ADVERTISEMENT

ರಾಯಧನದ ಕಟಕಟೆಯಲ್ಲಿ ಕಂಟೆಂಟ್‌

ಶ್ರೀಹರ್ಷ ಸಾಲಿಮಠ
Published 27 ಫೆಬ್ರುವರಿ 2021, 19:30 IST
Last Updated 27 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಸ್ಟ್ರೇಲಿಯಾ ಸರ್ಕಾರವು ನ್ಯೂಸ್ ಮೀಡಿಯಾ ಬಾರ್ಗೇನಿಂಗ್ ಕೋಡ್ ಅನ್ನು ಫೆ. 25ರಂದು ಅಧಿಕೃತ ಕಾನೂನಾಗಿ ಜಾರಿಗೊಳಿಸಿತು. ಈ ಕಾನೂನನ್ನು ಜಾರಿಗೊಳಿಸುವುದು ಬಲಿಷ್ಠ ದೇಶಗಳಲ್ಲೊಂದಾದ ಆಸ್ಟ್ರೇಲಿಯಾಕ್ಕೆ ಸುಲಭ ತುತ್ತೇನೂ ಆಗಿರಲಿಲ್ಲ.ಶ್ರೀಮಂತ ದೇಶದ ಸರ್ಕಾರವನ್ನೇ ಅಲ್ಲಾಡಿಸುವಷ್ಟು ಕೆಲ ಕಂಪನಿಗಳು ಬಲಾಢ್ಯವಾಗಿರುವುದು ಮತ್ತು ಅತ್ಯಂತ ನಾಜೂಕಾಗಿ ಸಮಸ್ತ ಜಗತ್ತು ಬಂಡವಾಳಿಗರ ಕಪಿಮುಷ್ಟಿಯೊಳಗೆ ಜಾರಿ ಹೋಗಿರುವುದು ಸೂಕ್ಷ್ಮ ಕಣ್ಣುಗಳ ಅರಿವಿಗೆ ಬಂತು.

ಈ ರೀತಿಯ ಒಂದು ಕಾನೂನನ್ನು ತರಲು ಆಸ್ಟ್ರೇಲಿಯಾ ಸರ್ಕಾರ ಉದ್ದೇಶಿಸಿದ್ದು 2019ರಲ್ಲಿ. ಆಸ್ಟ್ರೇಲಿಯನ್ ಸ್ಪರ್ಧಾತ್ಮಕ ಮತ್ತು ಗ್ರಾಹಕ ಆಯೋಗವು (Australian Competition and Consumer commission) ಒಂದು ಡಿಜಿಟಲ್ ಪ್ಲಾಟ್‌ಫಾರಂ ರಿಪೋರ್ಟ್ ಎಂಬ ಆರುನೂರಾ ಇಪ್ಪತ್ತು ಪುಟಗಳ ಬೃಹತ್ ವರದಿಯನ್ನು ತಯಾರಿಸಿತು. (ಈ ವರದಿ ಆಸ್ಟ್ರೇಲಿಯನ್ ಸ್ಪರ್ಧಾತ್ಮಕ ಮತ್ತು ಗ್ರಾಹಕ ಆಯೋಗದ ವೆಬ್ ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ.) ಈ ವರದಿಯು ಕೆಲವು ಪ್ರಮುಖ ಅಂಶಗಳ ಬಗ್ಗೆ ಸರ್ಕಾರದ ಗಮನ ಸೆಳೆಯಿತು. ಅದರಲ್ಲೂ ವರದಿಯು ಮುಖ್ಯವಾಗಿ ಗೂಗಲ್ ಮತ್ತು ಫೇಸ್‌ಬುಕ್‌ಗಳನ್ನುಹೆಸರಿಸಿತ್ತು.

