹಗಳನ್ನು ಬೆಂಗಳೂರಿನ ಅನಂತ ಟೆಕ್ನಾಲಜೀಸ್‌ ಲಿಮಿಟೆಡ್‌(ಎಟಿಎಲ್) ನಿರ್ಮಿಸಿ ಪರೀಕ್ಷೆಗೆ ಒಳಪಡಿಸಿದೆ. ಈ ಉಪಗ್ರಹಗಳು ತಲಾ 220 ಕೆ.ಜಿ. ತೂಕ ಹೊಂದಿವೆ.

‘ಈವರೆಗೆ ದೊಡ್ಡ ಉಪಗ್ರಹಗಳನ್ನು ಉದ್ಯಮಗಳು ನಿರ್ಮಿಸಿಲ್ಲ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಕ್ಷೇತ್ರದ ಉದ್ಯಮವೊಂದು ಇಂತಹ ಕಾರ್ಯ ಮಾಡಿದೆ’ ಎಂದು ಯು.ಆರ್‌.ರಾವ್ ಉಪಗ್ರಹ ಕೇಂದ್ರ (ಯುಆರ್‌ಎಸ್‌ಸಿ) ನಿರ್ದೇಶಕ ಎಂ.ಶಂಕರನ್ ಹೇಳಿದ್ದಾರೆ.

ಬೆಂಗಳೂರಿನ ಕೆಐಎಡಿಬಿ ಏರೋಸ್ಪೇಸ್‌ ಪಾರ್ಕ್‌ನಲ್ಲಿರುವ ಎಟಿಎಲ್‌ ಘಟಕದಲ್ಲಿ ಉಪಗ್ರಹಗಳ ಜೋಡಣೆ ಹಾಗೂ ಪರೀಕ್ಷೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.