ADVERTISEMENT

2021ರಲ್ಲಿ ಯೂಟ್ಯೂಬ್‌ನಿಂದ 7.5 ಲಕ್ಷ ಉದ್ಯೋಗ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 16:12 IST
Last Updated 20 ಡಿಸೆಂಬರ್ 2022, 16:12 IST
   

ನವದೆಹಲಿ: 2021ರಲ್ಲಿ ಆನ್‌ಲೈನ್ ವಿಡಿಯೊ ಸ್ಟ್ರೀಮಿಂಗ್ ವೇದಿಕೆ ಯೂಟ್ಯೂಬ್‌ ದೇಶದ ಜಿಡಿಪಿಗೆ ₹10 ಸಾವಿರ ಕೋಟಿಗೂ ಅಧಿಕ ಕೊಡುಗೆ ನೀಡಿದೆ ಮತ್ತು ದೇಶದಲ್ಲಿ 7.5 ಲಕ್ಷಕ್ಕೂ ಹೆಚ್ಚು ಪೂರ್ಣ ಪ್ರಮಾಣದ ಉದ್ಯೋಗಗಳನ್ನು ಬೆಂಬಲಿಸಿದೆ ಎಂದು ವರದಿಯೊಂದು ತಿಳಿಸಿದೆ.

ದೇಶದಲ್ಲಿ 4,500ಕ್ಕೂ ಹೆಚ್ಚು ಚಾನೆಲ್‌ಗಳು 10 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿವೆ. ಭಾರತದಲ್ಲಿ ₹1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಗಳಿಸುವ ಯೂಟ್ಯೂಬ್ ಚಾನಲ್‌ಗಳ ಸಂಖ್ಯೆಯು 2021ರಲ್ಲಿ ಶೇಕಡ 60ರಷ್ಟು ಹೆಚ್ಚಾಗಿವೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ವಿಶ್ಲೇಷಣೆಯ ಆಧಾರದ ಮೇಲೆ ಯೂಟ್ಯೂಬ್ ಇಂಪ್ಯಾಕ್ಟ್ಸ್ ವರದಿ ಮಾಡಿದೆ.

‘ಯೂಟ್ಯೂಬ್‌ನ ಸೃಜನಾತ್ಮಕ ವ್ಯವಸ್ಥೆಯು 2021ರಲ್ಲಿ ಭಾರತದಲ್ಲಿ 7,50,000ಕ್ಕೂ ಹೆಚ್ಚು ಪೂರ್ಣ ಪ್ರಮಾಣದ ಸಮಾನ ಉದ್ಯೋಗಗಳ ಸೃಷ್ಟಿ ಮತ್ತು ದೇಶದ ಆರ್ಥಿಕತೆಗೆ ₹10,000 ಕೋಟಿಗೂ ಹೆಚ್ಚು ಕೊಡುಗೆ ನೀಡಿದೆ’ಎಂದು ವರದಿ ಹೇಳಿದೆ.

ADVERTISEMENT

2021ರಲ್ಲಿ ಯೂಟ್ಯೂಬ್‌ನಲ್ಲಿ ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ವಿಡಿಯೊಗಳು 30 ಶತಕೋಟಿ ವೀಕ್ಷಣೆಗಳನ್ನು ದಾಖಲಿಸಿದ್ದು, ವಿಶ್ವಾಸಾರ್ಹ ಕಂಟೆಂಟ್ ತಯಾರಿಸಲು ನಾರಾಯಣ ಹೆಲ್ತ್, ಮಣಿಪಾಲ್ ಹಾಸ್ಪಿಟಲ್ಸ್, ಮೆದಾಂತ ಮತ್ತು ಶಾಲ್ಬಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಂತಹ 100ಕ್ಕೂ ಅಧಿಕ ಆರೋಗ್ಯ ಸಂಸ್ಥೆಗಳ ಜೊತೆ ಯೋಜನಗೆ ಯೂಟ್ಯೂಬ್ ಮುಂದಾಗಿದೆ.

2021ರಲ್ಲಿ ಯೂಟ್ಯೂಬ್‌ನ ಪ್ರಭಾವವನ್ನು ವಿಶ್ಲೇಷಿಸಲು ಆಕ್ಸ್‌ಫರ್ಡ್ ಎಕನಾಮಿಕ್ಸ್ 4,021 ಯೂಟ್ಯೂಬ್ ಬಳಕೆದಾರರು, 5,633 ಎಲ್ಲ ಮಾದರಿಯ ವಿಡಿಯೊ ತಯಾರಕರು ಮತ್ತು 523 ಉದ್ಯಮಿಗಳನ್ನು ಸಮೀಕ್ಷೆಗೆ ಬಳಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.