ಈ ವರದಿಯಲ್ಲಿ ಗಮನ ಸೆಳೆದ ಕೆಲ ಪ್ರಮುಖ ಅಂಶಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ,ಕಳೆದೆರಡು ದಶಕಗಳಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿ ಬೆಳೆದಿದ್ದು ವಾರ್ತಾಪತ್ರಿಕೆ, ರೇಡಿಯೊ, ದೂರದರ್ಶನದಂತಹ ಸಾಂಪ್ರದಾಯಿಕ ಮೀಡಿಯಾಗಳಿಗೆ ಪರ್ಯಾಯವಾಗಿ ಕೆಲಸ ಮಾಡುತ್ತಿವೆ. ಆದರೆ ಈ ಸೋಷಿಯಲ್ ಮೀಡಿಯಾ ಕಂಪನಿಗಳಿಗೂ ಮತ್ತು ಸಾಂಪ್ರದಾಯಿಕ ಮಾಧ್ಯಮಗಳಿಗೂ ತಳಮಟ್ಟದಲ್ಲಿ ಒಂದು ಮೂಲಭೂತವಾದ ಅಸಮತೋಲನ ತಲೆದೋರಿದೆ.ಫೇಸ್‌ಬುಕ್ ಮತ್ತು ಗೂಗಲ್ ಈ ಎರಡೂ ಬೃಹತ್ ಕಂಪನಿಗಳು ನೂರಾರು ಕೋಟಿಯಷ್ಟು ಗ್ರಾಹಕರನ್ನು ಹೊಂದಿರುವುದಲ್ಲದೇ ಧನಬಲವನ್ನೂ ಹೊಂದಿದ್ದು ಹೆಚ್ಚಿನ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿವೆ. ಲಕ್ಷಾಂತರ ಸಾಂಪ್ರದಾಯಿಕ ಸುದ್ದಿ ಪ್ರಕಾಶನ ಸಂಸ್ಥೆಗಳಿದ್ದು ಅವ್ಯಾವುವೂ ಈ ಬೃಹತ್ ಕಂಪನಿಗಳಿಗೆ ಸಮನಾಗಿ ನಿಲ್ಲುವ ಸಾಮರ್ಥ್ಯ ಹೊಂದಿಲ್ಲ.

ADVERTISEMENT

ಸುದ್ದಿ ಪ್ರಕಾಶನ ಸಂಸ್ಥೆಗಳಿಗೆ ಅಂದರೆ ಮೀಡಿಯಾ ಹೌಸ್‌ಗಳಿಗೆ ಕಾನೂನಾತ್ಮಕ ಸರ್ಕಾರಿ ನಿಯಂತ್ರಣ ನಿಬಂಧನೆಗಳಿವೆ. ಆದರೆ ಈ ಸಾಮಾಜಿಕ ಜಾಲತಾಣಗಳು ಸಾಂಪ್ರದಾಯಿಕ ಮಾಧ್ಯಮಗಳಂತೆ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಆ ಯಾವ ನಿಯಂತ್ರಣಗಳೂ ಅನ್ವಯಿಸುವುದಿಲ್ಲ. ಸಾಮಾಜಿಕ ಜಾಲತಾಣಗಳ ಅನಿಯಂತ್ರಿತ ಬೆಳವಣಿಗೆಯಿಂದಾಗಿ ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ಮಹತ್ವವನ್ನೂ, ಆದಾಯವನ್ನೂ ಕಳೆದುಕೊಂಡು ವಿನಾಶದತ್ತ ಸಾಗುತ್ತಿವೆ.

