ADVERTISEMENT

ದಂತ ಚಿಕಿತ್ಸೆಗೆ ಗುಳಿಗೆಯ ಗಳಿಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
<div class="paragraphs"><p>ದಂತ ಚಿಕಿತ್ಸೆ</p></div>

ದಂತ ಚಿಕಿತ್ಸೆ

   

‘ಜಾಸ್ತಿ ಚಾಕಲೇಟ್ ತಿನ್ನಬೇಡ, ಹಲ್ಲುಗಳು ಹಾಳಾಗುತ್ತವೆ’ – ಎಂಬ ಹಿರಿಯರ ಬುದ್ಧಿಮಾತನ್ನು ಚಿಕ್ಕವರಾಗಿ
ದ್ದಾಗಲೇ ಕೇಳಿದ್ದೇವು. ಆಗ ಅದರಿಂದ ನಮಗೆ ಭಯವೂ ಉಂಟಾಗಿದ್ದಿರಬಹುದು. ತಿನ್ನುವ ಆಹಾರದಲ್ಲಿ ಕ್ಯಾಲ್ಸಿಯಂ ಹಾಗೂ ಕೆಲವು ಜೀವಸತ್ವಗಳ ಕೊರತೆ ಇದ್ದಾಗ ಹಲ್ಲುಗಳು ಬಹುಬೇಗ ಶಿಥಿಲಗೊಂಡು ಹಾಳಾಗುತ್ತವೆ. ಶಿಥಿಲಗೊಂಡ ಹಲ್ಲುಗಳು ಅತೀವ ನೋವಿಗೂ ಕಾರಣವಾಗುತ್ತವೆ. ನೋವಿನಿಂದ ಮುಕ್ತಿ ಪಡೆಯಲು ಅಂತಿಮವಾಗಿ ಹಲ್ಲನ್ನು ಕೀಳಿಸಬೇಕಾಗುತ್ತದೆ. ಬಾಲ್ಯದಲ್ಲಿ ಒಮ್ಮೆ ಹಲ್ಲು ಬಿದ್ದು ಹೊಸ ಹಲ್ಲು ಹುಟ್ಟಿದ ನಂತರ ಯಾವುದೇ ಕಾರಣದಿಂದ ಮತ್ತೆ ಹಲ್ಲು ಬಿದ್ದರೆ ಅಥವಾ ಕೀಳಿಸಿದರೆ ಮತ್ತೆ ಹೊಸ ಹಲ್ಲು ಬೆಳೆಯಲಾರದು. ಹೀಗೆ ಹಲ್ಲನ್ನು ಕಿತ್ತಾಗ ಅಥವಾ ಬಿದ್ದಾಗ ವಸಡಿನ ಆ ಭಾಗದಲ್ಲಿ ಖಾಲಿ ಸ್ಥಳ ಉಳಿದು, ಆಹಾರ ಅಗಿಯುವುದು, ಮಾತನಾಡುವುದು ಮುಂತಾದ ಕ್ರಿಯೆಗಳಿಗೆ ತೊಡಕುಂಟಾಗುತ್ತದೆ. ಮುಖದ ಅಂದವೂ ಕೆಡುತ್ತದೆ. ಆಗ ದಂತವೈದ್ಯರಿಂದ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಳ್ಳಬೇಕಾಗುತ್ತದೆ. ಕೃತಕ ಹಲ್ಲಿನ ವಸಡುಗಳ ಭಾಗದಲ್ಲಿ ಅಕ್ರಿಲಿಕ್ (ಪಾಲಿಮೀಥೈಲ್ ಮೀಥಕ್ರಿಲೇಟ್) ಎಂಬ ವಸ್ತುವನ್ನು ಬಳಸಲಾಗುತ್ತದೆ. ಹಲ್ಲಿನ ಭಾಗದಲ್ಲಿ ಪಿಂಗಾಣಿ (ಪೋರ್ಸ್‍ಲೈನ್) ಹಲ್ಲುಗಳನ್ನು ಅಥವಾ ಕೋಬಾಲ್ಟ್-ಕ್ರೋಮಿಯಂ ಧಾತುಗಳಿಂದ ತಯಾರಿಸಿದ ಹಲ್ಲುಗಳನ್ನು ಸೇರಿಸಲಾಗುತ್ತದೆ. ಆದರೂ ಈ ಹಲ್ಲಿನ ಸೆಟ್ ನೈಸರ್ಗಿಕ ಹಲ್ಲುಗಳಷ್ಟು ಭದ್ರವಾಗಿರುವುದಿಲ್ಲ. ಕೆಲವೊಮ್ಮೆ ವಸಡಿನ ಭಾಗದಲ್ಲಿ ಒತ್ತುವುದರಿಂದ ಒಳಭಾಗದಲ್ಲಿ ಗಾಯಗಳಾಗಿ ನೋವುಂಟಾಗುವ ಸಾಧ್ಯತೆಯೂ ಇರುತ್ತದೆ.

