ADVERTISEMENT

Tattoos and Vaccination: ಹಚ್ಚೆಯನು ಮೆಚ್ಚದ ಲಸಿಕೆ!

ಹಚ್ಚೆಗೆ ಹಚ್ಚುವ ಶಾಯಿ ಲಸಿಕೆಯನ್ನು ಬಾಧಿಸುತ್ತದೆ.

ಕೊಳ್ಳೇಗಾಲ ಶರ್ಮ
Published 20 ಜನವರಿ 2026, 23:29 IST
Last Updated 20 ಜನವರಿ 2026, 23:29 IST
<div class="paragraphs"><p>Tattoos and Vaccination: ಹಚ್ಚೆಯನು ಮೆಚ್ಚದ ಲಸಿಕೆ!</p></div>

Tattoos and Vaccination: ಹಚ್ಚೆಯನು ಮೆಚ್ಚದ ಲಸಿಕೆ!

   

ಹಚ್ಚೆ ಗೊತ್ತಲ್ಲ? ಅಲಂಕಾರಕ್ಕೆಂದು ಶಾಯಿಯನ್ನು ಹಚ್ಚಿ ಚರ್ಮದ ಮೇಲೆ ಬರೆಯುವ ಚಿತ್ರಗಳು ಇವು. ಒಮ್ಮೆ ಹಚ್ಚಿದರೆ ಸುಲಭವಾಗಿ ಅಳಿಸದ ರಂಗೋಲಿ. ಈ ರಂಗೋಲಿಯ ಅಲಂಕಾರ ಕೆಲವೊಮ್ಮೆ ಅನಾನುಕೂಲಿಯೂ ಆಗಬಹುದಂತೆ. ಹಚ್ಚೆಗೆ ಹಚ್ಚುವ ಶಾಯಿ, ರೋಗಗಳಿಂದ ರಕ್ಷಣೆ ಪಡೆಯಲು ಬಳಸುವ ಲಸಿಕೆಗಳ ಪ್ರಭಾವವನ್ನು ಕಂದಿಸಬಹುದು, ಕೆಲವೊಮ್ಮೆ ಹೆಚ್ಚಿಸಲೂಬಹುದು – ಎಂದು ಜೆಕ್‌ ರಿಪಬ್ಲಿಕ್‌ನ ಪಶು ಸಂಶೋಧನಾ ಸಂಸ್ಥೆಯ ಸ್ಯಾಂಟಿಯಾಗೊ ಗೊಂಸಾಲೆಸ್‌ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ.

ಹಚ್ಚೆ ಎನ್ನುವುದು ಅನಾದಿಕಾಲದಿಂದ ರೂಢಿಯಲ್ಲಿರುವ ಅಲಂಕಾರ. ಹಲವು ಬುಡಕಟ್ಟು ಜನಾಂಗಗಳಲ್ಲಿ ಹಚ್ಚೆ ಹಚ್ಚಿಕೊಳ್ಳುವುದು ಒಂದು ಧಾರ್ಮಿಕ ಸಂಪ್ರದಾಯವೂ ಹೌದು. ಆದರೆ ಇತ್ತೀಚೆಗೆ ಇದು ಒಂದು ಅಲಂಕಾರವಾಗಿ, ಫ್ಯಾಶನ್‌ ಎನ್ನಿಸಿಕೊಂಡಿದೆ. ಹದಿಹರೆಯದವರಿಂದ ಅರವತ್ತರ ಅರುಳುಮರುಳರೂ ಹಚ್ಚೆಗಳನ್ನು ಹಚ್ಚಿಕೊಳ್ಳುತ್ತಿದ್ದಾರೆ. ಯುವಜನಾಂಗದಲ್ಲಿ ಈಗ ಇದು ‘ಪ್ರತಿಷ್ಠೆ’ಯ ಸಂಕೇತವೂ ಆಗಿದೆ.

