ADVERTISEMENT

ವಿಶ್ವದ ರಹಸ್ಯಕ್ಕೆ ಕ್ಷುದ್ರಗ್ರಹಗಳು ಕೀಲಿ ಕೈ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:33 IST
Last Updated 19 ಸೆಪ್ಟೆಂಬರ್ 2019, 19:33 IST
Asteroid
Asteroid   

ನಮ್ಮ ಸೌರವ್ಯೂಹದಲ್ಲಿ ಗ್ರಹಗಳು, ಉಪಗ್ರಹಗಳು, ಧೂಮಕೇತುಗಳು ಹಾಗೂ ಕ್ಷುದ್ರಗ್ರಹಗಳೆಂಬ ದೊಡ್ಡ ದೊಡ್ಡ ಕಲ್ಲುಬಂಡೆಗಳಿವೆ. ಇವು ಮಂಗಳ ಮತ್ತು ಗುರುಗ್ರಹಗಳ ನಡುವೆ ಮಿಲಿಯನ್‌ಗಟ್ಟಲೇ ಇವೆ ಎಂದು ಗೊತ್ತಾಗಿದೆ. ರಾತ್ರಿಯ ಸಮಯದಲ್ಲಿ ಆಕಾಶದಿಂದ ಭೂಮಿಯ ಕಡೆಗೆ ಬೀಳುವ ಅಸಂಖ್ಯಾತ ಕ್ಷುದ್ರಗ್ರಹಗಳು ವಿಶ್ವದ ರಹಸ್ಯಕ್ಕೆ ಕೀಲಿ ಕೈ ಆಗಿದ್ದು, ವಿಶ್ವದ ಹುಟ್ಟಿನ ರಹಸ್ಯವನ್ನು ಬಯಲುಮಾಡುತ್ತವೆ. ಹೀಗೆಂದರೆ ಆಶ್ಚರ್ಯವಾಗುತ್ತದೆಯಲ್ಲವೇ?

ರಾತ್ರಿಯ ವೇಳೆ ಆಕಾಶವೀಕ್ಷಣೆ ಮಾಡುತ್ತಿರುವಾಗ ಕ್ಷಣಮಾತ್ರದಲ್ಲಿ ಮಿಂಚಿ ಮಾಯಾಗುವ ಬೆಂಕಿಯುಂಡೆಗಳು ಪ್ರಜ್ವಲಿಸುತ್ತಾ ಧರೆಯ ಕಡೆಗೆ ಬೀಳುವುದನ್ನು ನೋಡಬಹುದು. ಇಂತಹ ಆಕಾಶಕಾಯಗಳನ್ನು ‘ಉಲ್ಕೆಗಳು’ ಎನ್ನುವರು. ಅವು ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕು ಭರದಿಂದ ಭೂಮಿಯ ಕಡೆ ಧಾವಿಸುವಾಗ ವಾತಾವರಣದಲ್ಲಿರುವ ಅನಿಲಗಳ ಘರ್ಷಣೆಯಿಂದ ಬಹುಪಾಲು ಉಲ್ಕೆಗಳು ಉರಿದುಹೋಗುವುದು. ಇಂತಹ ಕ್ಷುದ್ರಗ್ರಹಗಳು ಅಥವಾ ಉಲ್ಕೆಗಳ ಅಧ್ಯಯನಕ್ಕಾಗಿಯೇ ಅನೇಕ ನೌಕೆಗಳು ಕಾರ್ಯತತ್ಪರವಾಗಿವೆ.

‘ಗ್ಯಾಸ್ಟ್ರ’ ಎಂಬ ಕ್ಷುದ್ರಗ್ರಹವನ್ನು 1991ರಲ್ಲಿ ಗೆಲಿಲಿಯೋ ನೌಕೆ ತುಂಬಾ ಸಮೀಪದಿಂದ ಸರೆಹಿಡಿದಿತ್ತು. ಆಜುಬಾಜಿನಲ್ಲಿ ‘ಇಡಾ’ ಎಂಬ ಇನ್ನೊಂದು ಕ್ಷುದ್ರಗ್ರಹವನ್ನೂ, ನಂತರ 2007ರಲ್ಲಿ ನಾಸಾದ ‘ಡಾನ್’ ಉಪಗ್ರಹವು ‘ವೆಸ್ಟ್’ ಎಂಬ ಕ್ಷುದ್ರಗ್ರಹದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಿತ್ತು. ಈಗ ಖಗೋಳ ವಿಜ್ಞಾನಿಗಳ ಗಮನ ‘ಸೈಕೆಯಾ’ ಎಂಬ ಕ್ಷುದ್ರಗ್ರಹದ ಮೇಲಿದೆ. ಈ ಕ್ಷುದ್ರಗ್ರಹವು ಸಾಕಷ್ಟು ಪ್ರಮಾಣದ ಕಬ್ಬಿಣದಿಂದಲೇ ರೂಪಿತವಾಗಿದೆ ಎಂಬುದು ಎಲ್ಲರ ಗಮನ ಸೆಳೆದಿದೆ.

