ADVERTISEMENT

Artificial Embryo Sac: ಕೃತಕ ಭ್ರೂಣಚೀಲ

ಕೊಳ್ಳೇಗಾಲ ಶರ್ಮ
Published 20 ಮೇ 2025, 23:23 IST
Last Updated 20 ಮೇ 2025, 23:23 IST
   

ಭ್ರೂಣವು ಒಣಗದಂತೆ ಕಾಯುವ ಚೀಲವನ್ನು ಕೃತಕವಾಗಿ ಸೃಷ್ಟಿಸಬಹುದೇ?

ಮನುಷ್ಯನ ಹುಟ್ಟೇ ವಿಚಿತ್ರ. ಒಂದು ಪುಟ್ಟ ಜೀವಕೋಶದಿಂದ ಆರಂಭಿಸಿ, ಕೋಟ್ಯಂತರ ಸಂಖ್ಯೆಯ ಜೀವಿಯಾಗಿ ಬೆಳೆಯುವುದಲ್ಲದೆ, ನೂರಾರು ಬಗೆಯ ಕೋಶಗಳೂ ಹುಟ್ಟುವ ಕ್ರಿಯೆ ಇದೆ. ಒಂಬತ್ತು ತಿಂಗಳ ಕಾಲ ನಡೆಯುವ ಈ ಕ್ರಿಯೆ ನೂರಾರು ಅಡ್ಡಿ, ಆತಂಕಗಳನ್ನು ದಾಟಿ ಬಂದ ಮೇಲೆಷ್ಟೆ ಹೆರಿಗೆ ಅಥವಾ ಹುಟ್ಟು ಆಗುತ್ತದೆ. ಆರಂಭದಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ಅಡ್ಡಿ-ಆತಂಕಗಳಿಂದ ಕಾಯುವ ಭ್ರೂಣಚೀಲದ ಮಾದರಿಯನ್ನು ಈಗ ಕೃತಕವಾಗಿಯೂ ಬೆಳೆಸಬಹುದಂತೆ.

ಇಂಗ್ಲೆಂಡಿನ ಫ್ರಾನ್ಸಿಸ್‌ ಕ್ರಿಕ್‌ ಸಂಶೋಧನಾಲಯದಲ್ಲಿ ಸ್ಟೆಮ್‌ ಸೆಲ್‌ ಸಂಶೋಧನೆಯಲ್ಲಿ ತೊಡಗಿರುವ ಬೋರ್ಜೋ ಘರೀಬಿ ಮತ್ತು ಸಿಲ್ವಿಯಾ ಸಾಲ್ವೋಸ್‌ ಭ್ರೂಣಗಳಿಂದ ಹೆಕ್ಕಿದ ಆಕರಕೋಶ ಅಥವಾ ಸ್ಟೆಮ್‌ ಸೆಲ್‌ಗಳನ್ನು ಬಳಸಿಕೊಂಡು ಮನುಷ್ಯರ ಭ್ರೂಣದ ಹೊರಗೆ ಇರುವ ಪಾರದರ್ಶಕವಾದ ಆದರೆ ಜೀವಂತವಾದ ಪೊರೆಯಂಥದ್ದೇ ಪೊರೆಯನ್ನು ಬೆಳೆಸಿದ್ದಾರಂತೆ. ಒಂದು ತಿಂಗಳ ಗರ್ಭಾವಸ್ಥೆಯಲ್ಲಿ ಕಾಣುವ ಭ್ರೂಣದ ಚೀಲವನ್ನೇ ಹೋಲುವ ಪೊರೆ ಇದು. ಹಾಗೂ ಇಷ್ಟು ಬೆಳೆದ ಪೊರೆಯನ್ನು ಇದುವರೆವಿಗೂ ತಾಯಿಯ ಗರ್ಭದಿಂದ ಹೊರಗೆ ಬೆಳೆಸಲು ಸಾಧ್ಯವೇ ಆಗಿರಲಿಲ್ಲ ಎನ್ನುವುದು ವಿಶೇಷ.

