ADVERTISEMENT

ಶುಕ್ರ ಅತ್ಯಂತ ಪ್ರಕಾಶಮಾನ ಜುಲೈ 7ರಂದು

ಆಕಾಶದಲ್ಲಿ ಕಂಗೊಳಿಸುವ ಬೆಳ್ಳಿ ಚುಕ್ಕೆ ಶುಕ್ರ ಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2023, 16:34 IST
Last Updated 29 ಮೇ 2023, 16:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಆಕಾಶದಲ್ಲಿ ಬೆಳ್ಳಿ ಚುಕ್ಕೆ ಎಂದೇ ಗುರುತಿಸಲಾಗುವ ಶುಕ್ರ ಗ್ರಹ ಜುಲೈ 7ರಂದು ಅತ್ಯಂತ ಹೆಚ್ಚಿನ ಪ್ರಭೆಯೊಂದಿಗೆ  ಆಕಾಶದಲ್ಲಿ ಗೋಚರಿಸಲಿದೆ ಎಂದು ಪೂರ್ಣ ಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಗ್ರಹ ಮೇ 30ರಿಂದ ಜುಲೈ ಅಂತ್ಯದವರೆಗೂ ಹೊಳೆಯುತ್ತಾ ಆಗಸ್ಟ್‌ನಲ್ಲಿ ಕಣ್ಮರೆಯಾಗಲಿದೆ. ಆ.8ರಿಂದ 19ರವರೆಗಿನ ಅವಧಿಯಲ್ಲಿ ಸೂರ್ಯನಿಗೆ ನೇರವಾಗಿ ಬಂದಾಗ ಶುಕ್ರ ಗ್ರಹ ಅಸ್ತವಾಗಿ ಬಳಿಕ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಗೋಚರಿಸಲಿದೆ.

ಶುಕ್ರ ಗ್ರಹವು ಮೇ 30ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ ಹೋಗಲಿದ್ದು ತನ್ನ ಪ್ರಭೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ಜುಲೈ 7ರಂದು ಅತಿ ಹೆಚ್ಚು ಪ್ರಕಾಶಮಾನವಾಗಿ ಕಂಗೊಳಿಸಲಿದೆ ಎಂದು ಎ.ಪಿ.ಭಟ್ ತಿಳಿಸಿದ್ದಾರೆ.

ADVERTISEMENT

ಶುಕ್ರ ಗ್ರಹ ಸದ್ಯ ಭೂಮಿಯಿಂದ 15 ಕೋಟಿ ಕಿ.ಮೀ. ದೂರವಿದ್ದು ಆ.8ರ ಹೊತ್ತಿಗೆ 4 ಕೋಟಿ ಕಿ.ಮೀ ಸಮೀಪಕ್ಕೆ ಬರಲಿದೆ. ಹೀಗೆ ಶುಕ್ರ ಗ್ರಹ ಕಾಣಿಸಲು ಪ್ರಮುಖ ಕಾರಣ ಎಂದರೆ ಸೂರ್ಯನಿಂದ ಬುಧ ಗ್ರಹ ಸುಮಾರು 6 ಕೋಟಿ ಕಿ.ಮೀ ದೂರ, ಶುಕ್ರ ಗ್ರಹ 11 ಕೋಟಿ ಕಿ.ಮೀ ದೂರ ಹಾಗೂ ಭೂಮಿ 15 ಕೋಟಿ ಕಿ.ಮೀ. ದೂರದಲ್ಲಿರುವುದು.

ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಬುಧ ಹಾಗೂ ಶುಕ್ರ ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಬದಲಾಗಿ ಅವು ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಕಾಣುತ್ತವೆ.

ಶುಕ್ರ ಗ್ರಹ ಸಂಜೆ ಆಕಾಶದಲ್ಲಿ ಸೂರ್ಯಾಸ್ತವಾದ ನಂತರ ಕೆಲ ಗಂಟೆಗಳ ಕಾಲ ಗೋಚರಿಸುತ್ತದೆ. ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಕಾಣುತ್ತದೆ. ಬುಧ ಗ್ರಹ 27 ಡಿಗ್ರಿ ಎತ್ತರದಲ್ಲಿ ಕಾಣುತ್ತದೆ ಹಾಗೂ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಗೋಚರಿಸುತ್ತದೆ.

ಸೂರ್ಯನಿಂದ ಶುಕ್ರ 11 ಕೋಟಿ ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ದೂರದಲ್ಲಿರುವುದಿಲ್ಲ. 19 ತಿಂಗಳಿಗೊಮ್ಮೆ ಅತೀ ಸಮೀಪ ಅಂದರೆ 4 ಕೋಟಿ ಕಿ.ಮೀ ( ಆ.13ರಂದು ಇನ್ಫೀರಿಯರ್ ಕಂಜಂಕ್ಷನ್) ಹಾಗೂ 2025ರ ಜನವರಿಯಲ್ಲಿ ಅತ್ಯಂತ ದೂರ ಅಂದರೆ 26 ಕೋಟಿ ಕಿ.ಮೀ. (ಸುಪೀರಿಯರ್ ಕಂಜಂಕ್ಷನ್) ದೂರದಲ್ಲಿರಲಿದೆ. 

ಗ್ರಹಗಳಲ್ಲಿ ಬರೀಗಣ್ಣಿಗೆ ಕಾಣುವ ಗ್ರಹಗಳಲ್ಲಿ ಶುಕ್ರ ಗ್ರಹವೇ ಹೆಚ್ಚು ಪ್ರಕಾಶಮಾನ ಹಾಗೂ ಚೆಂದವಾದ ಗ್ರಹ. ಶೇ 95ರಷ್ಟು ಇಂಗಾಲದ ಆಕ್ಸೈಡ್‌ಗಳ ವಾತಾವರಣ ಹಾಗೂ ಸ್ವಲ್ಪ ರಂಜಕದ ಡೈಆಕ್ಸೈಡ್‌ ಹೊಂದಿರುವ ಶುಕ್ರ ಗ್ರಹ ಅತಿ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಫಳ ಫಳನೆ ಹೊಳೆಯುತ್ತದೆ. ದೂರದರ್ಶಕದಲ್ಲೀಗ ಶುಕ್ರಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರದಲ್ಲಿ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗುತ್ತದೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.