ADVERTISEMENT

ಭಾರತದಲ್ಲಿ ಬಾಗಿಲು ಮುಚ್ಚಿದ ಟಿಕ್‌ಟಾಕ್‌

ಪಿಟಿಐ
Published 27 ಜನವರಿ 2021, 16:53 IST
Last Updated 27 ಜನವರಿ 2021, 16:53 IST
ಟಿಕ್‌ಟಾಕ್‌ 
ಟಿಕ್‌ಟಾಕ್‌    

ನವದೆಹಲಿ: ಟಿಕ್‌ಟಾಕ್‌ ಆ್ಯಪ್‌ನ ಮಾತೃಸಂಸ್ಥೆ, ಚೀನಾ ಮೂಲದ ಬೈಟ್‌ಡಾನ್ಸ್‌ ಕಂಪನಿಯು ಭಾರತದಲ್ಲಿನ ತನ್ನ ವಹಿವಾಟನ್ನು ಸ್ಥಗಿತಗೊಳಿಸಲಿದೆ. ಎರಡು ಸಾವಿರಕ್ಕೂ ಹೆಚ್ಚಿರುವ ತನ್ನ ನೌಕರರ ಸಂಖ್ಯೆಯನ್ನು ಕನಿಷ್ಠ ಪ್ರಮಾಣಕ್ಕೆ ತಗ್ಗಿಸಲಿದೆ. ಕಂಪನಿಯು ಈ ವಿಚಾರವನ್ನು ತನ್ನ ನೌಕರರಿಗೆ ಬುಧವಾರ ತಿಳಿಸಿದೆ.

ಟಿಕ್‌ಟಾಕ್‌ನ ಜಾಗತಿಕ ಮಧ್ಯಂತರ ಮುಖ್ಯಸ್ಥ ವನೆಸ್ಸಾ ಪಪ್ಪಾಸ್ ಮತ್ತು ಜಾಗತಿಕ ವಹಿವಾಟುಗಳ ಉಪಾಧ್ಯಕ್ಷ ಬ್ಲೇಕ್ ಚಾಂಡ್ಲೀ ಅವರು ಜಂಟಿಯಾಗಿ ತಮ್ಮ ನೌಕರರಿಗೆ ಇ–ಮೇಲ್‌ ಕಳುಹಿಸಿದ್ದು, ಕಂಪನಿಯ ತೀರ್ಮಾನವನ್ನು ಅವರಿಗೆ ತಿಳಿಸಿದ್ದಾರೆ.

ಕಂಪನಿಯು ಭಾರತದಲ್ಲಿ ಕಾನೂನು, ಆಡಳಿತ, ಮಾನವ ಸಂಪನ್ಮೂಲ, ಲೆಕ್ಕಪತ್ರ ವಿಭಾಗಗಳಲ್ಲಿನ ಉದ್ಯೋಗಿಗಳನ್ನು ಮಾತ್ರ ಉಳಿಸಿಕೊಳ್ಳಲಿದೆ. ಸರ್ಕಾರ ಜೊತೆಗಿನ ಮಾತುಕತೆಯನ್ನು ಮುಂದುವರಿಸಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೆಲಸ ಕಳೆದುಕೊಳ್ಳಲಿರುವ ನೌಕರರಿಗೆ ಮೂರು ತಿಂಗಳ ವೇತನ, ಅವರು ಕೆಲಸ ಮಾಡಿದ ವರ್ಷಗಳಿಗೆ ಅನುಗುಣವಾಗಿ ಹೆಚ್ಚುವರಿ ಸಂಭಾವನೆಯನ್ನು ನೀಡಲಾಗುತ್ತದೆ. ಭಾರತದಲ್ಲಿ ಮತ್ತೆ ಚಟುವಟಿಕೆ ಆರಂಭಿಸುವ ಭರವಸೆ ಇಲ್ಲ, ಆದರೆ ಚಟುವಟಿಕೆಗಳನ್ನು ಆರಂಭಿಸಬೇಕು ಎಂಬ ಆಸೆ ಇದೆ ಎಂದು ಕಂಪನಿಯ ಅಧಿಕಾರಿಗಳು ನೌಕರರಿಗೆ ಹೇಳಿದ್ದಾರೆ.

‘ಸ್ಥಳೀಯ ಕಾನೂನು ಮತ್ತು ನಿಯಮಗಳನ್ನು ನಮ್ಮ ಆ್ಯಪ್‌ ಪಾಲಿಸುವಂತೆ ಮಾಡಲು ನಾವು ನಿರಂತರವಾಗಿ ಶ್ರಮಿಸಿದ್ದೇವೆ. ಆದರೂ, ನಮ್ಮ ಆ್ಯಪ್‌ನ ಬಳಕೆಗೆ ಮತ್ತೆ ಯಾವಾಗ ಅನುಮತಿ ಸಿಗುತ್ತದೆ ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ಸಿಕ್ಕಿಲ್ಲ. ಅರ್ಧ ವರ್ಷಕ್ಕಿಂತ ಹೆಚ್ಚು ಕಾಲದಿಂದ ಎರಡು ಸಾವಿರಕ್ಕೂ ಹೆಚ್ಚಿನ ನೌಕರರಿಗೆ ಬೆಂಬಲವಾಗಿ ನಿಂತ ನಮಗೆ ಈಗ ನೌಕರರ ಸಂಖ್ಯೆಯನ್ನು ಕಡಿಮೆ ಮಾಡದೆ ಬೇರೆ ಆಯ್ಕೆ ಇಲ್ಲ’ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ಟಿಕ್‌ಟಾಕ್‌ ಆ್ಯಪ್‌ಅನ್ನು ಭಾರತದಲ್ಲಿ ಮತ್ತೆ ಆರಂಭಿಸಿ, ಲಕ್ಷಾಂತರ ಮಂದಿ ಬಳಕೆದಾರರಿಗೆ ಮತ್ತೆ ನೆರವಾಗುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದ್ದಾರೆ.

ಬೈಟ್‌ಡಾನ್ಸ್‌ ಮಾಲೀಕತ್ವದ ಟಿಕ್‌ಟಾಕ್‌ ಮತ್ತು ಹೆಲೊ ಆ್ಯಪ್‌ಗಳನ್ನು ಕೇಂದ್ರ ಸರ್ಕಾರವು 2020ರ ಜೂನ್‌ನಲ್ಲಿ ನಿಷೇಧಿಸಿತ್ತು. ಆ್ಯಪ್‌ಗಳ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹಿಂದಿನ ವಾರ ಆಯಾ ಕಂಪನಿಗಳಿಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.