ADVERTISEMENT

‘ಆಮ್ನಿಯಾನ್‌’ ಎಂದು ವಿಜ್ಞಾನಿಗಳು ಹೆಸರಿಸುವ ಈ ಪೊರೆ ಗರ್ಭದಲ್ಲಿ, ಭ್ರೂಣವನ್ನು ಆವರಿಸಿಕೊಂಡು ಬೆಳೆಯುತ್ತದೆ. ಸಂಪೂರ್ಣ ಪಾರದರ್ಶಕವಾಗಿರುವ ಇದು ಭ್ರೂಣವು ಬೆಳೆಯುತ್ತಿದ್ದಂತೆ, ಅದರೊಟ್ಟಿಗೇ ಬಲೂನಿನಂತೆ ಉಬ್ಬುತ್ತಾ ಹೋಗುತ್ತದೆ. ಬಲೂನಿನೊಳಗೆ ಭ್ರೂಣದಿಂದ ಸುರಿದ ಮೂತ್ರ, ಶ್ವಾಸಕೋಶದಿಂದ ಹೊಮ್ಮಿದ ಲೋಳೆ ಮೊದಲಾದ ರಸಗಳು ಸಂಗ್ರಹವಾಗುತ್ತವೆ. ಒಂಬತ್ತು ತಿಂಗಳ ಕಾಲ ಈ ದ್ರವದಲ್ಲಿಯೇ ಮುಳುಗಿ ಭ್ರೂಣ ಬೆಳೆಯುತ್ತದೆ. ಈ ದ್ರವ ಹಾಗೂ ಚೀಲ ಭ್ರೂಣಕ್ಕೆ ಏಟು ಬೀಳದಂತೆ ಕಾಪಾಡುವುದಲ್ಲದೆ, ತಾಯಿಯ ಗರ್ಭಕೋಶ ಹಾಗೂ ಭ್ರೂಣದ ನಡುವಿನ ಸೇತುವೆಯಾಗಿಯೂ ಇರುತ್ತವೆ. ಭ್ರೂಣವು ರೂಪುಗೊಳ್ಳುವ ಮೊದಲ ಎರಡು ವಾರಗಳಲ್ಲಿ, ಅದಕ್ಕೆ ಆಹಾರವನ್ನೂ ಚೀಲದ ಅಂಗವೇ ಒದಗಿಸುತ್ತದೆ.

ಇಷ್ಟೊಂದು ಪ್ರಮುಖವಾದ ಅಮ್ನಿಯಾನಿನ ಬಗ್ಗೆ ನಮಗೆ ತಿಳಿದಿರುವುದು ಕಡಿಮೆ ಎಂದೇ ಹೇಳಬೇಕು. ಆದರೆ ಇದು ಬೆಳೆಯುತ್ತಿರುವ ಬಸಿರಿನ ಆರೋಗ್ಯವನ್ನು ಸೂಚಿಸುವ ವಸ್ತು ಕೂಡ. ಅಮ್ನಿಯಾನಿನಲ್ಲಿರುವ ದ್ರವದ ಪ್ರಮಾಣ, ಸ್ವರೂಪವನ್ನು ಅಂದಾಜಿಸಿ, ಭ್ರೂಣದ ಬೆಳೆವಣಿಗೆ ಸರಿಯಾಗಿದೆಯೋ ಇಲ್ಲವೋ ಎಂದು ವೈದ್ಯರು ಪತ್ತೆ ಮಾಡುವುದುಂಟು. ಇದಕ್ಕಾಗಿಯೇ ಬಸುರಿನ ವಿವಿಧ ಹಂತಗಳಲ್ಲಿ ಅಲ್ಟ್ರಾಸೌಂಡ್‌ ಸ್ಕ್ಯಾನ್‌ ಮಾಡುತ್ತಾರೆ. ಅಮ್ನಿಯಾನಿನೊಳಗೆ ಇರುವ ದ್ರವದಲ್ಲಿ ತೇಲಾಡುವ ಜೀವಕೋಶಗಳು ಭ್ರೂಣದಲ್ಲಿ ಇರಬಹುದಾದ ಆನುವಂಶಿಕ ಕಾಯಿಲೆಗಳನ್ನು ಮುಂದಾಗಿಯೇ ತಿಳಿಸಬಲ್ಲುವು.

