ADVERTISEMENT

ಆನ್‌ಲೈನ್‌ ಖಾತೆಗಳ ಪಾಸ್‌ವರ್ಡ್‌ ಎಷ್ಟು ಸುರಕ್ಷಿತ: ಪರೀಕ್ಷಿಸಲು ಗೂಗಲ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 11:33 IST
Last Updated 11 ಫೆಬ್ರುವರಿ 2020, 11:33 IST
'ಸುರಕ್ಷಿತ ಅಂತರ್ಜಾಲ ದಿನ' - ಚಿತ್ರ ಕೃಪೆ: ಟ್ವಿಟರ್‌
'ಸುರಕ್ಷಿತ ಅಂತರ್ಜಾಲ ದಿನ' - ಚಿತ್ರ ಕೃಪೆ: ಟ್ವಿಟರ್‌   

ಪ್ರತಿ ವರ್ಷ ಫೆಬ್ರುವರಿ 11ರಂದು 'ಸುರಕ್ಷಿತ ಅಂತರ್ಜಾಲ ದಿನ' (safer internet day) ಆಚರಿಸಲಾಗುತ್ತಿದೆ. ಬಳಸುತ್ತಿರುವ ವಿವಿಧ ಅಪ್ಲಿಕೇಷನ್‌ಗಳು, ಖಾತೆಗಳಿಗೆ ನೀಡುತ್ತಿರುವ ಪಾಸ್‌ವರ್ಡ್‌ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ತಂತ್ರಜ್ಞಾನ ದಿಗ್ಗಜ 'ಗೂಗಲ್' ಟ್ವೀಟ್‌ ಮಾಡಿದೆ. ಬಳಸಿರುವ ಪಾಸ್‌ವರ್ಡ್‌ ಎಷ್ಟು ಕಠಿಣವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶ ನೀಡಿದೆ.

ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್‌ ಸುರಕ್ಷಿತ ಬಳಕೆ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಎಚ್ಚರ ವಹಿಸಲು ಹಲವು ತಂತ್ರಜ್ಞಾನ ಕಂಪನಿಗಳು, ಅಪ್ಲಿಕೇಷನ್‌ ಡೆವಲಪರ್‌ಗಳು ಹತ್ತಾರು ಸಲಹೆಗಳನ್ನು ನೀಡಿವೆ.

ಪಾಸ್‌ವರ್ಡ್‌ ಸುರಕ್ಷಿತ ಪರೀಕ್ಷೆ: ಗೂಗಲ್‌ ಪಾಸ್‌ವರ್ಡ್‌ ಮ್ಯಾನೇಜರ್‌ ಮೂಲಕ ಪಾಸ್‌ವರ್ಡ್‌ ಚೆಕ್‌ಅಪ್‌ ಮಾಡಿಕೊಳ್ಳಬಹುದು. ನೀವು ನೀಡಿರುವ ಪಾಸ್‌ವರ್ಡ್‌ ದೃಢತೆಯನ್ನು ಗೂಗಲ್‌ ಪರೀಕ್ಷಿಸಿ ತಿಳಿಸುತ್ತದೆ. ಬಳಸಿರುವ ಪಾಸ್‌ವರ್ಡ್‌ ಹ್ಯಾಕ್‌ ಆಗಿದೆಯೇ (compromised), ಪದೇ ಪದೇ ಒಂದೇ ಪಾಸ್‌ವರ್ಡ್‌ ಬಳಕೆಯಾಗಿದೆಯೇ ಹಾಗೂ ಗೂಗಲ್‌ಗೆ ಲಿಂಕ್‌ ಆಗಿರುವ ಖಾತೆಗಳ ಪಾಸ್‌ವರ್ಡ್‌ ಮಟ್ಟ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ.

ADVERTISEMENT

ಗೂಗಲ್‌ ಇಂಡಿಯಾ ಟ್ವಿಟರ್‌ ಖಾತೆಯಲ್ಲಿ ನೀಡಲಾಗಿರುವ ಲಿಂಕ್‌ ಬಳಸಿ, ಗೂಗಲ್‌ ಖಾತೆಗೆ ಲಾಗಿನ್‌ ಆಗುವ ಮೂಲಕ ಪಾಸ್‌ವರ್ಡ್‌ ಆರೋಗ್ಯ ಗಮನಿಸಿಕೊಂಡು ಸರಿಪಡಿಸಿಕೊಳ್ಳಬಹುದು. 'ಮೊದಲು ಸುರಕ್ಷತೆ' ಮಿಕ್ಕಿದ್ದೆಲ್ಲ ಆಮೇಲೆ ಹಾಗೂ ಸೇಫರ್‌ ಇಂಟರ್ನೆಟ್‌ ಡೇ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಪೋಸ್ಟ್‌ ಪ್ರಕಟಿಸಿದೆ.

