ಚಿವುಟು ಚುಚ್ಚುಮದ್ದು!
ಚಿವುಟುವುದೂ ಚುಚ್ಚುವುದೂ – ಎರಡೂ ನೋಯುವ ಸಂಗತಿಗಳೇ. ಆದರೂ ಚುಚ್ಚುಮದ್ದನ್ನು ನೀಡುವ ಬದಲು ಚಿವುಟಿ ಮದ್ದನ್ನು ನೀಡಿದರೆ?! ಪ್ಯಾರಿಸಿನ ‘ಕ್ಯೂರೀ ಸಂಶೋಧನಾಲಯ’ದ ಫ್ರೆಂಚ್ ವಿಜ್ಞಾನಿ ಎಲೊಡಿ ಸೆಗುರಾ ಚಿವುಟಿಯೇ ಲಸಿಕೆಯನ್ನು ನೀಡುವ ಉಪಾಯ ಹೂಡಿದ್ದಾರೆ. ಚರ್ಮವನ್ನು ಚುಚ್ಚದೆ, ಹರಿಯದೆ, ಕೇವಲ ಅದನ್ನು ಎಳೆದು ಹಿಡಿದು, ಲಸಿಕೆಗಳಲ್ಲಿರುವ ರಾಸಾಯನಿಕಗಳನ್ನು ಒಳತೂರಿಸಬಹುದು ಎಂದು ಇವರು ಪತ್ತೆ ಮಾಡಿದ್ದಾರೆ.
ಲಸಿಕೆಗಳು ಅಥವಾ ಚುಚ್ಚುಮದ್ದನ್ನು ನೀಡಲು ಸೂಜಿ ಅನಿವಾರ್ಯ ಎನ್ನುವ ಕಾಲ ಒಂದಿತ್ತು. ಆದರೆ ಈಗ ಸೂಜಿ ಇಲ್ಲದೆಯೇ ಚುಚ್ಚುಮದ್ದನ್ನು ನೀಡುವ ಹಲವು ವಿಧಾನಗಳು ಬಳಕೆಯಲ್ಲಿವೆ. ನಲವತ್ತು ವರ್ಷಗಳ ಹಿಂದೆ, ಮದ್ದನ್ನು ತುಂಬಿದ ಜೆಲ್ಲಿ ಗುಳಿಗೆಗಳನ್ನು ಚರ್ಮದೊಳಗೆ ಹುದುಗಿಸುವ ತಂತ್ರ ಬಂದಿತ್ತು. ಆದರೆ ಅದಕ್ಕೂ ಚರ್ಮವನ್ನು ಹರಿಯಲೇ ಬೇಕಿತ್ತು. ತದನಂತರ ಪ್ಯಾಚುಗಳು ಬಂದವು. ಪುಟ್ಟ ಬ್ಯಾಂಡೇಜಿನ ಮೇಲೆ, ಗಟ್ಟಿಯಾದ ಆದರೆ ಕರಗಬಲ್ಲಂತಹ ಮುಳ್ಳುಗಳೊಳಗೆ ಔಷಧವನ್ನು ತುಂಬಿ ಚರ್ಮಕ್ಕೆ ಭದ್ರವಾಗಿ ಅಂಟಿಸಬಹುದು. ಚರ್ಮವನ್ನು ಚುಚ್ಚಿ ನಿಂತ ಆ ಮುಳ್ಳುಗಳು ನಿಧಾನವಾಗಿ ಕರಗಿ, ಔಷಧ ರಕ್ತಗತವಾಗುತ್ತದೆ. ಆದರೆ ಇಲ್ಲಿಯೂ ಮುಳ್ಳುಗಳು ಚರ್ಮವನ್ನು ಚುಚ್ಚಿಯೇ ತೀರುತ್ತವೆ.
