ADVERTISEMENT

ವಿಡಿಯೊ ಕಾನ್ಫರೆನ್ಸ್‌ಗಾಗಿ 'ಏರ್‌ಟೆಲ್ ಬ್ಲೂಜೀನ್ಸ್'; 50,000 ಜನರ ಮಿತಿ!

ಏಜೆನ್ಸೀಸ್
Published 14 ಜುಲೈ 2020, 11:05 IST
Last Updated 14 ಜುಲೈ 2020, 11:05 IST
ಏರ್‌ಟೆಲ್‌ ಬ್ಲೂಜೀನ್ಸ್‌ ವಿಡಿಯೊ ಕಾನ್ಫರೆನ್ಸ್‌–ಚಿತ್ರ ಕೃಪೆ: ವೆರೈಜನ್‌ ನ್ಯೂಸ್
ಏರ್‌ಟೆಲ್‌ ಬ್ಲೂಜೀನ್ಸ್‌ ವಿಡಿಯೊ ಕಾನ್ಫರೆನ್ಸ್‌–ಚಿತ್ರ ಕೃಪೆ: ವೆರೈಜನ್‌ ನ್ಯೂಸ್   

ಮನೆಯಿಂದಲೇ ಕಾರ್ಯಾಚರಣೆ ಹಾಗೂ ಆನ್‌ಲೈನ್‌ ತರಗತಿಗಳು ಹೆಚ್ಚುತ್ತಿರುವ ಬೆನ್ನಲ್ಲೇ ರಿಲಯನ್ಸ್‌ ಜಿಯೊ 'ಜಿಯೊಮೀಟ್‌' ಹೆಸರಿನಲ್ಲಿ ವಿಡಿಯೊ ಕಾನ್ಫರೆನ್ಸ್‌ ಆ್ಯಪ್‌ ಬಿಡುಗಡೆ ಮಾಡಿತ್ತು. ಇದೀಗ ದೇಶದ ಮತ್ತೊಂದು ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆ ಏರ್‌ಟೆಲ್‌, ಬ್ಲೂಜೀನ್ಸ್‌ ವೇದಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕ ಮೂಲದ ವೆರೈಜನ್ ಕಂಪನಿ ಸ್ವಾಧೀನದಲ್ಲಿರುವ 'ಬ್ಲೂಜೀನ್ಸ್‌' ವಿಡಿಯೊ ಕಾನ್ಫರೆನ್ ಅಪ್ಲಿಕೇಷನ್‌ ಸೇವೆ ಏರ್‌ಟೆಲ್‌ನ ಎಂಟರ್‌ಪ್ರೈಸ್‌ ಕಸ್ಟಮರ್‌ಗಳಿಗೆ (100ಕ್ಕೂ ಹೆಚ್ಚು ಜನರಿರುವ ಉದ್ಯಮಗಳು) ಸಿಗಲಿದೆ. ಆದರೆ, ರಿಲಯನ್ಸ್‌ನ ಜಿಯೊಮೀಟ್‌ ಎಲ್ಲ ಬಳಕೆದಾರರಿಗೂ ಉಪಯೋಗಿಸುವ ಅವಕಾಶವಿದೆ.

ಏರ್‌ಟೆಲ್‌ ಆರಂಭದಲ್ಲಿ 3 ತಿಂಗಳ ವರೆಗೂ ಈ ಸೇವೆಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಸೇವೆ ಆಯ್ಕೆ ಮಾಡಿಕೊಂಡು 24 ಗಂಟೆಗಳಲ್ಲಿ ಆಕ್ಟಿವೇಟ್‌ ಆಗುತ್ತದೆ ಎನ್ನಲಾಗಿದೆ. ಏರ್‌ಟೆಲ್‌ ಬ್ಲೂಜೀನ್ಸ್‌ ಬಳಕೆದಾರರ ಡೇಟಾ ಭಾರತದಲ್ಲಿಯೇ ಸಂಗ್ರಹವಾಗಲಿದ್ದು, ಪ್ರಸ್ತುತ ಚರ್ಚೆಗೆ ಗ್ರಾಸವಾಗಿದ್ದ ಡೇಟಾ ಖಾಸಗಿತನ ಮತ್ತು ಸುರಕ್ಷತೆಯ ಗೊಂದಲಗಳು ನಿವಾರಣೆಯಾದಂತಾಗಿದೆ. ಏರ್‌ಟೆಲ್‌ ಬ್ಲೂಜೀನ್ಸ್‌ ಮೂಲಕ 50,000 ಜನರು ಸಭೆಯಲ್ಲಿ ಭಾಗಿಯಾಗಬಹುದು ಎಂಬುದು ಮತ್ತೊಂದು ವಿಶೇಷ.

ADVERTISEMENT

ಎ‌ಚ್‌ಡಿ ವಿಡಿಯೊ ಕಾಲಿಂಗ್‌ ಮತ್ತು ಡಾಲ್ಬಿ ವಾಯ್ಸ್‌ ಸಪೋರ್ಟ್‌ನ್ನು ಬ್ಲೂಜೀನ್ಸ್‌ ಹೊಂದಿದೆ. ಡಾಲ್ಬಿ ಆಡಿಯೊ ಇರುವುದರಿಂದ ವಾತಾವರಣ ಅಥವಾ ಸುತ್ತಲಿನ ಶಬ್ದಗಳನ್ನು ನಿಯಂತ್ರಿಸಿ ಧ್ವನಿಯ ಸ್ಪಷ್ಟಟತೆಗೆ ಅನುವಾಗಲಿದೆ. ಸ್ಮಾರ್ಟ್‌ ಮೀಟಿಂಗ್ಸ್‌ ಆಯ್ಕೆಯು ಸಭೆಯಲ್ಲಿನ ಚರ್ಚೆಯ ಪ್ರಮುಖ ಅಂಶಗಳನ್ನು ಸಂಗ್ರಹಿಸಿಡುತ್ತದೆ.

ಮೈಕ್ರೊಸಾಫ್ಟ್‌ ಟೀಮ್ಸ್‌, ಫೇಸ್‌ಬುಕ್‌ನ ವರ್ಕ್‌ಪ್ಲೇಸ್‌, ಆಫಿಸ್‌ 365, ಗೂಗಲ್‌ ಕ್ಯಾಲೆಂಡರ್‌, ಟ್ರೆಲ್ಲೊ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳೊಂದಿಗೆ ಏರ್‌ಟೆಲ್‌ ಬ್ಲೂಜೀನ್ಸ್‌ ಸಂಯೋಜಿಸಬಹುದು. ವೇಯ್ಟಿಂಗ್‌ ರೂಂ ವ್ಯವಸ್ಥೆ ಇರುವುದರಿಂದ ವಿಡಿಯೊ ಹೋಸ್ಟ್‌ ಮಾಡುವವರಿಗೆ ಸಭೆಯಲ್ಲಿ ಭಾಗಿಯಾಗುವವರ ಮೇಲೆ ನಿಯಂತ್ರಣವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.