ಶ್ರೀಹರ್ಷ ಸಾಲಿಮಠ

ಈ ವರದಿಯನ್ನು ಗಮನದಲ್ಲಿರಿಸಿಕೊಂಡು ಆಸ್ಟ್ರೇಲಿಯಾ ಸರ್ಕಾರವು ಈ ಕುರಿತು ಕಾನೂನು ರೂಪಿಸಲು ಸೂಕ್ತ ಕರಡು ಮಸೂದೆ ತಯಾರಿಸಲು ಆಸ್ಟ್ರೇಲಿಯನ್ ಸ್ಪರ್ಧಾತ್ಮಕ ಮತ್ತು ಗ್ರಾಹಕ ಆಯೋಗಕ್ಕೆ ಸೂಚಿಸಿತು. ಅದರಂತೆ ಆಯೋಗವು ಕಳೆದ ವರ್ಷದ ಆಗಸ್ಟ್ ಹೊತ್ತಿಗೆ ಈ ಕರಡನ್ನು ಸರ್ಕಾರಕ್ಕೆ ಒಪ್ಪಿಸಿತು. ಈ ಕರಡನ್ನು ಕಾನೂನಾಗಿ ಜಾರಿಗೆ ತಂದಿದ್ದೇ ಆದರೆ ಸಾಂಪ್ರದಾಯಿಕ ಮೀಡಿಯಾಗಳ ಪುನಶ್ಚೇತನವಾಗುವುದಲ್ಲದೇ ಈಗ ಜಾಗತಿಕ ಪಿಡುಗಾಗಿ ಕಾಡುತ್ತಿರುವ ಸುಳ್ಳುಸುದ್ದಿಯ ಹಾವಳಿಗೂ ಕಡಿವಾಣ ಬೀಳುತ್ತದೆ ಎಂದು ಹೇಳಲಾಯಿತು. ಈ ಮಸೂದೆಯು ಸಂಸತ್ತಿನಲ್ಲಿ ಚರ್ಚೆಗೊಳಪಟ್ಟು ಅಂಗೀಕಾರವಾಗುವ ಹಂತಕ್ಕೆ ಬರುತ್ತಿದ್ದಂತೆ ಈ ಎರಡೂ ದೈತ್ಯ ಕಂಪನಿಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದವು. ಗೂಗಲ್ ಆಸ್ಟ್ರೇಲಿಯಾದಲ್ಲಿ ತನ್ನ ಸೇವೆಯನ್ನು ಹಿಂಪಡೆಯುವುದಾಗಿ ಬೆದರಿಸಿತು. ಫೇಸ್‌ಬುಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಸ್ಟ್ರೇಲಿಯಾದ ಸುದ್ದಿ ಚಾನೆಲ್‌ಗಳನ್ನು ಬ್ಲಾಕ್ ಮಾಡಿತು. ಇದಾವ ಬೆದರಿಕೆಗಳಿಗೂ ಆಸ್ಟ್ರೇಲಿಯಾ ಸರ್ಕಾರ ಬಗ್ಗಲಿಲ್ಲ. ಈ ಕಾನೂನಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಬಲವಾಗಿ ನಿಂತರು. ಕಾನೂನಿನ ಕರಡಿನಲ್ಲಿದ್ದದ್ದೇನು ಮತ್ತು ಗೂಗಲ್, ಫೇಸ್‌ಬುಕ್‌ಗಳು ಇದನ್ನು ವಿರೋಧಿಸಿದ್ದೇಕೆ ಎಂದು ಒಂದೊಂದಾಗಿ ನೋಡೋಣ.

ಈ ನ್ಯೂಸ್ ಮೀಡಿಯಾ ಬಾರ್ಗೇನಿಂಗ್ ಕಾನೂನು ಏನು ಹೇಳುತ್ತದೆಂದರೆ ಈ ಎರಡೂ ಕಂಪನಿಗಳು ತಮ್ಮ ವೇದಿಕೆಯ ಮುಖಾಂತರ ಹಂಚಿಕೊಳ್ಳುವ ಯಾವುದೇ ಸುದ್ದಿಗೆ ಆ ಸುದ್ದಿಯ ವಾರಸುದಾರರಾದ ಪತ್ರಿಕೆಗಳಿಗೆ ಸೂಕ್ತ ರಾಯಧನವನ್ನು ಕೊಡಬೇಕು. ಈ ರಾಯಧನ ಎಷ್ಟೆಂದು ಪತ್ರಿಕೆಗಳು ಮತ್ತು ಕಂಪನಿಗಳು ಪರಸ್ಪರ ಮಾತುಕತೆಯ ಮೂಲಕ ನಿರ್ಧರಿಸಿಕೊಳ್ಳಬಹುದು. ಮಾತುಕತೆಯ ಸಮಯದಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗದಿದ್ದರೆ ಸರ್ಕಾರವು ನಿಯಮಿಸಿದ ಮಧ್ಯವರ್ತಿಗಳ ಮೂಲಕ ಈ ರಾಯಧನದ ವಿಷಯವನ್ನು ಬಗೆಹರಿಸಿಕೊಳ್ಳಬಹುದು.