ಇವು ಸರಳ ಉಪಾಯಗಳಾದರೂ, ಲಸಿಕೆಗಳಿಗೆ ಯೋಗ್ಯವಾದ ಉಪಾಯಗಳೆನ್ನಿಸಲಿಲ್ಲ. ಏಕೆಂದರೆ ಲಸಿಕೆಗಳಲ್ಲಿ ಬಳಸುವ ಸೂಕ್ಷ್ಮಜೀವಿ ಅಥವಾ ಅದರ ಅಂಶಗಳು ಅಥವಾ ರಾಸಾಯನಿಕಗಳು ನೆಗಡಿ, ಕೆಮ್ಮು, ಸಂತಾನನಿಯಂತ್ರಣ, ಜ್ವರ ಮೊದಲಾದ ಸಂದರ್ಭಗಳಲ್ಲಿ ನೀಡುವ ಔಷಧಗಳಷ್ಟು ಸಣ್ಣ ಅಣುಗಳಲ್ಲ; ಅಣುಗಳಲ್ಲಿಯೇ ಅತಿ ದೊಡ್ಡವು. ಆದ್ದರಿಂದ ಅವನ್ನು ದೇಹದೊಳಗೆ ತುರುಕುವುದು ಕೂಡ ಅಷ್ಟೇ ಕಷ್ಟ. ಹೀಗಾಗಿ ಲಸಿಕೆಗಳಿಗೆ ಚುಚ್ಚುಮದ್ದೇ ಅವಶ್ಯಕವಾಗಿತ್ತು.
ಲಸಿಕೆಗಳು ಎಂದರೆ, ನಮ್ಮದೇ ದೇಹದ ರೋಗ ರಕ್ಷಣೆಯ ವ್ಯವಸ್ಥೆಯನ್ನು ಚುರುಕುಗೊಳಿಸುವುದು. ಅಣುಗಳ ಸ್ತರದಲ್ಲಿ ಇದು ರಕ್ತದಲ್ಲಿರುವ ಕೆಲವು ಬಿಳಿಯ ರಕ್ತಕಣಗಳನ್ನು ಪ್ರಚೋದಿಸುವ ಕೆಲಸ. ಅವಕ್ಕೆ ದೇಹವನ್ನು ಸೇರಿದ ವೈರಸ್ಸಿನ ಪರಿಚಯವನ್ನು ಹೇಳಿಕೊಡುವ ಕೆಲಸ. ಲಸಿಕೆಯಲ್ಲಿ ಅಂತಹ ರೋಗಜನಕ ಸೂಕ್ಷ್ಮಜೀವಿಗಳನ್ನು ಪರಿಚಯಿಸುವ ಪ್ರತಿಜನಕ ಪ್ರೋಟೀನುಗಳ ಜೊತೆಗೆ ದೇಹದ ರೋಗದಿಂದ ರಕ್ಷಿಸುವ ಬಿಳಿಯರಕ್ತಕಣಗಳು ಸಂಖ್ಯೆಯಲ್ಲಿ ಹೆಚ್ಚಾಗುವಂತೆ ಪ್ರಚೋದಿಸುವ ಅಣುಗಳಿರುತ್ತವೆ. ಪ್ರತಿಜನಕಗಳು ದೇಹದ ಒಳಹೊಕ್ಕರೆ ಸಾಲದು; ಅವು ರೋಗದಿಂದ ರಕ್ಷಿಸುವ ಬಿಳಿಯ ರಕ್ತಕಣಗಳನ್ನೂ ಎಚ್ಚರಿಸಬೇಕು. ಚುಚ್ಚುಮದ್ದು ಚುಚ್ಚಿದಾಗ ಅಥವಾ ಚರ್ಮ ಹರಿದಾಗ, ಆ ಜಾಗಕ್ಕೆ ರಕ್ತದಲ್ಲಿರುವ ಬಿಳಿಕಣಗಳು ಧಾವಿಸಿ ಬರುತ್ತವೆ. ಊತ ಉಂಟಾಗುತ್ತದೆ.
