ADVERTISEMENT

ನಿಮ್ಮ ಟ್ವಿಟರ್ ಖಾತೆಯೂ ಹ್ಯಾಕ್ ಆಗದಂತೆ ಎಚ್ಚರಿಕೆ ವಹಿಸಿ

ಅವಿನಾಶ್ ಬಿ.
Published 7 ಆಗಸ್ಟ್ 2020, 12:34 IST
Last Updated 7 ಆಗಸ್ಟ್ 2020, 12:34 IST
ಟ್ವಿಟರ್ ಖಾತೆ ಸುರಕ್ಷಿತವಾಗಿರಿಸಿಕೊಳ್ಳಿ
ಟ್ವಿಟರ್ ಖಾತೆ ಸುರಕ್ಷಿತವಾಗಿರಿಸಿಕೊಳ್ಳಿ   

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಖಾತೆ ಹ್ಯಾಕ್ ಆಗುವ ಸುದ್ದಿಗಳನ್ನು ತುಸು ಹೆಚ್ಚಾಗಿಯೇ ಕೇಳುತ್ತಿದ್ದೇವೆ.

ಕಳೆದ ತಿಂಗಳು (ಜು.15ರಂದು) ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಅಮೆರಿಕ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಮುಂತಾದ 130 ಗಣ್ಯ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿ, ಬಿಟ್ ಕಾಯಿನ್ ಎಂಬ ವರ್ಚುವಲ್ ಹಣವನ್ನು (ಕ್ರಿಪ್ಟೋಕರೆನ್ಸಿ) ದುಪ್ಪಟ್ಟು ಮಾಡುವ ಭರವಸೆಯೊಂದಿಗೆ ಪೋಸ್ಟ್ ಹಾಕಲಾಗಿತ್ತು. ಹೀಗೆ ಮಾಡಿದ್ದು ಒಬ್ಬ 17 ವರ್ಷ ಪ್ರಾಯದ ತರುಣ ಹ್ಯಾಕರ್. ಟ್ವಿಟರ್ ಇತಿಹಾಸದಲ್ಲಿ ಇದು ಹೈಪ್ರೊಫೈಲ್ ಹ್ಯಾಕ್ ಎಂದೇ ಪರಿಗಣಿತವಾಯಿತು. ಕೃತ್ಯ ಎಸಗಿದ ಪೋರ ಜೈಲು ಪಾಲಾಗಿದ್ದಾನಾದರೂ ಆನ್‌ಲೈನ್‌ನಲ್ಲಿರುವಾಗ ನಾವು ಎಷ್ಟು ಎಚ್ಚರ ವಹಿಸಬೇಕೆಂಬುದನ್ನು ಈ ಘಟನೆಯು ಮತ್ತೊಮ್ಮೆ ನೆನಪಿಸಿದೆ.

2013ರಲ್ಲಿ ಜಾಗತಿಕ ಸುದ್ದಿ ಸಂಸ್ಥೆ 'ಅಸೋಸಿಯೇಟೆಡ್ ಪ್ರೆಸ್'ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ, ಶ್ವೇತಭವನಕ್ಕೆ ಬಾಂಬ್ ದಾಳಿಯಾಗುತ್ತದೆ ಎಂಬ ಬೆದರಿಕೆಯ ಸುದ್ದಿ ಟ್ವೀಟ್ ಮಾಡಿದ ವ್ಯಕ್ತಿಯಿಂದಾಗಿ, ಕೆಲವು ಕ್ಷಣಗಳಲ್ಲೇ ಅಲ್ಲಿನ ಮಾರುಕಟ್ಟೆ ಸಂವೇದಿ ಸೂಚ್ಯಂಕ ಪತನವಾಗಿ, ಹಲವು ಕಂಪನಿಗಳು ನಷ್ಟ ಅನುಭವಿಸಿದವು. ಕೆಲವೇ ನಿಮಿಷಗಳಲ್ಲಿ ಈ ವಿದ್ಯಮಾನ ಘಟಿಸಿ ಹೋಗಿತ್ತು.

