ADVERTISEMENT

ಪ್ರಧಾನಿ ಮೋದಿ ಟ್ವಿಟರ್ ಖಾತೆಗೆ ಕನ್ನ: ಬಿಟ್‌ಕಾಯಿನ್‌ ಲಿಂಕ್‌ ಹಂಚಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2021, 2:02 IST
Last Updated 12 ಡಿಸೆಂಬರ್ 2021, 2:02 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯು ಶನಿವಾರ ತಡರಾತ್ರಿ ಕೆಲ ಹೊತ್ತು ನಿಯಂತ್ರಣವನ್ನು ಕಳೆದುಕೊಂಡಿತ್ತು (ಹ್ಯಾಕ್), ಬಳಿಕ ಮರುಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ಭಾನುವಾರ ತಿಳಿಸಿದೆ.

ಟ್ವಿಟರ್ ಖಾತೆ ಹ್ಯಾಕ್‌ ಆಗಿದ್ದ ವೇಳೆಯಲ್ಲಿ 'ಬಿಟ್‌ಕಾಯಿನ್ ಕಾನೂನುಬದ್ಧಗೊಳಿಸಲಾಗಿದ್ದು, ಸರ್ಕಾರವು ಅಧಿಕೃತವಾಗಿ 500 ಬಿಟ್ ಕಾಯಿನ್‌ಗಳನ್ನು ಖರೀದಿಸಿದೆ. ಇದನ್ನು ದೇಶದ ಜನರಿಗೆ ವಿತರಿಸಲಾಗುವುದು' ಎಂದು ಟ್ವೀಟ್ ಮಾಡಲಾಗಿತ್ತು. ಇದರ ಜತೆಗೆ ಬಿಟ್ ಕಾಯಿನ್ ಕುರಿತಾದ ಲಿಂಕ್ ಹಂಚಲಾಗಿತ್ತು. ಬಳಿಕ ಈ ಟ್ವೀಟ್ ಅನ್ನು ಅಳಿಸಿ ಹಾಕಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪಿಎಂಒ ಕಚೇರಿ, 'ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಕೆಲಕಾಲ ನಿಯಂತ್ರಣದಿಂದ ಜಾರಿತ್ತು. ವಿಷಯವನ್ನು ಟ್ವಿಟರ್‌ ಗಮನಕ್ಕೆ ತರಲಾಗಿದ್ದು, ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ. ಖಾತೆಗೆ ಧಕ್ಕೆ ಉಂಟಾಗಿರುವ ಈ ಅವಧಿಯಲ್ಲಿ ಹಂಚಿಕೆಯಾಗಿರುವ ಟ್ವೀಟ್‌ಗಳನ್ನು ಕಡೆಗಣಿಸಬೇಕು' ಎಂದು ವಿನಂತಿಸಿದೆ.

7.3ಕೋಟಿ ಫಾಲೋವರ್ಸ್‌ಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಎಷ್ಟು ಹೊತ್ತು ನಿಯಂತ್ರಣವನ್ನು ಕಳೆದುಕೊಂಡಿತು ಎಂಬುದು ತಿಳಿದುಬಂದಿಲ್ಲ.

ಬಳಕೆದಾರರು ಇದರ ಸ್ಕ್ರೀನ್‌ಶಾಟ್‌ಗಳನ್ನು ಹಂಚಿದ್ದಾರೆ. ಇದಾದ ಬೆನ್ನಲ್ಲೇ #Hacked ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.