ಎರಡನೆಯದಾಗಿ ಈ ಕಂಪನಿಗಳು ತಮ್ಮ ಸರ್ಚ್ ಅಲ್ಗಾರಿದಂಗಳ ಬದಲಾವಣೆಯ ವಿವರಗಳನ್ನು ಪತ್ರಿಕೆಗಳೊಂದಿಗೆ ಹದಿನೈದು ದಿನ ಮುಂಚೆಯೇ ಹಂಚಿಕೊಳ್ಳಬೇಕು. ಸರ್ಚ್ ಅಲ್ಗಾರಿದಂಗಳೆಂದರೆ ಗೂಗಲ್‌ನಲ್ಲಿ ನಾವು ಯಾವುದೇ ವಿಷಯವನ್ನು ಹುಡುಕಿದಾಗ ಯಾವುದನ್ನು ಅತ್ಯಂತ ಮೇಲೆ ತೋರಿಸಬೇಕು ಯಾವುದನ್ನು ನಂತರ ತೋರಿಸಬೇಕು ಎಂಬುದನ್ನು ನಿರ್ಧರಿಸಲು ಬರೆಯಲಾದ ಚಾಣಾಕ್ಷ ಪ್ರೋಗ್ರಾಮ್‌ಗಳು. ಇವುಗಳನ್ನು ಗೂಗಲ್‌ನ ಎಂಜಿನಿಯರ್‌ಗಳು ಪ್ರತಿದಿನವೂ ಪರಿಷ್ಕರಿಸುತ್ತಿರುತ್ತಾರೆ. ಆಯಾದಿನ ಮಾರುಕಟ್ಟೆಗೆ ತಕ್ಕಂತೆ ಜನರ ಟ್ರೆಂಡ್‌ಗೆ ತಕ್ಕಂತೆ ಹಾಗೂ ಜಾಹೀರಾತುಗಳ ಬೇಡಿಕೆಗೆ ತಕ್ಕಂತೆ ಈ ಅಲ್ಗಾರಿದಂಗಳನ್ನು ರೂಪಿಸಲಾಗುತ್ತದೆ.

ಗೂಗಲ್‌ಗೆ ಆದಾಯವನ್ನು ಹಂಚಿಕೊಳ್ಳುವಲ್ಲಿ ಹೆಚ್ಚಿನ ತಕರಾರುಗಳು ಇರಲಿಲ್ಲವಾದರೂ ಅಲ್ಗಾರಿದಂಗಳ ವಿವರಗಳನ್ನು ಹಂಚಿಕೊಳ್ಳುವುದು ತಲೆನೋವಾಗಿತ್ತು. ಯಾಕೆಂದರೆ ಅಲ್ಗಾರಿದಂಗಳು ಕಂಪನಿಯ ಆಂತರಿಕ ಮಾಹಿತಿ, ಇವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ಉದಾಹರಣೆಗೆ ಒಂದು ಸುದ್ದಿಯು ಆಸ್ಟ್ರೇಲಿಯಾದಲ್ಲಿ ಬಹುಮೇಲಕ್ಕೆ ತೋರಿಸಲ್ಪಟ್ಟರೆ ಅಮೆರಿಕದಲ್ಲಿ ಕೆಳಗೆ ತೋರಿಸಲ್ಪಡುತ್ತದೆ. ಇದನ್ನು ಜಗತ್ತಿನಾದ್ಯಂತ ಏಕರೂಪವಾಗಿ ಇಡಲು ಸಾಧ್ಯವಿಲ್ಲ. ಅಲ್ಲದೇ ಹದಿನೈದು ದಿನಗಳ ಮುಂಚೆಯೇ ಅಲ್ಗಾರಿದಂ ವಿವರಗಳನ್ನು ಹಂಚಿಕೊಳ್ಳಬೇಕೆಂದರೆ ಒಮ್ಮೆ ಬರೆದಿಟ್ಟ ಅಲ್ಗಾರಿದಂನ್ನು ಹದಿನೈದು ದಿನಗಳ ಕಾಲ ಬದಲಿಸಲು ಸಾಧ್ಯವಿಲ್ಲ. ಇದು ಗೂಗಲ್‌ನ ಬಿಸಿನೆಸ್ ಮಾಡೆಲ್‌ಗೇ ದೊಡ್ಡ ಹೊಡೆತ ಕೊಡುತ್ತದೆ!