ADVERTISEMENT

ಕಳೆದ ತಿಂಗಳು ಗಣ್ಯರ ಖಾತೆಯನ್ನು ಭೇದಿಸಿ, ಅದರ ಮೂಲಕ ಪೋಸ್ಟ್ ಮಾಡಲಾದ ಟ್ವೀಟ್‌ನಲ್ಲಿದ್ದ ಒಕ್ಕಣೆಯಿಷ್ಟೇ: "ಕೋವಿಡ್‌ನಿಂದಾಗಿ ಜನರಿಗೇನಾದರೂ ಕೈಲಾದಷ್ಟು ಕೊಡಬೇಕೆಂದಿದ್ದೇನೆ. ಕೆಳಗಿನ ವಿಳಾಸಕ್ಕೆ ಬಿಟ್‌ಕಾಯಿನ್‌ಗಳನ್ನು ಕಳುಹಿಸಿದರೆ ಅದರ ದುಪ್ಪಟ್ಟು ವಾಪಸ್ ಮಾಡುತ್ತೇನೆ. ತ್ವರೆ ಮಾಡಿ, 30 ನಿಮಿಷ ಮಾತ್ರ ಸಮಯವಿದೆ!". ಟ್ವಿಟರ್ ಜಾಲತಾಣ ಒದಗಿಸಿರುವ ಹಲವು ಸುರಕ್ಷತಾ ಪದರಗಳನ್ನು ಭೇದಿಸಿದ್ದ ಗ್ರಹಾಂ ಇವಾನ್ ಕ್ಲಾರ್ಕ್ ಎಂಬ ಈ 17ರ ಹುಡುಗ, ಖಾತೆಯ ಆ್ಯಡ್ಮಿನ್ ವಿಭಾಗಕ್ಕೆ ಪ್ರವೇಶ ಪಡೆದು, ಕೆಲವೇ ಗಂಟೆಗಳಲ್ಲಿ 1 ಲಕ್ಷ ಡಾಲರ್ ಸಂಪಾದನೆಯನ್ನೂ ಮಾಡಿದ್ದ! ಈ ಗಣ್ಯರೇ ತಮಗೆ ದುಪ್ಪಟ್ಟು ಹಣ ಕೊಡುತ್ತಾರೆ ಎಂಬ ನಂಬಿಕೆಯಿಂದ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಿಬಿಟ್ಟಿದ್ದರು. ಟ್ವಿಟರ್ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಈ ಹುಡುಗನ ಖಾತೆಗೆ ಹಣ ಬಂದಾಗಿತ್ತು. ಜನರು ದುಡ್ಡು ಕಳೆದುಕೊಂಡಿದ್ದರು.

ಎಲ್ಲ ಸಾಮಾಜಿಕ ಜಾಲತಾಣಗಳಿಗೂ ಎರಡು ಹಂತದ (ಟು-ಫ್ಯಾಕ್ಟರ್) ದೃಢೀಕರಣ ಎಂಬ ಸುರಕ್ಷಿತ ಲಾಗಿನ್ ಆಯ್ಕೆ ಇರುತ್ತದೆ. ಜನರು ಅದನ್ನು ಉಪಯೋಗಿಸಬೇಕಷ್ಟೆ. ಆದರೆ, ಇಂಟರ್ನೆಟ್‌ನಲ್ಲಿ ಎಲ್ಲವೂ ಶೇ.100ರಷ್ಟು ಸುರಕ್ಷಿತ ಅಂತ ಸುಮ್ಮನಿರುವಂತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಟ್ವಿಟರ್ ಹ್ಯಾಕ್.