ADVERTISEMENT

ಹಚ್ಚೆ ಹಚ್ಚುವುದು ಎಂದರೆ ಸೂಜಿಯಿಂದ ಚರ್ಮದೊಳಗೆ ಶಾಯಿಯನ್ನು ಸೇರಿಸುವುದು ಎಂದರ್ಥ. ಅತಿ ಮೊನಚಾದ ಸಾಧನಗಳಿಗೆ ಹಚ್ಚಿದ ಶಾಯಿಯನ್ನು ಚರ್ಮದ ಕೆಳಪದರದೊಳಗೆ ತೂರಿಸಲಾಗುತ್ತದೆ. ಈ ಶಾಯಿಯಲ್ಲಿರುವ ಕಣಗಳು ಚರ್ಮದ ಜೀವಕೋಶಗಳೊಳಗೆ ಸೇರಿಕೊಂಡು, ಚರ್ಮದ ಬಣ್ಣವನ್ನು ಬದಲಿಸುತ್ತವೆ. ಹೀಗೆ ಚರ್ಮದ ಮೇಲೂ ರಂಗೋಲಿಯನ್ನು ಬಿಡಿಸಬಹುದು.

ಹಚ್ಚೆಗೆ ಬಳಸುವ ಶಾಯಿಯ ಬಗ್ಗೆ ಹಲವು ಅನುಮಾನಗಳು ಇವೆ. ಇವು ದೇಹಕ್ಕೆ ತೊಂದರೆ ಕೊಡುತ್ತವೆಯೇ ಎಂಬುದು ಮೊದಲನೆಯದು. ಕೆಲವರಲ್ಲಿ ಈ ಶಾಯಿ ಅಲರ್ಜಿಯನ್ನು ಉಂಟುಮಾಡಿದ್ದೂ ಇದೆ. ಅದರೆ ಮಾರಕ ಎನ್ನುವಂತಹ ಅಪಾಯ ಕಾಣದ್ದರಿಂದ ಹಚ್ಚೆಯ ಬಳಕೆ ಇನ್ನೂ ವ್ಯಾಪಕವಾಗಿದೆ. ಹಚ್ಚೆಯ ಶಾಯಿ ನಮಗೇ ಗೊತ್ತಿಲ್ಲದ ಹಾಗೆ ಏನಾದರೂ ಅಪಾಯವನ್ನು ಉಂಟುಮಾಡುತ್ತಿರಬಹುದೇ ಎನ್ನುವುದು ಸಾಂಟಿಯಾಗೋ ತಂಡದ ಅನುಮಾನವಾಗಿತ್ತು. ಈ ಅನುಮಾನಕ್ಕೆ ಕಾರಣವಿದೆ. ಈ ಹಿಂದೆ ನಡೆದ ಕೆಲವು ಶೋಧಗಳಲ್ಲಿ ಹಚ್ಚೆಗೆ ಹಚ್ಚಿದ ಶಾಯಿಯು ದೇಹದಲ್ಲಿರುವ ದುಗ್ಧಗ್ರಂಥಿಗಳಲ್ಲಿ ಉಳಿದಿರುವುದನ್ನು ಕಾಣಲಾಗಿತ್ತು. ದುಗ್ಧ ಗ್ರಂಥಿಗಳು ಹಾಗೂ ದುಗ್ಧ ರಸ ದೇಹದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ದೇಹಾಂಗಗಳು. ಉದಾಹರಣೆಗೆ, ಯಾವುದೇ ಸೋಂಕು ಉಂಟಾದಾಗ ಮೊದಲು ದುಗ್ಧಗ್ರಂಥಿಗಳಲ್ಲಿ ಊತ ಕಾಣಿಸುತ್ತದೆ. ನೆಗಡಿ ಆದಾಗ, ಗಂಟಲ ಹಿಂದೆ ತುಸು ಗಡ್ಡೆ ಕಟ್ಟಿದಂತ ಆಗುವುದು ಇನ್ನೇನಲ್ಲ. ಅಲ್ಲಿರುವ ದುಗ್ಧನಾಳಗಳು ಊದಿಕೊಳ್ಳುವುದರಿಂದ ಹೀಗಾಗುತ್ತದೆ. ಅಲ್ಲಿ ರಕ್ತದಲ್ಲಿರುವ ಕೆಲವು ಬಗೆಯ ಬಿಳಿಯ ರಕ್ತಕಣಗಳು ಕೂಡಿಕೊಂಡಿರುತ್ತವೆ.

