ADVERTISEMENT

ಖಾತೆಗಳ ಬ್ಲಾಕ್ ಮಾಡುವ ಆದೇಶ ಸ್ಥಳೀಯ ಕಾನೂನಿಗೆ ವ್ಯತಿರಿಕ್ತವಾಗಿದೆ: ಟ್ವಿಟರ್

ಪಿಟಿಐ
Published 10 ಫೆಬ್ರುವರಿ 2021, 6:54 IST
Last Updated 10 ಫೆಬ್ರುವರಿ 2021, 6:54 IST
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್‌
ಸಾಂದರ್ಭಿಕ ಚಿತ್ರ – ಕೃಪೆ: ಐಸ್ಟಾಕ್‌   

ನವದೆಹಲಿ: ಕೆಲವು ಖಾತೆಗಳನ್ನು ಬ್ಲಾಕ್ ಮಾಡುವ ಭಾರತ ಸರ್ಕಾರದ ಆದೇಶ ಸ್ಥಳೀಯ ಕಾನೂನಿಗೆ ವ್ಯತಿರಿಕ್ತವಾಗಿದೆ ಎಂದು ಟ್ವಿಟರ್ ಹೇಳಿದೆ.

ಕೆಲವು ಖಾತೆಗಳ ಸಂಪೂರ್ಣ ನಿಷೇಧ ಒಪ್ಪಲಾಗದು ಎಂದಿರುವ ಟ್ವಿಟರ್ ಅವುಗಳನ್ನು ಭಾರತದೊಳಗೆ ಮಾತ್ರ ನಿರ್ಬಂಧಿಸಬಹುದು ಎಂದು ಹೇಳಿದೆ.

1,100ಕ್ಕೂ ಹೆಚ್ಚು ಖಾತೆಗಳನ್ನು ಮತ್ತು ಅವುಗಳ ಪೋಸ್ಟ್‌ಗಳನ್ನು ಅಳಿಸಿಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್‌ಗೆ ಸೂಚಿಸಿತ್ತು. ಈ ಮೂಲಕ ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂಬ ಆರೋಪವೂ ವ್ಯಕ್ತವಾಗಿದೆ. ಅಳಿಸಿ ಹಾಕಲು ಸೂಚಿಸಿರುವ ಕೆಲವು ಟ್ವಿಟರ್‌ ಖಾತೆಗಳು ಪಾಕಿಸ್ತಾನಿ–ಖಾಲಿಸ್ತಾನಿಗಳ ಬೆಂಬಲಿಗರದ್ದಾಗಿದೆ ಎಂದೂ ಕೇಂದ್ರ ಸರ್ಕಾರ ಹೇಳಿತ್ತು.

ಈ ಮಧ್ಯೆ, ಸರ್ಕಾರದ ಆದೇಶದಂತೆ ಕ್ರಮ ಕೈಗೊಂಡಿರುವ ಟ್ವಿಟರ್‌ 500ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಿದೆ. ಈ ಪೈಕಿ ಕೆಲವನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ. ಆದರೆ ಸರ್ಕಾರ ಹೇಳಿರುವ ಎಲ್ಲ ಖಾತೆಗಳನ್ನು ಬ್ಲಾಕ್ ಮಾಡಲಾಗಿಲ್ಲ ಎಂದು ಟ್ವಿಟರ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

‘ಈ ಖಾತೆಗಳು ಭಾರತದ ಹೊರಗಡೆ ಲಭ್ಯವಿರಲಿವೆ. ಯಾಕೆಂದರೆ, ನಾವು ಕೈಗೊಳ್ಳಬೇಕೆಂದು ಸೂಚಿಸಲಾಗಿರುವ ಕ್ರಮಗಳು ಭಾರತದ ಸ್ಥಳೀಯ ಕಾನೂನಿಗೆ ಪೂರಕವಾಗಿಲ್ಲ ಎಂದು ಭಾವಿಸುತ್ತೇವೆ’ ಎಂದು ಟ್ವಿಟರ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.