ADVERTISEMENT

ಬೇಸಿಗೆ ಸುತ್ತಾಟ, ಮಕ್ಕಳ ಶಿಬಿರಗಳಿಗೆ ಸಜ್ಜಾದ ವಿಶ್ವೇಶ್ವರಯ್ಯ ಮ್ಯೂಸಿಯಂ

Vishweshawarayya museum

ಮಂಜುಶ್ರೀ ಎಂ.ಕಡಕೋಳ
Published 24 ಮಾರ್ಚ್ 2019, 19:30 IST
Last Updated 24 ಮಾರ್ಚ್ 2019, 19:30 IST
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿರುವ ವೈಮಾನಿಕ ಸಂಗ್ರಹದ ನೋಟ  ಚಿತ್ರಗಳು: ಕೃಷ್ಣಕುಮಾರ್ ಪಿ.ಎಸ್.
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿರುವ ವೈಮಾನಿಕ ಸಂಗ್ರಹದ ನೋಟ  ಚಿತ್ರಗಳು: ಕೃಷ್ಣಕುಮಾರ್ ಪಿ.ಎಸ್.   

ಮಕ್ಕಳ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಶುರುವಾಗುವ ಹೊತ್ತಿದು. ಮಕ್ಕಳ ಸುತ್ತಾಟಕ್ಕೆ ಹೊರಸಂಚಾರಕ್ಕಿಂತ ಒಳಾಂಗಣದಲ್ಲೇ ಕುತೂಹಲ ತಣಿಸುವ ತಾಣಗಳಿವೆ. ಕಸ್ತೂರ ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಒಂದು ಉತ್ತಮ ಆಯ್ಕೆ. ಇಲ್ಲಿ ವಾರಗಳ ಕಾಲ ನಡೆಯಲಿರುವ ವಿಜ್ಞಾನ, ತಂತ್ರಜ್ಞಾನ ಶಿಬಿರಗಳಲ್ಲೂ ಭಾಗವಹಿಸಬಹುದಾಗಿದೆ.

ಕೈಗಾರಿಕೆಯ ಪ್ರಮುಖ ವಿದ್ಯಮಾನಗಳಿಂದ ಹಿಡಿದು ಅಂತರಿಕ್ಷದ ತನಕ ಪುಟಾಣಿಗಳ ಆಸಕ್ತಿ ಮತ್ತು ಕೌತುಕ ತಣಿಸುವ ಹಲವು ಮಾದರಿಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. ಕಳೆದ ವರ್ಷವಷ್ಟೇ ಅಪ್‌ಗ್ರೇಡ್‌ ಆಗಿರುವ ಬಾಹ್ಯಾಕಾಶ ತಂತ್ರಜ್ಞಾನ ಗ್ಯಾಲರಿ ಇದೆ. ಇದು ಕಿರಿಯರಾದಿಯಾಗಿ ಹಿರಿಯರ ಕುತೂಹಲ ತಣಿಸುವಂತಿದೆ.

ಬಾಹ್ಯಾಕಾಶ ತಂತ್ರಜ್ಞಾನ ಗ್ಯಾಲರಿಯಲ್ಲಿ ಅಂತರಿಕ್ಷ ತಂತ್ರಜ್ಞಾನದ ಪ್ರದರ್ಶಿಕೆಗಳು ಅಂತರಿಕ್ಷದ ಇತಿಹಾಸ ಮತ್ತು ಸಮಕಾಲೀನ ಸಂಗತಿಗಳನ್ನು ಅನಾವರಣಗೊಳಿಸುತ್ತವೆ. ಭಾರತದ ಮೊದಲ ಉಪಗ್ರಹ ‘ಆರ್ಯಭಟ’ನಿಂದ ಹಿಡಿದು ಇತ್ತೀಚಿನ ಉಪಗ್ರಹ ‘ಆದಿತ್ಯ’ನ ತನಕ ಮಾದರಿಗಳಿವೆ ಎನ್ನುತ್ತಾರೆ ಮ್ಯೂಸಿಯಂನ ಹಿರಿಯ ಕ್ಯುರೇಟರ್ ಕೆ.ಎ. ಸಾಧನಾ.

