ADVERTISEMENT

ಹಿಂದಿ ಭಾಷೆ ಕುರಿತ ದೊಡ್ಡರಂಗೇಗೌಡ ಹೇಳಿಕೆಗೆ ವ್ಯಾಪಕ ಆಕ್ಷೇಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2021, 18:46 IST
Last Updated 23 ಜನವರಿ 2021, 18:46 IST
ಪ್ರೊ.ದೊಡ್ಡರಂಗೇಗೌಡ (ಸಂಗ್ರಹ ಚಿತ್ರ)
ಪ್ರೊ.ದೊಡ್ಡರಂಗೇಗೌಡ (ಸಂಗ್ರಹ ಚಿತ್ರ)   

ಬೆಂಗಳೂರು: ಹಿಂದಿ ಭಾಷೆಯ ಕುರಿತಾಗಿ 86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ನೀಡಿದ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

‘ದೊಡ್ಡರಂಗೇಗೌಡ ಅವರು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಅವರನ್ನು ಬದಲಾಯಿಸಿ ಬೇರೆಯವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು...’ ಹೀಗೆ ತರಹೇವಾರಿ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಹೇಳಿಕೆ ವಿರೋಧಿಸಿ ಹಾಗೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವಂತೆ ಆಗ್ರಹಿಸಿ ಟ್ವಿಟರ್‌ನಲ್ಲಿ ಅಭಿಯಾನ ನಡೆಸಲೂ ಕೆಲವರು ಕರೆಕೊಟ್ಟಿದ್ದಾರೆ.

ದೊಡ್ಡರಂಗೇಗೌಡ ಹೇಳಿದ್ದೇನು?

ADVERTISEMENT

‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ದೊಡ್ಡರಂಗೇಗೌಡರು, ‘ಇಂಗ್ಲಿಷಿಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು. ಹಿಂದಿ ನಮ್ಮ ರಾಷ್ಟ್ರ ಭಾಷೆ. ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಸ್ಥಾನಮಾನವಿದೆ. ಇಂಗ್ಲಿಷ್ ಒಪ್ಪುವ ನಾವು ಹಿಂದಿ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ.

‘ಹಿಂದಿ ರಾಷ್ಟ್ರ ಭಾಷೆಯಲ್ಲ’

‘ಹಿಂದಿ ನಮಗೆ ಬೇಕಿಲ್ಲ ಎಂಬುದು ಕುವೆಂಪು ಮತ್ತು ಹಿರಿಯ ಸಾಹಿತಿಗಳು ಮೊದಲಿನಿಂದಲೂ ವ್ಯಕ್ತಪಡಿಸಿರುವ ಅಭಿಪ್ರಾಯ. ಅದರ ಆಳ ಅರಿಯದ, ನಾಲ್ಕು ಸಿನಿಮಾ ಹಾಡು ಬರೆದಿರುವ ಇವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೇ? ತಕ್ಷಣ ಈ ಆಯ್ಕೆಯನ್ನು ವಾಪಸ್ಸು ಪಡೆದು, ಒಬ್ಬ ನಿಜವಾದ ಕನ್ನಡ ಸಾಹಿತಿಯನ್ನ ನೇಮಿಸಿ! ಈ ಬಗ್ಗೆ ಶನಿವಾರ ಮತ್ತು ಭಾನುವಾರ ಅಭಿಯಾನ ಮಾಡುವ!’ ಎಂದು ಪ್ರಹ್ಲಾದ್ ಕೆ. ಹನುಮಂತಯ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಹಿಂದಿ ಕಬ್ಬಿಣದ ಸಲಾಕೆ’

‘ಇಂಗ್ಲಿಷ್ ಮರದ ದೊಣ್ಣೆಯಾದರೆ, ಹಿಂದಿ ಕಬ್ಬಿಣದ ಸಲಾಕೆ ಎಂದು 1957ರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕುವೆಂಪು ಹೇಳಿದ್ದರು. ಹಿಂದಿ ರಾಷ್ಟ್ರಭಾಷೆ, ಹಿಂದಿ ಭಾಷೆಯನ್ನು ಏಕೆ ನಾವು ಒಪ್ಪಬಾರದು ಎಂದು 2021 ಸಾಹಿತ್ಯ ಸಮ್ಮೇಳನ ಅಧ್ಯಕ್ಷ ದೊಡ್ಡರಂಗೇಗೌಡ ಪ್ರಶ್ನಿಸುತ್ತಿದ್ದಾರೆ’ ಎಂದು ವಿಶ್ವಾಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಮೊದಲು ದೊಡ್ಡರಂಗೇಗೌಡ ಅವರಿಗೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ, ಭಾಷೆ ವಿರೋಧ ಯಾರೂ ಮಾಡುತ್ತಿಲ್ಲ. ಅನಾವಶ್ಯಕ ಹೇರಿಕೆಯ ವಿರೋಧ ಎಂಬುದನ್ನು ತಿಳಿಸಿ. ಎಲ್ಲಾ ಭಾಷೆಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಉತ್ತರ ಭಾರತದಲ್ಲಿ ನಮ್ಮ ಕನ್ನಡಕ್ಕೆ ಸ್ಥಾನಮಾನ ನೀಡಿದ್ದಾರೆಯೇ ಎಂದು ಕೇಳಿ. #ಹಿಂದಿಗುಲಾಮಗಿರಿಬೇಡ’ ಎಂದು ಆದರ್ಶ ಎಚ್‌.ಎಂ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಈವರೆಗೆ ನೀವು ಕನ್ನಡ ಭಾಷೆಯಿಂದ ಪಡೆದ ಬಿರುದುಗಳನ್ನೆಲ್ಲ ಹಿಂದಿರುಗಿಸಿ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗುವುದು ಬೇಡ. ಹಿಂದಿ ಸಾಹಿತ್ಯ ಶುರು ಮಾಡಿ, ಹಿಂದಿ ಸಮ್ಮೇಳನಕ್ಕೆ ನಿಮ್ಮನ್ನು ಕರೆಯುವವರೆಗೆ ಕಾಯಿರಿ’ ಎಂದು ಗುರು ಪ್ರಸಾದ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಹಿಂದಿ ಹೇರಿಕೆಯ ತಿರಸ್ಕಾರಕ್ಕೂ ಹಿಂದಿ ಭಾಷೆಯ ತಿರಸ್ಕಾರಕ್ಕೂ ವ್ಯತ್ಯಾಸ ಗೊತ್ತಿಲ್ಲದವರು ಸಮ್ಮೇಳನದ ಅಧ್ಯಕ್ಷರು....!’ ಎಂದು ಗೌತಮ್ ಗಣೇಶ್ ಎಂ ಎಚ್ ಎಂಬುವವರು ವ್ಯಂಗ್ಯವಾಡಿದ್ದಾರೆ.

‘ದೊಡ್ಡರಂಗೇಗೌಡರಿಗೆ ಅರಿವಿನ ಕೊರತೆಯೋ ವಿಚಾರ ನಿಷ್ಠೆಗಿಂತಲೂ ತಮ್ಮನ್ನು ಗೌರವಿಸಿದ (ತಕ್ಕುದಾದ ಗೌರವ) ಪಕ್ಷ ನಿಷ್ಠೆಯೋ ತಿಳಿಯದು’ ಎಂದು ಅಭಿಷೇಕ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಟ್ವೀಟ್‌ಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.