ದೇಹದೊಳಗೆ ರೋಗಾಣುಗಳು ಹೊಕ್ಕಾಗ ದೇಹವು ಅದಕ್ಕೆ ತೋರುವ ಪ್ರತಿಕ್ರಿಯೆಯೇ ಈ ಊತ. ಅಲರ್ಜಿಯ ವೇಳೆಯೂ ಹೀಗೆ ಆಗುವುದುಂಟು. ದುಗ್ಧರಸ ದೇಹದ ವಿವಿಧ ಅಂಗಾಂಶಗಳಲ್ಲಿ ಇರುವ ತ್ಯಾಜ್ಯ ಮತ್ತು ಸತ್ತ ರೋಗಾಣುಗಳನ್ನು ಹೊತ್ತು ಕೈ, ಕಾಲು, ತೋಳು, ತೊಡೆ, ಮಂಡಿ ಮೊದಲಾದ ಮೂಳೆಗಳ ಸಂಧಿಗಳು ಇರುವ ತೆರಪಿನಲ್ಲಿ ಕೂಡುತ್ತದೆ. ಅದರಲ್ಲಿರುವ ತ್ಯಾಜ್ಯ ಹಾಗೂ ರೋಗಾಣುಗಳನ್ನು ಸೋಸಿದ ಮೇಲೆ ದುಗ್ಧರಸ ಮರಳಿ ರಕ್ತದ ಮೂಲಕ ವಿವಿಧ ಅಂಗಾಂಶಗಳಿಗೆ ಹರಿಯುತ್ತದೆ. ಆದ್ದರಿಂದ ಸೋಂಕು ಉಂಟಾದಾಗ ಈ ತೆರಪುಗಳಲ್ಲಿ ರೋಗಾಣುಗಳು ಹಾಗೂ ಅವನ್ನು ಕೊಲ್ಲುವ ರಕ್ತಕೋಶಗಳು ಬಂದು ಸಂಗ್ರಹವಾಗುವುದರಿಂದ ಊತ ಉಂಟಾಗುತ್ತದೆ.

ಶಾಯಿಯ ಕಣಗಳು ಕೂಡ ದೇಹಕ್ಕೆ ಸೋಂಕಿನಂತೆಯೇ ಹೊರಗಿನಿಂದ ಬಂದಂಥವು. ಅವು ಕೂಡ ದುಗ್ಧ ವ್ಯವಸ್ಥೆಯನ್ನು ಬಾಧಿಸುತ್ತಿರಬಹುದೇ ಎಂದು ಸಾಂಟಿಯಾಗೊ ತಂಡ ಪರಿಶೀಲಿಸಿದೆ. ಇದಕ್ಕಾಗಿ ಇದು ಇಲಿಯ ಪಾದಗಳಿಗೆ ಹಚ್ಚೆ ಹಚ್ಚಿದೆ. ಅನಂತರ ಈ ಶಾಯಿಯ ಕಣಗಳು ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಗಮನಿಸಿದೆ. ಶಾಯಿಯ ಕಣಗಳು ಪಾದದ ಚರ್ಮದಾಚೆ, ದುಗ್ಧಗ್ರಂಥಿಗಳಲ್ಲಿಯೂ ಕಂಡು ಬಂದುವಂತೆ. ಅಂದರೆ ದುಗ್ಧರಸ ಇವನ್ನು ಹೊತ್ತು ಬಂದಿರಬೇಕಷ್ಟೆ. ಆದರೆ ಈ ಕಣಗಳು ದೇಹದಿಂದ ತಕ್ಷಣ ಹೊರ ಹೋಗುವುದಿಲ್ಲವಂತೆ. ಸಾಂಟಿಯಾಗೊ ತಂಡದ ಪರೀಕ್ಷೆಗಳು ಇವು ಎರಡು–ಮೂರು ತಿಂಗಳಾದರೂ ದುಗ್ಧಗ್ರಂಥಿಗಳಲ್ಲಿ ಇರುವುದನ್ನು ಕಂಡಿದೆ.