ಅಮ್ನಿಯಾನು ಜೀವಕೋಶಗಳ ಎರಡು ಪದರಗಳಿರುವ ಚೀಲ. ಎರಡು ಪದರಗಳಲ್ಲಿ ಒಳಗಿನದು ಭ್ರೂಣದ ಚರ್ಮದ ಮೂಲವಾದ ಕೋಶಗಳಿಂದ ಬೆಳೆಯುತ್ತದೆ. ಮತ್ತೊಂದು ಭ್ರೂಣದ ಹೊರಗಿರುವ ಕೆಲವು ಜೀವಕೋಶಗಳಿಂದ ಜನಿಸುತ್ತದೆ. ಹೀಗಾಗಿ ಇದನ್ನು ಭ್ರೂಣದ ಅಂಗವೆಂದು ವಿಜ್ಞಾನಿಗಳು ಪರಿಗಣಿಸುವುದಿಲ್ಲ. ಆದರೆ ಈ ಪೊರೆಗಳ ಜನನ ಹೇಗಾಗುತ್ತದೆ ಎಂದು ತಿಳಿಯಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಪೊರೆಯಲ್ಲಿ ಕಂಡಂತಹ ವಿವಿಧ ಜೀವಕೋಶಗಳನ್ನು ಬೆರೆಸಿ, ಅವು ಪೊರೆಯಾಗುತ್ತವೆಯೋ ಎಂಬ ಪ್ರಯೋಗಗಳು ಅಲ್ಪ ಯಶಸ್ಸು ಕಂಡಿದ್ದುವು. ಒಂದು ಅಥವಾ ಎರಡು ವಾರಗಳಷ್ಟು ಬೆಳೆದ ಭ್ರೂಣಗಳಲ್ಲಿ ಕಾಣುವ ಪೊರೆಗಳಂತಹ ಪೊರೆಗಳನ್ನು ಬೆಳೆಸಲಾಗಿತ್ತು. ಆದರೆ ಅವು ಯಾವುವೂ ಬೆಲೂನಿನಂತೆ ಚೀಲದ ರೂಪದಲ್ಲಿರಲಿಲ್ಲ. ಬಹುಮಟ್ಟಿಗೆ ತೆಳುಹಾಳೆಗಳಂತಹ ಪೊರೆಗಳನ್ನು ಹುಟ್ಟಿಸಿದ್ದುವು.

ಘರೀಬಿ ಅವರ ತಂಡ ಈಗ ಚೆಂಡಿನಂತೆಯೇ ಇರುವ ಪುಟ್ಟ ಚೀಲಗಳನ್ನು ಬೆಳೆಸಿದೆ. ಸಾಮಾನ್ಯವಾಗಿ ಹಾಳೆಗಳಲ್ಲದ ಆಕಾರದಲ್ಲಿ ಅಂಗಗಳನ್ನು ಬೆಳೆಸಬೇಕೆಂದರೆ ಕೃತಕವಾದ ಹಂದರವೊಂದನ್ನು ಬಳಸುತ್ತಾರೆ. ಚಪ್ಪರವನ್ನು ಆತುಕೊಂಡು ಬಳ್ಳಿಗಳು ಬೆಳೆಯುವ ಹಾಗೆ, ಈ ಹಂದರದ ಆಸರೆಯಲ್ಲಿ ಜೀವಕೋಶಗಳು ಸಂಖ್ಯೆಯಲ್ಲಿ ಬೆಳೆಯುತ್ತಾ, ವಿವಿಧ ಆಕಾರದ ಅಂಗಗಳಾಗುತ್ತವೆ. ಆದರೆ ಘರೀಬಿ ಅವರ ತಂಡ ರೂಪಿಸಿರುವ ತಂತ್ರದಲ್ಲಿ, ಜೀವಕೋಶಗಳು ತಮ್ಮಂತಾವೇ ಚೀಲವಾಗಿ ರೂಪಿಸಿಕೊಂಡು ಬಿಡುತ್ತವೆ. ಇದು ಕೇವಲ ಆಕಸ್ಮಿಕವಲ್ಲ. ಇಂತಹ ಚೀಲಗಳನ್ನು ಎಷ್ಟು ಬೇಕಿದ್ದರೂ ತಯಾರಿಸಬಹುದು ಎಂದು ಘರೀಬೀ ತಂಡ ನಿರೂಪಿಸಿದೆ. ಇದಕ್ಕಾಗಿ ಇವರು ಭ್ರೂಣಗಳಲ್ಲಿ ಇರುವ ಆಕರಕೋಶಗಳನ್ನು ಹೆಕ್ಕಿ, ಅವನ್ನು ಪ್ರಯೋಗಾಲಯದಲ್ಲಿ ಬೆಳೆಸಿದರು. ಮೊದಲು ಅವನ್ನು ‘ಬಿಎಂಪಿ 4’ ಎನ್ನುವ ನಿರ್ದಿಷ್ಟವಾದೊಂದು ರಾಸಾಯನಿಕದಿಂದ ಪ್ರಚೋದಿಸಿ, ಒಂದು ದಿನದ ಮಟ್ಟಿಗೆ ಬೆಳೆಯಲು ಬಿಟ್ಟರು. ನಂತರ ‘ಸಿಎಚ್‌ಐಆರ್‌’ ಎನ್ನುವ ಮತ್ತೊಂದು ರಾಸಾಯನಿಕದಿಂದ ಪ್ರಚೋದಿಸಿದರು. ಈ ರಾಸಾಯನಿಕಗಳನ್ನು ಘಟಕಗಳು ಎನ್ನುತ್ತಾರೆ. ಇವು ಬೆಳೆಯುತ್ತಿರುವ ಕೋಶಗಳಲ್ಲಿ ನಿರ್ದಿಷ್ಟ ಗುಣಗಳನ್ನು ಉಂಟುಮಾಡುತ್ತವೆ. ಎರಡೇ ದಿನಗಳಲ್ಲಿ ಈ ಜೀವಕೋಶಗಳು ಎರಡು ಪದರಗಳಾಗಿ ಒಟ್ಟಿಗೇ ಬೆಳೆದುವಲ್ಲದೆ, ಒಳಭಾಗದಲ್ಲಿ ಸ್ವಲ್ಪ ದ್ರವವನ್ನೂ ಕೂಡಿಸಿಕೊಂಡಿದ್ದುವು.