ಕಳೆದ ಎರಡು ಮೂರು ದಶಕಗಳಿಂದ ಹೆಚ್ಚು ದೃಢವಾದ ಹಲ್ಲುಗಳನ್ನು ಕೃತಕವಾಗಿ ಜೋಡಿಸಲಾಗುತ್ತಿದೆ. ಈ ತಂತ್ರದಲ್ಲಿ ವಸಡಿನ ಒಳಭಾಗದ ದವಡೆ ಮೂಳೆಯನ್ನು ಸ್ವಲ್ಪ ಕೊರೆದು ಟೈಟಾನಿಯಂ ಸ್ಕ್ರೂವನ್ನು
ಅಳವಡಿಸಲಾಗುತ್ತದೆ. ಸ್ಕ್ರೂ ಮೂಳೆಯೊಂದಿಗೆ ಬೆರೆತು ಕೃತಕ ಬೇರಿನಲ್ಲಿ ಅದು ಬಲಗೊಳ್ಳಲು ಮೂರು–ನಾಲ್ಕು ತಿಂಗಳು ಕಾಯಬೇಕಾಗುತ್ತದೆ. ಅನಂತರ ಅದರ ಮೇಲೆ ಕಿರೀಟ ಅಥವಾ ಕ್ಯಾಪ್‍ಅನ್ನು (ಅಂದರೆ ಮೇಲ್ಭಾಗದಲ್ಲಿ ಕಾಣುವ ಬಿಳಿಬಣ್ಣದ ಹಲ್ಲು) ಜೋಡಿಸಲಾಗುತ್ತದೆ. ಈ ವಿಧಾನಕ್ಕೆ ‘ಡೆಂಟಲ್ ಇಂಪ್ಲಾಂಟೇಷನ್’ (ಹಲ್ಲನ್ನು ನಾಟಿ ಮಾಡುವುದು) ಎಂದು ಹೆಸರು. ಈ ವಿಧಾನದಲ್ಲಿ ಹಲ್ಲನ್ನು ನಾಟಿ ಮಾಡುವ ಅವಧಿ ಹಾಗೂ ವೆಚ್ಚ – ಎರಡೂ ಅಧಿಕ.

ADVERTISEMENT

ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ, ಹೊಸ ತಂತ್ರಗಳ ಆವಿಷ್ಕಾರವೂ ಆಗಿದೆ. ನಾವು ಈಗಾಗಲೇ ಇಂಥ ತಂತ್ರಗಳ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳುತ್ತಿದ್ದೇವೆ. ಹಾಗಾದರೆ ದಂತವೈದ್ಯಕೀಯ ಕ್ಷೇತ್ರದಲ್ಲಿ ಇಂಥ ಆವಿಷ್ಕಾರಗಳು ನಡೆಯುತ್ತಿಲ್ಲವೇ? ಖಂಡಿತ ನಡೆಯುತ್ತಿದೆ. ಇಂದಿನ ವಿಜ್ಞಾನಿಗಳು ಕೃತಕ ಹಲ್ಲುಗಳನ್ನು ನಾಟಿ ಮಾಡುವ ಬದಲು ಮಾನವ ದವಡೆಯಲ್ಲಿ ನಿಜವಾದ ಜೈವಿಕ ಹಲ್ಲುಗಳನ್ನು ಅಳವಡಿಸಲು ಅಥವಾ ಬೆಳೆಸಲು ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ವಿವಿಧ ಸಂಶೋಧನಾ ತಂಡಗಳು ವಿವಿಧ ಬಗೆಯ ಪ್ರಯತ್ನಗಳನ್ನು ನಡೆಸಿದ್ದಾರೆ.