ಸೆಗುರಾ ತಂಡಕ್ಕೆ ಒಂದು ಕುತೂಹಲ. ವಿಕ್ಸ್, ಅಮೃತಾಂಜನ್ ಮೊದಲಾದ ಎಣ್ಣೆಗಳನ್ನು ಚರ್ಮದ ಮೇಲೆ ಉಜ್ಜಿದರೂ ಅವು ಒಳಗೆ ಹೋಗುತ್ತವೆ. ಅದೇ ರೀತಿಯಲ್ಲಿ ಲಸಿಕೆಗಳನ್ನೂ ಉಜ್ಜಿ ಚರ್ಮದ ಒಳಸೇರಿಸಬಹುದೇ? ಪ್ರತಿಕಾಯಗಳಂತಹ ಅಣುಗಳು ಒಳಗೆ ನುಸುಳುವಂತೆ ಮಾಡಿದರೂ, ರೋಗದಿಂದ ರಕ್ಷಿಸುವ ರಕ್ತಕಣಗಳು ಎಚ್ಚರಗೊಳ್ಳುವವೇ? ಇವೆರಡೂ ಕ್ರಿಯೆಗಳೂ ನಡೆದರಷ್ಟೆ ರೋಗವನ್ನು ಪ್ರತಿರೋಧಿಸುವ ಶಕ್ತಿಯನ್ನು ದೇಹ ಪಡೆಯುತ್ತದೆ. ಲಸಿಕೆ ಸಫಲವಾಗುತ್ತದೆ.
ಈ ಅನುಮಾನವನ್ನು ಪರೀಕ್ಷಿಸಲು ಸೆಗುರಾ ತಂಡ ಪ್ರಯೋಗಗಳನ್ನು ನಡೆಸಿತು. ಚರ್ಮವನ್ನು ಉಜ್ಜಿದಾಗ ಅಮೃತಾಂಜನ ಒಳಸೇರುತ್ತದೆ. ಏಕೆಂದರೆ ಅದು ವಿದ್ಯುದಾವೇಶ ಇರುವ ಅಣುಗಳ ಔಷಧ. ಆದರೆ ಲಸಿಕೆಗಳಲ್ಲಿ ಇರುವ ಪ್ರತಿಜನಕಗಳಲ್ಲಿ ವಿದ್ಯುದಾವೇಶ ಇರುವುದಿಲ್ಲ. ಅವು ಅಯಾನುಗಳಲ್ಲದ ಅಣುಗಳು. ಚರ್ಮದ ಮೇಲೆ ಉಜ್ಜಿದರೆ ಅವು ಒಳಸೇರುವವೇ?
ಇದನ್ನು ಪರೀಕ್ಷಿಸಲು ಸೆಗುರಾ ತಂಡ ಮೊದಲು ಉಜ್ಜಿದರೆ ಚರ್ಮದಲ್ಲಿ ಏನೇನು ಬದಲಾವಣೆಗಳಾಗುತ್ತವೆ ಎಂದು ಪರಿಶೀಲಿಸಿತು. ಒಂದು ಅನುಮಾನ. ಚುಚ್ಚುಮದ್ದನ್ನು ಚುಚ್ಚಿದಾಗ ಅಲ್ಲೇನಾಗುತ್ತದೆ? ಇದನ್ನು ಪರಿಶೀಲಿಸಲು ತಂಡ ಹೊರಟಿತು. ಚುಚ್ಚುಮದ್ದನ್ನು ಚುಚ್ಚಿದ ಜಾಗದಲ್ಲಿ ಚರ್ಮದಲ್ಲಾಗುವ ಬದಲಾವಣೆಗಳನ್ನು