ದುಗ್ಧಗ್ರಂಥಿಗಳಲ್ಲಿ ಇಷ್ಟು ದೀರ್ಘ ಕಾಲ ಇರುವ ಶಾಯಿಯ ಕಣಗಳಿಂದ ಏನಾದರೂ ಬಾಧೆ ಬರಬಹುದೇ? ಹಚ್ಚೆ ಹಚ್ಚಲು ಬಳಸುವ ಕೆಂಪು, ಕಪ್ಪು ಹಾಗೂ ಹಸಿರು ಬಣ್ಣದ ಶಾಯಿಗಳು ಮೂರನ್ನೂ ಇವರು ಪರೀಕ್ಷಿಸಿದ್ದಾರೆ. ಈ ಶಾಯಿಯ ಕಣಗಳು ದುಗ್ಧಗ್ರಂಥಿಗಳಲ್ಲಿ ಇದ್ದಾಗ ಅಲ್ಲಿರುವ ‘ಮ್ಯಾಕ್ರೊಫೇಜ್‌’ ಎನ್ನುವ ರಕ್ತಕೋಶಗಳ ಪ್ರಮಾಣ ಮೊದಲ ಐದು ದಿನಗಳಲ್ಲಿ ಹೆಚ್ಚಿ, ಅನಂತರದ ದಿನಗಳಲ್ಲಿ ಮೊದಲಿದ್ದುದಕ್ಕಿಂತಲೂ ಕಡಿಮೆ ಆದುವಂತೆ. ಶಾಯಿಯ ಕಣಗಳನ್ನು ಹೊರದೂಡಲೆಂದು ಬಂದ ಮ್ಯಾಕ್ರೊಫೇಜ್‌ಗಳನ್ನು ಶಾಯಿ ಕೊಂದಿದ್ದರಿಂದ ಹೀಗಾಗಿರಬೇಕು ಎಂದು ಊಹಿಸಬಹುದು.

ಮ್ಯಾಕ್ರೊಫೇಜ್‌ಗೂ, ಸೋಂಕಿಗೂ ಸಂಬಂಧವಿರುವುದರಿಂದ, ಶಾಯಿ ಸೋಂಕನ್ನು ತಡೆಯುವ ಲಸಿಕೆಗಳನ್ನು ಬಾಧಿಸುವುದೇ ಎಂದೂ ಇವರು ಪರೀಕ್ಷೆ ನಡೆಸಿದ್ದಾರೆ. ಇಲಿಗಳಿಗೆ ಹಚ್ಚೆ ಹಾಕಿದ ಎರಡು ದಿನ ಹಾಗೂ ಎರಡು ತಿಂಗಳ ನಂತರ ಕೋವಿಡ್‌ ಲಸಿಕೆಯನ್ನು ಚುಚ್ಚಿದ್ದಾರೆ. ಲಸಿಕೆಯಿಂದಾಗಿ ತಯಾರಾಗುವ ಕೋವಿಡ್‌ ವೈರಸ್ಸನ್ನು ಕೊಲ್ಲುವ ಪ್ರೊಟೀನುಗಳ ಪ್ರಮಾಣ ಯಾವ ಶಾಯಿಯ ಹಚ್ಚೆ ಹಚ್ಚಿದ್ದರೂ ಕಡಿಮೆ ಆಗುವುದನ್ನು ಇವರು ಕಂಡರು; ಎಂದರೆ ಲಸಿಕೆಯ ಪರಿಣಾಮವನ್ನು ಶಾಯಿ ಕುಗ್ಗಿಸಿತ್ತು. ಹಚ್ಚೆ ಹಚ್ಚಿದ ಎರಡು ತಿಂಗಳ ನಂತರವೂ ಈ ಪರಿಣಾಮವೇ ಇತ್ತಂತೆ. ಕೋವಿಡ್‌ ಲಸಿಕೆಗಿಂತ ಭಿನ್ನವಾಗಿ ವರ್ತಿಸುವ ‘ಎಚ್‌1 ಎನ್‌1’ ಲಸಿಕೆಯ ಪರಿಣಾಮವನ್ನು ಹಚ್ಚೆ ಶಾಯಿ ಕುಗ್ಗಿಸಲಿಲ್ಲ. ಪ್ರನಾಳಗಳಲ್ಲಿ ಮನುಷ್ಯರ ರಕ್ತದಲ್ಲಿರುವ ವಿವಿಧ ರಕ್ತಕೋಶಗಳನ್ನಿಟ್ಟು, ಅದರೊಟ್ಟಿಗೆ ಶಾಯಿಯನ್ನು ಬೆರೆಸಿದಾಗಲೂ, ಸೋಂಕನ್ನು ತಡೆಯುವ ರಕ್ತಕೋಶಗಳ ಸಂಖ್ಯೆ ಕಡಿಮೆ ಆದುದ್ದನ್ನು ಇವರು ಗುರುತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.