ಲಂಡನ್ನಿನ ಕಿಂಗ್ಸ್ ಕಾಲೇಜಿನ ಪುನರುತ್ಪಾದಕ ದಂತವೈದ್ಯಶಾಸ್ತ್ರದ (ರಿಜನರೇಟೀವ್ ಡೆಂಟಿಸ್ಟ್ರಿ) ಸ್ನಾತಕೋತ್ತರ ಕಾರ್ಯಕ್ರಮದ ನಿರ್ದೇಶಕಿ ಅನಾ ಏಂಜೆಲೋವಾ ವೊಲ್ಪೊನಿ ಅವರ ಸಂಶೋಧನೆಯೊಂದು ಗಮನಾರ್ಹ. ಪ್ರಯೋಗಾಲಯದಲ್ಲಿ ಬೆಳೆದ ಹಲ್ಲುಗಳೊಂದಿಗೆ ಅವರು ಸುಮಾರು ಎರಡು ದಶಕಗಳಿಂದ ಪ್ರಯೋಗವನ್ನು ಮಾಡುತ್ತಿದ್ದಾರೆ. 2013ರಲ್ಲಿ ಅವರು ತಮ್ಮ ಸಂಗಡಿಗರೊಂದಿಗೆ ಮಾನವ ಮತ್ತು ಇಲಿ
ಕೋಶಗಳನ್ನು ಮಿಶ್ರಮಾಡಿ ಹಲ್ಲುಗಳನ್ನು ಬೆಳೆಸಲು ಪ್ರಯತ್ನಿಸಿದರು. ಈ ಮಿಶ್ರಕೋಶಗಳನ್ನು ಪ್ರಯೋಗಾಲಯದ ಕೃತಕ ಪರಿಸರದಲ್ಲಿ ಕೃತಕ ಪೋಷಕಾಂಶಗಳನ್ನು ನೀಡಿ ತನ್ಮೂಲಕ ಹಲ್ಲು ಬೆಳೆಸುವ ಪ್ರಯತ್ನ ಅವರದು. ಆರಂಭದ ಹಂತಗಳಲ್ಲಿ ಅವರ ಪ್ರಯತ್ನಗಳು ಫಲಕಾರಿಯಾಗಿಯೂ ಇದ್ದವು. ಈ ಜೀವಕೋಶಗಳಿಂದ ಹಲ್ಲು ಬೆಳೆಯಲಾರಂಭಿಸಿತು. ಆದರೆ ಅದಕ್ಕೆ ಸೂಕ್ತ ಆಕಾರ–ರಚನೆಗಳ ಗಡಸುತನಗಳು ಇರಲಿಲ್ಲ. ಹೀಗೆ ಬೆಳೆಸಿದ ಹಲ್ಲನ್ನು ಮಾನವನ ವಸಡಿನಲ್ಲಿ ಇರಿಸುವ ಪ್ರಯತ್ನವನ್ನು ಮಾಡಿದರು. ಆದರೆ, ಮಾನವಶರೀರದಲ್ಲಿ ಈ ಜೀವಕೋಶಗಳು ಹಲ್ಲನ್ನು ರೂಪಿಸುವುದರಲ್ಲಿ ವಿಫಲವಾದವು.