ಗುರುತಿಸಿತು. ಇಲಿಗಳ ಬೆನ್ನಿನ ಚರ್ಮವನ್ನು ಇಪ್ಪತ್ತು ನಿಮಿಷಗಳ ಕಾಲ ಎಳೆದು ಹಿಡಿದು, ಚರ್ಮದಡಿಯಲ್ಲಿರುವ ಸ್ನಾಯುಪದರದೊಳಗಡೆ ಇರುವ ವಸ್ತು ಹಾಗೂ ಸ್ನಾಯುಗಳ ಎಳೆಗಳನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಗಮನಿಸಿತು. ಚರ್ಮವನ್ನು ಎಳೆದು ಹಿಡಿದಾಗ, ಪದರದಲ್ಲಿನ ವಸ್ತುವಿನಲ್ಲಿ ಬದಲಾವಣೆ ಕಾಣದಿದ್ದರೂ, ಸ್ನಾಯುವಿನ ಎಳೆಗಳ ಜೋಡಣೆ, ಗಾಯವಾದಾಗ ಆಗುವಂತೆ, ಅಡ್ಡಾದಿಡ್ಡಿಯಾಯಿತು. ಗಾಯವಾದಾಗ ಚುರುಕಾಗುವ ನರಗಳು ಈಗಲೂ ಚುರುಕಾಗಿದ್ದುವು. ಅಂದರೆ ಚರ್ಮವನ್ನು ಎಳದರೆ ಅದು ಗಾಯವೇ ಆದಂತೆ ಪ್ರತಿಕ್ರಯಿಸುತ್ತದೆ. ಹಾಗಿದ್ದರೆ, ರೋಗದಿಂದ ರಕ್ಷಿಸುವ ರಕ್ತಕಣಗಳೂ ಗಾಯವಾದಂತೆಯೇ ಪ್ರತಿಕ್ರಯಿಸುತ್ತುವೆಯೇ ಎಂದೂ ಗಮನಿಸಿದರು. ಚರ್ಮವನ್ನು ಎಳೆದ ಜಾಗದಲ್ಲಿ ‘ಸಿಡಿ4’ ಬಿಳಿರಕ್ತಕಣಗಳೆಂಬ ರೋಗದಿಂದ ರಕ್ಷಿಸುವ ರಕ್ತಕಣಗಳು ಉಳಿದ ಕಡೆಗಳಿಗಿಂತ ದಟ್ಟವಾಗಿದ್ದುವು. ಚರ್ಮವನ್ನು ಎಳೆದ ಕಡೆಯಲ್ಲಿ ನೋವಾದಾಗ ಪ್ರತಿಕ್ರಯಿಸುವ ಚರ್ಮದ ಕೋಶಗಳ ಜೀನುಗಳೆಲ್ಲದರ ಚಟುವಟಿಕೆ ಹೆಚ್ಚಿತ್ತು. ಅಂದರೆ ರೋಗನಿರೋಧಕ ವ್ಯವಸ್ಥೆಯೂ ಚರ್ಮಕ್ಕೆ ಗಾಯವಾದ ಹಾಗೆಯೇ ಪ್ರತಿಕ್ರಯಿಸಿತ್ತು. ಅರ್ಥಾತ್, ಚರ್ಮವನ್ನು ಎಳೆದು ಹಿಡಿದರೆ ರೋಗನಿರೋಧಕತೆಯನ್ನು ಬಡಿದೆಬ್ಬಿಸಬಹುದು.
