ADVERTISEMENT

ಖಾತೆಗಳ ಬ್ಲಾಕ್‌ಗೆ ಸೂಚನೆ: ಕೇಂದ್ರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಟ್ವಿಟರ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 19:15 IST
Last Updated 5 ಜುಲೈ 2022, 19:15 IST
ಟ್ವಿಟರ್ ಲೋಗೊ
ಟ್ವಿಟರ್ ಲೋಗೊ   

ಬೆಂಗಳೂರು: ‘ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ-2000ದ ಕಲಂ 69ಎ ಗೆ ವಿರುದ್ಧವಾಗಿರುವ 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು’ ಎಂದು ಕೇಂದ್ರ ಸರ್ಕಾರ ನೀಡಿರುವ ನೋಟಿಸ್‌ಗಳನ್ನು ಪ್ರಶ್ನಿಸಿ 'ಟ್ವಿಟರ್' ಕಂಪನಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದೆ.

ಮಂಗಳವಾರ (ಜುಲೈ 6) ಮಧ್ಯಾಹ್ನವಷ್ಟೇ ಈ ಅರ್ಜಿಯನ್ನು ದಾಖಲು ಮಾಡಲಾಗಿದ್ದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಈ ರಿಟ್ ಅರ್ಜಿಯನ್ನು ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ 'ಟ್ವಿಟರ್' ಕಂಪನಿಯ ಸ್ಥಳೀಯ ಕಚೇರಿಯ ಅಧಿಕೃತ ಪ್ರತಿನಿಧಿ ದಾಖಲು ಮಾಡಿದ್ದಾರೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿ ಮತ್ತು ನಿಯೋಜಿತ ಅಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ. ಅರ್ಜಿದಾರರು ಯಾವುದೇ ಮಧ್ಯಂತರ ಆದೇಶಕ್ಕೆ ಮನವಿ ಮಾಡಿಲ್ಲ.

ADVERTISEMENT

ಅಂತರರಾಷ್ಟ್ರೀಯ ವಕೀಲರ ಗುಂಪು ಫ್ರೀಡಂ ಹೌಸ್, ಪತ್ರಕರ್ತರು, ರಾಜಕಾರಣಿಗಳು ಮತ್ತು ರೈತರ ಪ್ರತಿಭಟನೆಯ ಬೆಂಬಲಿಗರ ಬಹುಖಾತೆಗಳು ಮತ್ತು ಕೆಲವು ಟ್ವೀಟ್‌ಗಳನ್ನು ನಿರ್ಬಂಧಿಸುವಂತೆ ಸರ್ಕಾರವು ಟ್ವಿಟರ್‌ಗೆ ವಿನಂತಿಸಿತ್ತು. ಐಟಿ ಕಾಯ್ದೆಯ ಕಲಂ 69 ಎ ಅಡಿಯಲ್ಲಿ 2021ರ ಫೆಬ್ರುವರಿ 2ರಿಂದ ವಿವಿಧ ದಿನಾಂಕಗಳಲ್ಲಿ ಹಲವು ನೋಟಿಸ್‌ಗಳನ್ನೂ ನೀಡಿತ್ತು. ಕೇಂದ್ರದ ಈ ಕ್ರಮ ಏಕಪಕ್ಷೀಯ. ಅಂತೆಯೇ, ಕ್ರಮ ಕೈಗೊಳ್ಳಲು ಮುಂದಾಗಿರುವುದು ಕಾನೂನು ಬಾಹಿರ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.