ಈ ಪ್ರಯೋಗಗಳಲ್ಲಿ ಅವರು ಬಾಯಿಯ ಒಳಭಾಗದಿಂದ ಕೆಲವು ವಯಸ್ಕ ವಸಡುಕೋಶಗಳನ್ನು ಪಡೆದರು. ಈ ಜೀವಕೋಶಗಳನ್ನು ಇಲಿಯ ಭ್ರೂಣದಿಂದ ತೆಗೆದ ಹಲ್ಲಿನ ಪೂರ್ವಜ (ಪ್ರೈಮಾರ್ಡಿಯಲ್) ಜೀವಕೋಶಗಳೊಂದಿಗೆ ಸಂಯೋಜಿಸಿದರು. ಹೀಗೆ ಸಂಯೋಜಿಸಿದ ಎರಡು ಬಗೆಯ ಹಲ್ಲುಗಳು ಒಂದಕ್ಕೊಂದು ಹೊಂದಿಕೊಂಡು ಪ್ರಯೋಗಾಲಯದ ಕೃತಕ ಪರಿಸರದಲ್ಲಿ ಹಲ್ಲನ್ನು ನಿರ್ಮಿಸತೊಡಗಿದವು. ಈ ಬಗೆಯ ಹಲ್ಲಿನ ಬೆಳವಣಿಗೆಗೆ ಹಂದರವೊಂದರ ಅಗತ್ಯವಿತ್ತು. ಆಗ ‘ವೊಲ್ಪೊನಿಯವರು ಕೊಲಾಜೆನ್’ ಎಂಬ ಪ್ರೊಟೀನ್‍ನಿಂದ ತಯಾರಿಸಿದ ಹಂದರವನ್ನು ಬಳಸಿದರು. ಆದರೆ ಕೊಲಾಜೆನ್‍ನಲ್ಲಿ ನೀರಿನ ಅಂಶ ಕಡಿಮೆ ಇರುವುದರಿಂದ ಅದೂ ಯಶಸ್ವಿಯಾಗಲಿಲ್ಲ.

ವೊಲ್ಪೊನಿಯವರ ಪ್ರಯೋಗಗಳಿಂದ ಪ್ರೇರಿತರಾದ ಅವರ ಡಾಕ್ಟರೇಟ್ ವಿದ್ಯಾರ್ಥಿ ಕ್ಸುಯೆಚೆನ್ ಜಾಂಗ್, ಕೊಲಾಜೆನ್ ಬದಲು ಹೆಚ್ಚಿನ ನೀರಿನ ಅಂಶವಿರುವ ಕೊಲಾಜೆನ್‍ಅನ್ನು ಹೋಲುವ ಆದರೆ ಹೆಚ್ಚು ನೀರಿನಂಶವುಳ್ಳ ಪಾಲಿಮರ್ (ಹೈಡ್ರೊಜೆಲ್) ಒಂದನ್ನು ಬಳಸಿದರು. ಇವರು ಮೊದಲು ಇಲಿಯ ಭ್ರೂಣಗಳಿಂದ ಜೀವಕೋಶಗಳನ್ನು ಸಂಗ್ರಹಿಸಿ ನಂತರ ಅವುಗಳನ್ನು ಮಾನವ ವಸಡಿನಿಂದ ಪಡೆದ ಕೋಶಗಳೊಂದಿಗೆ ಬೆರೆಸಿ ಸಣ್ಣ ಕೋಶಗುಳಿಗೆಯನ್ನು ತಯಾರಿಸಿದರು. ಈ ಕೋಶಗುಳಿಗೆಯನ್ನು ಹೈಡ್ರೋಜೆಲ್ ಒಳಗೆ ಚುಚ್ಚಿ ಸುಮಾರು ಎಂಟು ದಿನಗಳವರೆಗೆ ಬೆಳೆಸಿದರು. ಹೈಡ್ರೊಜೆಲ್ ಕವಚದ ಒಳಭಾಗದಲ್ಲಿ ಹಲ್ಲಿನಂತಹ ರಚನೆಗಳು ರೂಪುಗೊಂಡಿದ್ದವು. ಹಲ್ಲಿನ ಈ ಮೂಲರೂಪಗಳನ್ನು ಇಲಿಗಳಿಗೆ
ವರ್ಗಾಯಿಸಲಾಯಿತು. ಅಲ್ಲಿ ಅವು ಹಲ್ಲಿನ ಬೇರು ಮತ್ತು ಕಿರೀಟಗಳನ್ನು (ನಾವು ಕಾಣುವ ಹಲ್ಲಿನ ಹೊರಭಾಗ) ತಯಾರಿಸಿದವು.

