ADVERTISEMENT

‘ನನ್ನ ಭಾಷೆಯಲ್ಲಿ ಸೇವೆ ನೀಡಿ’: ಕನ್ನಡಿಗರ ಹಕ್ಕೊತ್ತಾಯ

ಹಿಂದಿ ಹೇರಿಕೆ ವಿರುದ್ಧ ಟ್ವಿಟರ್‌ನಲ್ಲಿ ಅಸಮಾಧಾನ ಹೊರಹಾಕಿದ ಕನ್ನಡ ಪ್ರೇಮಿಗಳು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 19:07 IST
Last Updated 11 ಸೆಪ್ಟೆಂಬರ್ 2020, 19:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಬೆಂಗಳೂರು: ಸಾರ್ವಜನಿಕ ಸೇವೆಗಳನ್ನು ಒದಗಿಸುವ ಕೇಂದ್ರ ಸರ್ಕಾರಿ ಸಂಸ್ಥೆಗಳು ಕನ್ನಡದಲ್ಲಿ ಸೇವೆ ಒದಗಿಸುವಂತೆ ಒತ್ತಾಯಿಸಿ ಕನ್ನಡ ಗ್ರಾಹಕರ ಕೂಟವು ಶುಕ್ರವಾರ ಟ್ವಿಟರ್‌ನಲ್ಲಿ ನಡೆಸಿದ ಅಭಿಯಾನಕ್ಕೆ ಭಾರಿ ಜನ ಬೆಂಬಲ ವ್ಯಕ್ತವಾಯಿತು. #ServeInMyLanguage ಹ್ಯಾಶ್‌ಟ್ಯಾಗ್ ಅಡಿ ಕನ್ನಡ ಗ್ರಾಹಕರ ಕೂಟ ಹಮ್ಮಿಕೊಂಡ ಅಭಿಯಾನ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದು, ‌ಸಂಜೆಯ ವೇಳೆಗೆ 15 ಸಾವಿರಕ್ಕೂ ಹೆಚ್ಚು ಜನ ಈ ಕುರಿತು ಟ್ವೀಟ್ ಮಾಡಿದರು.

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕನ್ನಡದ ಕಡೆಗಣನೆ ಬಗ್ಗೆ ಹಾಗೂ ಹಿಂದಿ ಹೇರಿಕೆ ಬಗ್ಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕಾರ್ಯಾಚರಣೆಗಳು ಮತ್ತು ಜಾಹೀರಾತಿನಲ್ಲಿ ಸ್ಥಳೀಯ ಭಾಷೆಯನ್ನು ಕೈ ಬಿಟ್ಟಿರುವುದನ್ನು ವಿರೋಧಿಸಿ ಎಸ್. ವಿನಯ್‌ ಎಂಬುವರು ಟ್ವೀಟ್ ಮಾಡಿದ್ದಾರೆ. ‘ಎಸ್‌ಬಿಐನ ಪಾಸ್‌ಬುಕ್‌ಗಳಲ್ಲಿ ಮೊದಲು ಕನ್ನಡ ಇರುತ್ತಿತ್ತು. ಹೊಸ ಪಾಸ್‌ಬುಕ್‌ನಲ್ಲಿ ಕನ್ನಡ ಇಲ್ಲ. ಬೆಂಗಳೂರಿನ ವಿಜಯನಗರದ ಎಸ್‌ಬಿಐ ಶಾಖೆಯ ಪಾಸ್‌ಬುಕ್‌ನಲ್ಲಿಯೇ ಕನ್ನಡವಿಲ್ಲ. ಇದನ್ನು ಸರಿಪಡಿಸಿ’ ಎಂದು ಎಚ್.ಸಿ. ರೇವಣ್ಣ ಗಮನ ಸೆಳೆದರು.

ADVERTISEMENT

‘ಇಂಗ್ಲಿಷ್‌, ಹಿಂದಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪದಗಳು ಸಿಗುವುದಿಲ್ಲ ಎಂಬ ನೆಪ ತೀರಾ ಬಾಲಿಶವಾದುದು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದಿ–ಇಂಗ್ಲಿಷ್‌ಗಿಂತಲೂ ಸಮರ್ಥವಾಗಿ ವಿಚಾರಗಳನ್ನು ಮಂಡಿಸಲು ಕನ್ನಡ ಸಮರ್ಥವಾಗಿದೆ’ ಎಂದು ಹಲವು ಟ್ವಿಟ್ಟಿಗರು ಪ್ರತಿಪಾದಿಸಿದರು.

