ADVERTISEMENT

ಆನ್‌ಲೈನ್‌ ಖರೀದಿ: ಬೆಂಬಿಡದ ಜಾಹೀರಾತುಗಳು!

ವಿಶ್ವನಾಥ ಎಸ್.
Published 10 ಮಾರ್ಚ್ 2021, 1:45 IST
Last Updated 10 ಮಾರ್ಚ್ 2021, 1:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡಿಜಿಟಲ್‌ ಯುಗದಲ್ಲಿ ಆನ್‌ಲೈನ್‌ ಖರೀದಿಯ ಮೇಲೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ. ಡಿಸ್ಕೌಂಟ್‌ ಕೊಡುಗೆಗಳು, ರಿಯಾಯಿತಿ ದರ, ಕ್ಯಾಷ್‌ಬ್ಯಾಕ್‌ ಎನ್ನುವ ಮೋಡಿಯ ಜೊತೆ ಜೊತೆಗೆ ಕುಳಿತಲ್ಲಿಯೇ ಎಲ್ಲವನ್ನೂ ಖರೀದಿಸಿ ಬಿಡಬಹುದಾದ ಸೌಲಭ್ಯವು ಎಲ್ಲರನ್ನೂ ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ. ಆನ್‌ಲೈನ್‌ ಖರೀದಿಯಲ್ಲಿ ಮೋಸ ಹೋಗುವುದು ಒಂದೆಡೆಯಾದರೆ, ಆ ರೀತಿ ಖರೀದಿಸುವಾಗ ಇನ್ನಷ್ಟು ಖರೀದಿಸುವಂತೆ ನಮ್ಮನ್ನು ಉತ್ತೇಜಿಸುವ ಜಾಹೀರಾತುಗಳು ಇನ್ನೊಂದೆಡೆ!

ಹೌದು, ಬೆಲೆ, ಕಾರ್ಯಸಾಮರ್ಥ್ಯದ ಆಧಾರದ ಮೇಲೆ ಒಂದು ಸ್ಮಾರ್ಟ್‌ಫೋನ್‌ ಖರೀದಿಸಲು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದಿರಿ ಎಂದುಕೊಳ್ಳಿ. ತಕ್ಷಣವೇ ನಿಮಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗದಷ್ಟರ ಮಟ್ಟಿಗೆ ಬೇರೆ ಬೇರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಳ್ಳುತ್ತವೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಲಿಂಕ್ಡ್‌ಇನ್‌ - ಹೀಗೆ ನೀವು ಯಾವೆಲ್ಲಾ ಸಾಮಾಜಿಕ ಜಾಲತಾಣಗಳನ್ನು ಬಳಸುವಿರೋ ಅಲ್ಲೆಲ್ಲಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜಾಹೀರಾತುಗಳು ಬರಲಾರಂಭಿಸುತ್ತವೆ. ವೆಬ್‌ಸೈಟ್‌ಗಳಲ್ಲಿಯೂ ಪಾಪಪ್‌ ಆಗುತ್ತಿರುತ್ತವೆ. ವೆಬ್‌ಕುಕೀಸ್‌ಗಳು ನಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಸಂಗ್ರಹಿಸುತ್ತಾ ಇರುವುದರಿಂದಲೇ ಈ ರೀತಿ ಆಗುತ್ತಿರುತ್ತದೆ.

ಕಂಪನಿಗಳು ನಮಗೆ ಗೊತ್ತಿಲ್ಲದಂತೆಯೇ ನಮ್ಮ ಬ್ರೌಸಿಂಗ್‌ ಹಿಸ್ಟರಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿರುತ್ತವೆ. ಮಾತ್ರವಲ್ಲ, ಇನ್ನಷ್ಟು–ಮತ್ತಷ್ಟು ಖರೀದಿಸುವಂತೆ ಪ್ರೇರೇಪಿಸುವ ತರಹದ ಜಾಹೀರಾತುಗಳು ಬರುತ್ತಲೇ ಇರುತ್ತವೆ. ಆನ್‌ಲೈನ್‌ ಜಾಹೀರಾತು ಲೋಕ ವೇಗವಾಗಿ ಬೆಳೆಯುತ್ತಿರುವುದು ಹೀಗಾಗಿಯೇ. ಆನ್‌ಲೈನ್‌ನಲ್ಲಿ ಖರೀದಿಸುವಾಗ ನಾವು ನಮ್ಮ ಮೊಬೈಲ್‌ ನಂಬರ್, ಇ–ಮೇಲ್ ವಿಳಾಸ ನೀಡುತ್ತೇವೆ. ಇದರಿಂದಾಗಿಯೇ ಜಾಹೀರಾತುಗಳು ನಮ್ಮನ್ನು ಹಿಂಬಾಲಿಸುವಂತಾಗುತ್ತದೆ.

