ADVERTISEMENT

ಕೋವಿಡ್–19 ಸೋಂಕಿತರ ಪತ್ತೆಗೆ ಗೂಗಲ್–ಆ್ಯಪಲ್‌ನ ಎಪಿಐ: ಬಳಸಲಿದೆಯೇ ಆರೋಗ್ಯ ಸೇತು?

ಏಜೆನ್ಸೀಸ್
Published 29 ಜೂನ್ 2020, 7:37 IST
Last Updated 29 ಜೂನ್ 2020, 7:37 IST
ಗೂಗಲ್ ಮತ್ತು ಆ್ಯಪಲ್‌ನ ಎಪಿಐ–ಪ್ರಾತಿನಿಧಿಕ ಚಿತ್ರ
ಗೂಗಲ್ ಮತ್ತು ಆ್ಯಪಲ್‌ನ ಎಪಿಐ–ಪ್ರಾತಿನಿಧಿಕ ಚಿತ್ರ   

ಕೋವಿಡ್–19 ದೃಢಪಟ್ಟ ವ್ಯಕ್ತಿಗಳ ಸಂಪರ್ಕಿತರನ್ನು ಪತ್ತೆ ಮಾಡಲು ಅನುವಾಗುವ ನಿಟ್ಟಿನಲ್ಲಿ ಗೂಗಲ್‌ ಮತ್ತು ಆ್ಯಪಲ್‌ ಕಂಪನಿ ಜೊತೆಯಾಗಿ ಎಪಿಐ (ಅಪ್ಲಿಕೇಷನ್‌ ಪ್ರೋಗ್ರಾಮ್‌ ಇಂಟರ್‌ಫೇಸ್‌) ಅಭಿವೃದ್ಧಿ ಪಡಿಸಿವೆ. ಇದನ್ನು ಸರ್ಕಾರ ಅಭಿವೃದ್ಧಿ ಪಡಿಸಿರುವ ಆ್ಯಪ್‌ನೊಂದಿಗೆ ಅಳವಡಿಸಿದರೆ, ಸ್ಮಾರ್ಟ್‌ಫೋನ್‌ನ ಬ್ಲೂಟೂಥ್‌ ಮಾಹಿತಿ ಆಧರಿಸಿ ಬಳಕೆದಾರರ ಸಮೀಪದಲ್ಲಿರುವ ಕೋವಿಡ್–19 ವ್ಯಕ್ತಿಗಳು ಹಾಗೂ ಸೋಂಕು ಅಪಾಯ ಪ್ರದೇಶಗಳ ಬಗ್ಗೆ ತಿಳಿದುಕೊಳ್ಳಬಹುದು. ಈ ಎಪಿಐ ಭಾರತದ ಆರೋಗ್ಯ ಸೇತು ಆ್ಯಪ್‌ನೊಂದಿಗೆ ಬಳಕೆಯಾಗಲಿದೆಯೇ ಎಂಬುದು ಸದ್ಯದ ಚರ್ಚೆ.

ಗೂಗಲ್‌ನ ಎಕ್ಸ್‌ಪೋಷರ್‌ ನೋಟಿಫಿಕೇಷನ್‌ ಸಿಸ್ಟಮ್‌ (Covid-19 Exposure Notifications) ಆಯ್ಕೆ ಈಗಾಗಲೇ ಆ್ಯಂಡ್ರಾಯ್ಡ್‌ ಬಳಕೆದಾರರಲ್ಲಿ ಕಾಣಿಸಿಕೊಂಡಿದೆ. ಇದರ ಬಳಕೆಗೆ ಅನುಮತಿ ನೀಡಿದರೂ ಸಹ, ಸಂಪರ್ಕ ಪತ್ತೆ ಕಾರ್ಯ ನಡೆಸಲು ಮತ್ತೊಂದು ಆ್ಯಪ್‌ನ ಸಹಕಾರ ಅತ್ಯಗತ್ಯ.