ಹೀಗಾಗಿ ಮೊದಲು ಗೂಗಲ್ ತನ್ನ ಸೇವೆಯನ್ನು ಆಸ್ಟ್ರೇಲಿಯಾದಿಂದ ಹಿಂಪಡೆಯುವುದಾಗಿ ಘೋಷಿಸಿದ್ದರೂ ಆಸ್ಟ್ರೇಲಿಯಾ ಸರ್ಕಾರವು ಕ್ಯಾರೇ ಅನ್ನದಿದ್ದಾಗ ಹೊಸ ದಾರಿಯೊಂದನ್ನು ಗೂಗಲ್ ಕಂಡುಕೊಂಡಿತು. ಎಷ್ಟೆಂದರೂ ಸಿರಿವಂತ ದೇಶವೊಂದರಲ್ಲಿ ಗೂಗಲ್‌ನಂತಹ ಕಂಪನಿ ತನ್ನ ವ್ಯಾಪಾರವನ್ನು ಕಳೆದುಕೊಳ್ಳಲು ಇಚ್ಛಿಸಲಾರದು. ಸುದ್ದಿಯನ್ನು ಮೊದಲಿನಂತೆ ಈಗ ಹುಡುಕಿದಾಗ ತೋರಿಸುವ ಬದಲು ಗೂಗಲ್ ಶೋಕೇಸ್ ಎಂಬ ಹೊಸ ಕವಲೊಂದನ್ನು ಹುಟ್ಟುಹಾಕಿ ಅದರಲ್ಲಿ ತಾವು ರಾಯಧನಕ್ಕಾಗಿ ಒಪ್ಪಂದ ಮಾಡಿಕೊಂಡ ಪತ್ರಿಕೆಗಳ ಸುದ್ದಿಯನ್ನು ಮಾತ್ರ ಪ್ರಸಾರ ಮಾಡುವುದು ಎಂದು ನಿರ್ಧರಿಸಿದೆ. ಈಗಾಗಲೇ ವಾರ್ಷಿಕ ಮೂರು ಕೋಟಿ ಡಾಲರ್ ಕೊಟ್ಟು ಸೆವೆನ್ ನ್ಯೂಸ್ ಚಾನೆಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಮತ್ತೊಂದಷ್ಟು ಸುದ್ದಿ ಸಂಸ್ಥೆಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಇಂತಹ ವಿವಿಧ ಒಪ್ಪಂದಗಳಿಗಾಗಿಯೇ ಒಂದು ಶತಕೋಟಿ ಡಾಲರುಗಳಷ್ಟು ಇಡುಗಂಟನ್ನು ಎತ್ತಿಟ್ಟಿ ರುವುದಾಗಿ ಗೂಗಲ್‌ನ ಮುಖ್ಯಸ್ಥ ಸುಂದರ್ ಪಿಚ್ಚೈ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಹಾವೂ ಸಾಯದ ಕೋಲೂ ಮುರಿಯದ ಚಾಣಾಕ್ಷ ನಡೆ.

ಫೇಸ್‌ಬುಕ್ ಈ ಕಾನೂನಿಗೆ ಪ್ರತಿಕ್ರಿಯಿಸಿದ್ದೇ ಬೇರೆ ರೀತಿಯಲ್ಲಿ. ಅತ್ಯಂತ ದುರಾಸೆಯಿಂದ ವರ್ತಿಸಿದ ಫೇಸ್‌ಬುಕ್ ತಾನು ಯಾವುದೇ ರೀತಿ ಯಾರಿಗೂ ರಾಯಧನ ಕೊಡಲು ಸಾಧ್ಯವಿಲ್ಲ. ತನ್ನ ವೇದಿಕೆಯಲ್ಲಿ ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಈ ಪತ್ರಿಕೆಗಳಿಗೆ ಹೆಚ್ಚಿನ ಓದುಗರು ದೊರೆಯುತ್ತಿದ್ದಾರೆ. ಅವರಿಗೆ ಆದಾಯ ಹೆಚ್ಚುತ್ತಿರುವುದೇ ತನ್ನಿಂದ ಎಂದು ಎದುರು ವಾದಿಸಿತು. ಮುದ್ರಣ ಪತ್ರಿಕೆಗಳು ಎಂದೋ ಪಳೆಯುಳಿಕೆಗಳಾಗಿರುವ ಆಸ್ಟ್ರೇಲಿಯಾ ದೇಶದಲ್ಲಿ ಶೇ 67ರಷ್ಟು ಓದುಗರು ಆನ್‌ಲೈನ್‌ನಲ್ಲಿಯೇ ಸುದ್ದಿ ಓದುತ್ತಾರೆ.