ADVERTISEMENT

ಬಾಹ್ಯಾಕಾಶ ಪ್ರವೇಶಿಸಿದ ಮೊದಲ ಭಾರತೀಯ ರಾಕೇಶ್ ಶರ್ಮಾ ಪ್ರತಿಕೃತಿಯ ಜತೆಗೆ ಸೆಲ್ಫಿ ತೆಗೆದುಕೊಳ್ಳಬಹುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಬೆಳವಣಿಗೆಗಳ ಜತೆಗೆ ಭಾರತೀಯರ ಹೆಜ್ಜೆ ಗುರುತುಗಳನ್ನೂ ಇಲ್ಲಿ ದಾಖಲಿಸಿರುವುದು ವಿಶೇಷ.

ಮುಖ್ಯ ಆಕರ್ಷಣೆ: ಬಾಹ್ಯಾಕಾಶ ತಂತ್ರಜ್ಞಾನ ಗ್ಯಾಲರಿಯ ಮುಖ್ಯ ಆಕರ್ಷಣೆ ಉಪಗ್ರಹ ಉಡಾವಣೆ. ಶ್ರೀಹರಿಕೋಟಾದಲ್ಲಿರುವ ಉಪಗ್ರಹ ಉಡಾವಣೆಯ ಯಥಾವತ್ ಮಿನಿಯೇಚರ್ ಮಾದರಿ ಇಲ್ಲಿದ್ದು, ತಂತ್ರಜ್ಞಾನದ ಸಹಾಯದಿಂದ ಉಪಗ್ರಹ ಉಡಾವಣೆಯ ಪುಟ್ಟ ಪ್ರಾತ್ಯಕ್ಷಿಕೆಯನ್ನೂ ಮಾಡಲಾಗುತ್ತದೆ. ಉಪಗ್ರಹ ಉಡಾವಣಾ ವಾಹನ ಹೇಗೆ ಕಾರ್ಯನಿರ್ವಹಿಸುತ್ತದೆ, ಉಪಗ್ರಹ ಕಕ್ಷೆಗೆ ಸೇರಿದ ಮೇಲೆ ಹೇಗೆ ಸಂವಹನ ನಡೆಸಲಾಗುತ್ತದೆ ಎನ್ನುವ ಪ್ರಾತ್ಯಕ್ಷಿಕೆ ಇಲ್ಲಿನ ವಿಶೇಷ.

ಸೆಲ್ಫಿ ವಿತ್ ನೀಲ್ ಆರ್ಮ್‌ಸ್ಟ್ರಾಂಗ್!: ಚಂದ್ರನ ಮೇಲೆ ಕಾಲಿಟ್ಟ ಮೊದಲ ಮನುಷ್ಯ ನೀಲ್ ಆರ್ಮ್‌ಸ್ಟ್ರಾಂಗ್ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ನೀಲ್ ಚಂದ್ರನ ಮೇಲಿರುವ ಚಿತ್ರದಲ್ಲಿ ನೀವು ಕಾಣಿಸಿಕೊಳ್ಳುವ ತಂತ್ರಜ್ಞಾನ ಇಲ್ಲಿದೆ. ಬಾಹ್ಯಾಕಾಶದಲ್ಲಿ ಅಂತರಿಕ್ಷ ಯಾನಿಗಳು ತೊಟ್ಟುಕೊಳ್ಳುವ ಸೂಟ್ ಮಾದರಿ ಆಕರ್ಷಕ. ಸೂಟ್‌ನೊಳಗೆ ಮುಖ ತೋರಿಸಿ ಫೋಟೊ ತೆಗೆದುಕೊಳ್ಳುವ ಸಂಭ್ರಮವನ್ನೂ ಅನುಭವಿಸಬಹುದು.

