ADVERTISEMENT

ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೋರಿಕೆ; ಭಾರತಕ್ಕೆ ಎರಡನೆಯ ಸ್ಥಾನ

ಪಿಟಿಐ
Published 20 ನವೆಂಬರ್ 2020, 11:24 IST
Last Updated 20 ನವೆಂಬರ್ 2020, 11:24 IST
ಫೇಸ್‌ಬುಕ್‌
ಫೇಸ್‌ಬುಕ್‌   

ನವದೆಹಲಿ: ಜನವರಿಯಿಂದ ಜೂನ್‌ ನಡುವಣ ಅವಧಿಯಲ್ಲಿ ಸರ್ಕಾರಗಳು ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೇಳುವ ಪ್ರಮಾಣವು ಶೇಕಡ 23ರಷ್ಟು ಹೆಚ್ಚಳ ಆಗಿದೆ. ಮಾಹಿತಿ ಕೇಳುವ ದೇಶಗಳ ಸಾಲಿನಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ.

ಫೇಸ್‌ಬುಕ್‌ ಪ್ರಕಟಿಸಿರುವ ಪಾರದರ್ಶಕತೆಗೆ ಸಂಬಂಧಿಸಿದ ಇತ್ತೀಚಿನ ವರದಿ ಅನುಸಾರ ಭಾರತವು ಒಟ್ಟು 35,560 ಕೋರಿಕೆಗಳನ್ನು ಈ ಅವಧಿಯಲ್ಲಿ ಸಲ್ಲಿಸಿದೆ. ಶೇಕಡ 50ರಷ್ಟು ಪ್ರಕರಣಗಳಲ್ಲಿ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಸಂಬಂಧಿಸಿದ ಒಂದಲ್ಲ ಒಂದು ವಿವರವನ್ನು ಸರ್ಕಾರಕ್ಕೆ ನೀಡಿದೆ.

2019ರ ಉತ್ತರಾರ್ಧದಲ್ಲಿ (ಜುಲೈನಿಂದ ಡಿಸೆಂಬರ್‌ವರೆಗಿನ ಅವಧಿ) ಜಾಗತಿಕ ಮಟ್ಟದಲ್ಲಿ ಸರ್ಕಾರಗಳ ಕಡೆಯಿಂದ ಒಟ್ಟು 1.40 ಲಕ್ಷ ಕೋರಿಕೆಗಳು ಫೇಸ್‌ಬುಕ್‌ಗೆ ಬಂದಿದ್ದವು. ಇದು 2020ರ ಮೊದಲ ಆರು ತಿಂಗಳಲ್ಲಿ (ಜನವರಿಯಿಂದ ಜೂನ್‌ವರೆಗಿನ ಅವಧಿ) 1.73 ಲಕ್ಷಕ್ಕೆ ಹೆಚ್ಚಳವಾಗಿದೆ.

ADVERTISEMENT

ಜನವರಿ–ಜೂನ್‌ ನಡುವಿನ ಅವಧಿಯಲ್ಲಿ ಅತಿಹೆಚ್ಚಿನ ಕೋರಿಕೆಗಳು, ಅಂದರೆ 61,528, ಅಮೆರಿಕದಿಂದ ಬಂದಿವೆ. ಅಮೆರಿಕದಿಂದ ಬಂದ ಕೋರಿಕೆಗಳಿಗೆ ಸಂಬಂಧಿಸಿದಂತೆ ಶೇಕಡ 88ರಷ್ಟು ಪ್ರಕರಣಗಳಲ್ಲಿ ಒಂದಲ್ಲ ಒಂದು ಮಾಹಿತಿ ನೀಡಲಾಗಿದೆ ಎಂದು ಫೇಸ್‌ಬುಕ್‌ ವರದಿ ಹೇಳಿದೆ. ಅಮೆರಿಕ ಮತ್ತು ಭಾರತದ ನಂತರದ ಸ್ಥಾನಗಳಲ್ಲಿ ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್ ಇವೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಕಾನೂನಿಗೆ ಅನುಗುಣವಾಗಿ ಹಾಗೂ ಸೇವಾ ನಿಯಮಗಳಿಗೆ ಅನುಸಾರವಾಗಿ ತಾನು ತನ್ನ ಬಳಕೆದಾರರ ವಿವರಗಳನ್ನು ಸರ್ಕಾರಗಳ ಜೊತೆ ಹಂಚಿಕೊಳ್ಳುವುದಾಗಿ ಫೇಸ್‌ಬುಕ್‌ ಹೇಳಿದೆ. ಕೋರಿಕೆಗಳಲ್ಲಿ ಸ್ಪಷ್ಟತೆ ಇಲ್ಲದಿದ್ದರೆ, ಅಂಥವುಗಳನ್ನು ಮಾನ್ಯ ಮಾಡದಿರಬಹುದು ಅಥವಾ ಹೆಚ್ಚು ಸ್ಪಷ್ಟವಾಗಿ ಕೋರಿಕೆ ಸಲ್ಲಿಸುವಂತೆ ತಾನು ಸರ್ಕಾರಗಳಿಗೆ ಹೇಳಬಹುದು ಎಂದು ಫೇಸ್‌ಬುಕ್‌ ತಿಳಿಸಿದೆ.

‘ಗ್ರಾಹಕರಿಗೆ ಸಂಬಂಧಿಸಿದ ವಿವರಗಳನ್ನು ಪಡೆಯಲು ನಾವು ಸರ್ಕಾರಗಳಿಗೆ ಹಿಂಬಾಗಿಲ ಪ್ರವೇಶ ನೀಡುವುದಿಲ್ಲ. ಸರ್ಕಾರಗಳಿಗೆ ಮಾಹಿತಿ ಪಡೆಯಲು ನೇರ ಅವಕಾಶವನ್ನೂ ನೀಡುವುದಿಲ್ಲ’ ಎಂದು ಅದು ಹೇಳಿದೆ. ಜನವರಿ–ಜೂನ್‌ ಅವಧಿಯಲ್ಲಿ ಭಾರತದಲ್ಲಿ ಒಟ್ಟು 824 ವಸ್ತು–ವಿಷಯಗಳನ್ನು ಫೇಸ್‌ಬುಕ್‌ ನಿರ್ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.