ಇಂತಹ ಪುಟ್ಟ ಚೀಲಗಳ ಬೆಳೆವಣಿಗೆಯ ರೀತಿಯನ್ನು ಘರೀಬೀ ತಂಡ ಹಲವು ವಾರಗಳ ಕಾಲ ಗಮನಿಸಿತು. ಚೀಲದೊಳಗೆ ಕೂಡಿಕೊಂಡ ದ್ರವದಲ್ಲಿರುವ ಪ್ರೊಟೀನು ಹಾಗೂ ಇತರೆ ವಸ್ತುಗಳನ್ನು ವಿಶ್ಲೇಷಿಸಿತು. ಪದರಕೋಶಗಳಲ್ಲಿ ನಡೆಯುತ್ತಿರುವ ವಿವಿಧ ರಾಸಾಯನಿಕ ಚಟುವಟಿಕೆಗಳನ್ನೂ ಗುರುತಿಸಿತು. ಇವೆಲ್ಲವೂ ಸುಮಾರು ಒಂದು ತಿಂಗಳ ವಯಸ್ಸಿನ ಭ್ರೂಣವನ್ನು ಆವರಿಸಿರುವ ಭ್ರೂಣಚೀಲದಂತೆಯೇ ಇದ್ದುವು ಎನ್ನುತ್ತಾರೆ, ಘರೀಬೀ. ಇಷ್ಟು ವಯಸ್ಸಿನ ಭ್ರೂಣಚೀಲಗಳನ್ನು ಹೀಗೆ ಕೃತಕವಾಗಿ ಬೆಳೆಸಿದ್ದು ಇದೇ ಮೊದಲ ಬಾರಿ.

ಹಾಗಿದ್ದರೆ, ಇನ್ನೂ ಭ್ರೂಣಗಳನ್ನು ಗರ್ಭಾಶಯದ ಹೊರಗೇ ಬೆಳೆಸುವುದು ಸಾಧ್ಯವಾಗಬಹುದೇ? ಬಹುಶಃ ಈಗಲೇ ಅದು ಆಗಲಿಕ್ಕಿಲ್ಲ. ಏನಿದ್ದರೂ ಈ ಪುಟ್ಟ ಚೀಲಗಳು ಅಮ್ನಿಯಾನ್‌ ಪದರ ಹೇಗೆ ಬೆಳೆಯುತ್ತದೆ ಎನ್ನುವುದನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳಲು ನೆರವಾಗಬಹುದು. ಇದುವೂ ಮುಖ್ಯವೇ. ಏಕೆಂದರೆ, ಈ ಪೊರೆ ಇಲ್ಲದೇ ಇದ್ದರೆ ಬಹುಶಃ ಯಾವ ಭೂಜೀವಿಯ ಭ್ರೂಣವೂ ಬದುಕಿ ಉಳಿಯುತ್ತಿರಲಿಲ್ಲ; ಒಣಗಿ ನಷ್ಟವಾಗಿಬಿಡುತ್ತಿತ್ತು. ಹಾಗೆ ಮಾಡದೆ ಕಾಯುವ ಅಮ್ನಿಯಾನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು, ಪುಟ್ಟದಾದ ಈ ಕೃತಕ ಪೊರೆ ನೆರವಾಗಲಿದೆ ಎನ್ನುತ್ತದೆ, ಈ ಶೋಧದ ವಿವರಗಳನ್ನು ಪ್ರಕಟಿಸಿರುವ ‘ಸೆಲ್‌’ ಪತ್ರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.