ಮೈಸೂರು ರಾಕೆಟ್‌ನಿಂದ ವಾಯೇಜರ್ ತನಕ: ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಕಾಲದಲ್ಲಿ ರೂಪಿಸಲಾದ ಮೈಸೂರು ರಾಕೆಟ್‌ನಿಂದ ಹಿಡಿದು ಇತ್ತೀಚಿನ ವಾಯೇಜರ್–1 ಬಾಹ್ಯಾಕಾಶ ನೌಕೆಯವರೆಗೆ ಬಾಹ್ಯಾಕಾಶ ತಂತ್ರಜ್ಞಾನದ ಪ್ರಮುಖ ಮೈಲಿಗಲ್ಲುಗಳನ್ನು ವಿವರಿಸುವ ಕಥನ ಇಲ್ಲಿದೆ.ಬೇರೆ ಬೇರೆ ಗ್ರಹಗಳಲ್ಲಿ ನಿಮ್ಮ ದೇಹದ ತೂಕ ಎಷ್ಟೆಷ್ಟು ಇರಬಹುದು ಅನ್ನುವ ಮನೋರಂಜನಾತ್ಮಕ ಚಟುವಟಿಕೆಗಳೂ ಇಲ್ಲಿವೆ. ಇದರ ಜತೆಗೆ ಏಕಕಾಲಕ್ಕೆ ನಾಲ್ವರು ಉಪಯೋಗಿಸಬಹುದಾದ ಮಲ್ಟಿಟಚ್ ಕ್ವಿಜ್ ಟೇಬಲ್ ಗಮನ ಸೆಳೆಯುತ್ತದೆ. ಅಂತೆಯೇ ಅಂತರಿಕ್ಷದಲ್ಲಿ ಸುನೀತಾ ವಿಲಿಯಮ್ಸ್ ಅವರ ಚಟುವಟಿಕೆಗಳುಳ್ಳ ವಿಡಿಯೊ ಅವರ ಜತೆಗಿರುವಂತೆಯೇ ಭಾಸವಾಗುವಂತೆ ರೂಪಿಸಲಾಗಿದೆ. ಅಂತರಿಕ್ಷ ಯಾನಿಗಳು ಬಾಹ್ಯಾಕಾಶದಲ್ಲಿ ಹೇಗಿರುತ್ತಾರೆ? ಅವರ ಉಡುಗೆ–ತೊಡುಗೆಗಳ ವಿಶೇಷವೇನು? ಅವರು ಏನೇನು ಆಹಾರ ಸೇವಿಸುತ್ತಾರೆ?.. ಇಂಥ ಹಲವು ವಿಷಯಗಳ ಕುತೂಹಲ ಹುಟ್ಟಿಸುತ್ತದೆ ಬಾಹ್ಯಾಕಾಶ ತಂತ್ರಜ್ಞಾನ ಗ್ಯಾಲರಿ.

ಬೇಸಿಗೆ ಹವ್ಯಾಸಿ ಕೋರ್ಸ್

ವಿಶ್ವೇಶ್ವರಯ್ಯ ಮ್ಯೂಸಿಯಂ ಪ್ರತಿ ಬೇಸಿಗೆಯಲ್ಲಿ ನಡೆಸುವ ಬೇಸಿಗೆ ಹವ್ಯಾಸಿ ಕೋರ್ಸ್ ಜನಪ್ರಿಯ. ಈ ಬಾರಿಯ ಬೇಸಿಗೆ ಕೋರ್ಸ್ ಏಪ್ರಿಲ್ 8ರಿಂದ ವಿವಿಧ ಬ್ಯಾಚ್‌ಗಳಲ್ಲಿ ಆರಂಭವಾಗಲಿದೆ. 7ನೇ ತರಗತಿಯಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು.