ಈ ಹ್ಯಾಕ್ ಬಗ್ಗೆ ಎಚ್ಚೆತ್ತುಕೊಂಡ ಟ್ವಿಟರ್, ತನ್ನ ಆ್ಯಪ್‌ನ ಈ ದೋಷವನ್ನು ಸರಿಪಡಿಸಿ, ಪರಿಷ್ಕೃತ ಸೆಕ್ಯುರಿಟಿ ಪ್ಯಾಚ್ ಅನ್ನು ತನ್ನ ಬಳಕೆದಾರರಿಗೆ ಕಳುಹಿಸಿದೆ. ವಿಶೇಷವಾಗಿ ಆಂಡ್ರಾಯ್ಡ್ 8 ಹಾಗೂ 9 ಕಾರ್ಯಾಚರಣೆ ವ್ಯವಸ್ಥೆಯಿರುವ ಫೋನ್‌ಗಳಿಗೆ ಇದರ ಬಾಧೆಯಿದೆ. ಪ್ರಸ್ತುತ ಹೊಸ ಫೋನ್‌ಗಳಲ್ಲಿ ಆಂಡ್ರಾಯ್ಡ್ 10 ಕಾರ್ಯಾಚರಣಾ ವ್ಯವಸ್ಥೆಯಿದ್ದು, 11 ಶೀಘ್ರವೇ ಬರಲಿದೆ. ಟ್ವಿಟರ್ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳದಿದ್ದರೆ ಇಂಥ ಅಪಾಯವೂ ಆಗುತ್ತದೆ.

ಹೀಗೆ, ಆನ್‌ಲೈನ್‌ನಲ್ಲಿ ನಾವು ಬಳಸುವ ಖಾತೆಗಳನ್ನು ಎಷ್ಟು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬುದಕ್ಕೆ ಇದು ಎಲ್ಲರಿಗೊಂದು ಪಾಠವೂ ಹೌದು. ಸಾಧ್ಯವಿದ್ದಷ್ಟು ನಮ್ಮ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದೆ ಅಥವಾ ಲಿಂಕ್ ಮಾಡದಿರುವುದೇ ಕ್ಷೇಮ.

ಟ್ವಿಟರ್ ಅಂತಷ್ಟೇ ಅಲ್ಲ, ಉಳಿದ ಆ್ಯಪ್‌ಗಳಿಗೂ ಅನ್ವಯವಾಗುವ ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.
* ಸ್ಮಾರ್ಟ್ ಫೋನ್‌ನ ಸೆಕ್ಯುರಿಟಿ ಪ್ಯಾಚ್‌ಗಳು ಅಪ್‌ಡೇಟ್ ಆಗಿರುತ್ತವೆ. ಹೀಗಾಗಿ, ನೋಟಿಫಿಕೇಶನ್ ಬಂದ ತಕ್ಷಣ ಅಪ್‌ಡೇಟ್ ಮಾಡಿಕೊಳ್ಳಲು ನಿಧಾನಿಸಬೇಡಿ.
* ಆ್ಯಪ್‌ಗಳೂ ಕಾಲ ಕಾಲಕ್ಕೆ ಪರಿಷ್ಕರಣೆಯಾಗುತ್ತವೆ, ಅವುಗಳನ್ನೂ ಅಪ್‌ಡೇಟ್ ಮಾಡಿಕೊಳ್ಳಿ.
* ಊಹಿಸಲು ಕಷ್ಟವಾಗುವ ಪಾಸ್‌ವರ್ಡ್ ಇರಿಸಿಕೊಳ್ಳಿ.
* ಎರಡು ಹಂತದ ದೃಢೀಕರಣ ವ್ಯವಸ್ಥೆ ಸಕ್ರಿಯ ಮಾಡಿಕೊಳ್ಳಿ.
* ಸಾಮಾಜಿಕ ಜಾಲತಾಣಗಳನ್ನು ಇ-ಕಾಮರ್ಸ್‌ಗೆ ಖಾತೆಗಳಿಗೆ ಸಂಯೋಜಿಸಬೇಡಿ.
* ಕುತಂತ್ರಾಂಶಗಳಿಂದ ರಕ್ಷಿಸುವ ಸೂಕ್ತ ಆ್ಯಂಟಿವೈರಸ್ ತಂತ್ರಾಂಶ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.