ADVERTISEMENT

200ಮೀ ಅಗಲವಿರುವ ಈ ಕ್ಷುದ್ರಗ್ರಹವನ್ನು ಅಭ್ಯಸಿಸಲು ಇದೇ ಕ್ಷುದ್ರಗ್ರಹದ ಹೆಸರಿನಲ್ಲಿ ವ್ಯೋಮನೌಕೆಯನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿದ್ದು, ಎಲ್ಲಾ ಕ್ಷುದ್ರಗ್ರಹಗಳ ಒಂದು ಭಾಗದ ದ್ರವ್ಯವೇ ಅದರಲ್ಲಿ ಅಡಕವಾಗಿದೆಯಂತೆ. ಸೈಕೆಯಾ ಕ್ಷುದ್ರಗ್ರಹವು ಎಷ್ಟು ಸಾಂದ್ರತೆ ಹೊಂದಿದೆ ಎಂದರೆ, ಇದರ ಗುರುತ್ವಾಕರ್ಷಣ ಬಲದಿಂದ ನೆರೆಹೊರೆಯ ಚಿಕ್ಕಪುಟ್ಟ ಕ್ಷುದ್ರಗ್ರಹಗಳು ಅಲ್ಲಾಡುತ್ತಿವೆಯಂತೆ. ಇದರ ಆಕಾರ, ಗೋಳಾಕಾರಕ್ಕೆ ತುಂಬಾ ಸಮೀಪವಿದೆಯಂತೆ.

ಹೊಳೆಯುವ ಈ ಕ್ಷುದ್ರಗ್ರಹವನ್ನು ನಮ್ಮ ಸೌರವ್ಯೂಹದ ಬೇರೆ ಬೇರೆ ಆಕಾಶಕಾಯಗಳು ಉಜ್ಜಿಕೊಂಡು ಹೋಗಿವೆಯಂತೆ. ವಿಜ್ಞಾನಿಗಳ ಆಶಯದಂತೆ ಈ ‘ಸೈಕೆಯಾ’ ಕ್ಶುದ್ರಗ್ರಹದಿಂದ ಹೊಸ ಮಾಹಿತಿ ಏನಾದರೂ ಸಿಕ್ಕಿದಲ್ಲಿ ಬ್ರಹ್ಮಾಂಡದಲ್ಲಿ ಅಡಗಿರುವ ಬಹುತೇಕ ರಹಸ್ಯಗಳು ತೆರೆದುಕೊಳ್ಳಲಿವೆ. ಇಂತಹ ಅಪಾಯಕಾರಿ ಕ್ಷುದ್ರಗ್ರಹಗಳು ಭೂಮಿಯ ಕಡೆ ವೇಗವಾಗಿ ಅಪ್ಪಳಿಸುವುದರಿಂದ ಭೂಮಿಯ ವಾತಾವರಣದಲ್ಲಿ ಏರುಪೇರಾಗಬಹುದು.

ಮಂಗಳ ಮತ್ತು ಗುರುಗ್ರಹಗಳ ನಡುವೆ ಅದೆಷ್ಟು ಅಪಾಯಕಾರಿ ಬೃಹತ್ ಕ್ಷುದ್ರಗ್ರಹಗಳು ಇವೆಯೋ? ಏನೋ? ಆಗಾಗ್ಗೆ ಭೂಮಿಯ ಕಡೆ ಅಪ್ಪಳಿಸುವ ಕ್ಷುದ್ರಗ್ರಹಗಳು ಭೂಮಿಗೆ ಇನ್ನೂ ಎಂತಹ ಅಪಾಯವನ್ನು ತಂದೊಡ್ಡುತ್ತವೆಯೋ‌? ವೆಸ್ಟಾ, ಸಿರೆಸ್‌ನಂಥ ಇನ್ನೂ ಅನೇಕ ಕ್ಷುದ್ರಗ್ರಹಗಳಿದ್ದು, ಅವುಗಳ ಮೈಮೇಲೆ ಸಿಡುಬಿನ
ಕಲೆಗಳಂತಿರುವ ದೊಡ್ಡ ದೊಡ್ಡ ಕಂದಕಗಳು ಎದ್ದು ಕಾಣುತ್ತವೆ.

ಕ್ಷುದ್ರಗ್ರಹಗಳ ಅಧ್ಯಯನದಿಂದ ಸೌರವ್ಯೂಹ ಹೇಗೆ ರೂಪುಗೊಂಡಿತು? ಸೌರವ್ಯೂಹದ ಸದಸ್ಯರು ಕ್ರಮೇಣವಾಗಿ ರೂಪುಗೊಂಡ ಬಗೆ ನಿಜವಾಗಿಯೂ ಕುತೂಹಲಕಾರಿಯಾಗಿದೆ. ಇಷ್ಟರಲ್ಲೇ ಸೌರವ್ಯೂಹದ ಗ್ರಹಗಳ ಒಳಗೆ ಏನೆಲ್ಲಾ ಅಡಗಿದೆ? ಎಂಬುದನ್ನು ತಿಳಿಯಲು ಕಾಯಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.