ಇದರಲ್ಲಿ ಯುವಜನರು ಫೇಸ್‌ಬುಕ್‌ನಲ್ಲಿಯೆ ವಿವಿಧ ಪತ್ರಿಕೆಗಳಿಗೆ ಚಂದಾದಾರರಾಗಿ ತಮಗೆ ಬೇಕಾದ ಸುದ್ದಿಯನ್ನು ತೆರೆದುಕೊಂಡು ಓದುತ್ತಾರೆ. ಎಲ್ಲ ಸುದ್ದಿಗಳು ಫೇಸ್‌ಬುಕ್‌ನಲ್ಲಿ ಒಂದೇ ಕಡೆ ದೊರಕುವುದರಿಂದ ಇದು ಎಲ್ಲರಿಗೂ ಸುಲಭ. ಪ್ರತೀ ಪತ್ರಿಕೆಯ ವೆಬ್‌ಸೈಟ್‌ಗೆ ಹೋಗಿ ಓದುವುದು ತಪ್ಪುತ್ತದೆ. ಹಾಗಾಗಿ ಫೇಸ್‌ಬುಕ್ ತನ್ನಿಂದಾಗಿ ಪತ್ರಿಕೆಗಳಿಗೆ ಓದುಗರು ಸಿಗುತ್ತಿದ್ದಾರೆ ಎಂದು ವಾದಿಸುತ್ತಿದ್ದುದರಲ್ಲಿ ಹುರುಳಿತ್ತು.

ಆದರೆ, ಫೇಸ್‌ಬುಕ್‌ಗೂ ‘ಕಂಟೆಂಟ್’ ಎಂಬುದು ಬೇಕಲ್ಲವೇ? ಅಂದರೆ ನಿಖರ ಸುದ್ದಿ ಮೂಲಗಳು ಬೇಕಲ್ಲವೇ? ಮುಖ್ಯವಾಹಿನಿಯ ಸುದ್ದಿಮೂಲಗಳಿಲ್ಲದೇ ಹೋದಲ್ಲಿ ವ್ಯಕ್ತಿಗತ ಸುದ್ದಿಗಳನ್ನೇ ಹಂಚುವ ಹರಟೆಮಲ್ಲರ ತಾಣವಾಗಿ ಹೋಗಿಬಿಡುತ್ತದೇ ಫೇಸ್‌ಬುಕ್! ಇದು ಫೇಸ್‌ಬುಕ್‌ನ ವಿಶ್ವಾಸಾರ್ಹತೆಗೆ ಒಂದು ಧಕ್ಕೆ. ಅಲ್ಲದೇ ಫೇಸ್‌ಬುಕ್ ಮತ್ತು ಗೂಗಲ್‌ನಂತಹ ತಾಣಗಳುತಮ್ಮ ಗ್ರಾಹಕರ ಎಲ್ಲ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತವೆ. ಅದರಲ್ಲೂ ಅವರು ಓದುವ ಸುದ್ದಿಗಳೇನು ಅವರಿಗೆ ಇಷ್ಟವಾಗುವ ಮಾಹಿತಿಗಳೇನು ಎಂಬುದನ್ನು ಬಳಸಿಕೊಂಡು ಅದರ ಮೇಲೆ ಜಾಹೀರಾತುಗಳನ್ನು ಹುಟ್ಟುಹಾಕಿ ತೋರಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತವೆ. ಇದರಿಂದಲೇ ಬಿಲಿಯಂತರ ಡಾಲರುಗಳನ್ನು ಸಂಪಾದಿಸುತ್ತವೆ. ಅಂದರೆ ಈ ಪತ್ರಿಕೆಗಳು ಬೆವರು ಹರಿಸಿ ಸಂಪಾದಿಸಿದ ಸುದ್ದಿಯನ್ನು ಹೀಗೆ ಬಿಟ್ಟಿಯಾಗಿ ತಮ್ಮ ಆದಾಯ ಮೂಲಕ್ಕಾಗಿ ಬಳಸಿಕೊಂಡು ಸಲ್ಲಬೇಕಾದ ಪಾಲನ್ನು ಸುದ್ದಿ ಸಂಸ್ಥೆಗಳಿಗೆ ಕೊಡದಿದ್ದರೆ ಅನ್ಯಾಯವಲ್ಲವೇ? ಈ ಪ್ರಶ್ನೆಯೂ ನ್ಯಾಯವಾದದ್ದೇ!