ಈ ಎಪಿಐ ಬಳಕೆದಾರರ ಖಾಸಗಿ ಮಾಹಿತಿ ಕಸಿಯುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಫೋನ್‌ ಲೊಕೇಶ್‌ ಬಳಕೆಯನ್ನೂ ಇದು ಬಳಸಿಕೊಳ್ಳುವುದಿಲ್ಲ ಹಾಗೂ ಕೋವಿಡ್‌–19 ದೃಢಪಟ್ಟ ವ್ಯಕ್ತಿ, ಸಂಪರ್ಕಿತ ವ್ಯಕ್ತಿಯ ಗುರುತು ಬಳಕೆದಾರರಿಗೆ ಅಥವಾ ಗೂಗಲ್‌, ಆ್ಯಪಲ್‌ಗೆ ತಿಳಿಯುವುದಿಲ್ಲ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ. ಆ್ಯಪ್‌ನೊಂದಿಗೆ ಕಾರ್ಯಾಚರಿಸುವ ಎಪಿಐ ವಿಶೇಷ ಐಡಿಗಳನ್ನು ಪ್ರತಿ ಫೋನ್‌ಗಳಲ್ಲಿ ಸೃಷ್ಟಿಕೊಳ್ಳುತ್ತವೆ ಹಾಗೂ ಪ್ರತಿ 10–20 ನಿಮಿಷಗಳಲ್ಲಿ ಆ ಐಡಿ ಬದಲಾಗುತ್ತಿರುತ್ತದೆ.

ADVERTISEMENT

ಸಮೀಪದಲ್ಲಿರುವ ಕೊರೊನಾ ಸೋಂಕಿತ ವ್ಯಕ್ತಿಯ ಫೋನ್‌ ಐಡಿಯನ್ನು ಬ್ಯೂಟೂಥ್‌ ಸಂಪರ್ಕದ ಮೂಲಕ ಗುರುತಿಸಿ ನೋಟಿಫಿಕೇಷನ್ ರವಾನಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸುತ್ತದೆ.

ಆದರೆ, ದೇಶದ ಆರೋಗ್ಯ ಸೇತು ಆ್ಯಪ್‌ ತನ್ನದೇ ಎಪಿಐ ಅಳವಡಿಸಿಕೊಂಡಿದೆ. ಮುಖ್ಯವಾಗಿ ಬಳಕೆದಾರರ ಲೊಕೇಶ್ ಆಧರಿಸಿ ಸಂಪರ್ಕ ಪತ್ತೆ ಅಥವಾ ಅಪಾಯದ ವಲಯವನ್ನು ಸೂಚಿಸುತ್ತದೆ. ಗೂಗಲ್‌ ಮತ್ತು ಆ್ಯಪಲ್‌ನ ಎಪಿಐನಲ್ಲಿ ಲೊಕೇಶ್‌ ಮಾಹಿತಿ ಬಳಕೆಗೆ ವಿರೋಧ ಹೊಂದಿದೆ. ಅದರಿಂದ ಖಾಸಗಿ ಮಾಹಿತಿ ಸೋರಿಕೆಯ ಆತಂಕ ಹೊಂದಿವೆ. ಇದೇ ಕಾರಣದಿಂದಾಗಿ ಗೂಗಲ್‌–ಆ್ಯಪಲ್‌ನ ಎಪಿಐ ಆರೋಗ್ಯ ಸೇತು ಜೊತೆಯಾಗುವ ಸಾಧ್ಯತೆ ಕಡಿಮೆ ಇದೆ. ಸರ್ಕಾರದೊಂದಿಗೆ ಸುರಕ್ಷತೆ ಮತ್ತು ಖಾಸಗಿ ಮಾಹಿತಿ ಕುರಿತು ಒಪ್ಪಂದಗಳು ನಡೆದರೆ ಅದರ ಬಳಕೆ ನಿರೀಕ್ಷಿಸಬಹುದು.

ದೇಶದ ಸುಮಾರು 13.5 ಕೋಟಿ ಬಳಕೆದಾರರು ಆರೋಗ್ಯ ಸೇತು ಆ್ಯಪ್‌ ಬಳಸುತ್ತಿದ್ದಾರೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲೇ 10 ಕೋಟಿಗೂ ಹೆಚ್ಚು ಬಾರಿ ಆ್ಯಪ್‌ ಡೌನ್‌ಲೋಡ್‌ ಆಗಿದೆ.

ಗೂಗಲ್‌–ಆ್ಯಪಲ್‌ನ ಎಪಿಐ ತಂತ್ರಜ್ಞಾನವನ್ನು ಜಗತ್ತಿನ 23 ರಾಷ್ಟ್ರಗಳು ಬಳಕೆಗೆ ಆಸಕ್ತಿ ವ್ಯಕ್ತಪಡಿಸಿವೆ. ಈಗಾಗಲೇ ಸ್ವಿಟ್ಜರ್ಲೆಂಡ್‌ ಮತ್ತು ಇಟಲಿ ಎಪಿಐ ಬಳಸಿ ಸೋಂಕು ಸಂಪರ್ಕಿತರ ಮತ್ತೆಗೆ ಕೋವಿಡ್–19 ಎಕ್ಸ್‌ಪೋಷರ್ ನೋಟಿಫಿಕೇಷನ್‌ ಪರೀಕ್ಷೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.