ADVERTISEMENT

ಗುಂಪು ಬಿಟ್ಟು ಹಿಮ ಪರ್ವತದತ್ತ 70 ಕಿ.ಮೀ ಪಯಣ; ಪೆಂಗ್ವಿನ್ ಒಂಟಿ ಪಯಣದ ರೋಚಕ ಕಥೆ

Dinesha R
Published 25 ಜನವರಿ 2026, 3:58 IST
Last Updated 25 ಜನವರಿ 2026, 3:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಪೆ: ಎಐ

ತನ್ನದಲ್ಲದ ಮಾರ್ಗದಲ್ಲಿ ಬರೋಬ್ಬರಿ 70 ಕಿ.ಮೀ ಸಂಚರಿಸಿದ ಒಂಟಿ ಪೆಂಗ್ವಿನ್ ಈಗ ಸಾಮಾಜಿಕ ಮಾಧ್ಯಮದ ಹೀರೊ. ಅಸಲಿಗೆ ಅದು ತನ್ನವರಿಂದ ಬಂಡೆದ್ದು, ಬೇರೊಂದು ಪ್ರದೇಶ ಹುಡುಕಿಕೊಂಡು ಹೊರಟ ನಾಯಕನಾ? ಹೀಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳಿಗೆ ಉತ್ತರ ಕಂಡುಕೊಳ್ಳೋಣ.

ADVERTISEMENT

ಸಾಮಾನ್ಯವಾಗಿ ಪೆಂಗ್ವಿನ್‌ಗಳು ಗುಂಪು ಗುಂಪಾಗಿ ವಾಸಿಸುವ ಜೀವಿಗಳು. ಮಾತ್ರವಲ್ಲ, ಅವುಗಳು ತಮಗೆ ಆಹಾರ ಸಿಗುವ ಸಮುದ್ರದ ಕಡೆಗೆ ಗುಂಪಾಗಿ ತೆರಳುತ್ತವೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಒಂದು ಪೆಂಗ್ವಿನ್ ವಿರುದ್ಧ ದಿಕ್ಕಿನಲ್ಲಿ ಬರೋಬ್ಬರಿ 70 ಕಿ.ಮೀ ನಡೆದಿದೆ.

ಏನಿದು ಪೆಂಗ್ವಿನ್ ಕಥೆ?

ಹರಿದಾಡುತ್ತಿರುವ ವಿಡಿಯೊ ಪ್ರಕಾರ, ದಾರಿಯಲ್ಲಿ ನಡೆಯುತ್ತಿದ್ದ ಪೆಂಗ್ವಿನ್ ದಿಢೀರನೆ ನಿಂತುಕೊಳ್ಳುತ್ತದೆ. ತನ್ನ ಗುಂಪು ಒಂದೆಡೆ ಸಾಗುತ್ತಿದ್ದರೆ, ಆ ಒಂದು ಪೆಂಗ್ವಿನ್ ಮಾತ್ರ ವಿರುದ್ಧ ದಿಕ್ಕಿನಲ್ಲಿ ಐಸ್ ಪರ್ವತಗಳ ಕಡೆ ನಡೆಯಲು ಪ್ರಾರಂಭಿಸುತ್ತದೆ.

ಈ ವಿಡಿಯೊ 2007ರಲ್ಲಿ ಬಿಡುಗಡೆಯಾದ ವರ್ನರ್ ಹೆರ್ಜಾಗ್ ಅವರ ‘ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ನ ಸಾಕ್ಷ್ಯಚಿತ್ರದ್ದು. ಚಿತ್ರದಲ್ಲಿರುವಂತೆ, ಅಡೆಲೀ ಪೆಂಗ್ವಿನ್ ಒಂದು ಗುಂಪಿನ ಜೊತೆ ತೆರಳುತ್ತಿತ್ತು. ದಿಢೀರನೆ ತನ್ನ ಪ್ರಯಾಣ ನಿಲ್ಲಿಸಿ ವಿರುದ್ಧ ದಿಕ್ಕಿನಲ್ಲಿ ಹಿಮ ಪರ್ವತಗಳ ಕಡೆಗೆ ಸಂಚರಿಸಲು ಪ್ರಾರಂಭಿಸುತ್ತದೆ’. ಇದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು, ತಮ್ಮ ಜೀವನದ ಜೊತೆ ಹೋಲಿಕೆ ಮಾಡಿಕೊಂಡು ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ.

ಕೆಲವರ ಪಾಲಿಗೆ ಪೆಂಗ್ವಿನ್ ಹಿರೊ ಆಗಿದ್ದರೆ, ಇನ್ನೂ ಕೆಲವು ಸಾವಿನ ದಾರಿ ಎಂದು ಬಣ್ಣಿಸುತ್ತಿದ್ದಾರೆ. ಅಸಲಿಗೆ ಈ ಬಗ್ಗೆ ವಿಜ್ಞಾನಿಗಳು ಏನು ಹೇಳ್ತಾರೆ?

