ADVERTISEMENT

ಫೇಸ್‌ಬುಕ್‌ನಲ್ಲಿ ನಿಮ್ಮ ಮುಖ ಗುರುತಿಸುವ ಹೊಸ ಫೀಚರ್

ರಶ್ಮಿ ಕಾಸರಗೋಡು
Published 8 ಮಾರ್ಚ್ 2018, 13:06 IST
Last Updated 8 ಮಾರ್ಚ್ 2018, 13:06 IST
   

ಫೇಸ್‌ಬುಕ್‌ ಬಳಕೆದಾರರ ಖಾಸಗಿತನದ ಕಾಳಜಿ ವಹಿಸಿರುವ ಫೇಸ್‌ಬುಕ್‌ ಇದೀಗ ಫೇಸ್ ರೆಕಗ್ನಿಶನ್ ಫೀಚರ್‌ ಅನ್ನು ಪರಿಚಯಿಸಿದೆ. ಫೇಸ್‌ಬುಕ್‌ನಲ್ಲಿ ನಿಮ್ಮ ಅನುಮತಿ ಇಲ್ಲದೆ ಅಥವಾ ನಿಮ್ಮ ಅರಿವಿಗೆ ಬಾರದಂತೆ ಯಾರಾದರೂ ನಿಮ್ಮ ಫೋಟೊವನ್ನು ಪೋಸ್ಟ್ ಮಾಡಿದ್ದರೆ ಆ ವಿಷಯವನ್ನು ಫೇಸ್‌ಬುಕ್‌, ಫೇಸ್ ರೆಕಗ್ನಿಷನ್ ನೋಟಿಫಿಕೇಶನ್ ಮೂಲಕ ನಿಮ್ಮ ಗಮನಕ್ಕೆ ತರುತ್ತದೆ.

ನಾವು ಪೋಸ್ಟ್ ಮಾಡಿದ ಫೋಟೊದಲ್ಲಿ ನಮ್ಮ ಸ್ನೇಹಿತರ ಚಹರೆ ಗುರುತಿಸಿ ಟ್ಯಾಗ್ ಮಾಡಲು ಸಹಾಯ ಮಾಡುವ ವಿಧಾನ ಈಗಾಗಲೇ ಫೇಸ್‌ಬುಕ್‌ನಲ್ಲಿದೆ. ಅದೇ ರೀತಿ ನಿಮ್ಮ ಫೋಟೊವನ್ನು ಬೇರೆ ಯಾರಾದರೂ ಪೋಸ್ಟ್ ಮಾಡಿದ್ದರೆ ಫೇಸ್ ರೆಕಗ್ನಿಷನ್ ಆ ವಿಷಯವನ್ನು ನಿಮಗೆ ತಿಳಿಸುತ್ತದೆ.

