ADVERTISEMENT

WhatsApp ಗ್ರೂಪ್ ಸದಸ್ಯರ ಮಿತಿ ಭಾರಿ ಹೆಚ್ಚಳ: ಮತ್ತಷ್ಟು ವಿಶೇಷತೆಗಳು ಸೇರ್ಪಡೆ

ರಾಯಿಟರ್ಸ್
Published 4 ನವೆಂಬರ್ 2022, 10:16 IST
Last Updated 4 ನವೆಂಬರ್ 2022, 10:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮೆಸೆಂಜರ್‌ ಆ್ಯಪ್‌ ವಾಟ್ಸ್‌ಆ್ಯಪ್‌ ‘ಕಮ್ಯುನಿಟಿ’ ಎಂಬ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದ್ದು, ಹೆಚ್ಚು ಜನರಿರುವ ದೊಡ್ಡ ಗುಂಪುಗಳನ್ನು (ವಾಟ್ಸ್‌ಆ್ಯಪ್‌ ಗ್ರೂಪ್‌)ಗಳನ್ನು ರಚಿಸಲು ಅನುವು ಮಾಡಿಕೊಡುತ್ತಿದೆ. ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ, ಇನ್‌–ಚಾಟ್‌ ಪೋಲ್‌ (ಅಭಿಪ್ರಾಯ ಸಂಗ್ರಹ)ದಂಥ ವಿಶೇಷತೆಗಳನ್ನೂ ವಾಟ್ಸ್‌ಆ್ಯಪ್‌ ನೀಡುತ್ತಿದೆ.

ವಾಟ್ಸ್‌ಆ್ಯಪ್‌ನ ಮಾಲೀಕ ಸಂಸ್ಥೆ ಮೆಟಾ ಈ ಬಗ್ಗೆ ಗುರುವಾರ ಅಧಿಕೃತ ಮಾಹಿತಿ ನೀಡಿದೆ.

ವಿವಿಧ ಚಾಟ್ ಗುಂಪುಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ‘ವಾಟ್ಸ್‌ಆ್ಯಪ್‌ ಕಮ್ಯುನಿಟಿ’ಯ ವಿಶೇಷತೆಯಾಗಿದೆ. ಇದರ ಮೂಲಕ ಸಾವಿರಾರು ಮಂದಿಗೆ ಒಂದೇ ಬಾರಿಗೆ ಸಂದೇಶ ರವಾನಿಸಬಹುದು. ಈ ವೈಶಿಷ್ಟ್ಯವು ಕೆಲಸದ ಸ್ಥಳಗಳು ಅಥವಾ ಶಾಲೆಗಳಲ್ಲಿ ಸಮರ್ಥವಾಗಿ ಬಳಕೆ ಬರಲಿದೆ ಎಂದು ಹೇಳಲಾಗಿದೆ.

ADVERTISEMENT

ಇನ್ನುಮುಂದೆ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ 1,024 ಮಂದಿಯನ್ನು ಸೇರಿಸಿಕೊಳ್ಳಬಹುದು. ಈ ವರೆಗೆ ಗ್ರೂಪ್‌ಗಳಲ್ಲಿ 512 ಮಂದಿಯನ್ನು ಸೇರಿಸಲಷ್ಟೇ ಅವಕಾಶವಿತ್ತು.

ವಾಟ್ಸ್‌ಆ್ಯಪ್‌ನ ಪ್ರತಿಸ್ಪರ್ಧಿಗಳಾದ ‘ಟೆಲಿಗ್ರಾಮ್’ ಮತ್ತು ‘ಡಿಸ್ಕಾರ್ಡ್‌’ನಲ್ಲಿ ಗ್ರೂಪ್‌ಗಳಿಗೆ ಸಾವಿರಾರು ಮಂದಿಯನ್ನು ಸೇರಿಸುವ ಅವಕಾಶವಿದೆ.

32 ಮಂದಿಗೆ ಒಂದೇ ಬಾರಿಗೆ ವಿಡಿಯೊ ಕರೆ ಮಾಡುವ ವಿಶೇಷತೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಸೇರಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳಲ್ಲಿರುವಂತೆ ಪೋಲ್‌ (ಅಭಿಪ್ರಾಯ ಸಂಗ್ರಹಿಸುವ) ವ್ಯವಸ್ಥೆಯನ್ನೂ ಚಾಲ್ತಿಗೆ ತರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.