ಬ್ಯಾಂಕ್‌ಗಳು, ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಸುವ ಸಂಸ್ಥೆಗಳು, ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಕಚೇರಿಗಳು, ಅಂಚೆ ಕಚೇರಿಗಳೂ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳ ದಾಖಲೆಗಳಲ್ಲಿ, ಮಾಹಿತಿಗಳಲ್ಲಿ ಹಿಂದಿ ಪಾರಮ್ಯ ಇರುವ ಕುರಿತ ಚಿತ್ರಗಳನ್ನು ಹಂಚಿಕೊಂಡು ಹಿಂದಿ ಹೇರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ, ನಮ್ಮ ಭಾಷೆಯಲ್ಲಿ ಸೇವೆ ಪಡೆಯಲು ಇಂದಿಗೂ ಹೋರಾಟ ಮಾಡಬೇಕಾದ ಸ್ಥಿತಿ ಇರುವುದು ದುರದೃಷ್ಟಕರ’ ಎಂದು ಚೇತನ್‌ ಜೀರಾಳ್ ಹೇಳಿದರೆ, ‘ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸ್ಥಳೀಯರಿಗೆ ಅವರ ಭಾಷೆಯಲ್ಲಿಯೇ ಸೇವೆ ನೀಡುವ ಇಚ್ಛಾಶಕ್ತಿ ಇದ್ದರೆ ಅದನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು’ ಎಂದು ಗಣೇಶ್‌ ಚೇತನ್ ಒತ್ತಾಯಿಸಿದರು.

‘ಮೊದಲು ತ್ರಿಭಾಷಾ ಸೂತ್ರದಡಿ ಮೂರು ಭಾಷೆಗಳನ್ನು ಮಾಹಿತಿ ಫಲಕದಲ್ಲಿ ಹಾಕಿರುತ್ತಿದ್ದರು. ಅದರಲ್ಲಿಯೂ ಕನ್ನಡ ಕೊನೆಯ ಸ್ಥಾನದಲ್ಲಿ ಇರುತ್ತಿತ್ತು. ಈಗ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಮಾಹಿತಿ ಹಾಕಲಾಗಿದೆ’ ಎಂದು ಮಹೇಶ್‌ ಎಂಬುವರು ಹೆದ್ದಾರಿಯ ‘ಟೋಲ್‌ ಪ್ಲಾಜಾ’ದ ಫಲಕ ಹಂಚಿಕೊಂಡರು.

ಕನ್ನಡಿಗರ ಜೊತೆ ತೆಲುಗು, ತಮಿಳು, ಮಲಯಾಳ ಭಾಷಿಕರೂ ಈ ಅಭಿಯಾನದಲ್ಲಿ ಪಾಲ್ಗೊಂಡರು.

‘ಕೇಂದ್ರ ಸರ್ಕಾರ ಸೆ.1ರಿಂದ 14ರವರೆಗೆ ‘ಹಿಂದಿ ಪಕ್ವಾಡಾ’ ಹಮ್ಮಿಕೊಂಡಿದೆ. ಎಲ್ಲ ಭಾಷೆಯ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಗ್ರಾಹಕ ವ್ಯವಹಾರಗಳ ಸಚಿವಾಲಯವೂ ಇದೆ. ಆದರೆ, ಅವರೇ ‘ಜಾಗೋ ಗ್ರಾಹಕ್‌’ ಹೆಸರಿನಡಿ ಅಭಿಯಾನ ನಡೆಸುತ್ತಾರೆ. ಭಾರತೀಯ ಭಾಷೆಗಳಲ್ಲಿ ಸೇವೆ ನೀಡಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ’ ಎಂದು ಕನ್ನಡ ಗ್ರಾಹಕರ ಕೂಟದ ಉಪಾಧ್ಯಕ್ಷ ಅಮರ್‌ನಾಥ್‌ ಶಿವಶಂಕರ್‌ ಹೇಳಿದರು.

‘ಗ್ರಾಹಕರಿಗೆ ಅವರ ಭಾಷೆಯಲ್ಲಿಯೇ ಸೇವೆ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ ಮತ್ತು ಧರ್ಮ. ಇದು ಹಿಂದಿ ವಿರುದ್ಧದ ಅಭಿಯಾನವಲ್ಲ. ಹಿಂದಿ ಹೇರಿಕೆ ವಿರುದ್ಧದ ಅಭಿಯಾನ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಅವರ ಭಾಷೆಯಲ್ಲಿಯೇ ಸೇವೆ ನೀಡಲಿ. ಅದೇ ರೀತಿ, ಕನ್ನಡ, ತೆಲುಗು, ತಮಿಳು ಮಾತನಾಡುವವರ ರಾಜ್ಯಗಳಲ್ಲಿ ಆಯಾ ಭಾಷೆಯಲ್ಲಿಯೇ ಸೇವೆ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.