‘ಸೋ ಮಿನಿ ಥಿಂಗ್ಸ್’– ಯೂಟ್ಯೂಬ್ ಮೋಹಿಗಳಿಗೆ ಹಾಗೂ ಸ್ಟ್ಯಾಂಡ್–ಅಪ್ ಕಾಮಿಡಿ ಸವಿಯುವವರಿಗೆ ಈ ಪದಪುಂಜ ತಿಳಿದಿರುತ್ತದೆ. ‘ಅಯ್ಯೋ ಶ್ರದ್ಧಾ’ ಎಂದೇ ಮನೆಮಾತಾಗಿರುವ ಶ್ರದ್ಧಾ ಜೈನ್ ಅವರ ಸ್ಟ್ಯಾಂಡ್–ಅಪ್ ಕಾಮಿಡಿಯ ವಸ್ತುವಿಷಯ ಇದು.
ಈ ಸ್ವರೂಪದ ಸ್ಟ್ಯಾಂಡ್–ಅಪ್ ಕಾಮಿಡಿಯನ್ನು ಅವರು 45 ನಗರಗಳಲ್ಲಿ ಪ್ರಸ್ತುತಪಡಿಸಿ ಈಗ ಬೆಂಗಳೂರಿಗೆ ಬಂದಿದ್ದಾರೆ. ಅಮೆರಿಕವೊಂದರಲ್ಲೇ 28 ಪ್ರದರ್ಶನಗಳನ್ನು ಆ ಸ್ಟ್ಯಾಂಡ್–ಅಪ್ ಕಾಮಿಡಿ ಕಂಡಿತ್ತು.
ಶ್ರದ್ಧಾ ಈ ಹಿಂದೆ ರೇಡಿಯೊ ಜಾಕಿ ಆಗಿದ್ದವರು. ಅರಳು ಹುರಿದಂತಹ, ಮಾಹಿತಿಯಿಂದ ಭರಪೂರವಾದ ಮಾತಿನಿಂದ ಅವರು ಜನಪ್ರಿಯರಾಗಿದ್ದರು. ಆಮೇಲೆ ಕಾಮಿಡಿ ಪ್ರಕಾರಕ್ಕೆ ಹೊರಳಿಕೊಂಡರು. ಮರಾಠಿ, ಹಿಂದಿ, ಇಂಗ್ಲಿಷ್, ಕನ್ನಡ ಎಲ್ಲ ಭಾಷೆಗಳಲ್ಲಿ ಅವರು ಲೀಲಾಜಾಲವಾಗಿ ಮಾತನಾಡಬಲ್ಲರು.
ಹೊಸಕಾಲದ ತಂದೆ–ತಾಯಿ–ಮಗುವಿನ ನಡುವೆ ನಡೆಯಬಹುದಾದ ನವಿರಾದ ಸಂಭಾಷಣೆಯಿಂದಲೇ ಬದುಕಿನ ಸಣ್ಣಪುಟ್ಟ ಸಂಗತಿಗಳಿಗೆ ಅವರು ವ್ಯಂಗ್ಯ–ಹಾಸ್ಯದ ಲೇಪ ನೀಡುತ್ತಾರೆ. ಆರು ವರ್ಷದ ಮಕ್ಕಳಿಂದ ಹಿಡಿದು 60 ದಾಟಿರುವವರೂ ಅವರ ಹಾಸ್ಯ ಕಾರ್ಯಕ್ರಮ ನೋಡಲು ಬರುತ್ತಾರೆ.
ಆಗಸ್ಟ್ 2ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಂಜೆ 4ಕ್ಕೆ ಹಾಗೂ ರಾತ್ರಿ 7.30ಕ್ಕೆ ‘ಸೋ ಮಿನಿ ಥಿಂಗ್ಸ್’ ಸ್ಟ್ಯಾಂಡ್–ಅಪ್ ಕಾಮಿಡಿಯ ಪ್ರದರ್ಶನವಿದೆ.
ಆರೋಗ್ಯಕರ ಹಾಸ್ಯವನ್ನು ಸವಿದು, ಹೊಟ್ಟೆಹುಣ್ಣಾಗಿಸಿಕೊಳ್ಳಲು ಬಯಸುವವರು ಹೋಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.