ADVERTISEMENT

ಇಂತಹ ಜಾಹೀರಾತುಗಳನ್ನು ನಿಯಂತ್ರಿಸಲು ಆ್ಯಡ್‌ ಬ್ಲಾಕ್‌ ಪ್ಲಸ್, ಆ್ಯಡ್‌ ಗಾರ್ಡ್‌ನಂತಹ ಕೆಲವು ಉಚಿತವಾಗಿ ತಂತ್ರಾಂಶಗಳಿವೆ. ಇವುಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡ ಬಳಿಕ ಮೊಬೈಲ್‌ ಸೆಟ್ಟಿಂಗ್ಸ್‌ ಮೂಲಕ ಸೆಕ್ಯುರಿಟಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿ unknown source ಆನ್‌ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಕ್ರೋಮ್‌ ಬ್ರೌಸರ್‌ನಲ್ಲಿ ಪಾಪ್‌ ಆ್ಯಡ್‌ ಅನ್ನು ತಡೆಯಲು ಸೆಟ್ಟಿಂಗ್ಸ್‌ನಲ್ಲಿ ಸೈಟ್‌ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ ಪಾಪಪ್‌ ಮತ್ತು ರಿಡೈರೆಕ್ಟ್‌ ಅನ್ನು ಟರ್ನ್‌ ಆಫ್‌ ಮಾಡಬೇಕು.

ನಾವು ಇಂದು ಆನ್‌ಲೈನ್‌ ಜಗತ್ತಿಗೆ ಹೆಚ್ಚು ತೆರೆದುಕೊಂಡಿರುವುದರಿಂದ ಸಾಮಾಜಿಕ ಜಾಲತಾಣಗಳಿಗೆ,
ಇ–ಕಾಮರ್ಸ್‌ ಆ್ಯಪ್‌ಗಳಿಗೆ ಲಾಗಿನ್ ಆಗಲು ನಮ್ಮ ಮೊಬೈಲ್‌ ಸಂಖ್ಯೆ, ಇ–ಮೇಲ್‌ ವಿಳಾಸ ನೀಡಿರುತ್ತೇವೆ. ಇಷ್ಟು ಸಾಕು ನಮ್ಮ ಆನ್‌ಲೈನ್ ಚಟುವಟಿಕೆಗಳ ಮೇಲೆ ಕಣ್ಣಿಡಲು. ನಾವು ಬಯಸಲಿ, ಬಯಸದೇ ಇರಲಿ, ನಮ್ಮ ಅಭಿರುಚಿ, ಆಯ್ಕೆಗಳು ಹಾಗೂ ಇಷ್ಟಗಳಿಗೆ ಅನುಗುಣವಾಗಿ ಜಾಹೀರಾತುಗಳು ಹೇಗಾದರೂ ನುಸುಳುತ್ತಲೇ ಇರುತ್ತವೆ. ಇಂತಹವುಗಳಿಂದ ಸಂಪೂರ್ಣ ಹೊರಬರುವುದು ಕಷ್ಟ. ಒಂದಷ್ಟು ನಿಯಂತ್ರಿಸಿಕೊಳ್ಳಲಂತೂ ಸಾಧ್ಯವಿದೆ. ಈಗಾಗಲೇ ಇರುವ ಫೇಸ್‌ಬುಕ್‌ ಮೂಲಕ ಇನ್ನೊಂದು ಸಾಮಾಜಿಕ ಜಾಲತಾಣಕ್ಕೆ ಲಾಗಿನ್‌ ಆಗುವುದನ್ನು ತಪ್ಪಿಸಿ, ಇ–ಮೇಲ್‌ ಮೂಲಕವೇ ಲಾಗಿನ್‌ ಆಗಿ ಪ್ರತಿಯೊಂದಕ್ಕೂ ಬೇರೆಯದೇ ಆದ ಪಾಸ್‌ವರ್ಡ್‌ ಸೃಷ್ಟಿಸಿಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.