ಇನ್ನು ಅದಕ್ಕೆ ಪರಿಚಯ ನೀಡುವ ಪ್ರತಿಕಾಯಗಳನ್ನು ತೋರಿಸಬೇಕಷ್ಟೆ. ಅದಕ್ಕಾಗಿ ಅವನ್ನು ಚರ್ಮದೊಳಗೆ ಸೇರಿಸಬೇಕು. ಅದು ಸಾಧ್ಯವೇ? ವಸ್ತುಗಳು ಎಳೆದಿಟ್ಟ ಚರ್ಮದೊಳಗಿಂದ ನುಸುಳಬಲ್ಲವೇ? ಇದನ್ನು ಪರೀಕ್ಷಿಸಲು ಸೆಗುರಾ ತಂಡ ಎಳೆದಿಟ್ಟ ಚರ್ಮದ ಮೇಲೆ ‘ಡೆಕ್ಟ್ರಾನ್’ ಎನ್ನುವ ಬಣ್ಣವನ್ನು ಹಚ್ಚಿತು. ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಿದಾಗ ಈ ಬಣ್ಣ ಚರ್ಮದ ಮೇಲಿದ್ದ ರೋಮಗಳ ಬುಡದಿಂದ ಒಳ ನುಗ್ಗುತ್ತಿದ್ದುದು ಕಂಡಿತು. ಎಳೆದಿಟ್ಟ ಚರ್ಮದ ಸುತ್ತಮುತ್ತಲಿನ ಪ್ರದೇಶದಿಂದ ವಿವಿಧ ಅವಧಿಯ ನಂತರ ಕೋಶಗಳನ್ನು ತೆಗೆದು ಬಣ್ಣವಿದೆಯೇ ಎಂದು ಪರೀಕ್ಷಿಸಿದರು. ಬಣ್ಣ ನಿಧಾನವಾಗಿ ಒಳಸೇರಿದ್ದು ಗೊತ್ತಾಯಿತು. ಅಂದರೆ ದೊಡ್ಡ ಅಣುಗಳನ್ನೂ ಒಳಸೇರಿಸಬಹುದು. ಇನ್ನೊಂದು ಪ್ರಯೋಗದಲ್ಲಿ ಎಚ್1ಎನ್1 ಲಸಿಕೆಯಲ್ಲಿ ಬಳಸುವ ಪ್ರತಿಕಾಯವನ್ನು ಕೊಬ್ಬಿನ ದ್ರಾವಣದಲ್ಲಿ ಕೂಡಿಸಿ, ಚರ್ಮವನ್ನು ಎಳೆದು ಹಚ್ಚಿದರು. ಪ್ರತಿಕಾಯಗಳು ಎಲ್ಲೆಲ್ಲಿಗೆ ಹೋಗುತ್ತವೆ ಎಂದು ಗಮನಿಸಿದರು. ಅವು ರಕ್ತವನ್ನು ಹಾಗೂ ರೋಗ ಪ್ರತಿರೋಧಕತೆಯಲ್ಲಿ ಪ್ರಮುಖವಾದ ದುಗ್ಧರಸನಾಳಗಳನ್ನು ತಲುಪಿದ್ದನ್ನು ಕಂಡರು.
ಚರ್ಮವನ್ನು ಒಮ್ಮೆ ಹೀಗೆ ಎಳೆದಿಟ್ಟು, ಲಸಿಕೆಗಳನ್ನು ಹಚ್ಚಬಹುದು. ಚರ್ಮಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಲಸಿಕೆಯೂ ದೇಹದೊಳಗೆ ಸೇರುತ್ತದೆ. ಹಾಗಿದ್ದರೆ ನಾಳೆಯಿಂದಲೇ ಹೀಗೆ ಉಜ್ಜಿ ಲಸಿಕೆ ಹಚ್ಚೋಣ ಎಂದಿರಾ? ತಾಳಿ, ಇದೇ ರೀತಿಯಲ್ಲಿ ಪರಿಸರದಲ್ಲಿರುವ ಅಲರ್ಜಿ ತರುವ ವಸ್ತುಗಳು, ವಿಷವಸ್ತುಗಳೂ ಚರ್ಮದೊಳಗೆ ಸೇರಬಹುದಾದ ಅಪಾಯ ಇರಬಹುದು. ಅದನ್ನು ನಿಶ್ಚಯಿಸದೆ ಆತುರ ಬೇಡ ಎನ್ನುತ್ತಾರೆ ಸೆಗುರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.