ಬಹುತೇಕ ಪೆಂಗ್ವಿನ್‌ಗಳು ಸಮುದ್ರ ಮತ್ತು ಅವುಗಳಿಗೆ ಆಹಾರ ಸಿಗುವ ಸ್ಥಳದತ್ತ ತೆರಳಿದರೆ, ಈ ಒಂದು ಪೆಂಗ್ವಿನ್ ಮಾತ್ರ ಏಕಾಂಗಿಯಾಗಿ ಮಂಜುಗಡ್ಡೆಯ ಮೇಲೆ ಮೆರವಣಿಗೆ ಸಾಗುತ್ತದೆ. ಅದರಲ್ಲೇನು ವಿಶೇಷ ಎಂದು ನಿಮಗೆ ಅನಿಸಬಹುದು. ಅಸಲಿಗೆ ಪೆಂಗ್ವಿನ್‌ಗಳು ಗುಂಪನ್ನು ಬಿಟ್ಟು ಏಕಾಂಗಿಯಾಗಿ, ಅದರಲ್ಲೂ ಹಿಮಪರ್ವತದ ಕಡೆಗೆ ಪ್ರಯಾಣ ಬೆಳೆಸುವುದಿಲ್ಲ.

ದೃಶ್ಯ ವೈರಲ್ ಆಗಲು ಕಾರಣವೇನು?

ಜನರು ಪೆಂಗ್ವಿನ್ ಹೋಗುತ್ತಿರುವ ದೃಶ್ಯವನ್ನು ಮಾತ್ರ ನೋಡುತ್ತಿಲ್ಲ. ಬದಲಿಗೆ, ಅದು ಯಾಕೆ ವಿರುದ್ಧ ದಿಕ್ಕಿನಲ್ಲಿ 70 ಕಿಮೀ ಸಂಚರಿಸಿತು ಎಂಬುದರ ಅರ್ಥವನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ, ಒಂಟಿ ಪೆಂಗ್ವಿನ್ ಅನ್ನು ಸ್ವಾತಂತ್ರ್ಯ ಬಯಸಿ ಹೊರಟ ವೀರ, ತನ್ನವರಿಂದ ನೊಂದು ದಂಗೆ ಎದ್ದು ಹೊಸ ಜಾಗ ಹುಡುಕಿ ಹೊರಟ ಹೀರೊ ಎಂದೆಲ್ಲ ನೋಡುತ್ತಿದ್ದಾರೆ.

ವಿಜ್ಞಾನಿಗಳು ಏನು ಹೇಳುತ್ತಾರೆ?

ಅಡೆಲೀ ಪೆಂಗ್ವಿನ್‌ಗಳು ಸಾಮಾನ್ಯವಾಗಿ ತಮ್ಮ ಸಂತಾನೋತ್ಪತ್ತಿ ಸ್ಥಳ ಮತ್ತು ಆಹಾರ ಸಿಗುವ ಸಮುದ್ರದ ಸಮೀಪದಲ್ಲಿ ವಾಸಿಸುತ್ತವೆ. ಆದರೆ ಹಿಮ ಪರ್ವತದ ಕಡೆಗೆ ಉದ್ದೇಶಪೂರ್ವಕ ಅಲೆದಾಡುವ ಅಪರೂಪದ ಘಟನೆಯ ಕುರಿತು ವಿಜ್ಞಾನಿಗಳು ತಮ್ಮದೇ ಆದ ವ್ಯಾಖ್ಯಾನ ನೀಡಿದ್ದಾರೆ.

ದಿಗ್ಭ್ರಮೆ: ಸಾಮಾನ್ಯವಾಗಿ ದಾರಿ ತಿಳಿಯದ ಮರಿ ಪೆಂಗ್ವಿನ್‌ಗಳು ಭಯಗೊಂಡು ಹೀಗೆ ಅಪರಿಚಿತ ಸ್ಥಳದತ್ತ ಓಡಾಡುತ್ತವೆ.

ಅನಾರೋಗ್ಯ ಅಥವಾ ಗಾಯ: ಪೆಂಗ್ವಿನ್‌ಗಳ ಆರೋಗ್ಯ ಸಮಸ್ಯೆ, ಸಾಮಾನ್ಯ ಚಲನೆಯ ಮಾರ್ಗವನ್ನು ಬದಲಾಯಿಸಬಹುದು. ಹಾಗೂ ತನ್ನ ಗುಂಪನ್ನು ಬಿಡಲು ಪ್ರೇರೇಪಿಸಬಹುದು.

ಪರಿಶೋಧನೆ: ಕೆಲವು ಪೆಂಗ್ವಿನ್‌ಗಳು ಒಂದೇ ಸ್ಥಳದಲ್ಲಿ ಇದ್ದು ಬೇಸತ್ತು, ಹೊಸ ಪ್ರದೇಶಕ್ಕೆ ತೆರಳುವ ಉದ್ದೇಶದಿಂದ ಈ ರೀತಿಯಾಗಿ ಸಂಚರಿಸಬಹುದು.

ಮಾನಸಿಕ ಆರೋಗ್ಯ: ಪೆಂಗ್ವಿನ್‌ಗಳು ಕೆಲವೊಮ್ಮೆ ತಮ್ಮ ಮಾನಸಿಕ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಈ ರೀತಿಯಾಗಿ ವರ್ತಿಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಒಬ್ಬಂಟಿಯಾಗಿ ಸಂಚರಿಸುತ್ತಿರುವ ಆ ಒಂದು ಪೆಂಗ್ವಿನ್ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.