ಸರ್ಕಾರವು ಪತ್ರಿಕೆಗಳ ಪರವಾಗಿ ನಿಂತು ಈ ಸಾಮಾಜಿಕ ಜಾಲತಾಣ ವೇದಿಕೆಗಳು ಆದಾಯವನ್ನು ಪತ್ರಿಕೆಗಳೊಂದಿಗೆ ಹಂಚಿಕೊಳ್ಳಬೇಕೆಂದು ಕಾನೂನು ತರಲು ಹೊರಟಿದ್ದು. ಆದರೆ ಈ ವಾದವನ್ನೊಪ್ಪದ ಫೇಸ್‌ಬುಕ್‌ನ ಮುಖ್ಯಸ್ಥ ಜುರ್‌ಬರ್ಗ್ ಸ್ವತಃ ಆಸ್ಟ್ರೇಲಿಯಾದ ಪ್ರಭಾವಿ ರಾಜಕಾರಣಿಗಳ ಮೂಲಕ ಈ ಕಾನೂನು ತರದಿರಲು ಒತ್ತಡ ಹಾಕಲು ಯತ್ನಿಸಿ ವಿಫಲನಾದ. ಕಡೆಗೆ ಫೇಸ್‌ಬುಕ್ ಆಸ್ಟ್ರೇಲಿಯಾದ ಸುದ್ದಿಗಳನ್ನು ಹಂಚಿಕೊಳ್ಳದಂತೆ ತಡೆಯೊಡ್ಡಿಬಿಟ್ಟಿತು. ಜೊತೆಗೆ ರಾತ್ರೋ ರಾತ್ರಿ ಎಲ್ಲಾ ಪತ್ರಿಕೆಗಳ ಫೇಸ್‌ಬುಕ್ ಪುಟವನ್ನು ನಿರ್ಬಂಧಿಸಿತು. ಇದರ ಜೊತೆಗೆ ಕೆಲವು ಮಹತ್ವೂರ್ಣವಾದ ಕೋವಿಡ್ ಸಂಬಂಧಿತ ಸುದ್ದಿಯನ್ನು ಹಂಚುತ್ತಿದ್ದ ಸರ್ಕಾರಿ ಸಂಸ್ಥೆಗಳ ಪುಟಗಳನ್ನೂ ನಿಷೇಧಿಸಿ ಎಡವಟ್ಟು ಮಾಡಿಬಿಟ್ಟಿತು.

ಹಣಬಲ ಸೊಕ್ಕಿದ ದುರಹಂಕಾರದ ಈ ನಡೆ ವಿಶ್ವದಾದ್ಯಂತ ಟೀಕೆಗೆ ಒಳಗಾಯಿತು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಮತ್ತು ಮಾನವ ಹಕ್ಕುಗಳ ವಿರುದ್ಧದ ನಡೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಯಿತು. ಕಡೆಗೆ ತನ್ನ ಕಂಪನಿಯ ಹೆಸರಿಗೇ ಧಕ್ಕೆ ತರುವಂತಾಗಿದ್ದರಿಂದ ತನ್ನ ಈ ಹಟಮಾರಿ ಧೋರಣೆಯಿಂದ ಫೇಸ್‌ಬುಕ್ ಹಿಂದೆ ಸರಿಯಿತು. ಆಸ್ಟ್ರೇಲಿಯಾ ಸರ್ಕಾರದೊಡನೆ ಸತತ ಮಾತುಕತೆ ನಡೆಸಿ ತನಗೆ ಬೇಕಾದ ಸುದ್ದಿಮಾಧ್ಯಮಗಳೊಂದಿಗೆ ಮಾತ್ರ ಒಪ್ಪಂದ ಮಾಡಿಕೊಳ್ಳುವ ಮತ್ತು ಯಾವ ಪತ್ರಿಕೆಯ ಸುದ್ದಿಯನ್ನು ಪ್ರಕಟಿಸಬೇಕೆಂದು ನಿರ್ಧರಿಸುವ ಹಕ್ಕನ್ನು ತನ್ನದಾಗಿಸಿಕೊಂಡಿತು. ಜೊತೆಗೆ ಈ ರಾಯಧನದ ವಿಷಯದಲ್ಲಿ ಸರ್ಕಾರಿ ಮಧ್ಯಸ್ಥಿಕೆದಾರರ ತಲೆಹಾಕುವಿಕೆಯ ಅಂಶವನ್ನೂ ತೆಗೆದುಹಾಕಿಸಿತು. ಈ ಒಪ್ಪಂದದಲ್ಲಿ ಆಸ್ಟ್ರೇಲಿಯಾ ಸರ್ಕಾರ ತಾನು ಗೆದ್ದನೆಂದುಕೊಂಡಿದ್ದರೆ ವಾಸ್ತವವಾಗಿ ಗೆದ್ದಿದ್ದು ಫೇಸ್‌ಬುಕ್!

