ADVERTISEMENT

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಟ್ವಿಟರ್‌ನಲ್ಲಿ ಸಚಿನ್‌ ಪೈಲಟ್ ಟ್ರೆಂಡಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2020, 4:57 IST
Last Updated 12 ಜುಲೈ 2020, 4:57 IST
ಸಚಿನ್‌ ಪೈಲಟ್
ಸಚಿನ್‌ ಪೈಲಟ್   

ಜೈಪುರ: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ನಡೆದಿರುವ ಪ್ರಯತ್ನಗಳ ಕುರಿತು ಹೇಳಿಕೆಯನ್ನು ದಾಖಲಿಸುವಂತೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರಿಗೆ ರಾಜಸ್ಥಾನ ಪೊಲೀಸರು ಶನಿವಾರ ನೋಟಿಸ್‌ ನೀಡಿದ್ದರು. ಇಬ್ಬರೂ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ, ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಬಗ್ಗೆ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿವೆ.

ಇದರ ಬೆನ್ನಲ್ಲೇ 25 ಶಾಸಕರ ಸಹಿತ ಸಚಿನ್‌ ಪೈಲಟ್‌ ದೆಹಲಿ ಹೋಟೆಲ್‌ ತಲುಪಿದ್ದು, ಸರ್ಕಾರ ಅಸ್ಥಿರಗೊಂಡಿದೆ ಎಂದು ರಿಪಬ್ಲಿಕ್ ವರ್ಲ್ಡ್ ಸೇರಿದಂತೆ ಕೆಲವು ಸುದ್ದಿತಾಣಗಳು ವರದಿ ಮಾಡಿವೆ. ಈ ಕುರಿತು ಕಾಂಗ್ರೆಸ್ ಈವರೆಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದಾಗ್ಯೂ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಸ್ಥಾನ ರಾಜಕೀಯದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಟ್ವಿಟರ್‌ನಲ್ಲಿ ಅನೇಕ ವ್ಯಂಗ್ಯಭರಿತ ಸಂದೇಶಗಳು ಪೋಸ್ಟ್ ಆಗಿವೆ.

‘25 ಶಾಸಕರೊಂದಿಗೆ ಸಚಿನ್ ಪೈಲಟ್ ದೆಹಲಿಗೆ ಬಂದಿದ್ದಾರೆ. ಈಗ ಕಾಂಗ್ರೆಸ್, ನಮ್ಮ ಶಾಸಕರನ್ನು ಕೊಡಿ ಮೋದಿಜಿ ಎಂದು ಅಂಗಲಾಚುತ್ತಿರಬಹುದು’ ಎಂದು ಅರ್ಮಾನ್ ಗಿರಿಧರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ಮೊದಲು ಕರ್ನಾಟಕ. ನಂತರ ಮಧ್ಯ ಪ್ರದೇಶ. ಈಗ ರಾಜಸ್ಥಾನ. ಇನ್ನು ಮಹಾರಾಷ್ಟ್ರ’ ಎಂದು ಅನೀಶ್ ಜೈನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ರಫೇಲ್ ಬರ್ತಿದೆ. ಹಾಗಾಗಿ ನಮಗೆ ಪೈಲಟ್ ಬೇಕಾಗಿದ್ದಾರೆ’ ಎಂದು ಅಮಿತ್ ಶಾ ಹೇಳುತ್ತಿರುವಂತೆ ಫೊಟೊಶಾಪ್ ಮಾಡಲಾದ ಚಿತ್ರವೊಂದನ್ನು ಮಹಾವೀರ್ ಜೈನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.