ಏಪ್ರಿಲ್ 8ರಿಂದ 12ರವರೆಗೆ ವರ್ಕ್‌ಶಾಪ್ ಆನ್ ಅರ್ಡುನೋಂ ನಡೆಯಲಿದೆ. ಏಪ್ರಿಲ್ 15ರಿಂದ 26ರ ತನಕ ಹಾಗೂ ಮೇ 6ರಿಂದ 17ರವರೆಗೆ ಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್, ಮ್ಯಾಥಮೆಟಿಕ್ಸ್‌, ಫಿಜಿಕ್ಸ್, ರೊಬೊಟಿಕ್ ಶಿಬಿರ ನಡೆಯಲಿದೆ. ಮೇ 10ರಿಂದ 12ರತನಕ ಆ್ಯಪ್ ಡೆವಲಪ್‌ಮೆಂಟ್ ಕೋರ್ಸ್ ಆನ್ ಆ್ಯಂಡ್ರ್ಯಾಯಿಡ್ ಕೋರ್ಸ್, ಮೇ 13ರಿಂದ 17ರ ತನಕ ರಾಸ್‌ಬೆರ‍್ರಿ ಪೈ ವರ್ಕ್ ಶಾಪ್ ನಡೆಯಲಿದೆ.

ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ವಯೋಗುಣ ಮತ್ತು ಆಸಕ್ತಿಗನುಗುಣವಾಗಿ ಕೆಮಿಸ್ಟ್ರಿಯ ಮೂಲ ಪ್ರಯೋಗಗಳು, ಕೆಮಿಸ್ಟ್ರಿ ಇನ್ ಕಿಚನ್, ಬೇಸಿಕ್ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ವಿಜ್ಞಾನ ಮಾದರಿಗಳನ್ನು ಮಾಡುವುದು ಹೇಗೆ? ಗಣಿತದಲ್ಲಿ ಮೂರು ಡೈಮೆನ್ಷನ್ ಮಾಡೆಲ್‌ಗಳು, ಫಿಜಿಕ್ಸ್‌ನ ಬೇಸಿಕ್ ಕಿಟ್, ಬೇಸಿಕ್ ರೊಬೊಟಿಕ್ ಕಿಟ್ ಹೀಗೆ ಹಲವು ವೈಜ್ಞಾನಿಕ ಚಟುವಟಿಕೆಗಳು ಇರುತ್ತವೆ ಎಂದು ಮಾಹಿತಿ ನೀಡುತ್ತಾರೆ ಮ್ಯೂಸಿಯಂನ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ.

ಆ್ಯಪ್ ತಯಾರಿಕೆ ತರಬೇತಿ: ಆ್ಯಪ್ ತಯಾರಿಕಾ ತರಬೇತಿ ಬೇಸಿಗೆ ಶಿಬಿರದ ಮುಖ್ಯ ಆಕರ್ಷಣೆ. ಸಾಮಾನ್ಯವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾಡುವಂಥ ಆ್ಯಪ್‌ಗಳ ಬಗ್ಗೆ ಹೈಸ್ಕೂಲು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸರಳವಾಗಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೇಳಿಕೊಡಲಾಗುತ್ತದೆ.

ಸರ್ಕಾರಿ ಮತ್ತು ಕಾರ್ಪೋರೇಷನ್ ಶಾಲೆಯ ಮಕ್ಕಳಿಗೆ ಶಿಬಿರಕ್ಕೆ ಉಚಿತ ಪ್ರವೇಶವಿದೆ. ಶಿಬಿರಕ್ಕೆ ಮೊದಲು ಬಂದವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗೆ: 080–22040224/228. ಬೇಸಿಗೆ ಶಿಬಿರಕ್ಕೆ ಅರ್ಜಿಗಳನ್ನು ಸಲ್ಲಿಸಲು

www.vismuseum.gov.in ವೆಬ್‌ ತಾಣ ಸಂಪರ್ಕಿಸಿ.

ಚಿತ್ರಗಳು: ಕೃಷ್ಣಕುಮಾರ್ ಪಿ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.