ADVERTISEMENT

ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದರೆ ಶೇಕಡ 75ರಷ್ಟು ಉದ್ಯೋಗಿಗಳು ವಜಾ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2022, 5:23 IST
Last Updated 21 ಅಕ್ಟೋಬರ್ 2022, 5:23 IST
   

ನವದೆಹಲಿ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು ಖರೀದಿಸಿದರೆ, ಅಲ್ಲಿನ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಶೇಕಡ 75 ರಷ್ಟು ಟ್ವಿಟರ್ ಸಿಬ್ಬಂದಿಯನ್ನು ಕಡಿತಗೊಳಿಸಲು ಮಸ್ಕ್ ಯೋಜಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಈ ವರದಿ ಕುರಿತಂತೆ ಪ್ರತಿಕ್ರಿಯಿಸಿರುವ ಟ್ವಿಟರ್, ಉದ್ಯೋಗಿಗಳನ್ನು ವಜಾಗೊಳಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದೆ. ಉದ್ಯಮದಲ್ಲಿನ ಆರ್ಥಿಕ ಕುಸಿತದ ಮಧ್ಯೆ ನೇಮಕಾತಿಯನ್ನು ನಿಧಾನಗೊಳಿಸಲಾಗಿದೆ ಎಂದು ಜುಲೈನಲ್ಲಿ ಟ್ವಿಟರ್ ಹೇಳಿತ್ತು.

ADVERTISEMENT

ಒಂದೊಮ್ಮೆ ಈ ವರದಿ ಸೂಚಿಸಿದಂತೆ, ಶೇಕಡ 75 ರಷ್ಟು ಉದ್ಯೋಗಿಗಳನ್ನು ತೆಗೆದುಹಾಕಿದರೆ ಟ್ವಿಟರ್ ವೇದಿಕೆಯಲ್ಲಿ ಹಾನಿಕಾರಕ ಕಂಟೆಂಟ್ ಮತ್ತು ಸ್ಪ್ಯಾಮ್‌ ತ್ವರಿತವಾಗಿ ಹೆಚ್ಚಾಗುವ ಆತಂಕವಿದೆ. ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸ್ಪ್ಯಾಮ್ ಖಾತೆಗಳನ್ನು ತೊಡೆದುಹಾಕಲು ಯೋಜಿಸಲಾಗಿದೆ ಎಂದು ಮಸ್ಕ್ ಈ ಹಿಂದೆ ಹೇಳಿದ್ದರು.

ಟ್ವಿಟರ್ ಖರೀದಿ ಒಪ್ಪಂದದ ಕುರಿತು, ಟ್ವಿಟರ್ ಮತ್ತು ಎಲಾನ್ ಮಸ್ಕ್ ನ್ಯಾಯಾಲಯದ ಹೋರಾಟದಲ್ಲಿ ತೊಡಗಿರುವ ಸಮಯದಲ್ಲೇ ಈ ವರದಿ ಬಂದಿದೆ.

ಟೆಸ್ಲಾ ಸಿಇಒ ಏಪ್ರಿಲ್‌ನಲ್ಲಿ ಟ್ವಿಟರ್ ಖರೀದಿಸಲು ಒಪ್ಪಿಕೊಂಡಿದ್ದರು. ಆದರೆ, ಜುಲೈನಲ್ಲಿ, ನಕಲಿ ಮತ್ತು ಸ್ಪ್ಯಾಮ್ ಬಾಟ್ ಖಾತೆಗಳ ಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಸ್ಕ್ ಅವರು ಒಪ್ಪಂದವನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಹೇಳಿದ್ದರು. ಮಸ್ಕ್ ಅವರ ಹೇಳಿಕೆಯನ್ನು ತಿರಸ್ಕರಿಸಿದ್ದ ಟ್ವಿಟರ್ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.