ಪಾಸ್‌ವರ್ಡ್‌ ಚೆಕ್‌ಅಪ್‌ ವೇಳೆ ಪಾಸ್‌ವರ್ಡ್‌ ಎಡಿಟ್‌ ಅಥವಾ ಬದಲಿಸಿಕೊಳ್ಳುವ ಅವಕಾಶ ಇದೆ. ಇಲ್ಲವೇ ಪಾಸ್‌ವಾರ್ಡ್‌ ಡಿಲೀಟ್‌ ಸಹ ಮಾಡಬಹುದಾಗಿದೆ. ಡಿಲೀಟ್‌ ಮಾಡುವ ಮುನ್ನ ಖಚಿತ ಪಡಿಸುವಂತೆ ಸಂದೇಶ ತೋರಿಸುತ್ತದೆ.

ಟ್ವಿಟರ್‌ ಸಹ ವಿಡಿಯೊಗಳನ್ನು ಪ್ರಕಟಿಸುವ ಮೂಲಕ, ಟ್ವೀಟಿಗರು ಅನುಸರಿಸಬಹುದಾದ ಸುರಕ್ಷತಾ ಕ್ರಮಗಳನ್ನು ತಿಳಿಸಿದೆ. ಅನಗತ್ಯ ಟ್ವೀಟ್‌ಗಳಿಗೆ ಕಡಿವಾಣ ಹಾಕುವುದು, ಬೇಡದ ವ್ಯಕ್ತಿಗಳ ಖಾತೆ ಬ್ಲಾಕ್‌ ಮಾಡುವುದು ಅಥವಾ ಮ್ಯೂಟ್‌ ಮಾಡುವ ಮೂಲಕ ತಮ್ಮ ಖಾತೆಯ ಮೇಲೆ ನಿಯಂತ್ರಣ ಹೊಂದುವುದರ ಬಗ್ಗೆ ಸರಣಿ ವಿಡಿಯೊಗಳನ್ನು ಪ್ರಕಟಿಸಿದೆ.

ಮಕ್ಕಳ ಮೇಲೆ ಆನ್‌ಲೈನ್‌ನಲ್ಲಿ ಆಗುತ್ತಿರುವ ದೌರ್ಜನ್ಯ, ಪುಂಡಾಟಿಕೆಗಳಿಗೆ ಕಡಿವಾಣ ಹಾಕುವ ಬಗ್ಗೆ ವಿಶ್ವ ಸಂಸ್ಥೆ ಮಕ್ಕಳ ನಿಧಿ (ಯುನಿಸೆಫ್‌) ಟ್ವೀಟಿಸಿದೆ.

* ಆಗಾಗ್ಗೆ ಸಾಫ್ಟ್‌ವೇರ್‌, ಆ್ಯಪ್‌ಗಳ ಅಪ್‌ಡೇಟ್‌

*ಕ್ಲಿಷ್ಟಕರ ಪಾಸ್‌ವರ್ಡ್‌ ಬಳಕೆ, ತಿಂಗಳಿಗೆ ಒಮ್ಮೆಯಾದರೂ ಪಾಸ್‌ವರ್ಡ್‌ ಬದಲಿಸುವುದರಿಂದ ಹ್ಯಾಕಿಂಗ್‌ ತಪ್ಪಿಸಬಹುದು

* ಆ್ಯಂಟಿ ವೈರಸ್ ಬಳಕೆ

* ಆನ್‌ಲೈನ್‌ ಬ್ಯಾಂಕಿಂಗ್‌ ಮತ್ತು ಆನ್‌ಲೈನ್‌ ಖರೀದಿಯಲ್ಲಿ ಅಧಿಕೃತ ವೆಬ್‌ಸೈಟ್‌ ಅಥವಾ ಆ್ಯಪ್‌ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು

* ಆನ್‌ಲೈನ್‌ ಪಾವತಿ ವೇಳೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮಾಹಿತಿ ಉಳಿಸದಿರುವುದು ಸುರಕ್ಷತೆ ಕಾರಣಗಳಿಂದ ಉತ್ತಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.