ಫೇಸ್ ರೆಕಗ್ನಿಷನ್ ಆಯ್ಕೆ ಎಲ್ಲಿದೆ? : ವಾರದ ಹಿಂದೆ ಫೇಸ್ ಬುಕ್ ಈ ಫೀಚರ್‌ ಅನ್ನು ಪರಿಚಯಿಸಿದ್ದು ಫೇಸ್‌ಬುಕ್‌ಗೆ ಲಾಗಿನ್ ಆದ ಕೂಡಲೇ ಫೇಸ್‌ಬುಕ್‌ ರೆಕಗ್ನಿಷನ್ ಆಯ್ಕೆಯನ್ನು ಆಕ್ಟಿವೇಟ್ ಮಾಡಬೇಕೇ ಎಂಬ ಸಂದೇಶ ಕಾಣಿಸಿಕೊಂಡಿತ್ತು. ಆಗಲೇ ನೀವು ಯೆಸ್ ಎಂಬ ಆಯ್ಕೆಯನ್ನು ಮಾಡಿದ್ದರೆ ನಿಮ್ಮ ಫೇಸ್‌ಬುಕ್‌ನಲ್ಲಿ ಈ ಆಯ್ಕೆ ಆಕ್ಟಿವೇಟ್ ಆಗಿರುತ್ತದೆ. ಒಂದು ವೇಳೆ ಇಲ್ಲ ಎಂದಾದರೆ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅದರಲ್ಲಿ ಪ್ರೈವೆಸಿ ಸೆಟ್ಟಿಂಗ್ಸ್‌ನಡಿಯಲ್ಲಿ ಫೇಸ್ ರೆಕಗ್ನಿಷನ್ ಸೆಟ್ಟಿಂಗ್ಸ್ ಎಂಬ ಆಯ್ಕೆ ಕಾಣುತ್ತದೆ. ಅಲ್ಲಿ Do you want Facebook to be able to recognize you in Photos and videos ? ಎಂಬ ಪ್ರಶ್ನೆಗೆ Yes ಎಂದು ಆಯ್ಕೆ ಮಾಡಿದರೆ ಈ ಫೀಚರ್ ನಿಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಆಕ್ಟಿವೇಟ್ ಆಗುತ್ತದೆ.

ADVERTISEMENT

ಏನು ಪ್ರಯೋಜನ?: ಫೋಟೊಗಳ ದುರ್ಬಳಕೆ ತಡೆಯುವುದಕ್ಕಾಗಿ ಈ ಫೀಚರ್ ಸಹಾಯ ಮಾಡುತ್ತದೆ. ನಕಲಿ ಖಾತೆಗಳನ್ನು ಕ್ರಿಯೇಟ್ ಮಾಡಿ ಅದರಲ್ಲಿ ಇನ್ಯಾರದ್ದೋ ಫೋಟೊ ಬಳಸುವುದನ್ನು ಮತ್ತು ‘ರಿವೆಂಜ್ ಪೋರ್ನೊಗ್ರಫಿ’ ತಡೆಯಲು ಈ ಫೀಚರ್‌ನಿಂದ ಸಾಧ್ಯ ಎಂದು ಫೇಸ್‌ಬುಕ್‌ ಹೇಳಿದೆ.

ಎಡವಟ್ಟು ಆಗುವುದೂ ಸಹಜ: ಒಂದು ವೇಳೆ ನೀವು ಅಪ್ ಲೋಡ್ ಮಾಡಿದ ಚಿತ್ರದಲ್ಲಿ ಅಪರಿಚಿತ ಮುಖಗಳಿದ್ದರೆ, ಫೇಸ್ ರೆಕಗ್ನಿಷನ್ ಅಲ್ಗಾರಿಥಂ ಆ ಮುಖವನ್ನು ಪತ್ತೆ ಹಚ್ಚಿ ಅವರಿಗೆ ವಿಷಯವನ್ನು ತಿಳಿಸುತ್ತದೆ. ಹೀಗಾದರೆ ಆ ಅಪರಿಚಿತ ವ್ಯಕ್ತಿಯಿಂದ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಬರುವ ಸಾಧ್ಯತೆಯೂ ಇರುತ್ತದೆ. ಆ ಫೋಟೊ ಟ್ಯಾಗ್ ಆಗುವ ಮೂಲಕ ಅವರಿಗೆ ನೋಟಿಫಿಕೇಶನ್ ಮೂಲಕ ನಿಮ್ಮ ಫೋಟೊ ಕಾಣುತ್ತದೆ. ಈ ಮೂಲಕ ಅಪರಿಚಿತರೊಂದಿಗೆ ಕನೆಕ್ಟ್ ಆಗುವ ಸಾಧ್ಯತೆ ಇದೆ. ಇಂಥ ಎಡವಟ್ಟುಗಳ ಬಗ್ಗೆ ಫೇಸ್‌ಬುಕ್ ಯಾವುದೇ ರೀತಿಯ ಉತ್ತರ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.