ಸಂಶೋಧಕರಿಗೆ ಈಗ ಈ ಹಲ್ಲಿನ ಗುಳಿಗೆಗಳನ್ನು ಮಾನವನ ವಸಡಿಗೆ ಹೇಗೆ ಅಳವಡಿಸುವುದು ಎಂಬ ಪ್ರಶ್ನೆ ಎದುರಾಗಿದೆ. ವೊಲ್ವೋನಿ ಎರಡು ಮಾರ್ಗಗಳನ್ನು ಸೂಚಿಸಿದ್ದಾರೆ. ಮೊದಲನೆಯದು, ಹಾಳಾದ ಹಲ್ಲನ್ನು ಕಿತ್ತು ಅದರ ಕುಳಿಯಲ್ಲಿ ಕೋಶಗುಳಿಗೆಗಳನ್ನು ಸೇರಿಸಿ ಅಲ್ಲಿಯೇ ಅದು ಹಲ್ಲನ್ನು ಬೆಳೆಯುವಂತೆ ಪ್ರಚೋದಿಸುವುದು. ಎರಡನೆಯದು, ಹಲ್ಲುಗಳನ್ನು ಹೊರಭಾಗದಲ್ಲಿಯೇ ಬೆಳೆಸಿ ಅದನ್ನು ಕಿತ್ತ ಹಲ್ಲಿನ ಸ್ಥಳದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸುವುದು. ಈ ಎರಡು ವಿಧಾನಗಳಲ್ಲಿ ಯಾವುದು ಸೂಕ್ತ ಎಂಬುದನ್ನು ಇನ್ನೂ ನಿರ್ಣಯಿಸಲು ಸಾಧ್ಯವಾಗಿಲ್ಲ. ಅದಕ್ಕೆ ಇನ್ನೂ ಹಲವು ಬಗೆಯ ಚಿಕಿತ್ಸಕ ಪ್ರಯತ್ನಗಳು (ಕ್ಲಿನಿಕಲ್ ಟ್ರಯಲ್ಸ್) ನಡೆಯಬೇಕು.

ಇತ್ತೀಚೆಗೆ ವಾಷಿಂಗ್ಟನ್ ವಿಶ್ವವಿದ್ಯಾ‌ಲಯದಲ್ಲಿ, ಜೀವರಸಾಯನ ವಿಜ್ಞಾನದ ಪ್ರಾಧ್ಯಾಪಕಿ ಮತ್ತು ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್‌ ಫಾರ್ ಸ್ಟೆಮ್ ಸೆಲ್ ಮತ್ತು ಪುನರುತ್ಪಾದಕ ಔಷಧಶಾಸ್ತ್ರದ ಸಹಾಯಕ ನಿರ್ದೇಶಕಿ ಹ್ಯಾನೆಲೆ ರುಹೋಲಾ-ಬೇಕರ್ ನೇತೃತ್ವದ ತಂಡವು ಇನ್ನೊಂದು ಹೊಸ ತಂತ್ರವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವನ್ನು ನಡೆಸಿದೆ. ಕೋಶ ಗುಳಿಗೆಗಳನ್ನು ತಯಾರಿಸಿ ಆ ಮೂಲಕ ಹಲ್ಲನ್ನು ಬೆಳೆಸುವ ಬದಲು, ಮಾನವಶರೀರದಲ್ಲಿಯೇ ಇರುವ ದಂತತಿರುಳಿನ ಕಾಂಡಕೋಶಗಳನ್ನು (ಸ್ಟೆಮ್ ಸೆಲ್ಸ್ - ಇವು ಬೆಳವಣಿಗೆಯ ಹಂತದಲ್ಲಿಯೇ ಇರುವ ಜೀವಕೋಶಗಳು) ತೆಗೆದು ಪ್ರಯೋಗಾಲಯದ ಕೃತಕ ಪರಿಸರದಲ್ಲಿ ಬೆಳೆಸಿ ಅವುಗಳನ್ನು ವಸಡಿನಲ್ಲಿ ಅಳವಡಿಸುವುದು. ಈ ಪ್ರಯತ್ನಗಳಿಗೆ ಯಶಸ್ಸು ದೊರಕಿದರೆ ದಂತಚಿಕಿತ್ಸೆಗೆ ಹೊಸ ಆಯಾಮ ದೊರಕುತ್ತದೆ ಎಂದು ಊಹಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.