ಈ ಒಪ್ಪಂದದ ಸಾಧಕ ಬಾಧಕಗಳೇನು ಎಂಬುದಕ್ಕೆ ಕಾಲವೇ ಉತ್ತರ ಹೇಳಲಿದೆ. ಸದ್ಯಕ್ಕೆ ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ಪಾಲನ್ನು ತೆಗೆದುಕೊಂಡು ತೃಪ್ತಿಪಟ್ಟಿವೆಯಾದರೂ ಈ ಪಾಲು ಯಾರಿಗೆ ಹೆಚ್ಚು ಪಾಲು ಹಂಚಿಕೆಯಾಗಲಿದೆ ಎಂಬುದಷ್ಟೇ ಪ್ರಶ್ನೆ.

ಈಗ ಗೂಗಲ್ ಮತ್ತು ಫೇಸ್‌ಬುಕ್‌ಗಳೆರಡೂ ತಮ್ಮದೇ ಚಾಣಾಕ್ಷ ರೀತಿಯ ನಡೆಗಳಲ್ಲಿ ತಮಗೆ ಬೇಕಾದ ಸುದ್ದಿಗಳನ್ನು ಮಾತ್ರ ಜನರಿಗೆ ತಲುಪಿಸುವ ಹಕ್ಕು ಪಡೆದುಕೊಂಡಿವೆ.

ಈ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಹೆಚ್ಚಿನ ಜನ ಬರಬೇಕೆಂದರೆ ಮತ್ತೆಜನಪ್ರಿಯವಾದ ಸೆನ್ಸೇಷನ್‌ ಕಂಟೆಂಟ್‌ಗಳನ್ನೇ ಕೊಡಬೇಕಾಗುತ್ತದೆ. ಹೆಚ್ಚಿನ ಪಾಲಿಗಾಗಿ ಪತ್ರಿಕೆಗಳೂ ಆ ರೀತಿಯದ್ದನ್ನೇ ಕೊಡತೊಡಗುತ್ತವೆ. ಆಗ ನೈಜ ಮತ್ತು ಗಂಭೀರ ಸುದ್ದಿಗಳಿಗೆ ಜಾಗವೇ ಇಲ್ಲದಂತಾಗುತ್ತದೆ. ಗಂಭೀರ ಸುದ್ದಿಪಸರಿಸುವ ಜಾಲತಾಣಗಳನ್ನು ಇದೇ ಕಾನೂನಿನ ನೆಪವೊಡ್ಡಿ ಚಾಣಾಕ್ಷತನದಿಂದ ಈ ಎರಡೂ ಬೃಹತ್ ಕಂಪನಿಗಳು ಮುಚ್ಚಿಬಿಡಬಹುದು. ಜನರಿಗೆ ತೋರಿಸದೇ ಹೋಗಬಹುದು. ಈ ಬೃಹತ್ ಮೀಡಿಯಾ ಹೌಸ್‌ಗಳೊಂದಿಗೆ ಸಣ್ಣಪುಟ್ಟ ಸುದ್ದಿ ಪತ್ರಿಕೆಗಳು ಸ್ಪರ್ಧಿಸುವುದೂ ಕಷ್ಟವಾಗುತ್ತದೆ. ಅತ್ಯಂತಎಚ್ಚರಿಕೆ ಮತ್ತು ಸದುದ್ದೇಶದಿಂದ ಕಾನೂನು ತಂದಿದ್ದರೂ ಈ ಕ್ಯಾಪಿಟಲಿಸಂನ ಕುತಂತ್ರಗಳು ಒಳಸುಳಿಗಳು ವಿಷವರ್ತುಲಗಳು ಮತ್ತೆ ಪ್ರಬಲರ ಕೈಗೇ ಚುಕ್ಕಾಣಿ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿರುವಂತೆ ಮೇಲ್ನೋಟಕ್ಕೆ ತೋರುತ್ತದೆ.

(ಲೇಖಕ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿನೆಲೆಸಿರುವ ಐಟಿ ವೃತ್ತಿಪರ, ಕನ್ನಡಿಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.