ADVERTISEMENT

ಅಸಲಿ ಖಾತೆಗಳ ದೃಢೀಕರಣದ ಮಾಹಿತಿ ನೀಡಿದರೆ ಟ್ವಿಟರ್ ಖರೀದಿ ಮಾಡುವೆ: ಮಸ್ಕ್

ರಾಯಿಟರ್ಸ್
Published 6 ಆಗಸ್ಟ್ 2022, 10:27 IST
Last Updated 6 ಆಗಸ್ಟ್ 2022, 10:27 IST
   

ನವದೆಹಲಿ: ಟ್ವಿಟರ್ ತನ್ನ ಯಾವುದಾದರೂ 100 ಖಾತೆಗಳನ್ನು ಅಸಲಿ ಎಂದು ಹೇಗೆ ದೃಢಪಡಿಸಿತು ಎಂಬುದನ್ನು ಹೇಳಿದರೆ, 44 ಬಿಲಿಯನ್ ಡಾಲರ್ ಒಪ್ಪಂದವು ಮೂಲ ನಿಯಮಗಳ ಆಧಾರದ ಮೇಲೆ ಮುಂದುವರಿಯಲಿದೆ ಎಂದು ಉದ್ಯಮಿ ಇಲಾನ್ ಮಸ್ಕ್ ಹೇಳಿದ್ದಾರೆ.

'ಆದಾಗ್ಯೂ, ಅವರು ಎಸ್‌ಇಸಿಗೆ ಸಲ್ಲಿಸಿರುವ ದಾಖಲೆಗಳು ಸುಳ್ಳಾಗಿದ್ದರೆ, ಅದನ್ನು ಮಾಡಲು ಬರುವುದಿಲ್ಲ’ ಎಂದು ಮಸ್ಕ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಕಂಪನಿ ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ನನ್ನನ್ನು ಮೋಸಗೊಳಿಸಲಾಗಿದೆ ಎಂದು ಪ್ರತಿ ದಾವೆಯಲ್ಲಿ ಮಸ್ಕ್ ಮಾಡಿರುವ ಆರೋಪಗಳನ್ನು ಟ್ವಿಟರ್ ಗುರುವಾರ ತಳ್ಳಿಹಾಕಿದ್ದು, ಅದು ಅಸಂಭವ ಮತ್ತು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಹೇಳಿತ್ತು.

ADVERTISEMENT

ಟ್ವಿಟರ್ ತನ್ನ ನಕಲಿ ಮತ್ತು ಸ್ಪ್ಯಾಮ್ ಖಾತೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ, ಇಲಾನ್ ಮಸ್ಕ್ ಖರೀದಿ ಒಪ್ಪಂದವನ್ನು ಕೈಬಿಟ್ಟಿದ್ದರು.

ಇದಾದ ಬಳಿಕ ಟ್ವಿಟರ್ ನ್ಯಾಯಾಲಯದ ಮೆಟ್ಟಿಲೇರಿತ್ತು. ‘ಟ್ವಿಟರ್ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸುವಂತೆ ಮಸ್ಕ್ ಅವರಿಗೆ ಆದೇಶಿಸಬೇಕು’ಎಂದು ಟ್ವಿಟರ್ ಕಂಪನಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿತ್ತು. ಅಲ್ಲದೆ, ಮಸ್ಕ್ ಅವರಿಗೆ ಎಷ್ಟೇ ದಂಡ ವಿಧಿಸಿದರೂ, ಆಗಿರುವ ನಷ್ಟವನ್ನು ಸರಿಪಡಿಸಲು ಆಗುವುದಿಲ್ಲ ಎಂದು ಅದು ಹೇಳಿತ್ತು.

‘ಖರೀದಿ ಒಪ್ಪಂದದಿಂದ ನುಣುಚಿಕೊಳ್ಳಲು ಮಸ್ಕ್ ಬಯಸುತ್ತಿದ್ದಾರೆ ಎಂಬುದನ್ನು ಅವರ ವರ್ತನೆಯು ಸ್ಪಷ್ಟಪಡಿಸುತ್ತಿದೆ. ಆ ಮೂಲಕ ಅವರು ಟ್ವಿಟರ್‌ಗೆ ಹಾನಿ ಉಂಟುಮಾಡುತ್ತಿದ್ದಾರೆ. ಮಸ್ಕ್ ಅವರ ನಡೆಯಿಂದಾಗಿ ಟ್ವಿಟರ್‌ಗೆ ನಷ್ಟವಾಗಿದೆ, ಮುಂದೆಯೂ ನಷ್ಟವಾಗಲಿದೆ’ ಎಂದು ಅರ್ಜಿಯಲ್ಲಿ ವಿವರಿಸಿತ್ತು.

ಇದಕ್ಕೆ ಪ್ರತಿಯಾಗಿ ಇಲಾನ್ ಮಸ್ಕ್ ಟ್ವಿಟರ್ ವಿರುದ್ಧ ದಾವೆ ಹೂಡಿದ್ದು, ಗುರುವಾರ ಅದರ ಮಾಹಿತಿ ಬಹಿರಂಗಗೊಂಡಿವೆ.

ಈ ಮಧ್ಯೆ, ಟ್ವಿಟರ್ ಮತ್ತು ಇಲಾನ್ ಮಸ್ಕ್ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 17ರಿಂದ ಐದು ದಿನಗಳ ವಿಚಾರಣೆಗೆ ಅಮೆರಿಕದ ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯ ನ್ಯಾಯಾಧೀಶರಾದ ಕ್ಯಾಥಲೀನ್ ಮೆಕ್‌ಕಾರ್ಮಿಕ್ ಸಮಯ ನಿಗದಿ ಮಾಡಿದ್ದಾರೆ.

ಟ್ವಿಟರ್ ಖರೀದಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಮಸ್ಕ್ ಬೆದರಿಕೆ ಹಾಕಿದ್ದ ಬೆನ್ನಲ್ಲೇ ಟ್ವಿಟರ್ ದಿನಕ್ಕೆ 1 ಮಿಲಿಯನ್‌ಗಿಂತಲೂ ಹೆಚ್ಚು ಸ್ಪ್ಯಾಮ್ ಖಾತೆಗಳನ್ನು ಅಮಾನತುಗೊಳಿಸುತ್ತಿರುವುದಾಗಿ ಬಹಿರಂಗಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.